ಬಾಲ್ಯದಿಂದಲೇ ನಟನೆಯ ನೆರಳಿನಲ್ಲಿ ನಿಂತವರು ಉಮೇಶಣ್ಣ. ಚಿತ್ರರಂಗ, ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಜನ ಮೆಚ್ಚಿನ ಕಲಾವಿದ. ಕಂಪನಿ ನಾಟಕಗಳ ಮೂಲಕ ನಟನಾಗಿ ಮುಂದೆ ಮಕ್ಕಳ ರಾಜ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದವರು. ಇಲ್ಲಿವರೆಗೂ ೭೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಬಣ್ಣವೇ ಜೀವನ ಎಂದುಕೊಂಡಿರುವ ಹಿರಿಯ ನಟ ಎಂ ಎಸ್ ಉಮೇಶ್ ಅವರಿಗೆ ಇಂದು 75 ರ ಹುಟ್ಟು ಹಬ್ಬದ ಸಂಭ್ರಮ.

ನನಗೆ 75, ವೃತ್ತಿಗೆ 70 ವರ್ಷ

ನನಗೆ ಈಗ 75 ವರ್ಷ. ವೃತ್ತಿನ ಜೀವನಕ್ಕೆ 70 ವರ್ಷ. ಇಷ್ಟು ವರ್ಷಗಳ ಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ಎರಡು ಸಲ ನನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದೇನೆ. ಮೈಸೂರಿನಲ್ಲಿ ಪೋಷಕ ಕಲಾವಿದರು ಸೇರಿ ಮಾಡಿದ್ದು, ಯಜಮಾನ ಶೂಟಿಂಗ್ ಸೆಟ್‌ನಲ್ಲಿ ಡಾ. ವಿಷ್ಣುವರ್ಧನ್ ಅವರು ನನ್ನ ಹುಟ್ಟುಹಬ್ಬ ಆಚರಿಸಿದ್ದು. ಪ್ರತಿ ವರ್ಷ ನಾನು ಮತ್ತು ನನ್ನ ಮಗಳು ಜಯಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಮಾಡಿಕೊಂಡು ಬರುತ್ತಿದ್ವಿ ಅಷ್ಟೆ. ಲಾಕ್‌ಡೌನ್ ಇಲ್ಲದೆ ಹೋಗಿದ್ದರೆ ಈ ವರ್ಷ ಮಂಡ್ಯ ರಮೇಶ್ ಅವರ ನಟನಾ ಶಾಲೆಯಲ್ಲಿ ನನ್ನ ೭೫ನೇ ವರ್ಷದ ಸಂಭ್ರಮ ಮಾಡಬೇಕಿತ್ತು.

ಲಾಕ್‌ಡೌನ್ ಜೀವನ ಹೊಸದಲ್ಲ

ಈಗ ಇಡೀ ದೇಶ ಲಾಕ್‌ಡೌನ್‌ನಲ್ಲಿದೆ. ಇಂಥ ಲಾಕ್‌ಡೌನ್‌ಗಳು ನನ್ನಂಥ ಕಲಾವಿದನಿಗೆ ತೀರಾ ಹೊಸದೇನು ಅಲ್ಲ. ಹೊಟ್ಟೆಪಾಡಿನ ಪ್ರಶ್ನೆ ಇಟ್ಟುಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದಿನಗಳಲ್ಲೇ ಸಿನಿಮಾಗಳಲ್ಲಿ, ನಾಟಕಗಳಲ್ಲಿ ಅವಕಾಶ ಇಲ್ಲದೆ ಉಪವಾಸ ಇದ್ದ ದಿನಗಳು ತುಂಬಾ ಇವೆ. ಆಗೆಲ್ಲ ಎಲ್ಲೂ ಹೋಗದೆ ಹಸಿವಿನಿಂದ ಮನೆಯಲ್ಲೇ ಇರುತ್ತಿದ್ದೆ. ಆಗಲೇ ನಾನು ಲಾಕ್‌ಡೌನ್ ಸಂಕಷ್ಟವನ್ನು ಅನುಭವಿಸಿದ್ದೇನೆ.

ಮದುವೆಯಾಗದೆ ತಾಯಿಯಾದಾಗ ಈ ನಟಿಯ ಫ್ಯಾಮಿಲಿ ರಿಯಾಕ್ಷನ್‌ ಹೇಗಿತ್ತು?

