ಎಂ. ಆನಂದರಾಜ್‌ ನಿರ್ದೇಶನದ, ರಣ್ವಿತ್‌ ಶಿವಕುಮಾರ್‌ ಮತ್ತು ಅಭಿಷೇಕ್‌ ಕೋಟ ನಿರ್ಮಾಣದ, ವಿಜಯ ರಾಘವೇಂದ್ರ ಅಭಿನಯದ ‘ರಾಘು’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.

ತಾಂತ್ರಿಕವಾಗಿ ವಿಶಿಷ್ಟವಾಗಿರುವ, ವಿಭಿನ್ನ ಪ್ರಯೋಗ ಎಂದೇ ಗುರುತಿಸಿಕೊಂಡಿರುವ ಏಕವ್ಯಕ್ತಿ ನಟನೆಯ ಸಿನಿಮಾ ರಘು. ಈ ಸಿನಿಮಾದ ಪ್ರಧಾನ ಮತ್ತು ಏಕ ಪಾತ್ರಧಾರಿ ವಿಜಯ ರಾಘವೇಂದ್ರ ಸಂದರ್ಶನ.

ರಾಜೇಶ್‌ ಶೆಟ್ಟಿ

ವಿಭಿನ್ನ ಕತೆ ಆಧರಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ. ಈ ಸಿನಿಮಾ ನಿಮಗೆ ಎಷ್ಟುಮುಖ್ಯ?

ಪ್ರಾಮಾಣಿಕವಾಗಿ ಹೇಳಬೇಕಾದರೆ ಕಂಟೆಂಟ್‌ ಆಧರಿತ ಸಿನಿಮಾಗಳಲ್ಲಿ ನಟಿಸುವುದು ಅನಿವಾರ್ಯ ಆಗಿಹೋಯಿಕು. ಮಾಸ್‌, ಕಮರ್ಷಿಯಲ್‌ ಸಿನಿಮಾಗಳಲ್ಲಿ ನನ್ನನ್ನು ನೋಡಲು ಜನರಿಗೆ ಅಷ್ಟೊಂದು ಇಷ್ಟವಾಗಲಿಲ್ಲವೇನೋ. ಆದರೆ ಮಾಲ್ಗುಡಿ ಡೇಸ್‌, ಸೀತಾರಾಮ್‌ ಬಿನೋಯ್‌ ಸಿನಿಮಾಗಳನ್ನು ಜನ ಬಹಳ ಇಷ್ಟಪಟ್ಟರು. ಅಂಥದ್ದೇ ಮತ್ತೊಂದು ವಿಶಿಷ್ಟಸಿನಿಮಾ ಇದು. ಇದು ಏಕವ್ಯಕ್ತಿ ಸಿನಿಮಾ ಅಂತ ಹೇಳಿದರೂ ಸಿನಿಮಾ ನೋಡುತ್ತಾ ನೋಡುತ್ತಾ ಒಬ್ಬನೇ ನಟ ಅನ್ನುವುದು ಮರೆತು ಹೋಗುತ್ತದೆ.

ರಾಘು ನಿಮಗೆ ಯಾಕೆ ಆಪ್ತ?

ಎಲ್ಲರೂ ನನ್ನನ್ನು ಪ್ರೀತಿಯಿಂದ ರಾಘು ಎಂದೇ ಕರೆಯುತ್ತಾರೆ. ಚಿತ್ರರಂಗದವರಿಗೂ ಅಭಿಮಾನಿಗಳಿಗೂ ನಾನು ರಾಘು. ನಿರ್ಮಾಪಕರು ನನ್ನ ಮೇಲೆ ವಿಶ್ವಾಸ, ನಂಬಿಕೆ, ಪ್ರೀತಿ ಇಟ್ಟು ನನ್ನ ಹೆಸರಿನಲ್ಲೇ ಸಿನಿಮಾ ಮಾಡಿದ್ದಾರೆ. ಜನರಿಗೆ ಸಿನಿಮಾ ತಲುಪಿಸುತ್ತಿದ್ದಾರೆ. ಇದು ನನಗೋಸ್ಕರ ಮಾಡಿದ ಸಿನಿಮಾ. ನನ್ನ ಹೆಸರಿನ ಸಿನಿಮಾ. ಇದುವರೆಗೆ ನೋಡದ ರಾಘುವನ್ನು ಈ ಸಿನಿಮಾದಲ್ಲಿ ನೋಡುತ್ತೀರಿ.

ಆನ್‌ಲೈನ್ ಗೇಮಿಂಗ್‌ಗಾಗಿ ವಿಜಯ್ ರಾಘವೇಂದ್ರಗೆ ಜೋಡಿಯಾದ 'ಬಿಗ್ ಬಾಸ್' ಶ್ರುತಿ

ಏಕವ್ಯಕ್ತಿ ನಟನೆಯ ಸವಾಲು ಹೇಗಿತ್ತು?

ಏಕವ್ಯಕ್ತಿ ಎಂದಾಗ ನನಗೆ ಮೊದಲು ಭಯವಿತ್ತು. ಹೇಗೆ ಎಂಬ ಕುತೂಹಲ ಇತ್ತು. ಆದರೆ ನಿರ್ದೇಶಕರು ಕತೆ ಹೇಳಿದಾಗ ಕುತೂಹಲ ಅನ್ನಿಸಿತು. ತುಂಬಾ ಚೆನ್ನಾಗಿ ಪ್ಲಾನ್‌ ಮಾಡಿದ್ದರು, ಆ ಪ್ಲಾನ್‌ ಕಾರ್ಯರೂಪಕ್ಕೆ ತಂದರು. ಇದೊಂದು ತುಂಬಾ ಎನರ್ಜಿ ಬೇಡುವ ಪಾತ್ರ. ಇಲ್ಲದ ವ್ಯಕ್ತಿಯನ್ನು ಕಲ್ಪಿಸಿಕೊಂಡು ನಟಿಸಬೇಕಿತ್ತು. ಸ್ವಲ್ಪ ಗ್ರೇ ಶೇಡ್‌ ಇರುವ ಪಾತ್ರದಲ್ಲಿ ನಟಿಸುವ ಆಸೆ ಇತ್ತು ನನಗೆ. ಆ ಆಸೆ ಈ ಸಿನಿಮಾದಲ್ಲಿ ಈಡೇರಿದೆ.

ಪೊಲೀಸ್‌ ಪಾತ್ರಕ್ಕೆ ಬ್ರಾಂಡ್‌ ಮಾಡಿದ್ರೆ ಖುಷಿನೇ: ವಿಜಯ ರಾಘವೇಂದ್ರ

ಪ್ರೇಕ್ಷಕರು ಏನು ನಿರೀಕ್ಷೆ ಇಟ್ಟುಕೊಳ್ಳಬಹುದು?

ರೆಗ್ಯುಲರ್‌ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಇದು. ಕಂಟೆಂಟ್‌ ಸ್ಟ್ರಾಂಗ್‌ ಇರುವಂತಹ ವಿಶಿಷ್ಟಪ್ರಯತ್ನ. ಇಲ್ಲಿ ಜಾಸ್ತಿ ಹಿಂಸೆ ಇಲ್ಲ. ರಕ್ತಪಾತ ಇಲ್ಲ. ಕುಟುಂಬ ಸಮೇತ ಹೋಗಿ ನೋಡಬಹುದಾದ ಒಂದೊಳ್ಳೆಯ ಸಿನಿಮಾ.