ಎರಡು ವರ್ಷಗಳ ಬಳಿಕ ಹಿಂದಿಯಲ್ಲಿ ದಾಖಲೆ ಬರೆದ ನಿಖಿಲ್ ಕುಮಾರ್ 'ರೈಡರ್' ಚಿತ್ರ!
ನಟ ನಿಖಿಲ್ ಕುಮಾರ್ ಅವರ ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರೈಡರ್ ಫಿಲ್ಮ್ನ ಹಿಂದಿ ವರ್ಷನ್ 10 ಕೋಟಿ ವ್ಯೂಸ್ಗಳನ್ನು ಯೂಟ್ಯೂಬ್ನಲ್ಲಿ ಕಂಡಿದ್ದು ದಾಖಲೆ ಬರೆದಿದೆ.

ನಟ ನಿಖಿಲ್ ಕುಮಾರ್ (Nikhil Kumar) ಅವರು ರಾಜಕೀಯದ ಜೊತೆ ಚಿತ್ರರಂಗದಲ್ಲಿಯೂ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಕೆಲ ಕಾಲ ಚಿತ್ರರಂಗದಿಂದ ದೂರವಿದ್ದ ನಟ ಮತ್ತೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಎರಡು ವರ್ಷಗಳ ಬಳಿಕ ನಿಖಿಲ್ ಅವರು ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗಷ್ಟೆ ಅದ್ದೂರಿ ಚಾಲನೆ ಕೂಡ ಸಿಕ್ಕಿದೆ. ಭಾರತದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಲೈಕಾ ಪ್ರೊಡಕ್ಷನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ತಮಿಳಿನ ಖ್ಯಾತ ನಿರ್ದೇಶಕ ಲಕ್ಷ್ಮಣ್ ಸಾರಥ್ಯದಲ್ಲಿ ಚಿತ್ರ ಮೂಡಿ ಬರುತ್ತಿದೆ. ಇದು ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ಮೂಡಿಬರುತ್ತಿದೆ ಎಂಬುದು ವಿಶೇಷ. ಹಿಂದಿಯಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಹಿಂದಿ ಪ್ರೇಕ್ಷಕರಿಗೆ ನಿಖಿಲ್ ಅವರು ಮತ್ತಷ್ಟು ಹತ್ತಿರ ಆಗಲಿದ್ದಾರೆ.
ಇದರ ನಡುವೆಯೇ ಇದೀಗ ನಿಖಿಲ್ ಅವರ ನಾಲ್ಕನೆಯ ಚಿತ್ರ, 2021ರಲ್ಲಿ ಹಿಂದೆ ಬಿಡುಗಡೆಯಾಗಿದ್ದ ರೈಡರ್ (Rider) ಬಹಳ ಸದ್ದು ಮಾಡುತ್ತಿದೆ. ಹೌದು. ನಿಖಿಲ್ ಕುಮಾರ್ ಹೀರೋ ಆಗಿ ಅಬ್ಬರಿಸಿದ್ದ ಮಾಸ್ ಚಿತ್ರ ರೈಡರ್. ಇದೀಗ ದಾಖಲೆ ಮಾಡಿದೆ, ಅದೂ ಹಿಂದಿ ವರ್ಷನ್ನಲ್ಲಿ ಎನ್ನುವುದು ಕುತೂಹಲದ ಸಂಗತಿ. ಅದೇನೆಂದರೆ ಈ ಚಿತ್ರದ ಯೂಟ್ಯೂಬ್ (YouTube) ವೀವ್ಸ್ ಅಂದರೆ ಚಿತ್ರದ ಹಿಂದಿ ವರ್ಷನ್ 100 ಮಿಲಿಯನ್ ಬಾರಿ ವೀಕ್ಷಣೆ ಮಾಡಲಾಗಿದೆ. ಅಂದರೆ, 10 ಕೋಟಿ ಬಾರಿ ಈ ಸಿನಿಮಾ ವೀಕ್ಷಣೆ ಕಂಡಿದೆ. ಈ ಮೂಲಕ ನಿಖಿಲ್ ಹಿಂದಿ ವಲಯದಲ್ಲೂ ಪ್ರಖ್ಯಾತಿಗಳಿಸಿದ್ದಾರೆ. ಆರಂಭದಲ್ಲಿ ‘ರೈಡರ್’ ಚಿತ್ರ ಕೇವಲ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆನಂತರ ಈ ಸಿನಿಮಾ ಹಿಂದಿಗೆ ಡಬ್ ಆಯಿತು. ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಯುಟ್ಯೂಬ್ನಲ್ಲಿ ವೀಕ್ಷಿಸಿದ್ದು, ಅವರ ಸಂಖ್ಯೆ 10 ಕೋಟಿಗೆ ಏರಿದೆ.
