ಹಾಸ್ಯ ಕಲಾವಿದರಾದ ಬುಲೆಟ್‌ ಪ್ರಕಾಶ್‌ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.- ದರ್ಶನ್‌ ಕಂಬನಿ

ಬುಲೆಟ್‌ ಅವರದ್ದು ತುಂಬಾ ಬಿಂದಾಸ್‌ ವ್ಯಕ್ತಿತ್ವ. ಅವರ ಜತೆಗೆ ನಾನು ಕೂಡ ಸಿನಿಮಾ ಮಾಡಿದ್ದೇನೆ. ದಡೂತಿ ದೇಹವಾದರೂ, ಮುದ್ದು ಮುದ್ದಾದ ಗುಣ ಅವರದು. ಅವರಲ್ಲಿ ಒಂದು ಒಬ್ಬ ವಿಶಿಷ್ಟವಾದ ನಟನಿದ್ದ. ಸೆಡ್‌ನಲ್ಲಿದ್ದರೆ ಸದಾ ಜಾಲಿಯಾಗಿರುತ್ತಿದ್ದರು. ಹಾಸ್ಯ ಪ್ರಜ್ಞೆ ಎನ್ನುವುದು ಅವರ ರಕ್ತದಲ್ಲಿಯೇ ಬಂದ ಹಾಗಿತ್ತು. ಒಳಗೊಂದು, ಹೊರಗೊಂದು ವ್ಯಕ್ತಿತ್ವ ಅದರದ್ದಾಗಿರಲಿಲ್ಲ. ಕಾಮಿಡಿ ಎಲ್ಲರೂ ಮಾಡ್ತಾರೆ, ಆದ್ರೆ ಬುಲೆಟ್‌ ಕಾಮಿಡಿ ಶೈಲಿಯೇ ವಿಭಿನ್ನವಾಗಿತ್ತು.- ಕವಿರಾಜ್‌, ಗೀತೆ ರಚನೆಕಾರ, ನಿರ್ದೇಶಕ

 

ತಾರಾ ಅನುರಾಧಾ

ಬುಲೆಟ್‌ ಪ್ರಕಾಶ್‌ ಅವರ ಜೊತೆಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಅವರ ಮನೆ ಗೃಹಪ್ರವೇಶಕ್ಕೂ ಹೋಗಿದ್ದೇನೆ. ಬಹಳ ಸೊಗಸಾದ ಮನೆ ನೋಡಿ ಬಹಳ ಖುಷಿಪಟ್ಟಿದ್ದೆವು. ಆಗ ಬಹಳ ಜನ ಕಲಾವಿದರು ಬಂದಿದ್ದರು. ಹಿರಿಯ ರಾಜಕೀಯ ಧುರೀಣರು, ಮುಖ್ಯಮಂತ್ರಿಗಳೂ ಬಂದ ನೆನಪು.

ನನಗೆ ತಿಳಿದಿರುವ ಹಾಗೆ ಅವರ ತಾಯಿಯೂ ರಾಜಕೀಯದಲ್ಲಿದ್ದರು. ಕೆಲವು ವರ್ಷಗಳ ಕೆಳಗೆ ಭಾಜಪಕ್ಕೆ ಸೇರಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದರು. ಅವರು ಬಹಳ ಫೋಕಸ್ಡ್‌ ಮನುಷ್ಯ. ಹಾಸ್ಯ ಕಲಾವಿದರಲ್ಲದೇ ನಿರ್ಮಾಪಕರೂ ಆಗಿದ್ದರು. ಇತ್ತೀಚೆಗೆ ಬಹಳಷ್ಟುತೂಕ ಕಳೆದುಕೊಂಡಿದ್ದರು. ‘ಏನು ಪ್ರಕಾಶ್‌ ಅವರೇ, ಇಷ್ಟುಸಣ್ಣಗಾಗಿ ಹೋಗಿದ್ದೀರಿ’ ಅಂದರೆ ನನಗೇ ತಮಾಷೆ ಮಾಡ್ತಿದ್ರು. ‘ಮೇಡಂ ನೀವೂ ಸಣ್ಣ ಆಗ್ಬೇಕು. ನೋಡಿ ನಾನು ಜಿಮ್‌ ಮಾಡ್ತೀನಿ, ಡಯೆಟ್‌ ಮಾಡ್ತೀನಿ’ ಅಂತೆಲ್ಲ ಹೇಳಿದ್ರೇ ಹೊರತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಹೇಳಿರಲಿಲ್ಲ. ಕಷ್ಟದಲ್ಲಿದ್ದರೂ ಅದನ್ನು ತೋರಿಸಿಕೊಳ್ತಿರಲಿಲ್ಲ. ನಾನಾಗ ಅವರಿಗೆ ಅಭಿಮಾನದ ಮಾತು ಹೇಳಿದ್ದೆ.

