ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡ ಶಿವರಾಜ್‌ಕುಮಾರ್, ೨೯ ವರ್ಷಗಳ ನಂತರ ಯಾಣಕ್ಕೆ ಭೇಟಿ ನೀಡಿದ್ದಾರೆ. "ನಮ್ಮೂರ ಮಂದಾರ ಹೂವೆ" ಚಿತ್ರೀಕರಣ ನಡೆದ ಈ ಸ್ಥಳಕ್ಕೆ ಮರಳಿ ಬಂದ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿರಸಿ ಸಮೀಪದ ಈ ಪ್ರವಾಸಿ ತಾಣಕ್ಕೆ ಆಗಾಗ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಕರುನಾಡು ಚಕ್ರವರ್ತಿ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಕಾಯಿಲೆಗೆ ಅಮೆರಿಕಾದಲ್ಲಿ (America) ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ತಾಯ್ನಾಡಿಗೆ ಮರಳಿರುವುದು ಗೊತ್ತೇ ಇದೆ. ಜನವರಿ 26ಕ್ಕೆ ಭಾರತಕ್ಕೆ, ತಮ್ಮ ಮನೆ ಬೆಂಗಳೂರಿಗೆ ಬಂದಿಳಿದ ನಟ ಶಿವಣ್ಣ ಅವರು ಸ್ವಲ್ಪ ದಿನ ವಿಶ್ರಾಂತಿ ಬಳಿಕ ಇದೀಗ ಯಾಣಕ್ಕೆ (Yana) ಭೇಟಿ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿರುವ ಯಾಣವು ಶಿರಸಿಯಿಂದ ಕೂಡ ಸಮೀಪವಿರುವ ಸ್ಥಳವಾಗಿದೆ. ಶಿರಸಿ ಹಾಗು ಕುಮಟಾ ಎರಡೂ ಕಡೆಗಳಿಂದಲೂ ಪ್ರವಾಸಿಗರು ಯಾಣಕ್ಕೆ ಭೇಟಿ ನೀಡುತ್ತಾರೆ. 

ಆಪರೇಷನ್ ಬಳಿಕ ಚೇತರಿಸಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 29 ವರ್ಷಗಳ ಬಳಿಕ ಪ್ರವಾಸಿತಾಣವಾಗಿರುವ ಯಾಣಕ್ಕೆ (Yana) ಭೇಟಿ ನೀಡಿದ್ದಾರೆ. ಇದೇ ಜಾಗದಲ್ಲಿ ಶಿವರಾಜ್‌ಕುಮಾರ್, ರಮೇಶ್ ಹಾಗೂ ಪ್ರೇಮಾ ನಟನೆಯ ಸೂಪರ್ ಹಿಟ್ 'ನಮ್ಮೂರ ಮಂದಾರ ಹೂವೆ' ಸಿನಿಮಾದ ಶೂಟಿಂಗ್ ನಡೆದಿತ್ತು. ಈ ಚಿತ್ರವನ್ನು ಸುನಿಲ್‌ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದರು. 'ನಮ್ಮೂರ ಮಂದಾರ ಹೂವೇ' ಚಿತ್ರವನ್ನು ಜಯಶ್ರೀ ದೇವಿ ನಿರ್ಮಾಣ ಮಾಡಿದ್ದರು. ಅದಾಗಿ 29 ವರ್ಷಗಳ ಬಳಿಕ ನಟ ಶಿವಣ್ಣ ಮತ್ತೆ ಅದೇ ಜಾಗಕ್ಕೆ ಕಾಲಿಟ್ಟು ಖುಷಿ ಅನುಭವಿಸಿದ್ದಾರೆ. 

ನಾನು ಸಿನಿಮಾ ಶೂಟಿಂಗ್‌ ಮಾಡೋದು ಬೇಡ್ವಾ? ಶಿವಣ್ಣ ಕೋಪಕ್ಕೆ 'ಗಡಗಡ' ಆಗೋದ್ರಾ?

ತಾವು ಯಾಣಕ್ಕೆ ಭೇಟಿ ನೀಡಿರುವ ಹಳೆಯ ಫೋಟೋ ಹಾಗೂ ಇತ್ತೀಚೆಗೆ ಭೇಟಿ ಕೊಟ್ಟ ಫೋಟೋವನ್ನು 'ಇನ್ಸ್ಟಾಗ್ರಾಂ'ದಲ್ಲಿ ಶೇರ್ ಮಾಡಿಕೊಂಡು ಕರುನಾಡು ಚಕ್ರವರ್ತಿ ನಟ ಶಿವರಾಜ್‌ಕುಮಾರ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ. 'ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..' ಎಂದು ಬರೆದುಕೊಂಡಿರುವ ನಟ ಶಿವಣ್ಣ ಅವರು, 'ನಮ್ಮೂರ ಮಂದಾರ ಹೂವೆ' ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ..' ಎಂದೂ ಬರೆದು ಪೋಸ್ಟ್ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾದ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ನಟ ಶಿವರಾಜ್‌ಕುಮಾರ್ ಈ ಪೋಸ್ಟ್ ಮಾಡುತ್ತಿದ್ದಂತೆ, ಅನೇಕರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ನಟ ಶಿವರಾಜ್‌ಕುಮಾರ್ ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದು, ಅದರಲ್ಲೊಬ್ಬರು 'ನಮ್ಮೂರ ಮಂದಾರ ಹೂವೇ' ಭಾಗ-2 ಸಿನಿಮಾ ಮಾಡೋ ಪ್ಲಾನ್ ಏನಾದ್ರೂ ಇದೆಯಾ?' ಎಂದು ಪ್ರಶ್ನೆ ಕೇಳಿದ್ದಾರೆ. ಆದರೆ, ಅವರ ಕಾಮೆಂಟ್‌ಗೆ ಉತ್ತರ ಇನ್ನೂ ಬಂದಿಲ್ಲ. ಒಟ್ಟಿನಲ್ಲಿ, ನಟ ಶಿವಣ್ಣ ಅವರು ಮತ್ತೆ ಯಾಣಕ್ಕೆ ಹೋಗಿ ಹಳೆಯ ನೆನಪು ತಂದುಕೊಂಡು ಪುಳಕ ಅನುಭವಿಸಿದ್ದಾರೆ. 

ಶಂಕರ್ ನಾಗ್ ಗುಟ್ಟು ಬಯಲು ಮಾಡಿದ 'ಸಿಬಿಐ ಶಂಕರ್' ನಟಿ ಸುಮನ್ ರಂಗನಾಥ್!

View post on Instagram