ಮಂಗಳೂರಿನ ಪಿಲಿಕುಳದಲ್ಲಿ ರಜನಿಕಾಂತ್ 'ಜೈಲರ್' ಚಿತ್ರೀಕರಣ: ಪ್ರವೇಶ ನಿರ್ಬಂಧ!
ಜೈಲರ್ ಚಿತ್ರೀಕರಣಕ್ಕೆಂದು ಮಂಗಳೂರಿಗೆ ಆಗಮಿಸಿದ ತಲೈವಾ. ಹ್ಯಾಟ್ರಿಕ್ ಹೀರೋ ಕೂಡ ಸಾಥ್ ಕೊಟ್ಟಿರುವ ಚಿತ್ರವಿದು...
ಮಂಗಳೂರು: ಮಂಗಳೂರಿನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರದ ಚಿತ್ರೀಕರಣ ನಡೀತಾ ಇದ್ದು, ಮಂಗಳೂರು ಹೊರವಲಯದ ಪಿಲಿಕುಳದ ಗುತ್ತಿನ ಮನೆಯಲ್ಲಿ ಚಿತ್ರೀಕರಣಕ್ಕೆ ವಿಶೇಷ ಸೆಟ್ ಹಾಕಲಾಗಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನಟಿಸುತ್ತಿರುವ ಜೈಲರ್ ಸಿನಿಮಾದ ಚಿತ್ರೀಕರಣ ಇದಾಗಿದ್ದು, ಮೂರ್ನಾಲ್ಕು ದಿನಗಳ ಕಾಲ ಮಂಗಳೂರಿನಲ್ಲಿ ಚಿತ್ರೀಕರಣ ಸಾಗಲಿದೆ. ಭಾನುವಾರ ರಾತ್ರಿಯೇ ಮಂಗಳೂರಿಗೆ ರಜನಿಕಾಂತ್ ಆಗಮಿಸಿದ್ದು, ಆ ಬಳಿಕ ಗೌಪ್ಯ ಜಾಗಕ್ಕೆ ತೆರಳಿದ್ದರು. ಇದೀಗ ಪಿಲಿಕುಳದ ಗುತ್ತಿನ ಮನೆಯಲ್ಲಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.
ಭದ್ರತೆ ದೃಷ್ಟಿಯಿಂದ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಗುತ್ತಿನ ಮನೆ ಪ್ರವೇಶ ನಿಷೇಧ ಮಾಡಲಾಗಿದ್ದು, ಸಿನಿಮಾಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ರಜನಿಕಾಂತ್ ರ 169ನೇ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಸದ್ಯ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿರುವ ರಜನಿಕಾಂತ್, ಮುಂದಿನ ಎರಡು ದಿನಗಳ ಕಾಲ ಮಂಗಳೂರಿನಲ್ಲೇ ನಡೆಯಲಿರುವ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಕರಾವಳಿ ಭಾಗದ ಸಂಸ್ಕೃತಿ ಬಿಂಬಿಸುವ ದೃಶ್ಯಗಳಿಗಾಗಿ ಹಳ್ಳಿ ಸೆಟ್ ಹಾಕಲಾಗಿದ್ದು, ಹಳ್ಳಿ ಮನೆಯ ಸೆಟ್ ನಲ್ಲಿ ಎತ್ತಿನ ಗಾಡಿ, ಕುಸ್ತಿ ಅಖಾಡ ನಿರ್ಮಿಸಿ ಶೂಟಿಂಗ್ ನಡೆಸಲಾಗ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್, ಶಿವಣ್ಣ ಮತ್ತು ಜೈಲರ್ ನಿರ್ಮಾಪಕರು ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ. ಮಂಗಳೂರಿನ ಹೋಟೆಲ್ ಪೂಂಜಾ ಇಂಟರ್ನ್ಯಾಷನಲ್‌ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಸೆಟ್‌ನಲ್ಲಿ ತಲೈವಾ ಮಾತ್ರ ಶೂಟಿಂಗ್ ಮಾಡುತ್ತಾರಾ ಅಥವಾ ಶಿವಣ್ಣ ಸೀನ್ ಕೂಡ ಇದ್ಯಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸಣ್ಣ ಪುಟ್ಟ ಸುಳಿವು ಬಿಟ್ಟರೆ ಎಲ್ಲವೂ ಸ್ಸಪೆನ್ಸ್ ಆಗಿಟ್ಟಿದ್ದಾರೆ.
ತಮಿಳು ಭಾಷೆಯ ಆಕ್ಷನ್ ಕಾಮಿಡಿ ಸಿನಿಮಾ ಜೈಲರ್ ಆಗಿದ್ದು ನೆಲ್ಸನ್ ನಿರ್ದೇಶನ ಮಾಡುತ್ತಿದ್ದಾರೆ, ಸನ್ ಪಿಕ್ಚರ್ ಕಲಾನಿತಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್, ತಮನ್ನಾ ಮತ್ತು ರಮ್ಯಾ ಕೃಷ್ಣ ಅಭಿನಯಿಸುತ್ತಿದ್ದಾರೆ. 2022ರ ಫೆಬ್ರವರಿಯಲ್ಲಿ ಈ ಸಿನಿಮಾ ಮೊದಲ ಘೋಷಣೆ ಮಾಡಲಾಗಿತ್ತು. ರಜನಿ 169ನೇ ಸಿನಿಮಾ ಇದಾಗಿದ್ದು 2022ರ ಜೂನ್‌ನಲ್ಲಿ ಟೈಟಲ್ ಜೈಲರ್ ಎಂದು ರಿವೀಲ್ ಮಾಡಿದ್ದರು. ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಚಿತ್ರೀಕರಣ ಅರಂಭಿಸಿದ್ದರು. ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.
Jailer;ಶಿವಣ್ಣ, ಮೋಹನ್‌ಲಾಲ್ ಬಳಿಕ ರಜನಿಕಾಂತ್ ಸಿನಿಮಾಗೆ ಮತ್ತೋರ್ವ ಖ್ಯಾತ ನಟ ಎಂಟ್ರಿ
ಸಿನಿಮಾ ರಂಗು ಹೆಚ್ಚಿಸಲು ಸುನಿಲ್, ಜಾಕಿ ಶ್ರಾಫ್, ವಸಂತ್ ರವಿ, ವಿನಾಯಕನ್, ಯೋಗಿ ಬಾಬು ಡ್ಯಾನ್ಸರ್ ರಮೇಶ್ ಅಭಿನಯಿಸುತ್ತಿದ್ದಾರೆ. ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಗೆಸ್ಟ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೆಸ್ಟ್ ಶೂಟ್ ಚೆನ್ನೈನಲ್ಲಿ ನಡೆದಿದೆ. ಪ್ರಮುಖ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದೆ. ಕೆಲವೊಂದು ಸನ್ನಿವೇಶಗಳನ್ನು ಕಡಲೂರು ಮತ್ತು ಜೈಸಲ್ಮೇರ್‌ನಲ್ಲಿ ನಡೆದಿದೆ. ಈಗ ಹಳ್ಳಿ ದೃಶ್ಯವನ್ನು ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.