ವಿದೇಶಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡುವ ಕೋ-ಆರ್ಡಿನೇಟರ್‌ಗಳು ಹೆಚ್ಚುವರಿ ಹಣ ನೀಡುವಂತೆ ಒತ್ತಾಯಿಸಿ ಇಬ್ಬರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಪ್ರಕರಣಕ್ಕೆ ಸುಖಾಂತ್ಯ ಸಿಕ್ಕಿದೆ. ಆ ಮೂಲಕ ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರೀಕರಣಕ್ಕಾಗಿ ಪೋಲೆಂಡ್‌ಗೆ ತೆರಳಿದ್ದವರಲ್ಲಿ ಒತ್ತೆಯಾಳುಗಳಾಗಿದ್ದ ಇಬ್ಬರು ಮರಳಿ ಬೆಂಗಳೂರಿಗೆ ಬಂದಿದ್ದಾರೆ. ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ ಮೇಲೆ ಇತ್ಯರ್ಥಗೊಂಡಿರುವ ಈ ಪ್ರಕರಣದ ಹಿಂದಿನ ಕತೆ ಏನು ಎಂಬುದನ್ನು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.

1. ಒಂದಿಷ್ಟುಮಾತಿನ ಭಾಗದ ಹಾಗೂ ಚೇಸಿಂಗ್‌ ದೃಶ್ಯಗಳ ಶೂಟಿಂಗ್‌ಗಾಗಿ ನಾವು ಪೋಲೆಂಡ್‌ ಹೋಗುವ ಪ್ಲಾನ್‌ ಮಾಡಿಕೊಂಡಿದ್ವಿ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡುವ ಏಜೆನ್ಸಿಗಳ ಮೊರೆ ಹೋದ್ವಿ.

2. ನಮ್ಮವರೇ ಆದ ಹ್ಯಾರಿಸ್‌ ಮೂಲಕ ಮುಂಬೈ ಮೂಲದ ಅಜಯ್‌ ಪಾಲ್‌ ಹಾಗೂ ಸಂಜಯ್‌ ಪಾಲ್‌ ಅವರ ಕಂಪನಿ ಪರಿಚಯವಾಯಿತು. ಇವರನ್ನು ಭೇಟಿ ಮಾಡಿ ಪೋಲೆಂಡ್‌ನಲ್ಲಿ ನಮ್ಮ ಚಿತ್ರೀಕರಣದ ಪ್ಲಾನ್‌ ಹೇಳಿದ್ವಿ.

ಸಿನಿಮಾ ಶೂಟಿಂಗ್‌ ವೇಳೆ ವಿದೇಶದಲ್ಲಿ ವಂಚನೆ: ಕೋಟಿಗೊಬ್ಬ-3 ನಿರ್ಮಾಪಕನಿಂದ ದೂರು

3. ನಮ್ಮ ಯೋಜನೆ ಮಾಹಿತಿ ಕೇಳಿದ ಮೇಲೆ ಲೊಕೇಶನ್‌ಗಳನ್ನು ತೋರಿಸುವುದಕ್ಕೆ ಅವರೇ ಆಹ್ವಾನಿಸಿದ ಮೇಲೆ ನಾನು, ನಿರ್ದೇಶಕ ಶಿವಕಾರ್ತಿಕ್‌, ಛಾಯಾಗ್ರಹಕ ಶೇಖರ್‌ಚಂದ್ರ, ಕಲಾ ನಿರ್ದೇಶಕ ಅರುಣ್‌ ಸಾಗರ್‌ ಸೇರಿದಂತೆ ಐದು ಮಂದಿ ಪೋಲೆಂಡ್‌ಗೆ ಹೋಗಿ 11 ದಿನಗಳ ಚಿತ್ರೀಕರಣಕ್ಕೆ ರೂಪುಪರೇಷಗಳನ್ನು ಮಾಡಿಕೊಂಡು ಬಂದ್ವಿ.

4. ಚಿತ್ರೀಕರಣ ನಿಗದಿ ಆದ ಮೇಲೆ ಬಜೆಟ್‌ ವಿಚಾರ ಬಂತು. 11 ದಿನಕ್ಕೆ 2.36 ಕೋಟಿ ವೆಚ್ಚವಾಗಲಿದೆ ಎಂದು ನಿರ್ಧರಿಸಿ ಅವರೇ ಹೇಳಿದಂತೆ ಮುಂಗಡವಾಗಿ 50 ಲಕ್ಷ ರುಪಾಯಿಗಳನ್ನು ಕೊಡಲಾಯಿತು.

