ವಿಂಡೋ ಸೀಟ್ ಟ್ರೇಲರ್ ಲಾಂಚ್ ಮಾಡಿದ ಸುದೀಪ್ ಶೀತಲ್ ಶೆಟ್ಟಿನಿರ್ದೇಶನದ ಚಿತ್ರ ಜು.1ಕ್ಕೆ ಬಿಡುಗಡೆ
ಶೀತಲ್ ಶೆಟ್ಟಿನಿರ್ದೇಶನ, ನಿರೂಪ್ ಭಂಡಾರಿ ನಟನೆಯ ‘ವಿಂಡೋ ಸೀಟ್’ ಚಿತ್ರದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದು, ಜುಲೈ 1ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡಕ್ಕೆ ರಿಷಬ್ ಶೆಟ್ಟಿಹಾಗೂ ನಟ ಪ್ರಮೋದ್ ಶೆಟ್ಟಿಶುಭ ಕೋರಿದರು. ಈ ವೇಳೆ ಮಾತನಾಡಿದ ರಿಷಬ್, ‘ವಿಂಡೋಸೀಟ್ ಚಿತ್ರ ನಾನು ನೋಡಿದ್ದೇನೆ. ಅದನ್ನು ನೋಡಿದ ಬಳಿಕ ಶೀತಲ್ ಶೆಟ್ಟಿನಿರ್ದೇಶಕಿಯರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ ಅನಿಸಿತು. ಅವರು ಕತೆಯನ್ನು ನಿರೂಪಿಸುವ ರೀತಿ ಬಹಳ ಚೆನ್ನಾಗಿದೆ. ನಮ್ಮಿಬ್ಬರ ಚಿತ್ರ ಒಂದು ವಾರದ ಅಂತರದಲ್ಲಿ ಬರುತ್ತಿದೆ. ಆ ಬಗ್ಗೆ ತಕರಾರುಗಳಿಲ್ಲ. ಉಳಿದವರು ಕಂಡಂತೆ ಸಿನಿಮಾದಲ್ಲಿ ಶೀತಲ್ ಮೊದಲ ಸಲ ನಟಿಸಲು ಬಂದಾಗ ರಕ್ಷಿತ್ ಶೆಟ್ಟಿ, ಆಕೆ ನ್ಯೂಸ್ ರೀಡಿಂಗ್ ಥರ ಡೈಲಾಗ್ ಹೇಳಬಹುದು, ಸ್ವಲ್ಪ ನೋಡೋ ಮಗ ಅಂದಿದ್ದ’ ಎಂದರು.
Nirup Bhandari: ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಟ್ರೇಲರ್ ಬಿಡುಗಡೆ
ನಿರ್ದೇಶಕಿ ಶೀತಲ್ ಶೆಟ್ಟಿಹೊಸ ನಿರ್ದೇಶಕಿ ಮುಂದಿರುವ ಸವಾಲುಗಳ ಬಗ್ಗೆ ಹೇಳುತ್ತಲೇ, ‘ಮರ್ಡರ್ ಮಿಸ್ಟ್ರಿ ಜೊತೆಗೆ ರೊಮ್ಯಾಂಟಿಕ್ ಥ್ರಿಲ್ಲರ್ ಇರುವ ಸಿನಿಮಾ ಕನ್ನಡಕ್ಕೆ ಹೊಸತು. ಸಾಗರದಿಂದ ತಾಳಗುಪ್ಪಕ್ಕೆ ನಿತ್ಯ ಸಂಚರಿಸುವ ಹುಡುಗನಿಗೆ ಎದುರಾಗುವ ಘಟನೆಗಳು, ಪ್ರೀತಿ ಇತ್ಯಾದಿಗಳ ಸುತ್ತ ಈ ಸಿನಿಮಾವಿದೆ’ ಎಂದರು.
ನಿರೂಪ್ ಭಂಡಾರಿ ಅವರು ಎರಡನೇ ಬಾರಿ ನಿರ್ದೇಶಕಿ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡರು. ನಾಯಕಿ ಅಮೃತಾ ಅಯ್ಯಂಗಾರ್, ನಿರ್ಮಾಪಕಿ ಶಾಲಿನಿ, ಕಲಾವಿದರಾದ ಲೇಖ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ಹಾಗೂ ಚಿತ್ರತಂಡದವರು ಕಾರ್ಯಕ್ರಮದಲ್ಲಿದ್ದರು.
ಸದ್ದು ಮಾಡುತ್ತಿದೆ 'ವಿಂಡೋಸೀಟ್' ಸಿನಿಮಾ ಟೀಸರ್!
ಶೀತಲ್ ಸಂದರ್ಶನ:
ನಿರ್ದೇಶಕಿ ಹ್ಯಾಟ್ ಧರಿಸಿದ್ದೀರಿ. ಕಂಫರ್ಟ್ ಫೀಲ್ ಇದೆಯಾ?
(ನಗು) ನಿರ್ದೇಶಕಿ ಸ್ಥಾನ ಯಾವತ್ತೂ ಅಂಥಾ ಕಂಫರ್ಟೆಬಲ್ ಅಲ್ಲ. ಆನ್ ದ ಎಡ್ಜ್ ಆಫ್ ವನ್ಸ್ ಸೀಟ್ ಅದು. ಆದ್ರೆ ತುಂಬ ಖುಷಿಯಾಗಿದ್ದೀನಿ. ಈ ಸ್ಥಾನ, ಈ ಕೆಲಸ ಎಲ್ಲವೂ ಬಹಳ ಇಷ್ಟವಾಗುತ್ತಿದೆ.
ನೀವೊಬ್ಬ ನಟಿ, ನಿರೂಪಕಿ ಅಂತ ಗೊತ್ತು. ನಿರ್ದೇಶಕಿ ಶೀತಲ್ ಅವರಿಂದ ಜನ ಏನು ನಿರೀಕ್ಷಿಸಬಹುದು?
ನಟಿ, ನಿರೂಪಕಿ ಏನೇ ಇರಬಹುದು, ಅದು ಬೇರೆಯವರು ನನ್ನನ್ನು ನೋಡಿರುವ ರೀತಿ. ನಿರ್ದೇಶಕಿ ಅನ್ನೋದು ನಾನೇ. ಇಷ್ಟಪಟ್ಟು, ಕಷ್ಟಪಟ್ಟು ಇಲ್ಲಿಗೆ ಬರೋದಿಕ್ಕೆ ಟ್ರೈ ಮಾಡಿದ್ದೀನಿ. ಪ್ರಯತ್ನ ಇನ್ನೂ ಮುಂದುವರಿದಿದೆ. ಜನ ನನ್ನ ನಿರ್ದೇಶನ ಇಷ್ಟಪಟ್ಟರೆ ಸಾಕು. ಫಸ್ಟ್‌ಲುಕ್ ಅನ್ನು ಜನ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ತುಂಬ ಪಾಸಿಟಿವ್ ಆಗಿ ಕಮೆಂಟ್ ಮಾಡ್ತಿದ್ದಾರೆ. ಡಿಸ್‌ಲೈಕ್ ಇಲ್ವೇ ಇಲ್ಲ. ಲುಕ್ ತುಂಬ ಫ್ರೆಶ್ ಇದೆ ಅಂತಿದ್ದಾರೆ. ಅರ್ಜುನ್ ಜನ್ಯಾ ಅವರ ಅದ್ಭುತ ಮ್ಯೂಸಿಕ್, ಸಿನಿಮಾಟೋಗ್ರಫಿ ಎಲ್ಲವೂ ಇದಕ್ಕೆ ಕಾರಣ.

