ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕ್, ಹೃದಯಾಘಾತದಿಂದ ಖ್ಯಾತ ನಿರ್ದೇಶಕ ಕಿರಣ್ ಗೋವಿ ನಿಧನ!
ಭಾರತದ ಸಿನಿ ಇತಿಹಾಸದಲ್ಲಿ ಹೊಸ ದಾಖಲೆಯೊಂದಿಗೆ ಮುನ್ನುಗ್ಗುತ್ತಿರುವ ಸ್ಯಾಂಡಲ್‌ವುಡ್‌ಗೆ ಒಂದರ ಮೇಲೊಂದರಂತೆ ಆಘಾತ ಎದುರಾಗುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಕಿರಣ್ ಗೋವಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಂಗಳೂರು(ಮಾ.25): ಕೆಜಿಎಫ್, ಕಾಂತಾರ ಸೇರಿದಂತೆ ಅದ್ಭುತ ಚಿತ್ರದ ಮೂಲಕ ದೇಶ ವಿದೇಶದ ಸಿನಿ ಅಭಿಮಾನಿಗಳು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸ್ಯಾಂಡಲ್‌ವುಡ್‌ಗೆ ಒಂದರ ಹಿಂದೆ ಮತ್ತೊಂದರಂತೆ ಆಘಾತಗಳು ಎದುರಾಗುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಕಿರಣ್ ಗೋವಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕಿರಣ್ ಗೋವಿ ನಿಧನಕ್ಕೆ ಸ್ಯಾಂಡಲ್‌ವುಡ್ ಚಿತ್ರರಂಗ ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಕಿರಣ್ ಕೋವಿ ತಮ್ಮ ಕಚೇರಿಯಲ್ಲಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಉಳ್ಳಾಲದಲ್ಲಿರುವ ನಿವಾಸದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತ ಕಿರಣ್ ಗೋವಿ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಿರಣ್ ಗೋವಿ ಸ್ಯಾಂಡಲ್‌ವುಡ್‌ನ ಕ್ರಿಯಾತ್ಮಕ ನಿರ್ದೇಶಕ ಎಂದೇ ಗುರುತಿಸಿಕೊಂಡಿದ್ದರು. ಪಯಣ, ಸಂಚಾರಿ, ಯಾರಿಗುಂಟು ಯಾಗಿಲ್ಲ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ರವಿ ಶಂಕರ್ ನಾಯಕ ನಟನಾಗಿ ಅಭಿನಯಿಸಿದ ಪಯಣ ಚಿತ್ರ ಸೂಪರ್ ಹಿಟ್ ಆಗಿತ್ತು. 2008ರಲ್ಲಿ ತೆರೆ ಕಂಡಿತ್ತು. ಪಯಣ ಚಿತ್ರದ ಮೂಲಕ ನಿರ್ದೇಶಕ ಕಿರಣ್ ಗೋವಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು.
2014ರಲ್ಲಿ ತೆರೆಕಂಡ ಒಮ್ಮೊಮ್ಮೆ ಚಿತ್ರ, 2015ರಲ್ಲಿ ಬಿಡುಗಡೆಯಾದ ಪಾರು ವೈಫ್ ಆಫ್ ದೇವದಾಸ ಚಿತ್ರಗಳು ಕಿರಣ್ ಗೋವಿ ಕ್ರಿಯಾತ್ಮಕತೆಯನ್ನು ಪ್ರದರ್ಶಿಸಿತ್ತು. ಶ್ರೀನಗರ ಕಿಟ್ಟಿ ಅಭಿನಯದ ಪಾರು ವೈಫ್ ಆಫ್ ದೇವದಾಸ ಚಿತ್ರ ಭಾರಿ ಜನಮನ್ನಣೆಗಳಿಸಿತ್ತು. ಜನವರಿ 1, 1970ರಲ್ಲಿ ಹುಟ್ಟಿದ ಕಿರಣ್ ಗೋವಿ, ಕನ್ನಡ ಚಿತ್ರರಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದರು. ಕಾಲೇಜು ದಿನಗಳಲ್ಲಿ ನಟನಾಗಬೇಕೆಂಬ ಹಂಬಲದಲ್ಲಿದ್ದ ಕಿರಣ್ ಗೋವಿ ಚಂದನವರದ ಉತ್ತಮ ನಿರ್ದೇಶಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.