Telegram Ban: ನೀಟ್ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಕೇಂದ್ರ ಸರ್ಕಾರ, ಇದೀಗ ಅದನ್ನು ಖಾಯಂ ಬ್ಯಾನ್ ಮಾಡಬೇಕು ಎಂದು ಉಮೇಶ್ ಬಣಕಾರ್ ಒತ್ತಾಯಿಸಿದ್ದಾರೆ.

ನೀಟ್‌ ಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಂ ಆ್ಯಪ್‌ ಅನ್ನು ಜೂನ್‌ 22ರವರೆಗೂ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಆದರೆ, ಇದನ್ನು ಖಾಯಂ ಆಗಿ ಬ್ಯಾನ್‌ ಮಾಡಿ ಎಂದು ಒತ್ತಾಯಿಸಿ ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷ ಉಮೇಶ್‌ ಬಣಕಾರ್‌ ಅವರು ಪತ್ರ ಬರೆದಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ತಾತ್ಕಲಿಕವಾಗಿ ಬ್ಯಾನ್‌ ಮಾಡಿದೆ. ಆದರೆ, ಇದೇ ಆ್ಯಪ್‌ನಿಂದ ಪೈರಸಿ ಆಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಮೂಲಕ ಬರುವ ಕೋಟ್ಯಾಂತರ ರೂಪಾಯಿಗಳ ವರಮಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ದಿನವೇ ಟೆಲಿಗ್ರಾಂ ಆ್ಯಪ್‌ನಲ್ಲಿ ಸಿನಿಮಾಗಳು ಪ್ರಸಾರಗೊಳ್ಳುತ್ತಿದೆ.

ಇದು ಅಪಾಯಕಾರಿ ಎಂದು 2024ರಲ್ಲೇ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಕೇಂದ್ರ ಸಚಿವರು, ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರುಗಳಿಗೆ ಪತ್ರ ಬರೆಯಲಾಗಿತ್ತು. ಈಗ ಟೆಲಿಗ್ರಾಂ ಆ್ಯಪ್‌ ಅನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡುವುದಕ್ಕೆ ಸೂಕ್ತ ಕಾಲ. ನೀಟ್‌ ಪರೀಕ್ಷೆಯ ಹಿನ್ನೆಲೆಯಲ್ಲಿ ಬ್ಯಾನ್‌ ಆಗಿರುವ ಟೆಲಿಗ್ರಾಂ ಆ್ಯಪ್‌ ಖಾಯಂ ಆಗಿ ಬ್ಯಾನ್‌ ಮಾಡಿ, ಭಾರತೀಯ ಚಿತ್ರರಂಗವನ್ನು ಉಳಿಸಿ ಎಂದಿದ್ದಾರೆ ಉಮೇಶ್‌ ಬಣಕಾರ್‌.

ಚಿಯಾನ್‌ ವಿಕ್ರಮ್ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ

‘ಕಿರಿಕ್‌ ಪಾರ್ಟಿ’ ನಟಿ ಸಂಯುಕ್ತಾ ಹೆಗ್ಡೆ ತಮಿಳಿನ ಚಿಯಾನ್‌ ವಿಕ್ರಮ್‌ ಅವರ 63ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಕ್ರಮ್‌ ಜೊತೆಗೆ ‘ಇರು ಮುಗನ್‌’ ಚಿತ್ರವನ್ನು ನಿರ್ದೇಶಿಸಿದ್ದ ಆನಂದ್‌ ಶಂಕರ್‌ ಈ ಚಿತ್ರವನ್ನು ಕೂಡ ನಿರ್ದೇಶನ ಮಾಡಲಿದ್ದಾರೆ. ಫ್ಯಾಮಿಲಿ, ಆ್ಯಕ್ಷನ್‌ ಹಾಗೂ ಮನರಂಜನೆಯಿಂದ ಕೂಡಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕೋಮಲಿ’ ಹಾಗೂ ‘ಮನ್ಮಥ ಲೀಲೈ’ ಚಿತ್ರಗಳ ನಂತರ ಮತ್ತೊಮ್ಮೆ ಕಾಲಿವುಡ್‌ಗೆ ಎಂಟ್ರಿ ಆಗಿದ್ದಾರೆ.

ಕೆವಿಎನ್‌ನಿಂದ ಮೋಡ ಕವಿದ ವಾತಾರಣ ವಿತರಣೆ: ಸಿಂಪಲ್‌ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರವು ಇದೇ ಜೂನ್‌ 26ಕ್ಕೆ ತೆರೆಗೆ ಬರುದ್ದು, ಕೆವಿಎನ್‌ ಪ್ರೊಡಕ್ಷನ್‌ ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರದ ನಾಯಕನಾಗಿ ಶೀಲಂ, ನಾಯಕಿಯರಾಗಿ ಸಾತ್ವಿಕ ಹಾಗೂ ಮೋಕ್ಷ ಅಭಿನಯಿಸಿದ್ದಾರೆ. ‘ಈಗಿನ ಕಾಲದ ಪ್ರೇಮ ಕತೆಯನ್ನು ಒಳಗೊಂಡ ಸಿನಿಮಾ ಇದಾಗಿದೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರದ ವಿತರಣೆಗೆ ಮುಂದಾಗಿರುವುದು ಖುಷಿ ’ ಎಂದಿದ್ದಾರೆ ಸಿಂಪಲ್ ಸುನಿ.

ಹಲ್ಕಾ ಡಾನ್‌ ಚಿತ್ರಕ್ಕೆ ಅರವಿಂದ್‌ ಬೋಳಾರ್‌: ಪ್ರಮೋದ್‌ ನಟನೆಯ ‘ಹಲ್ಕಾ ಡಾನ್‌’ ಚಿತ್ರಕ್ಕೆಅರವಿಂದ್‌ ಬೋಳಾರ್‌ ಸೇರ್ಪಡೆಯಾಗಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಕೆ.ಪಿ. ಶ್ರೀಕಾಂತ್‌ ನಿರ್ಮಿಸುತ್ತಿದ್ದಾರೆ. ಚಲ ನಿರ್ದೇಶನ ಮಾಡುತ್ತಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈಗ ಅರವಿಂದ್‌ ಬೋಳಾರ್‌ ಸರದಿ.