ಹರಿಹರ(ಫೆ.10): ​ಚಿತ್ರನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಿಂದ ‘ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳವಾರ ನಡೆದ ವಾಲ್ಮೀಕಿ ಜಾತ್ರೆಯ ಸಮಾರಂಭದಲ್ಲಿ ಸ್ವಾಮೀಜಿ ಮತ್ತು ವೇದಿಕೆಯಲ್ಲಿದ್ದ ಮುಖಂಡರಿಂದ ಸುದೀಪ್‌ ವಾಲ್ಮೀಕಿ ರತ್ನ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಅಭಿಮಾನಿಗಳು ಸುದೀಪ್‌ ನೋಡಲು ವೇದಿಕೆಯತ್ತ ನೂಕುನುಗ್ಗಲು ನಡೆಸಿದ್ದರಿಂದ ಸುದೀಪ್‌ಗೆ ಮಾತನಾಡಲು ಸಾಧ್ಯವಾಗಲಿಲ್ಲ.

ನೂಕುನುಗ್ಗಲು, ಲಾಠಿ ಪ್ರಹಾರ:

ವಾಲ್ಮೀಕಿ ಜಾತ್ರೆಯಲ್ಲಿ ‘ವಾಲ್ಮೀಕಿ ರತ್ನ’ ಪ್ರಶಸ್ತಿ ಸ್ವೀಕಾರಕ್ಕೆ ಆಗಮಿಸಿದ್ದ ಚಿತ್ರನಟ ಕಿಚ್ಚ ಸುದೀಪ್‌ ಅವರನ್ನು ನೋಡಲು, ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳಲು, ಕೈ ಕುಲುಕಲು ಅಭಿಮಾನಿಗಳು ಮುಗಿ ಬಿದ್ದರು. ಈ ವೇಳೆ ಪೊಲೀಸರು ಲಘುಲಾಠಿ ಪ್ರಹಾರ ಮಾಡಿ ನಿಯಂತ್ರಿಸಿದರು.

'ವಾಲ್ಮೀಕಿ ರತ್ನ' ಪ್ರಶಸ್ತಿಗೆ ಆಯ್ಕೆಯಾದ ನಟ ಕಿಚ್ಚ ಸುದೀಪ್!

ಹೆಲಿಪ್ಯಾಡ್‌ಗೆ ನುಗ್ಗಿದ ಅಭಿಮಾನಿ:

ಶ್ರೀಪೀಠದ ಹೆಲಿಪ್ಯಾಡ್‌ಗೆ ಸುದೀಪ್‌ ಬಂದಾಗ ಹಾಗೂ ಅಲ್ಲಿಂದ ವಾಪಸ್‌ ಹೋಗುವಾಗಲೂ ಅಭಿಮಾನಿಗಳ ದಂಡೇ ಸೇರಿತ್ತು. ಸುದೀಪ್‌ ವಾಪಸ್‌ ಬೆಂಗಳೂರಿಗೆ ಹೊರಡುವಾಗ ಇನ್ನೇನು ಹೆಲಿಕಾಪ್ಟರ್‌ ಹಾರಬೇಕೆನ್ನುವಷ್ಟರಲ್ಲಿ ಯುವಕನೊಬ್ಬ ಅದರತ್ತ ನುಗ್ಗಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ. ತಕ್ಷಣವೇ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಹೀಗಾಗಿ ಹೆಲಿಕಾಪ್ಟರ್‌ ಅರ್ಧಗಂಟೆ ತಡವಾಗಿ ಹಾರಿತು.