ನಟನೆ ಶುರುವಾಗಿದ್ದು ಹೇಗೆ?
ಹುಟ್ಟಿದ್ದು 1945 ಮೈಸೂರಿನಲ್ಲಿ. 1949 ರಲ್ಲಿ ಅ.ನ. ಕೃಷ್ಣರಾಯರು ಬರೆದ ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಿಜ್ಜಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಉಮೇಶ್ ಅವರಿಗೆ ನೆನಪಿದೆ. ಆ ನಂತರ ಅಂದರೆ 1960 ಆಗಸ್ಟ್ 12 ರಂದು ತೆರೆಕಂಡ ಮಕ್ಕಳ ರಾಜ್ಯ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೂ 700 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಹಲವು ನಾಟಕಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ರಂಗಭೂಮಿಯ ವಲಸೆ ಹಕ್ಕಿ

ಉಮೇಶ್ ಅವರಿಗೆ ಮೊದಲು ಬಣ್ಣ ಹಾಕಿಸಿದ್ದು ಮಾ.ಹಿರಣ್ಣಯ್ಯ ಅವರ ತಂದೆ ಕೆ. ಹಿರಣ್ಣಯ್ಯ. ನಟನೆ ಕಲಿತಿದ್ದು ಕೂಡ ಕೆ.ಹಿರಣ್ಣಯ್ಯ ನಾಟಕ ಕಂಪನಿಯಲ್ಲೇ. ತಿಂಗಳಿಗೆ ೫ ರುಪಾಯಿಗೆ ಕೂಲಿಗೆ ದುಡಿಯುತ್ತಿದ್ದ ಉಮೇಶ್, ಮುಂದೆ ಗುಬ್ಬಿ ವೀರಣ್ಣ ಕಂಪನಿಗೆ ಬಂದು ೧೦ ರುಪಾಯಿ ಕೂಲಿಗೆ ದುಡಿಯುವ ಕಲಾವಿದ ಎನಿಸಿಕೊಂಡರು. ನಂತರ ಉಮೇಶ್ ಹೋಗಿದ್ದು ಮಹದೇವಸ್ವಾಮಿ ಅವರ ಚಂದ ಥಿಯೇಟರಿಗೆ. ಆಗ ರಂಗಭೂಮಿ ನಟರಿಗೆ ವಲಸೆ ಎಂಬುದು ಬರಡು ಭೂಮಿಯಲ್ಲಿ ಮೇವು ಹುಡುಕಿಕೊಂಡ ಹೊರಟ ಹಸುಗಳಂತೆ.

ಮೊದಲ ಸಿನಿಮಾಕ್ಕೆ 45 ರುಪಾಯಿ ಸಂಭಾವನೆ

ಉಮೇಶ್ ತಮ್ಮ ಮೊದಲ ಚಿತ್ರಕ್ಕೆ ತೆಗೆದುಕೊಂಡ ಸಂ‘ಾವನೆ ಕೇವಲ ೪೫ ರುಪಾಯಿ. ಆ ಕಾಲಕ್ಕೆ ದೊಡ್ಡ ಮೊತ್ತದಂತೆ ಕಂಡ ಈ 45ರುಪಾಯಿಗಳನ್ನು ವ್ಯರ್ಥ ಮಾಡದೆ ಒಂದು ಹಾರ್ಮೋನಿಯಂ ಕೊಂಡರು. ಯಾವಾಗ ಹಾರ್ಮೋನಿಯಂ ಕೊಂಡರೋ ಆಗ ಉಮೇಶ್ ಅವರು ಹಾಡುವುದನ್ನೂ ಶುರು ಮಾಡಿರು. ನನ್ನ ಗಾಯನ ಹೇಗಿತ್ತೋ ನನಗೆ ತಿಳಿಯದು. ಆದರೆ, ನಾನು ಹಾಡುವುದನ್ನು ನೋಡುವ ಜನ ಮಾತ್ರ ಚಪ್ಪಾಳೆ ತಟ್ಟದೇ ಇರುತ್ತಿರಲಿಲ್ಲ. ಹೀಗಾಗಿ ನಾನೂ ಕೂಡ ಖುಷಿಯಿಂದ ಮತ್ತಷ್ಟು ಹಾಡುವುದನ್ನು ಶುರು ಮಾಡಿದೆ. ಹಾರ್ಮೋನಿಯಂನಿಂದ ಗಾಯಕನ ಪಟ್ಟ ನನಗೆ ದಕ್ಕಿತು ಎನ್ನುವ ಉಮೇಶಣ್ಣ ಓದಿದ್ದು ಮಾತ್ರ, 2 ನೇ ತರಗತಿ. ಆಗಿನ ಕಾಲಕ್ಕೆ ಅದೇ ದೊಡ್ಡ ಓದು ಬಿಡಿ!

ನಿಖಿಲ್ ವಿವಾಹ ವರದಿ ಸಲ್ಲಿಸಲು ಸರ್ಕಾರಕ್ಕೆ ಆದೇಶ: ಕುಮಾರಸ್ವಾಮಿಗೆ ಸಂಕಷ್ಟ!

