ಸ್ನೇಹ-ಪ್ರೀತಿಯ ಸುತ್ತ 'ಪ್ರೇಮಂ ಪೂಜ್ಯಂ': Trailer ರಿಲೀಸ್
- ಲವರ್ ಬಾಯ್ ಆಗಿ ಕಮ್ ಬ್ಯಾಕ್ ಮಾಡುತ್ತಿರುವ ನೆನಪಿರಲಿ ಪ್ರೇಮ್
- 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೈಲರ್
ಮತ್ತೆ ಲವರ್ ಬಾಯ್ ಆಗಿ ಕಮ್ ಬ್ಯಾಕ್ ಮಾಡುತ್ತಿರುವ ನೆನಪಿರಲಿ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೈಲರ್ (Trailer) ನಿನ್ನೆಯಷ್ಟೇ ಅದ್ದೂರಿಯಾಗಿ ಬಿಡುಗೆಯಾಗಿದೆ. ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಂಡಿದ್ದು, ತಮ್ಮ ಜೀವನದಲ್ಲಿ ಆಗು-ಹೋಗುವ ಘಟನೆಗಳನ್ನು ಟ್ರೈಲರ್‌ನಲ್ಲಿ ವಿವರಿಸಿದ್ದಾರೆ. ಸ್ನೇಹ-ಪ್ರೀತಿಯ ಸುತ್ತ ಶ್ರೀಹರಿ ಕಥೆಯನ್ನು 'ಪ್ರೇಮಂ ಪೂಜ್ಯಂ' ಚಿತ್ರ ಒಳಗೊಂಡಿದೆ. ಚಿತ್ರವು ಇದೇ ಅಕ್ಟೋಬರ್ 29ರಂದು ಬಿಡುಗಡೆಯಾಗುತ್ತಿದೆ.
'ಪ್ರೇಮಂ ಪೂಜ್ಯಂ' ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.
ಅಕ್ಟೋಬರ್ 29ಕ್ಕೆ ಲವ್ಲಿ ಸ್ಟಾರ್ ಪ್ರೇಮ್‌ನ 'ಪ್ರೇಮಂ ಪೂಜ್ಯಂ' ರಿಲೀಸ್!
ಮನ್ನಾರ್‌ನಿಂದ ಡಾರ್ಜಿಲಿಂಗ್‌ವರೆಗೆ ಭಾರತದ ವಿವಿಧ ಭಾಗಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ವಿಯೆಟ್ನಾಂನಲ್ಲಿ ಎರಡು ಹಾಡುಗಳನ್ನು ಸಹ ಚಿತ್ರೀಕರಿಸಲಾಗಿದೆ. ಇನ್ನು 'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ.
ಇನ್ನು ಚಿತ್ರಕ್ಕೆ ಹರಿಹರನ್ (Haariharan), ಮೋಹಿತ್ ಚೌಹಾಣ್ (Mohit Chauhan), ವಿಜಯ್ ಪ್ರಕಾಶ್ (Vijay Prakash), ಸೋನು ನಿಗಮ್ (Sonu Nigam) ಮತ್ತು ಅರ್ಮಾನ್ ಮಲಿಕ್ (Armaan Malik) ಸೇರಿದಂತೆ ಹಲವು ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ಒಂದು ಹಾಡಿಗೆ ದನಿಯಾಗಿದ್ದಾರೆ. ಹೌದು! "ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ಇದೇ ಮೊದಲ ಬಾರಿ ಡಾ.ರಾಜ್‌ಕುಮಾರ್ (Dr.Rajkumar) ಅವರ ಬಗ್ಗೆ ಹಾಡೊಂದಿದ್ದು ಅದನ್ನು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಾಡಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ಅವರೇ ಪ್ರೇಮ್‌ರನ್ನು ಕರೆದು ತಮ್ಮ ಸೆಲ್ಫಿ ತೆಗೆದುಕೊಂಡಿದ್ದು "I am really blessed, ನಿಜಕ್ಕೂ ನೀವು ತಂದೆಗೆ ತಕ್ಕ ಮಗ' ಎಂದಿದ್ದಾರೆ ಪ್ರೇಮ್. ದೇವರು ನಿಮ್ಮ ಕುಟುಂಬಕ್ಕೆ ಆಯಸ್ಸು ಆರೋಗ್ಯ ಹಾಗೂ ಯಶಸ್ಸು ಕೊಟ್ಟು ಕಾಪಾಡಲಿ ಎಂದು ವೈಯಕ್ತಿಕವಾಗಿ ಹಾಗೂ 'ಪ್ರೇಮಂ ಪೂಜ್ಯಂ' ತಂಡದ ಪರವಾಗಿ ಪ್ರೇಮ್ ಪ್ರಾರ್ಥಿಸಿದ್ದಾರೆ.
ಚಿತ್ರದಲ್ಲಿ ಪ್ರೇಮ್ ಎದುರಿಗೆ ನಾಯಕಿಯಾಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದು, ಐಂದ್ರಿತಾ ರೇ (Aindrita Ray), ಸುಮನ್ (Suman), ಮಾಸ್ಟರ್ ಆನಂದ್ (Master Anand), ಸಾಧು ಕೋಕಿಲಾ (Sadhu Kokila), ಅನು ಪ್ರಭಾಕರ್ (Anu Prabhakar, ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಪ್ರೇಮ್ ಹಾಗೂ ಐಂದ್ರಿತಾ ರೇ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು "ಅತಿರೂಪ' (Atiroopa) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಚೌಕ' (Chowka) ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ "ಪ್ರೇಮಂ ಪೂಜ್ಯಂ'ನಲ್ಲಿ ಮತ್ತೆ ಒಂದಾಗಿದ್ದಾರೆ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ. ಅಲ್ಲದೇ ಮುಖ್ಯವಾಗಿ ತಾಯಿಯಾದ ಬಳಿಕ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದ, ನಟಿ ಅನುಪ್ರಭಾಕರ್ ಕೂಡಾ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಕೊನೆಯಲ್ಲಿ ಇವರು ಎಂಟ್ರಿ ಕೊಡಲಿದ್ದಾರೆ.
"
'ಪ್ರೇಮಂ ಪೂಜ್ಯಂ' ಚಿತ್ರವು ಇದೇ ಅಕ್ಟೋಬರ್ 29ರಂದು ಬಿಡುಗಡೆಯಾಗುತ್ತಿದ್ದು, ಇದರ ಜೊತೆಗೆ ಎ.ಹರ್ಷ (A.Harsha) ನಿರ್ದೇಶನದ ಶಿವಣ್ಣ (Shivanna) ಅಭಿನಯದ 'ಭಜರಂಗಿ 2' (Bhajarangi 2) ಚಿತ್ರವು ತೆರೆ ಕಾಣುತ್ತಿದೆ. ಅಲ್ಲದೇ ಮೊದಲು 'ಭಜರಂಗಿ 2' ಚಿತ್ರವನ್ನು ನೋಡಿ ಅನಂತರ ನಮ್ಮ 'ಪ್ರೇಮಂ ಪೂಜ್ಯಂ' ಚಿತ್ರವನ್ನು ನೋಡಿ ಎಂದು ಚಿತ್ರದ ನಾಯಕ ಲವ್ಲಿ ಸ್ಟಾರ್ ಪ್ರೇಮ್ ಹೇಳಿದ್ದಾರೆ.