ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಹಾಗೂ ಪಿ. ವಾಸು ಕಾಂಬಿನೇಷನ್​ನಲ್ಲಿ ಮೂಡಿ ಬಂದಿದ್ದ  'ದೃಶ್ಯ 2' ಸಿನಿಮಾ ಓಟಿಟಿ ಪ್ಲಾಟ್​ಫಾರ್ಮ್‌ನಲ್ಲಿ ಇದೇ ಫೆಬ್ರವರಿ 25ರಂದು ಬಿಡುಗಡೆಯಾಗಲಿದೆ. 

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಟಿಟಿ ಪ್ಲಾಟ್ ಫಾರ್ಮ್​ಗೆ (OTT Platform) ಬರುವ ಟ್ರೆಂಡ್ ಹೆಚ್ಚಾಗಿದೆ‌. ಕೋವಿಡ್​ ನಂತರದ ಪರಿಸ್ಥಿತಿಯಲ್ಲಿ ಓಟಿಟಿಗಳ ಕಡೆಗೆ ಜನರ ಆಸಕ್ತಿ ಹೆಚ್ಚಿದೆ. ಇದೀಗ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran)​ ಅಭಿನಯದ 'ದೃಶ್ಯ 2' (Drishya 2) ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗಲಿದ್ದು, ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡಲು ಮಿಸ್​ ಮಾಡಿಕೊಂಡವರು ಈಗ ಕುಟುಂಬದ ಜೊತೆ ಮನೆಯಲ್ಲಿಯೇ ಕುಳಿತು ನೋಡಬಹುದು. 

ಹೌದು! ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ'ನಾಗಿ ನಟಿಸಿದ್ದ 'ದೃಶ್ಯ 2' ಚಿತ್ರಮಂದಿಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ಕಳೆದ ಡಿಸೆಂಬರ್ 10ರಂದು ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರು ನಿರ್ದೇಶಕ ಪಿ. ವಾಸು (P.Vasu). ರವಿಚಂದ್ರನ್, ನವ್ಯಾ ನಾಯರ್ ಸೇರಿದಂತೆ ಮುಂತಾದವರು ನಟಿಸಿದ್ದ ಈ ಚಿತ್ರದ ಕ್ಲೈಮ್ಯಾಕ್ಸ್‌ (Climax) ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇರಿಸಿತ್ತು. ಮಲಯಾಳಂನಲ್ಲಿ (Malayalam) ತೆರೆಕಂಡಿದ್ದ 'ದೃಶ್ಯಂ 2'ನ (Drishyam 2) ರಿಮೇಕ್‌ ಆಗಿದ್ದ ಈ ಸಿನಿಮಾವನ್ನು ಕನ್ನಡದ ಸೊಗಡಿಗೆ ತಕ್ಕಂತೆ ಪಿ.ವಾಸು ಪ್ರೇಕ್ಷಕರ ಎದುರಿಗೆ ಇಟ್ಟಿದ್ದರು.

ನಟ Ravichandran ಕಿಡ್ನಾಪ್, ಲೀಕ್ ಆದ ವಿಡಿಯೋ ವೈರಲ್!

'ದೃಶ್ಯ 2' ಸಿನಿಮಾ ಈಗ ಜೀ5 (Zee5) ಒಟಿಟಿಗೆ ಎಂಟ್ರಿ ಕೊಟ್ಟಿದ್ದು, ಫೆಬ್ರವರಿ 25ರಿಂದ ಜೀ5ನಲ್ಲಿ ಸಿನಿಮಾದ ಪ್ರೀಮಿಯರ್ ಆರಂಭವಾಗಲಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ (Pramod Shetty) ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದು, ಸಿನಿಮಾ ಕಥೆಗಾರನ ಪಾತ್ರದಲ್ಲಿ ಅನಂತ್ ನಾಗ್‌ ತೆರೆಯ ತೂಕ ಹೆಚ್ಚಿಸಿದ್ದರು. ಶಿವಾಜಿ ಪ್ರಭು (Shivaji Prabhu), ಆಶಾ ಶರತ್‌ (Asha Sharat) ಅಭಿನಯವೂ ಅಮೋಘವಾಗಿತ್ತು. 'ದೃಶ್ಯ' ಮೊದಲ ಭಾಗದಲ್ಲಿ ನಾಯಕಿಯಾಗಿ ನಟಿಸಿದ್ದ ನವ್ಯ ನಾಯರ್ (Navya Nair)​ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ (Arohi Narayan)​ ಕಾಣಿಸಿಕೊಂಡಿದ್ದಾರೆ.



ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್​ನಲ್ಲಿ 'ದೃಶ್ಯ 2' ಚಿತ್ರ ಮೂಡಿಬಂದಿದೆ. ಜಿ.ಎಸ್.ವಿ. ಸೀತಾರಾಂ ಕ್ಯಾಮರಾ ಕೈಚಳಕ, ಅಜನೀಶ್​ ಬಿ. ಲೋಕನಾಥ್​ ಹಿನ್ನೆಲೆ ಸಂಗೀತ, ರವಿ ಸಂತೆಹುಕ್ಲು ಕಲಾ ನಿರ್ದೇಶನ, ಸುರೇಶ್ ಅರಸ್ ಸಂಕಲನ ಹಾಗೂ ಲೋಕೇಶ್ ಬಿ.ಕೆ ಗೌಡ, ಭರತ್ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ‌. ಶಿವಾಜಿ ಪ್ರಭು, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯುಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಸೇರಿದಂತೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಹಿಂದೆ 'ದೃಶ್ಯ 2' ಪ್ರೀಮಿಯರ್​ ಶೋನಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ವೀಕ್ಷಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು.

ರವಿಚಂದ್ರನ್‌ ಹೊಸ ಸಿನಿಮಾ 'ರಮ್ಯ ರಾಮಸ್ವಾಮಿ'!

ಇನ್ನು ಇತ್ತೀಚೆಗೆ ವಿ.ರವಿಚಂದ್ರನ್ ಅಭಿನಯದ 'ಕನ್ನಡಿಗ' (Kannadiga) ಸಿನಿಮಾ ಕೂಡ ಓಟಿಟಿ ಮೂಲಕ ಬಿಡುಗಡೆಯಾಗಿತ್ತು. ಗಿರಿರಾಜ್ (Giriraj)​ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ರವಿಚಂದ್ರನ್​ ಕಾಣಿಸಿಕೊಂಡಿದ್ದರು. ಮಾತ್ರವಲ್ಲದೇ ಶಿವರಾಜ್​ಕುಮಾರ್ (Shivarajkumar)​ ನಟನೆಯ 'ಭಜರಂಗಿ 2' (Bhajarangi 2) ಹಾಗೂ ರಾಜ್​ ಬಿ. ಶೆಟ್ಟಿ (Raj B Shetty) ನಟನೆಯ 'ಗರುಡ ಗಮನ ವೃಷಭ ವಾಹನ' (Garuda Gamana Vrishabha Vahana) ಚಿತ್ರಗಳು ಜೀ5ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಣೆಯಲ್ಲಿ ದಾಖಲೆಯನ್ನು ಮಾಡಿದೆ. ಇದೀಗ ಮರ್ಡರ್​ ಮಿಸ್ಟರಿ ಕಥೆಯುಳ್ಳ 'ದೃಶ್ಯ 2' ಕೂಡ ಜೀ5ನಲ್ಲೇ ಪ್ರದರ್ಶನವಾಗಲಿದೆ.