ಸ್ಟಾರ್ ಪಟ್ಟ ಕೊಟ್ಟ ಸಿನಿಮಾ

ಪುಟ್ಟಣ್ಣ ಕಣಗಾಲ್ ಅವರೇ ಕರೆದು ತಮ್ಮ ನಿರ್ದೇಶನದ  ಕಥಾಸಂಗಮ ಚಿತ್ರದಲ್ಲಿ ಪಾತ್ರ ಕೊಟ್ಟರು. ಈ ಚಿತ್ರದಲ್ಲಿ ಅವರು ಮಾಡಿದ ಮುನಿತಾಯಿ ಪಾತ್ರ ಯಶಸ್ಸಿನ ರಥಬೀದಿಯಲ್ಲಿ ನಿಲ್ಲಿಸಿತು ಉಮೇಶ್ ಅವರನ್ನ. ಹೀಗಾಗಿ ಅವರ ಬಣ್ಣದ ಬದುಕಿನಲ್ಲಿ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ ಇದೇ. ಹಾಗೆ ನೋಡಿದರೆ ಈ ಬಡ ಕಲಾವಿದನ ನೆರವಿಗೆ ಬಂದಿದ್ದು ಕೇವಲ ಒಬ್ಬ ಪುಟ್ಟಣ್ಣ ಮಾತ್ರವಲ್ಲ, ಮೇರು ನಟ ಡಾ.ರಾಜ್ ಕುಮಾರ್ ಕೂಡ ನನ್ನ ಕರೆದು ಅವರ ಸಿನಿಮಾಗಳಲ್ಲಿ ಪಾತ್ರ ಕೊಡಿಸಿದ್ದಾರೆ.

ಸನ್ಮಾನದ ಶಾಲುವೆ, ಮೈ ಮುಚ್ಚುವ ಉಡುಗೆ!

ಉಮೇಶಣ್ಣ ‘ರಿಸುವ ಬಟ್ಟೆಗಳು ಮಿಣಮಿಣ ಮಿಂಚುತ್ತಿರುತ್ತವೆ. ಅವರ ಉಡುಗೆಯ ರಹಸ್ಯ ಅವರೇ ಹೇಳುತ್ತಾರೆ: ನಾನು ಹಾಕುವ ಶರ್ಟನ್ನು ಯಾವುದೋ ಸನ್ಮಾನ ಕಾರ್ಯಕ್ರಮದಲ್ಲಿ ಹಾಕಿದ ಶಾಲುಗಳಿಂದ  ಹೊಲಿಸಿಕೊಂಡಿದ್ದು. ಈ ಪ್ಯಾಂಟೂ ಅಷ್ಟೇ. ಅದಕ್ಕೆ ನನ್ನ ಬಟ್ಟೆ ಯಾವಾಗಲೂ ಮಿಣಮಿಣ ಅಂತ ಮಿಂಚುತ್ತಿರುತ್ತವೆ. ನನ್ನ ಮೈ ಮುಚ್ಚುವ ಇಂಥ ಶಾಲುಗಳು ನಮ್ಮ ಮನೆಯಲ್ಲಿ ಸಾಕಷ್ಟು ಇವೆ. ಅಭಿಮಾನಿಗಳು, ಹಿರಿಯರು ಕರೆದು ಪ್ರೀತಿಯಿಂದ ಕೊಟ್ಟಿದ್ದನ್ನು ಬೀರುವಿನಲ್ಲೋ, ಅಟ್ಟದ ಮೇಲೋ ಯಾಕಿಡಬೇಕು, ಮೈಮೇಲೇ ಇರಲಿ.

ಮರೆಯಲಾಗದ ಆ ನೋವು
ನಾನು ಹುಟ್ಟಿದ್ದು ಭಾನುವಾರ ನನ್ನ ಮಗ ಚಂದ್ರಶೇಖರ ಸತ್ತಿದ್ದು ಕೂಡ ಭಾನುವಾರ. ನನ್ನ ಮಗ ಸತ್ತ ವಿಷಯ ತಿಳಿಯದ ನಾನು ಯಾವುದೋ ಊರಿನಲ್ಲಿ ಬಣ್ಣ ಹಚ್ಚಿಕೊಂಡು ಕ್ಯಾಮೆರಾ ಮುಂದೆ ನಿಲ್ಲುವ ತಯಾರಿಯಲ್ಲಿದ್ದೆ. ಪ್ರೇಕ್ಷಕರು ನನ್ನ ಪಾತ್ರ ನೋಡಿ ನಗಲು ಕಾದಿದ್ದರು.ಆದರೆ, ನನ್ನ ಬಣ್ಣದ ಮುಖಕ್ಕೆ ನನ್ನ ಮಗನ ಸಾವಿನ ಸುದ್ದಿ ಗೊತ್ತಾಗುವುದಾದರೂ ಹೇಗೆ? ಪಾತ್ರ ಮುಗಿಸುತ್ತಿದ್ದಂತೆಯೇ ಸಾವಿನ ವರ್ತಮಾನ ಬಂತು. ಆಸ್ಪತ್ರೆಗೆ ಹೋಗಿ ಮಗನ ದೇಹವನ್ನು ಆಟೋದಲ್ಲಿ ಸಾಗಿಸಿಕೊಂಡು ಬಂದೆ.