5. ಹಣ ನೀಡಿದ ಮೇಲೆ ಇಲ್ಲಿಂದ 54 ಮಂದಿ ಪೋಲೆಂಡ್‌ಗೆ ಹೋದರು. ಚಿತ್ರೀಕರಣ ಶುರುವಾದ ಮೇಲೆ ಕೋ-ಆರ್ಡಿನೇಟರ್‌ ಇದ್ದಕ್ಕಿದಂತೆ 2 ಕೋಟಿ ಕೊಡುವಂತೆ ಬೇಡಿಕೆ ಇಟ್ಟರು. ನಾನು ಅದಕ್ಕೆ ಒಪ್ಪಲಿಲ್ಲ. ಪ್ರತಿ ದಿನದ ಶೂಟಿಂಗ್‌ ವೆಚ್ಚದ ಲೆಕ್ಕ ಕೊಡಬೇಕು, ಆಯಾ ದಿನವೇ ಹಣ ತೆಗೆದುಕೊಂಡು ಹೋಗಬೇಕು, ಜತೆಗೆ ಈ ಶೂಟಿಂಗ್‌ ಬಜೆಟ್‌ನಲ್ಲಿ ಹೋಟೆಲ್‌ ಹಾಗೂ ಊಟದ ಬಿಲ್‌ ಪ್ರತ್ಯೇಕವಾಗಿರಬೇಕು ಎಂದು ಷರತ್ತು ಹಾಕಿದ್ದೆ.

6. ಷರತ್ತುಗಳಿಗೆ ಒಪ್ಪಿಕೊಂಡು 50 ಲಕ್ಷ ಮುಂಗಡ ಹಣ ಪಡೆದು ಇದ್ದಕ್ಕಿದಂತೆ 2 ಕೋಟಿಗೆ ಬೇಡಿಕೆ ಇಟ್ಟರೆ ಹೇಗೆ? ಅವರು ಹೇಳಿದಂತೆ ಹಣ ನೀಡುತ್ತಾ ಬಂದ್ವಿ.

60 ಮಂದಿಯೊಂದಿಗೆ ಪೋಲೆಂಡ್‌ಗೆ ಹೊರಟ ಕಿಚ್ಚ ಸುದೀಪ್!

7. ಆದರೆ, ಕೊನೆಯ ಎರಡು ದಿನ ಶೂಟಿಂಗ್‌ ಇದ್ದಾಗಲೇ ಬಜೆಟ್‌ ಜಾಸ್ತಿ ಆಗುತ್ತಿದೆ. ನೀವು ನಮಗೆ ಇನ್ನೂ 95 ಲಕ್ಷ ಕೊಡಬೇಕು ಎಂದರು. ಮೊದಲೇ ನಿಗದಿ ಮಾಡಿದಂತೆ 2.36 ಕೋಟಿ ಜತೆಗೆ 95 ಲಕ್ಷ ಕೇಳಿದಾಗ ನಾನು ಲೆಕ್ಕ ಕೇಳಿದೆ. ಅವರು ಲೆಕ್ಕ ಕೊಡಕ್ಕೆ ರೆಡಿ ಇರಲಿಲ್ಲ.

8. ಯಾವಾಗ ಕೋ-ಆರ್ಡಿನೇಟರ್‌ ಹೆಚ್ಚುವರಿ ಹಣ ಕೊಡಲೇ ಬೇಕು ಎಂದು ಒತ್ತಾಯ ಮಾಡಿದರೋ ಆಗಲೇ ನಾವು ಪೂರ್ತಿ ಲೆಕ್ಕ ಕೊಡಿ ಎಂದು ಕೂತ್ವಿ. ಅವರು ಲೆಕ್ಕ ಕೊಡುವ ತನಕ ಶೂಟಿಂಗ್‌ ಕೂಡ ಮುಗಿದಿದ್ದರಿಂದ 54 ಮಂದಿಯನ್ನು ಅಲ್ಲಿ ಉಳಿಸಕ್ಕೆ ಆಗಲ್ಲ ಎಂದು ನಾನು ಚಿತ್ರತಂಡವನ್ನು ವಾಪಸ್ಸು ಕರೆಸಿಕೊಂಡೆ.

9. ಕೋ-ಆರ್ಡಿನೇಟರ್‌ ನಾವು ಕೇಳಿದಂತೆ ಲೆಕ್ಕಪತ್ರ ಕೊಡಕ್ಕೆ ಐದು ದಿನ ಸಮಯ ತೆಗೆದುಕೊಂಡರು. ಅಲ್ಲೇ ಉಳಿದುಕೊಂಡಿದ್ದ ನಮ್ಮ ಅಕೌಂಟೆಂಟ್‌ ಲೆಕ್ಕ ಪರಿಶೀಲನೆ ಮಾಡಿದಾಗ ಅವರೇ ನಮಗೆ ಹಣ ಕೊಡಬೇಕು, ಇವರು ಸುಳ್ಳು ಲೆಕ್ಕ ತೋರಿಸಿ 95 ಲಕ್ಷ ಕೇಳುತ್ತಿದ್ದಾರೆ ಎಂದು ನನಗೆ ಹೇಳಿದರು.

10. ನಾನು ಈ ಬಗ್ಗೆ ಅಜಯ್‌ ಪಾಲ್‌ ಹಾಗೂ ಸಂಜಯ್‌ ಪಾಲ್‌ ಅವರಲ್ಲಿ ಕೇಳಿದಾಗ 95 ಲಕ್ಷದಿಂದ 65 ಲಕ್ಷಕ್ಕೆ ಬಂದರು. ಕೊನೆಗೆ ನಮ್ಮ ಚಿತ್ರದ ಅಕೌಂಟೆಂಟ್‌ ಅವರ ಪಾಸ್‌ಪೋರ್ಟ್‌ ಕೊಡದೆ ಅಕ್ರಮವಾಗಿ ಬಂಧಿಸಿಟ್ಟುಕೊಂಡರು.

