ಸ್ಟಾರ್ ಸಿನಿಮಾಗಳು ಓಟಿಟಿಯಲ್ಲಿ ತೆರೆಕಾಣಲಿವೆಯೇ; 'ರಾಧೆ' ಬೆನ್ನಿಗೇ ಶುರುವಾಗಿದೆ ಲೆಕ್ಕಾಚಾರ
ಸಲ್ಮಾನ್ ಖಾನ್ ಅಭಿನಯದ ರಾಧೆ ಚಿತ್ರ ಕಳೆದ ವರ್ಷ ಮೇ ತಿಂಗಳಲ್ಲೇ ಬಿಡುಗಡೆ ಆಗಬೇಕಾಗಿತ್ತು. ಲಾಕ್‌ಡೌನ್‌ನಿಂದಾಗಿ ಅದು ಮುಂದೆ ಹೋಗಿ ಹೋಗಿ, ಸರಿಯಾಗಿ ಒಂದು ವರ್ಷದ ನಂತರ ಪ್ರೇಕ್ಷಕರಿಗೆ ತಲುಪಿತು. ಅದೂ ಓಟಿಟಿ ಪ್ಲಾಟ್‌ಫಾರ್ಮಿನಲ್ಲಿ. ಈದ್ ಸಂಭ್ರಮಕ್ಕೆ ಸಲ್ಮಾನ್ ಖಾನ್ ಸಿನಿಮಾ ತೆರೆಕಾಣಬೇಕು ಎಂಬುದು ಬಹಿರಂಗ ನೆಪ. ಆದರೆ ಚಿತ್ರದ ಭಾರವನ್ನು ಇನ್ನಷ್ಟು ಹೊರಲಾರೆವು ಎಂಬುದು ಒಳಗುಟ್ಟು.
ಅಲ್ಲಿಗೆ ಬಾಲಿವುಡ್‌ನಂಥ ಬಾಲಿವುಡ್ಡಿನ ಬಾದಶಹ ಎಂದು ಕರೆಸಿಕೊಳ್ಳುವ ಸ್ಟಾರ್ ಸಿನಿಮಾ ಕೂಡ ಓಟಿಟಿಯೇ ಪ್ರೇಕ್ಷಕರನ್ನು ತಲುಪುವ ಮಾರ್ಗ ಅಂತ ನಿರ್ಧರಿಸಿಬಿಟ್ಟಿತು. ಅಂದಹಾಗ ರಾಧೆ ಸಿನಿಮಾದ ವಿತರಣೆಗೆ ಜೀ ಸಂಸ್ಥೆ ಕೊಟ್ಟ ಮೊತ್ತ 190 ಕೋಟಿ ರೂಪಾಯಿ. ಸಿನಿಮಾದ ಬಜೆಟ್ 90 ಕೋಟಿ ರೂಪಾಯಿ ಆಗಿರಬಹುದು ಅನ್ನುವುದು ಅಂದಾಜು. ಹಾಗಾಗಿ ಕಡಿಮೆ ಎಂದರೂ 100 ಕೋಟಿ ಲಾಭ. ಅಂದರೆ ಓಟಿಟಿಯಲ್ಲಿ ರಿಲೀಸ್ ಮಾಡಿದರೂ ಲಾಭ ಬರುತ್ತದೆ ಅನ್ನುವುದು ಸಾಬೀತಾದಂತೆ ಆಯಿತೇ?
