ಆರ್‌ ಕೇಶವಮೂರ್ತಿ

ಚಿತ್ರೀಕರಣ ಕೆಲಸಗಳನ್ನು ನಿಲ್ಲಿಸಿ ಸಾಕಷ್ಟುಬಿಡುವು ಆಗಿದ್ದೀರಿ ಅನಿಸುತ್ತದೆ?

ಬೇಗ ಬೇಗ ಶೂಟಿಂಗ್‌ ಮುಗಿಸಿ ಬಿಡುಗಡೆ ಮಾಡುವುದರಿಂದ ಈಗ ಪ್ರಯೋಜನವಿಲ್ಲ. ಜನ ಇನ್ನೂ ಚಿತ್ರಮಂದಿರಗಳ ಕಡೆ ಹೋಗುವುದಾ, ಬೇಡವಾ ಎನ್ನುವ ಆಲೋಚನೆಯಲ್ಲಿದ್ದಾರೆ. ಜನಕ್ಕೆ ಸಿನಿಮಾ ಕೊನೆಯ ಆಯ್ಕೆ. ಆರೋಗ್ಯ ಮತ್ತು ಜೀವನ ಈಗ ಮುಖ್ಯ. ಹೀಗಾಗಿ ಸಮಯ ತೆಗೆದುಕೊಂಡೇ ಶೂಟಿಂಗ್‌ ಮಾಡೋಣ ಎಂಬುದು ನನ್ನ ಅಭಿಪ್ರಾಯ.

ಪ್ರಿಯಾಂಕಳನ್ನು ನೋಡಿದಾಗ ಮಾಲಾಶ್ರೀ ನೆನಪಾದ್ರು: ಉಪೇಂದ್ರ 

ಚಿತ್ರಮಂದಿರಗಳಿಗೆ ಜನ ಬರಲು ತಯಾರಿಲ್ಲ ಎನ್ನುವ ಕಾರಣಕ್ಕೆ ಶೂಟಿಂಗ್‌ ನಿಲ್ಲಿಸಿರುವುದಾ?

ಇದು ಒಂದು ಕಾರಣ ಅಷ್ಟೆ. ಈಗ ನನ್ನ ನಟನೆಯ ‘ಕಬ್ಜ’ ಚಿತ್ರೀಕರಣ ಮಾಡಬೇಕಿತ್ತು. ನೂರಾರು ಮಂದಿ ಮಧ್ಯೆ ಒಳಾಂಗಣದಲ್ಲಿ ಶೂಟಿಂಗ್‌ ಮಾಡಬೇಕು. ಕಡಿಮೆ ತಂತ್ರಜ್ಞರು, ಕಲಾವಿದರು ಇದ್ದರೆ ಸಾಲದು. ಆದರೆ, ಈಗಿನ ಕೋವಿಡ್‌ 19 ಸಂಕಷ್ಟವನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಶೂಟಿಂಗ್‌ ಸೆಟ್‌ನಲ್ಲಿ ಈ ಜನ ಜಾತ್ರೆ ಮಾಡಲು ಸಾಧ್ಯವಿಲ್ಲ. ಶೂಟಿಂಗ್‌ಗೆ ವಿರಾಮ ಕೊಡುವುದುಕ್ಕೆ ಇದು ಬಹು ಮುಖ್ಯ ಕಾರಣ. ಜನವರಿ ತಿಂಗಳಲ್ಲಿ ‘ಕಬ್ಜ’ ಚಿತ್ರೀಕರಣಕ್ಕೆ ಹೊರಡಲಿದೆ.

ಈ ಬಿಡುವಿನ ಸಮಯವನ್ನು ನೀವು ಹೇಗೆ ಕಳೆಯುತ್ತಿದ್ದೀರಿ?

ಲಾಕ್‌ಡೌನ್‌ ಸಮಯವನ್ನೂ ನಾನು ವ್ಯರ್ಥ ಮಾಡಲಿಲ್ಲ. ಪ್ರಜಾಕೀಯ ಕೆಲಸ- ಕಾರ್ಯಯೋಜನೆಗಳ ಬಗ್ಗೆ ಚರ್ಚೆ, ಚಿತ್ರಕಥೆ ಬರೆಯುವುದು, ಅತೀ ಕಡಿಮೆ ಸಮಯದಲ್ಲಿ ಯಾವ ರೀತಿಯ ಬೆಳೆಗಳನ್ನು ಹಾಕಬಹುದು ಎಂದು ಯೋಚಿಸಿ ಕೃಷಿ ಮಾಡಲು ನಾನೇ ಮುಂದಾಗಿದ್ದು... ಇದೆಲ್ಲವನ್ನೂ ನಾನು ಲಾಕ್‌ಡೌನ್‌ ಸಮಯದಲ್ಲೇ ಮಾಡಿದ್ದು. ಈಗ ಸಿಕ್ಕಿರುವ ಸಮಯವನ್ನು ನನ್ನ ನಿರ್ದೇಶನದ ಚಿತ್ರದ ಕತೆ, ಚಿತ್ರಕತೆ ತಯಾರಿಗೆ ಉಪಯೋಗಿಸುತ್ತಿದ್ದೇನೆ.

ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಸೆಟ್ಟೇರಬಹುದು?

ನಾನು ನಿರ್ದೇಶನ ಮಾಡಲು ಹೊರಟಿರುವುದು ನನ್ನ 50ನೇ ಸಿನಿಮಾ. ಲಾಡ್‌ಡೌನ್‌ ಸಮಯದಲ್ಲಿ ಹೊಳೆದ ಒಂದೆರಡು ಕತೆಗಳ ಸುತ್ತ ಕೆಲಸ ಮಾಡುತ್ತಿದ್ದೇನೆ. ಚಿತ್ರಕತೆ ಅಂತಿಮವಾಗಬೇಕಿದೆ. ನನಗೆ ನಾನೇ ಮಾಡಿಕೊಂಡಿರುವ ಕತೆಯಾದರೂ ಅಷ್ಟುಬೇಗ ಕನ್ವಿನ್ಸ್‌ ಆಗಲ್ಲ. ಸಾಕಷ್ಟುಸಮಯ ತೆಗೆದುಕೊಂಡೇ ಕತೆ- ಚಿತ್ರಕತೆ ಮಾಡುತ್ತೇನೆ. ಮುಂದಿನ ವರ್ಷ ನನ್ನ ನಟನೆಯ ನಿರ್ದೇಶನದ ಚಿತ್ರ ಸೆಟ್ಟೇರುವುದು ಪಕ್ಕಾ.

ಸಸ್ಪೆನ್ಸ್ ಥ್ರಿಲ್ಲರ್‌ 1980ರಲ್ಲಿ ಪ್ರಿಯಾಂಕ ಉಪೇಂದ್ರ..! ಕೊಡಗಿನಲ್ಲಿ ಶೂಟಿಂಗ್ 

ನಿಮ್ಮ 50ನೇ ಚಿತ್ರದ ನಿರ್ದೇಶನ ಮಂಜು ಮಾಂಡವ್ಯ ಅಂತಿತ್ತಲ್ಲ?

ಹಾಗೇನು ನಿರ್ದಿಷ್ಟವಾಗಿ ಫಿಕ್ಸ್‌ ಆಗಿರಲಿಲ್ಲ. ಅವರು ನನ್ನ ಜತೆ ಸಿನಿಮಾ ಮಾಡುತ್ತಾರೆ. ಅಲ್ಲದೆ ಕನ್ನಡ, ತೆಲುಗು ಸೇರಿದರೆ ನನ್ನ ಸಿನಿಮಾಗಳ ಪಟ್ಟಿ50 ದಾಟಿದೆ. ಕನ್ನಡ ಸಿನಿಮಾ ಅಂತ ಬಂದಾಗ 50ನೇ ಚಿತ್ರ ಯಾವುದು, ಯಾರು ಮಾಡುವುದು ಅಂತ ಪಕ್ಕಾ ಆಗಿರಲಿಲ್ಲ. ಮತ್ತೊಂದು ಕಡೆ ಮನೆಯಲ್ಲೂ ಕೂಡ ನಿರ್ದೇಶನ ಯಾವಾಗ ಮಾಡುತ್ತೀರಿ ಎಂದು ಕೇಳುತ್ತಿದ್ದರು. ಹೀಗಾಗಿ ಐವತ್ತು ತುಂಬಾ ಮುಖ್ಯ. ಆ ಕಾರಣಕ್ಕೆ ಆ 50ನೇ ಚಿತ್ರಕ್ಕೆ ನನ್ನದೇ ಆ್ಯಕ್ಷನ್‌ ಕಟ್‌ ಇರಲಿ ಎಂದುಕೊಂಡಿದ್ದೇನೆ. ಮಂಜು ಮಾಂಡವ್ಯ ಅವರು ಬೇರೆ ಸಿನಿಮಾ ಮಾಡುತ್ತಾರೆ.