ಆಮೇಲೆ ಒಂದು ಸಲ ನಾವೊಂದು ಚುನಾವಣೆ ಪ್ರಚಾರದಲ್ಲಿದ್ದೆವು. ‘ಮ್ಯಾಮ್‌ ನೀವು ಬದಲಾಗಬೇಕು ಮ್ಯಾಮ್‌’ ಅಂತಿದ್ರು. ‘ಬದಲಾಗಿದ್ದೀನಲ್ಲಪ್ಪಾ, ದಪ್ಪ ಆಗಿದ್ದೀನಿ’ ಅಂದರೆ ‘ನೀವು ನಡೆದುಕೊಳ್ಳುವ ರೀತಿ ಬದಲಾಗಬೇಕು. ಚೂರಾದ್ರೂ ಜಂಭ ತೋರಿಸ್ಬೇಕು. ನೋಡಿ ಹೀಗೆ ನಡೀಬೇಕು ನೀವು..’ ಅಂತ ನಡೆದೆಲ್ಲ ತೋರಿಸಿ ತಮಾಷೆ ಮಾಡಿದ್ದರು. ನನಗೆ ಜೋರು ನಗು. ಕೊನೆ ಕೊನೆಗೆ ಅವರಿಗೆ ಆಸ್ಪತ್ರೆಗೆ ಕಟ್ಟಲಿಕ್ಕೂ ದುಡ್ಡು ಇರಲಿಲ್ಲ. ಕಷ್ಟದಲ್ಲಿದ್ದರು ಅನ್ನೋದೆಲ್ಲ ಈಗ ಗೊತ್ತಾಗುತ್ತಿದೆ. ಅವರು ಇನ್ನಿಲ್ಲ ಅನ್ನೋದು ಬಹಳ ಶಾಕಿಂಗ್‌ ನ್ಯೂಸ್‌.

ಪುನೀತ್‌ ಟ್ವೀಟ್‌

ಬುಲೆಟ್‌ ಪ್ರಕಾಶ್‌ ಒಳ್ಳೆ ನಟರು. ತುಂಬಾ ಚೆನ್ನಾಗಿ ಪರಿಚಯ. ‘ಅಪ್ಪು’, ’ವೀರ ಕನ್ನಡಿಗ’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದೆವು. ‘ಜಾಕಿ’ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದ್ದರು.ಅವರ ಆತ್ಮಕ್ಕೆ ಶಾಂತಿ ಸಿಗಲಿ.

 

ಸಾಧುಕೋಕಿಲ, ಸಂಗೀತ ನಿರ್ದೇಶಕ, ನಟ

ಬುಲೆಟ್‌ ನನ್ನ ಆತ್ಮೀಯ ಗೆಳೆಯ. ಒಡನಾಡಿ. ಆತನ ಬಗ್ಗೆ ಎಷ್ಟುಹೇಳಿದರೂ ಸಾಲದು. ನಾನೇ ನಿರ್ದೇಶಿಸಿದ್ದ ಸಿನಿಮಾದಲ್ಲಿ ಆತ ಅಭಿನಯಿಸಿದ್ದ. ನಟನೆ ಎನ್ನುವುದು ಆತನಿಗೆ ಒಲಿದಿತ್ತು. ಆ ರೀತಿ ನಟನೆ ಒಲಿಯುವುದು ಅಪರೂಪ. ಅದು ನನ್ನಲ್ಲಿ ತುಂಬಾ ಸೋಜಿಗ ತರಿಸಿತ್ತು. ತುಂಬಾ ಹತ್ತಿರವಾಗುವುದಕ್ಕೂ ಅದು ಕಾರಣವಾಗಿತ್ತು. ಅದನ್ನು ನೆನಪಿಸಿಕೊಂಡರೆ ದುಃಖ ಬರುತ್ತದೆ. ಒಂದು ವಾರದ ಹಿಂದೆ ಅವರ ಪುತ್ರ ನನಗೆ ಕಾಲ್‌ ಮಾಡಿದ್ದರು. ಅಪ್ಪ ಭೇಟಿ ಮಾಡ್ಬೇಕು ಅಂತಿದ್ರು ಅಂತ ಹೇಳಿದ್ದ. ನನಗೂ ಬುಲೆಟ್‌ ಪ್ರಕಾಶ್‌ ಅವರನ್ನು ನೋಡ್ಬೇಕು ಎನ್ನುವ ಹಂಬಲ ಹೆಚ್ಚಾಗಿತ್ತು. ಕೊರೋನಾದಿಂದಾಗಿ ಎಲ್ಲರೂ ಮನೆಯಲ್ಲಿಯೇ ಉಳಿಯಬೇಕಾಗಿ ಬಂದ ಕಾರಣ ಪ್ರಕಾಶ್‌ ಅವರನ್ನು ಭೇಟಿ ಮಾಡುವುದಕ್ಕೆ

ಸಾಧ್ಯವಾಗಿರಲಿಲ್ಲ. ಅದು ನನಗೀಗ ತುಂಬಾ ನೋವು ತರಿಸಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ. ಚಿತ್ರರಂಗ ಒಬ್ಬ ಒಳ್ಳೆಯ ಕಲಾವಿದನನ್ನು ಕಳೆದುಕೊಂಡಿತು, ನನಗೂ ಒಬ್ಬ ಒಳ್ಳೆಯ ಗೆಳೆಯ ಮಿಸ್‌ ಆದ ಎನ್ನುವ ನೋವಿದೆ.

ಯೋಗರಾಜ ಭಟ್‌

ಬೇರೆ ಥರದ ಹಾಸ್ಯಮಾಡುತ್ತಿದ್ದವರು ಬುಲೆಟ್‌ ಪ್ರಕಾಶ್‌. ಅವರಿಗೆ ಟ್ರೆಮೆಂಡಸ್‌ ಆದ ಟೈಮಿಂಗ್‌ ಇತ್ತು. ಬಹಳ ಸೊಗಸಾಗಿ ಡಬ್ಬಿಂಗ್‌ ಮಾಡುತ್ತಿದ್ದರು. ಪ್ರತಿಯೊಂದು ಪಾತ್ರವನ್ನೂ ವಿಭಿನ್ನವಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿತ್ತು. ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯೂ ದೊಡ್ಡದು. ನನ್ನ ಒಂದೇ ಚಿತ್ರದಲ್ಲಿ ಅವರು ನಟಿಸಿದ್ದರು.