ಹಾಗೆ ಹೇಳುವಂತಿಲ್ಲ, ಯಾಕೆಂದರೆ ಕನ್ನಡದಲ್ಲೂ ಸರಿಸುಮಾರು ಆರೇಳು ತಿಂಗಳುಗಳಿಂದ ಬಿಡುಗಡೆಗೆ ಕಾಯುತ್ತಿರುವ ಹಲವಾರು ಚಿತ್ರಗಳಿವೆ.ಈ ಸಲದ ಲಾಕ್‌ಡೌನ್ ಮುಗಿಯುವ ಹೊತ್ತಿಗೆ ಅವುಗಳ ಆಯಸ್ಸು ಒಂದು ವರ್ಷ ತುಂಬಬಹುದು. ಅದಾದ ಮೇಲೂ ಪ್ರೇಕ್ಷಕ ಯಾವಾಗ ಚಿತ್ರಮಂದಿರಕ್ಕೆ ಬರುತ್ತಾನೋ ಗೊತ್ತಿಲ್ಲ, ಹಾಗಂತ ಸಲ್ಮಾನ್ ಖಾನ್ ಚಿತ್ರದ ನಿರ್ಮಾಪಕ ತೆಗೆದುಕೊಂಡ ನಿರ್ಧಾರವನ್ನು ಕನ್ನಡ ನಿರ್ಮಾಪಕರು ತೆಗೆದುಕೊಳ್ಳುತ್ತಾರೋ? ಚಿತ್ರದ ಬಜೆಟ್ಟಿನಷ್ಟನ್ನು ಕೊಟ್ಟು ಕನ್ನಡ ಸ್ಟಾರ್ ಸಿನಿಮಾ ಕೊಂಡುಕೊಳ್ಳಲು ಓಟಿಟಿ ಮುಂದೆ ಬರುತ್ತದೆಯೋ?
"
ಈಗಿನ ಪರಿಸ್ಥಿತಿಯಲ್ಲಿ ಕನ್ನಡ ನಿರ್ಮಾಪಕರು ಓಟಿಟಿ ಮೇಲೆ ಅಂಥ ನಂಬಿಕೆಯನ್ನೇನೂ ಇಟ್ಟುಕೊಂಡಂತಿಲ್ಲ. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ನಾಲ್ಕೈದು ಸಿನಿಮಾಗಳು ಓಟಿಟಿಯಲ್ಲಿ ತೆರೆ ಕಂಡಿದ್ದವು. ಕೆಲವರು ಓಟಿಟಿಗೆಂದೇ ಸಿನಿಮಾ ಮಾಡುವುದಾಗಿ ಹೇಳಿಕೊಂಡರು. ಆದರೆ ಈ ಸಲ ಒಂದೇ ಒಂದು ಸಿನಿಮಾ ಕೂಡ ಓಟಿಟಿಯಲ್ಲಿ ಸದ್ದು ಮಾಡಲಿಲ್ಲ. ಹಿರಿಯ ಹಾಗೂ ಖ್ಯಾತ ನಿರ್ಮಾಪಕರು ಓಟಿಟಿಯಲ್ಲಿ ಸಿನಿಮಾ ಖಂಡಿತಾ ರಿಲೀಸ್ ಮಾಡುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ.
ಒಂದು ಮೂಲದ ಪ್ರಕಾರ ಯುವರತ್ನ ಚಿತ್ರದ ಸ್ಯಾಟಲೈಟ್ ಹಕ್ಕು, ಡಿಜಿಟಲ್ ಹಕ್ಕು ಸೇರಿ ಆದ ವ್ಯಾಪಾರ 40 ಕೋಟಿ ರೂಪಾಯಿಗೂ ಹೆಚ್ಚು. ಇದು ಕನ್ನಡ ಚಿತೊ್ರೀದ್ಯಮದಲ್ಲಿ ದಾಖಲೆಯೇ ಸರಿ. ಸಿನಿಮಾವೊಂದು ರಿಲೀಸ್ ಆಗಿ 9 ದಿನಕ್ಕೆ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ಕೂಡ ಲೆಕ್ಕಾಚಾರವೇ.
ಬಿಸಿನೆಸ್ ಕುದುರಿದರೆ ಓಟಿಟಿ ಓಕೆ
ನಟ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’. ಶಿವಕಾರ್ತಿಕ್ ನಿರ್ದೇಶನದ, ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಬಹುಭಾಷಾ ಕಲಾವಿದರು, ಅದ್ದೂರಿ ವೆಚ್ಚದಲ್ಲಿ ಮೇಕಿಂಗ್ ಕಾರಣಕ್ಕೆ ಸಿನಿಮಾ ಮೇಲೆ ಬಾಕ್‌ಸ್ ಆಫೀಸ್ ಲೆಕ್ಕಾಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದನ್ನೇ ಗಮನದಲ್ಲಿಟ್ಟಿಕೊಂಡು ಅಮೆಜಾನ್, ‘ಕೋಟಿಗೊಬ್ಬ 3’ ಚಿತ್ರಕ್ಕೆ ಮಾರಾಟದ ಬಲೆ ಬೀಸಿದೆ ಎನ್ನುವ ಸುದ್ದಿಯಿದೆ.