ಮನೆ ಹತ್ತಿರ ಬಂದು ಇಳಿಯುವಾಗ ಆಟೋದವನು ಹಣ ಕೇಳಿದಾಗಲೇ ನನ್ನ ಜೇಬು ಖಾಲಿ ಎಂದು ಗೊತ್ತಾಗಿದ್ದು. ಮಗನನ್ನು ಮನೆಗೆ ತರಲು ೧೦೦ ರುಪಾಯಿ ನನ್ನಲ್ಲಿ ಇಲ್ಲ ಎಂದು ಗೊತ್ತಾದಾಗ ಅಲ್ಲಿವರೆಗೂ ನಾನು ನಟ ಉಮೇಶನಾಗಿಯೇ ಇದ್ದೆ. ಆದರೆ, ಖಾಲಿ ಜೇಬು, ಕಣ್ಣು ಮುಚ್ಚಿದ ಮಗನ ಮುಖ ನೋಡಿ ಒಬ್ಬ ತಂದೆಯಾಗಿ ಜೋರಾಗಿ ಅತ್ತುಬಿಟ್ಟೆ.

ಆಂಜನೇಯನ ಮುಂದೆ ಮದುವೆ

ನಾನು ಮದುವೆಯಾಗಿದ್ದೇ ಒಂದು ವಿಶೇಷ. ನಾನು ಮತ್ತು ನನ್ನ ಹೆಂಡತಿ ಎಂಎಸ್ ಸುಧಾ ಬಾಲ್ಯ ಸ್ನೇಹಿತರು. ಇಬ್ಬರು ನಾಟಕ ಕಂಪನಿಯಲ್ಲೇ ಇದ್ವಿ. ಜತೆಯಾಗಿ ನಟನೆ ಕೂಡ ಮಾಡಿದ್ದೇವೆ. ಆದರೆ, ಈ ಲವ್ವ ಗಿವ್ವ ಅಂತ ಏನಿರಲಿಲ್ಲ. ದೊಡ್ಡವರು ಎನಿಸಿಕೊಂಡವರು ನಮ್ಮ ಮದುವೆ ಪ್ರಸ್ತಾಪ ಮಾಡಿದರು. ನಾವೂ ತಲೆಯಾಡಿಸಿದ್ವಿ. ಯಾವ ಪುರೋಹಿತರೂ ಇರಲಿಲ್ಲ. ಹುಬ್ಬಳ್ಳಿಯ ಆಂಜನೇಯನ ದೇವಸ್ಥಾನದಲ್ಲಿ ಇಬ್ಬರು ಹಾರ ಬದಲಾಯಿಸಿಕೊಂಡ್ವಿ. ಮದುವೆ ಆಗಿ ೫೦ ವರ್ಷ ಆಗಯಿತು. ಆಗ ಯಾವ ಮುಹೂರ್ತ ಇತ್ತೋ ಆ ಅಂಜನೇಯನಿಗೇ ಗೊತ್ತು!

40 ಕತೆಗಳನ್ನು ಬರೆದವರು
ನಾನು ಬರಹಗಾರ ಕೂಡ ಹೌದು ಎಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಕಿರುತೆರೆಗೆ ಅಂತಲೇ ಸುಮಾರು 40 ಕಥೆಗಳನ್ನು ಬರೆದಿದ್ದೇನೆ. ಕೆಲವನ್ನೂ ನಾನೇ ನಿರ್ದೇಶನ ಕೂಡ ಮಾಡಿದ್ದೇನೆ. ವೈಯಕ್ತಿಕ ಬದುಕು ಹೇಗೆ ಇರಲಿ, ಬಣ್ಣ ಮಾತ್ರ ನನ್ನ ದೂರ ಮಾಡಿಲ್ಲ. ಅದಕ್ಕೆ ನನ್ನ ಮನೆಯ ಹೆಸರು ಬಣ್ಣದ ಲೋಕ ಅಂತ ಇಟ್ಟಿರುವುದು.

- ಆರ್. ಕೇಶವಮೂರ್ತಿ