11. ನ್ಯಾಯಯುತವಾಗಿ ನೋಡಿದರೆ ಅವರೇ ನಮಗೆ ದುಡ್ಡು ಕೊಡಬೇಕು. ಅವರು ಹೇಳಿದಂತೆ ನಾನು 65 ಲಕ್ಷ ಕೊಟ್ಟಿದ್ದರೆ 70 ಲಕ್ಷ ನನಗೆ ನಷ್ಟಆಗುತ್ತಿತ್ತು. ಒಬ್ಬ ನಿರ್ಮಾಪಕನಾಗಿ ಹೀಗೆ ಯಾರಿಗೋ ಹೆದರಿ ಹೆಚ್ಚುವರಿ ಹಣ ಕೊಡುವ ಬದಲು ನಾನು ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದೆ.

ಇಷ್ಟೊಂದು ಕೋಟಿ ಬೇಕಾಯ್ತಾ ಕೋಟಿಗೊಬ್ಬ 3 ಸೆಟ್‌ಗೆ ?

12. ನಟ ಜಗ್ಗೇಶ್‌ ಅವರ ನೆರವಿನಿಂದ ಕೇಂದ್ರ ಸಚಿವ ಡಿ ಸದಾನಂದ ಗೌಡ ಅವರನ್ನು ಭೇಟಿ ಮಾಡಿ, ಅಲ್ಲಿಂದ ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಲಾಯಿತು. ಕ್ರೈಮ್‌ ವಿಭಾಗದ ರವಿಕುಮಾರ್‌ ಪ್ರಕರಣ ದಾಖಲಿಸಿಕೊಂಡು ಮುಂಬಾಯಿನಲ್ಲಿದ್ದ ಅಜಯ್‌ ಪಾಲ್‌ ಹಾಗೂ ಸಂಜಯ್‌ ಪಾಲ್‌ ಕಂಪನಿಗೆ ನೋಟಿಸ್‌ ನೀಡಿದರು. ಪೊಲೀಸ್‌ ನೋಟಿಸ್‌ ಹೋಗುತ್ತಿದಂತೆಯೇ ಒತ್ತೆಯಾಳುಗಳನ್ನಾಗಿಟ್ಟುಕೊಂಡಿದ್ದ ನಮ್ಮವರನ್ನು ಬಿಡುಗಡೆಗೊಳಿಸಿದ್ದಾರೆ.

13. ಈ ಅಜಯ್‌ ಪಾಲ್‌ ಹಾಗೂ ಸಂಜಯ್‌ ಪಾಲ್‌ ದೊಡ್ಡ ವಂಚಕರು. ತಿಂಗಳಿಗೊಂದು ಕಂಪನಿ ಆರಂಭಿಸಿ ಹೀಗೆ ಹಣ ವಂಚಿಸುವ ದಂಧೆ ಮಾಡುತ್ತಿದ್ದಾರೆ. ಮೆಡಿಕಲ್‌ ಮಾಫಿಯಾದಲ್ಲಿ ಇವರ ಕೈವಾಡ ಇರುವುದು ಮುಂಬೈ ಪೊಲೀಸ್‌ ದಾಖಲೆಗಳಿಲ್ಲದೆ. ಇಂಥವರಿಗೆ ಕಾನೂನಿ ಮೂಲಕ ಬುದ್ಧಿ ಕಲಿಸಿದ್ದೇನೆ.

14. ಸದ್ಯಕ್ಕೆ ಕೋಟಿಗೊಬ್ಬ 3 ಚಿತ್ರಕ್ಕೆ ಶೇ.95 ಭಾಗ ಚಿತ್ರೀಕರಣ ಮುಗಿಸಿದ್ದು, ಐದು ಹಾಡುಗಳ ಪೈಕಿ ಎರಡು ಹಾಡುಗಳ ಶೂಟಿಂಗ್‌ ಬಾಕಿ ಇದೆ. ಇದೇ ಅಕ್ಟೋಬರ್‌ 21ರಿಂದ ಒಂದು ವಾರದ ಕಾಲ ಚಿನ್ನೈನಲ್ಲಿ ಶೂಟಿಂಗ್‌ ಹಮ್ಮಿಕೊಳ್ಳಲಾಗಿದೆ.

15. ಚೆನ್ನೈ ಶೆಡ್ಯೂಲ್‌ ಚಿತ್ರೀಕರಣ ಮುಗಿದ ಮೇಲೆ ಡಬ್ಬಿಂಗ್‌ಗೆ ಹೋಗಲಿದ್ದೇವೆ. ಪೋಲೆಂಡ್‌ಗೆ ಹೋಗಿದ್ದು ಸಾಹಸ ದೃಶ್ಯಗಳನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡುವುದಕ್ಕಾಗಿಯೇ. ಇದು ಚಿತ್ರದ ಹೈಲೈಟ್‌ ಕೂಡ.