ಮೊಲದ ದಿನವೇ ಗರಿಷ್ಠ ವೀಕ್ಷಣೆ ಪಡೆದ ಸಲ್ಮಾನ್ ಸಿನಿಮಾಗೆ ಕನಿಷ್ಠ ರೇಟಿಂಗ್..!
‘ನಮ್ಮ ಚಿತ್ರಕ್ಕೆ ಓಟಿಟಿ ಬೇಡಿಕೆ ಇರುವುದು ನಿಜ. ಈಗಾಗಲೇ ಒಂದಿಬ್ಬರು ಬಂದು ಮಾತನಾಡಿದ್ದಾರೆ. ಆದರೆ, ನನ್ನ ರೇಟಿಗೆ ಅವರು ಯಾರೂ ಹೊಂದಾಣಿಕೆ ಆಗುತ್ತಿಲ್ಲ. ನಾನು ಕೋಟಿಗೊಬ್ಬ 3 ಚಿತ್ರಕ್ಕೆ ರು.35 ಕೋಟಿ ಕೇಳಿದ್ದೇನೆ. ಇಷ್ಟು ಕೊಟ್ಟರೆ ಖಂಡಿತ ನಮ್ಮ ಚಿತ್ರವನ್ನು ಓಟಿಟಿಗೆ ಕೊಡಲು ಸಿದ್ಧ. ಆದರೆ, ರು.35 ಕೋಟಿಗೆ ಕಡಿಮೆ ಯಾವ ಕಾರಣಕ್ಕೂ ಮಾರಾಟ ಮಾಡಲ್ಲ’ ಎನ್ನುತ್ತಾರೆ ಸೂರಪ್ಪ ಬಾಬು.
ಓಟಿಟಿಯವರು ಸಲಗ ಕೇಳುತ್ತಿದ್ದಾರೆ
ಸಲಗ ಚಿತ್ರದ ನಿರ್ಮಾಪಕ ಶ್ರೀಕಾಂತ್ ಹೇಳುವಂತೆ, ‘ಮೊದಲ ಲಾಕ್‌ಡೌನ್ ಆದಾಗಿನಿಂದಲೂ ಓಟಿಟಿಗೆ ನಮ್ಮ ಚಿತ್ರವನ್ನು ಕೇಳುತ್ತಿದ್ದಾರೆ. ಬೇಡಿಕೆ ಇರುವುದಂತೂ ನಿಜ. ಆದರೆ, ವಿಜಯ್ ಮೊದಲ ನಿರ್ದೇಶನದ ಸಿನಿಮಾ. ಹೀಗಾಗಿ ಅದನ್ನು ಪ್ರೇಕ್ಷಕರು ದೊಡ್ಡ ಪರದೆ ಮೇಲೆಯೇ ನೋಡಬೇಕು ಎನ್ನುವುದು ನನ್ನ ಆಸೆ ಕೂಡ. ಆದರೆ, ಇದೇ ಸಂಕಷ್ಟ ಮುಂದುವರೆದು, ಚಿತ್ರಮಂದಿರಗಳು ಬಾಗಿಲು ತೆರೆಯದೆ ಹೋದರೆ ನಮ್ಮ ಚಿತ್ರವನ್ನು ನಾನು ಪ್ರೇಕ್ಷಕರಿಗೆ ತಲುಪಿಸಲೇ ಬೇಕು. ಆ ನಿಟ್ಟಿನಲ್ಲಿ ನಾವು ಕೂಡ ಮುಂದೆ ಓಟಿಟಿಗೆ ಚಿತ್ರವನ್ನು ಮಾರಲೇಬೇಕು. ನೋಡೋಣ ಮುಂದೇನು ಮಾಡುವುದು ಎಂಬುದು ನಮ್ಮ ಚಿತ್ರದ ಹೀರೋ ಕಂ ಡೈರೆಕ್ಟರ್ ಜತೆ ಮಾತಾಡಿ ತೀರ್ಮಾನ ಮಾಡುತ್ತೇನೆ. ಓಟಿಟಿಗೆ ನಮ್ಮ ಚಿತ್ರವನ್ನು ಕೇಳುತ್ತಿರುವುದಂತೂ ಸತ್ಯ’ ಎನ್ನುತ್ತಾರೆ.