ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಇಡೀ ರಾಜ್ಯ ಮಾತ್ರವಲ್ಲ, ದೇಶದ ಗಮನ ಸೆಳೆಯುತ್ತಿರುವ ಸಾಕ್ಷ್ಯಚಿತ್ರವೊಂದನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಈ ಡಾಕ್ಯುಮೆಂಟರಿ ಹೆಸರು ‘ವೈಲ್ಡ್ ಕರ್ನಾಟಕ’. ಕನ್ನಡದಲ್ಲಿ ಅನಂತ್‌ನಾಗ್ ಹಿನ್ನೆಲೆ ಧ್ವನಿ ನೀಡಲಿದ್ದಾರೆ. ಕನ್ನಡನಾಡಿನ ಅರಣ್ಯ, ಪ್ರಾಣಿ, ಪಕ್ಷಿ ಹೀಗೆ ಪ್ರಕೃತಿಯ ಅದ್ಭುತಗಳನ್ನು ಒಳಗೊಂಡ ‘ವೈಲ್ಡ್ ಕರ್ನಾಟಕ’ ಎನ್ನುವ ಸಾಕ್ಷ್ಯ ಚಿತ್ರವನ್ನು ಕರ್ನಾಟಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಅಮೋಘವರ್ಷ ಮತ್ತು ತಂಡ ಚಿತ್ರೀಕರಿಸಿದ್ದಾರೆ.

‘ಎಂಥ ಸೌಂದರ್ಯ ನಮ್ಮ ಕರುನಾಡ ಬೀಡು’ ಎನ್ನುವ ಹಾಡಿನ ಸಾಲಿಗೆ ಅರ್ಥ ತುಂಬುವಂತಿರುವ ಈ ಸಾಕ್ಷ್ಯ ಚಿತ್ರದ ಕನ್ನಡ ವರ್ಷನ್ ಅನ್ನು ಪ್ರೇಕ್ಷಕರ ಮುಂದೆ ತರುವ ಜವಾಬ್ದಾರಿಯನ್ನು ರಿಷಬ್ ಶೆಟ್ಟಿ
ಫಿಲಮ್ಸ್ ವಹಿಸಿಕೊಂಡಿದ್ದು ನಿರ್ದೇಶನದ ಜತೆಗೆ ಅಮೋಘವರ್ಷ ಹಾಗೂ ಕಲ್ಯಾಣ್‌ವರ್ಮಾ ಈ ವೈಲ್ಡ್ ಕರ್ನಾಟಕ ಚಿತ್ರವನ್ನು ನಿರ್ಮಿಸಿದ್ದಾರೆ. ಐಎಎಸ್ ಅಧಿಕಾರಿಗಳಾದ ವಿಜಯ್ ಮೋಹನ್ ರಾಜ್, ಶರತ್ ಚಂಪಾಟಿ ಸಾಥ್ ನೀಡಿದ್ದಾರೆ. ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಹಲವು ಪ್ರಥಮಗಳೊಂದಿಗೆ ಆಂಗ್ಲ ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಸಾಕ್ಷ್ಯಚಿತ್ರವನ್ನು ಕನ್ನಡೀಕರಣ ಮಾಡಿ ಸಾಮಾನ್ಯ ಚಿತ್ರಮಂದಿರಗಳಲ್ಲೂ ಬಿಡುಗಡೆ ಮಾಡುವ ಜವಾಬ್ದಾರಿ ರಿಷಬ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಈ ಚಿತ್ರದ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ.  ಪರಿಸರ, ವನ್ಯಜೀವಿ, ಪ್ರಕೃತಿ, ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಡಂಚಿನ ಶಾಲೆ ಮಕ್ಕಳ ಜತೆಗೆ ಸಾಮಾನ್ಯ ಜನರಿಗೂ ಈ ಚಿತ್ರ ತಲುಪಬೇಕು ಎನ್ನುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ‘ವೈಲ್ಡ್ ಕರ್ನಾಟಕ’ವನ್ನು ಕನ್ನಡೀಕರಣ ಮಾಡುತ್ತಿದ್ದಾರೆ. 

ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರದ ವಿಶೇಷ

1. ಇಡೀ ದೇಶದಲ್ಲಿ ಮೊದಲ ಬಾರಿಗೆ 4 ಕೆ ಕ್ವಾಲಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟು ೩೦ಕ್ಕೂ ಹೆಚ್ಚು ಛಾಯಾಗ್ರಾಹಕರು ಈ ಸಾಕ್ಷ್ಯ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

2. ಒಂದು ರಾಜ್ಯದ ಪ್ರಕೃತಿ ವಿಸ್ಮಯ ಒಳಗೊಂಡ ಸಾಕ್ಷ್ಯ ಚಿತ್ರವೊಂದು ಇಂಗ್ಲಿಷ್ ಅವತರಣಿಕೆಯಲ್ಲಿ ಪಿವಿಆರ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ದೇಶದ್ಯಾಂತ ಮುಂದಿನ ತಿಂಗಳು ಪಿವಿಆರ್ ಪರದೆಗಳಲ್ಲಿ ಕರ್ನಾಟಕದ ಅದ್ಭುತಗಳು ಪ್ರತ್ಯಕ್ಷವಾಗುತ್ತಿವೆ.

3.  ಪರಿಸರ ವಿಜ್ಞಾನ ಪಿತಾಮಹ ಹಾಗೂ ಜಗತ್ತಿನ ಸರ್ವಶ್ರೇಷ್ಠ ಚಿತ್ರ ನಿರ್ದೇಶಕ ಡೇವಿಡ್ ಅಟೆನ್‌ಬರೋ ಮೊದಲ ಬಾರಿಗೆ ತಮ್ಮ ನಿರ್ದೇಶನವಲ್ಲದ ಸಾಕ್ಷ್ಯಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಭಾರತದ ಯಾವುದೇ ಸಾಕ್ಷ್ಯ ಚಿತ್ರಕ್ಕೆ ಅವರು ಧ್ವನಿ ನೀಡಿಲ್ಲ.