ತುಂಬಾ ವರ್ಷಗಳ ನಂತರ ಹಿರಿಯ ನಟ, ಕಲಾ ತಪಸ್ವಿ ರಾಜೇಶ್ ಮತ್ತೆ ಬಣ್ಣ ಹಚ್ಚಿದ್ದಾರೆ. ಶ್ರೀನಿ ನಟಿಸಿ, ನಿರ್ದೇಶಿಸುತ್ತಿರುವ ‘ಓಲ್ಡ್ ಮಾಂಕ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
'ಓಲ್ಡ್ ಮಾಂಕ್'... ಸಿನಿಮಾ ಟೈಟಲ್ ರಿಲೀಸ್ ಆಗುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾ ಇದು. ನಿರ್ದೇಶಕ ಶ್ರೀ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷದಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು.
ಇನ್ನು ಸಿನಿಮಾದಲ್ಲಿ ಶ್ರೀನಿ ಜೊತೆ ನಟಿ ಅದಿತಿ ಪ್ರಭುದೇವ ರೋಮ್ಯಾನ್ಸ್ ಮಾಡಲಿದ್ದಾರೆ. ಜೊತೆಗೆ ಹಲವು ವರ್ಷಗಳ ನಂತರ ಹಿರಿಯ ನಟ ರಾಜೇಶ್ ಬಣ್ಣ ಹಚ್ಚುತ್ತಿರುವುದು ಸಂತೋಷದ ವಿಚಾರ. ಡಾ. ರಾಜ್‌ಕುಮಾರ್, ಕಲ್ಯಾಣ್ ಕುಮಾರ್ ಹಾಗೂ ಉದಯ್ ಕುಮಾರ್ ಅವರಂಥ ದೊಡ್ಡ ಕಲಾವಿದರ ಜೊತೆ 88 ವರ್ಷದ ರಾಜೇಶ್ ನಟಿಸಿದ್ದಾರೆ. ಜನವರಿ 15ರಿಂದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲ್ಲಿದ್ದಾರೆ.
‘ಚಿತ್ರದಲ್ಲಿ ಒಂದು ವಿಶೇಷ ಪಾತ್ರವಿದೆ. ಆ ಪಾತ್ರದ ಮೂಲಕ ರಾಜೇಶ್ ಅವರು ಮತ್ತೆ ಬಣ್ಣ ಹಚ್ಚಿದರೆ ಹೇಗಿರುತ್ತದೆ ಎನ್ನುವ ಆಲೋಚನೆ ಬಂತು. ಅವರನ್ನು ಭೇಟಿ ಮಾಡಿ ಕತೆ ಹೇಳಿದೆ. ಖುಷಿಯಿಂದ ಒಪ್ಪಿದ್ದಾರೆ. ನಮ್ಮ ಚಿತ್ರದಲ್ಲಿ ಹಿರಿಯ ನಟರೊಬ್ಬರು ಕಾಣಿಸಿಕೊಳ್ಳುತ್ತಿರುವುದು ನಮ್ಮ ಹೆಮ್ಮೆ,’ ಎನ್ನುತ್ತಾರೆ ಶ್ರೀನಿ. ಚಿತ್ರಕ್ಕೆ ಶೇ.80 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯಕ್ಕೆ ಚಿತ್ರದ ಎಡಿಟಿಂಗ್ ನಡೆಯುತ್ತಿದೆ.
ಓಲ್ಡ್ ಮಾಂಕ್ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿಗೂ ರೀಮೇಕ್ ಆಗುತ್ತಿದೆ. ತೆಲುಗಿನ ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ರಾಮಕೃಷ್ಣ ನಲ್ಲಂ ಹಾಗೂ ಸ್ಟಾರ್‌ವುಡ್ ಪ್ರೊಡಕ್ಷನ್ ರವಿ ಕಶ್ಯಪ್ ರೀಮೇಕ್ ರೈಟ್ಸ್ ಖರೀದಿಸಿದ್ದಾರೆ.