ಒಳ್ಳೆಯದಾಗಲಿ ಮೊಮ್ಮಗನೇ.. ನಿಖಿಲ್ ಕುಮಾರ್ ಹೊಸ ಸಿನಿಮಾಕ್ಕೆ ದೇವೇಗೌಡ ಚಾಲನೆ
ಕನ್ನಡ ಸಿನಿಮಾಗಳು ತನ್ನ ಸ್ವಂತ ನೆಲದಲ್ಲಿಯೇ ಈ ಪರಿ ವೀಕ್ಷಣೆಗಳಿಸುವುದು ತುಂಬ ವಿರಳ. ಹಾಗಿರುವಾಗ ನಿಖಿಲ್ ಸಿನಿಮಾ ಹಿಂದಿ ಭಾಷೆಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿರುವುದು ಸಂತಸದ ವಿಚಾರವಾಗಿದೆ ಎನ್ನುತ್ತಿದ್ದಾರೆ ಸಿನಿ ಪ್ರಿಯರು. ಅಂದಹಾಗೆ ಈ ಚಿತ್ರವನ್ನು ವಿಜಯ್ ಕುಮಾರ್ ಕೊಂಡ ಅವರು ನಿರ್ದೇಶಿಸಿದ್ದರು. ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಕಾಶ್ಮೀರಾ ಪರದೇಸಿ (Kashmira Paradesi) ಅವರು ನಿಖಿಲ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಮೂಲಕ ಕಾಶ್ಮೀರಾ ಅವರು ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಇದೊಂದು ಔಟ್ ಅಂಡ್ ಔಟ್ ಮಾಸ್ ಎಂಟರ್ಟೈನರ್ ಚಿತ್ರ. ಚಿತ್ರದ ಹಾಡುಗಳು ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದವು.
ಈ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಿಖಿಲ್ ಅವರು ತಮ್ಮ ಪತ್ನಿ ರೇವತಿ ಇದರ ಮೊದಲ ವಿಮರ್ಶಕಿ ಎಂದು ಹೇಳಿಕೊಂಡಿದ್ದರು. ನಿಖಿಲ್ ತಂದೆ ಕುಮಾರಸ್ವಾಮಿ (Kumaraswamy) ರಾಜಕಾರಣಿ ಜೊತೆಗೆ ಚಿತ್ರ ವಿತರಕರೂ ಹೌದು, ಹೀಗಿದ್ದರೂ ನಿಖಿಲ್ ಪತ್ನಿ ರೇವತಿ ಮೊದಲ ವಿಮರ್ಶಕಿ ಎಂದು ಅವರು ಹೇಳಿದ್ದರು. ನನ್ನ ಜೀವನದ ಪ್ರತಿ ಹಂತದಲ್ಲೂ ಈ ಸಿನಿಮಾ ಪಯಣದಲ್ಲೂ ರೇವತಿ ಇದ್ದಾರೆ. ನಾನು ರೇವತಿಗೆ ಎಡಿಟ್ ಮಾಡದ ವರ್ಷನ್ ತೋರಿಸಿದೆ, ಅದು ನಾಲ್ಕು ಗಂಟೆಗಳ ಕಾಲ ಇತ್ತು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ನಿಖಿಲ್ ತಿಳಿಸಿದ್ದರು.
ಲೈಕಾ ಪ್ರೊಡಕ್ಷನ್‌ನ ಹೊಸ ಚಿತ್ರಕ್ಕೆ ನಿಖಿಲ್ ಕುಮಾರ್ ಹೀರೋ: ಡೈರೆಕ್ಟರ್ ಯಾರು?