ಕತೆ ಯಾವ ರೀತಿಯದ್ದು, ಏನೆಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದೀರಿ?

ಈಗಲೇ ಕತೆ ಬಗ್ಗೆ ಹೇಳಲಾರೆ. ನಾನು ಏನೇ ಕತೆ, ಚಿತ್ರಕಥೆ ಬರೆದರೂ ಮುಂದಿನ ಆರು ತಿಂಗಳು ಪ್ರೇಕ್ಷಕರ ಮೈಂಡ್‌ ಸೆಟ್‌ ಹೇಗಿರುತ್ತದೆ, ಅವರ ಅಭಿರುಚಿಗಳು ಆಗ ಹೇಗಿರುತ್ತದೆ ಎಂದು ಸ್ಟಡಿ ಮಾಡಿಯೇ ಸಿನಿಮಾ ಮಾಡುತ್ತೇನೆ. ಅಂಥ ಸ್ಟಡಿ ಈಗ ನಡೆಯುತ್ತಿದೆ. ಹೀಗಾಗಿ ಸ್ಕಿ್ರಪ್ಟ್‌ಗೆ ಹೆಚ್ಚು ಸಮಯ ಬೇಕು.

ನಿಮ್ಮ ಹುಟ್ಟುಹಬ್ಬಕ್ಕೆ ಏನಾದರೂ ಅಧಿಕೃತ ಪ್ರಕಟಣೆ ಇರುತ್ತದೆಯೇ?

ಸಿನಿಮಾ ಮಾಡಬೇಕು ಎಂದುಕೊಂಡಾಗ ನಾನು ಇಂಥ ದಿನಕ್ಕಾಗಿಯೇ ಕಾಯಲ್ಲ. ಹುಟ್ಟುಹಬ್ಬಕ್ಕೆ ಪೋಸ್ಟರ್‌, ಮತ್ತೊಂದು ದಿನ ಟೀಸರ್‌, ಇನ್ಯಾವುದೋ ದಿನ ಟ್ರೇಲರ್‌ ಅಂತ ವಿಶೇಷ ದಿನ, ದಿನಾಂಕಗಳನ್ನು ಎದುರು ನೋಡುತ್ತಾ ಕೂರಲ್ಲ. ನನ್ನ ಸಿನಿಮಾ ಕೆಲಸಗಳು ಎಲ್ಲವೂ ಪಕ್ಕಾ ಆದಾಗ ಪ್ರಟಕಣೆ ಮಾಡುತ್ತೇನೆ. ನಾನು ಅನೌನ್ಸ್‌ ಮಾಡಿದ ದಿನವೇ ವಿಶೇಷ ದಿನ ಆಗಿರುತ್ತದೆ ಅಷ್ಟೆ.

ಪ್ರಿಯಾಂಕ ಉಪೇಂದ್ರ ಈಗ ಲೇಡಿ ಮೆಗಾ ಸೂಪರ್‌ ಸ್ಟಾರ್‌ ಆಗಿದ್ದಾರಲ್ಲ?

ಚಿತ್ರತಂಡದವರು ಕೊಟ್ಟಿರುವ ಬಿರುದು. ಹೆಂಡತಿ ಲೇಡಿ ಮೆಗಾ ಸೂಪರ್‌ಸ್ಟಾರ್‌. ಇಲ್ಲಿ ಮೆಗಾ ಅನ್ನೋದು ಮಗ ಕೂಡ ಆಗಬಹುದು.

ಅಂದ್ರೆ, ನಿಮ್ಮ ಮಗ ಚಿತ್ರರಂಗಕ್ಕೆ ಬರುತ್ತಾನೆಯೇ?

ಅಯ್ಯೋ ಅದೆಲ್ಲ ನನಗೆ ಗೊತ್ತಿಲ್ಲ. ಅವನು ಈಗ ಪಿಯುಸಿ ಓದುತ್ತಿದ್ದಾನೆ. ನಾನು ಓದಕ್ಕೆ ಪೋರ್ಸ್‌ ಮಾಡಲ್ಲ. ಇನ್ನೂ ಹೀರೋ ಆಗು ಅಂತ ಹೇಳಲ್ಲ. ಮಕ್ಕಳಿಗೆ ಏನು ಇಷ್ಟಆಗುತ್ತದೋ ಅದನ್ನು ಮಾಡಲಿ. ಅವರು ಇಷ್ಟಪಟ್ಟು ಪ್ರೀತಿಯಿಂದ ಮಾಡುವ ಕೆಲಸಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ.