ಅಪ್ಪು ಎಲ್ಲಿಯೂ ಹೋಗಿಲ್ಲ... ಇಲ್ಲಿಯೇ ಇದ್ದಾನೆ... ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದ ಶಿವಣ್ಣ- ಗೀತಾ
ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಭಾವುಕರಾದರು.
ಅಪ್ಪು ಅಂತಲೇ ಅಭಿಮಾನಿಗಳ ಹೃದಯದಲ್ಲಿ ಹೆಸರು ಅಚ್ಚೊತ್ತಿ ಹೋಗಿರುವ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷಗಳು. ಅವರು ನಿಧನರಾಗಿ ಎರಡು ವರ್ಷಗಳಾದ ಅವರು ಮಾಡಿದ ಸತ್ಕಾರ್ಯ ಮಾತ್ರ ಎಲ್ಲರಲ್ಲಿಯೂ ಹಚ್ಚ ಹಸಿರಾಗಿಯೇ ಉಳಿದಿದೆ. ಇಂದು ಅವರ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರಿಂದ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇಷ್ಟದ ತಿನಿಸುಗಳನ್ನು ಮಾಡಿ ಸ್ಮಾರಕದ ಮುಂದೆ ಇರಿಸಲಾಗುತ್ತಿದೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ನಮನ ಸಲ್ಲಿಸುತ್ತಿದ್ದಾರೆ.
ರಾಜ್ ಕುಟುಂಬದವರು ಬಂದು ಇದಾಗಲೇ ಪುನೀತ್ ರಾಜ್ ಕುಮಾರ್ ಅವರ ಇಷ್ಟದ ತಿಂಡಿ-ತಿನಿಸುಗಳನ್ನು ತಂದು ಸಮಾಧಿ ಬಳಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಹಲವಾರು ಕಡೆಗಳಲ್ಲಿ ಪುನೀತ್ ಅವರಿಗೆ ಬಿರಿಯಾನಿ ಇಷ್ಟವೆಂಬ ಕಾರಣಕ್ಕೆ ಅಭಿಮಾನಿಗಳಿಗೆ ಬಿರಿಯಾನಿ ಊಟ ಹಾಕಿಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಪುನೀತ್ ರಾಜ್ಕುಮಾರ್ ಅವರ ಸಮಾಧಿಯ ಬಳಿಗೆ ಇದಾಗಲೇ ಪುನೀತ್ ಅವರ ಪತ್ನಿ ಅಶ್ವಿನಿ, ಪುತ್ರಿ ವಂದಿತಾ ಸೇರಿದಂತೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಯುವ ರಾಜ್ಕುಮಾರ್ ಹಾಗೂ ಅಪ್ಪುವಿನ ಅಕ್ಕಂದಿರಾದ ಲಕ್ಷ್ಮಿ ಹಾಗೂ ಪೂರ್ಣಿಮಾ ಸೇರಿದಂತೆ ರಾಜ್ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಭಾರವಾದ ಮನಸ್ಸಿನಿಂದ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಅವರು ಪುನೀತ್ ಅವರ ಸಮಾಧಿಗೆ ಪುಷ್ಪ ನಮಯ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ.
ಪುನೀತ್ ಪುಣ್ಯಸ್ಮರಣೆ: ಓದಲು-ಬರೆಯಲು ಬರದಿದ್ರೂ ಡೈಲಾಗ್ ಹೇಳಿದ್ದ ಅಪ್ಪು- ನೆನಪು ಮೆಲುಕು ಹಾಕಿದ ಅಕ್ಕ
ಪುನೀತ್ ಅವರ ಸಮಾಧಿಗೆ ಹೋಗುವ ಮುನ್ನ ಶಿವರಾಜ್ ಕುಮಾರ್ ಅವರು, ಮೊದಲು ತಂದೆ ಡಾ.ರಾಜ್ ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಪತ್ನಿ ಸಹಿತರಾಗಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ ಅವರು, ಅಭಿಮಾನಿಗಳಿಗೆ ಅಪ್ಪು ಮೇಲಿರೋ ಪ್ರೀತಿ, ವಿಶ್ವಾಸ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತದೆ. ನಾವು ಉಳಿಸಿಕೊಂಡು ಹೋಗುತ್ತೇವೆ ಎಂದರು. ಅಪ್ಪು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಪ್ಪಾಜಿಗಿಂತಲೂ ಹೆಚ್ಚು ಹೆಸರು ಸಂಪಾದನೆ ಮಾಡಿರೋದು ಖುಷಿ ತರುತ್ತದೆ. ಆತ ಇಲ್ಲ ಅಂತ ನಮಗೆ ಅನ್ನಿಸುವುದೇ ಇಲ್ಲ. ಅಪ್ಪು ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇದ್ದಾನೆ ಎಂದು ಹೇಳಿ ಭಾವುಕರಾದರು.
ಇದಾಗಲೇ ಪುನೀತ್ ಅವರು ಅಕ್ಕ ಲಕ್ಷ್ಮಿ ಅವರೂ ಅಪ್ಪುವಿನ ಬಾಲ್ಯದ ಕುರಿತು ಮಾತನಾಡಿದ್ದಾರೆ. ಪುನೀತ್ ಅವರು ಬಾಲ್ಯ ನಟನಾಗಿದ್ದ ವೇಳೆ ಎಷ್ಟು ಚುರುಕಾಗಿದ್ದರು ಎನ್ನುವುದನ್ನು ಹೇಳಿದ್ದಾರೆ. ಭಕ್ತಪ್ರಲ್ಹಾದ ಚಿತ್ರ ಮಾಡುವಾಗ ಅಪ್ಪುಗೆ ಏಳು ವರ್ಷ. ಅವನಿಗೆ ಆಗ ಓದಲು ಬರೆಯಲು ಬರುತ್ತಿರಲಿಲ್ಲ. ಶೂಟಿಂಗ್ ಮಾಡುವ ಸಮಯದಲ್ಲಿಯೂ ಆಟವಾಡುತ್ತಿದ್ದ. ಅವನ ಶೂಟಿಂಗ್ ಬಂದಾಗ ಬಂದು ಪಾಲ್ಗೊಳ್ಳುತ್ತಿದ್ದ. ಆಗ ಓದಲಿಕ್ಕೆ ಬರುತ್ತಿರಲಿಲ್ಲವಾದರೂ ಅದರಲ್ಲಿದ್ದ ಡೈಲಾಗ್ಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿದ್ದಾನೆ. ಅದನ್ನು ನೆನಪಿಸಿಕೊಂಡರೆ ಈಗಲೂ ಆಶ್ಚರ್ಯವಾಗುತ್ತದೆ. ಅಂಥ ಶಕ್ತಿ ಆತನಿಗೆ ದೇವರು ಕೊಟ್ಟಿದ್ದರು. ಬಾಯಿಪಾಠ ಮಾಡಿ, ಆಟವಾಡುತ್ತಲೇ ಸಲೀಸಾಗಿ ಶೂಟಿಂಗ್ ಮುಗಿಸುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.