ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಪ್ರಮೋಷನ್‌ಗಾಗಿ ರಾಜ್ಯ ಪ್ರವಾಸ ನಡೆಸುತ್ತಿರುವ ರಕ್ಷಿತ್‌ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್‌, ಉಡುಪಿ ನಗರದ ಅಲಂಕಾರ್‌ ಚಿತ್ರಮಂದಿರದ ಮುಂಭಾಗದಲ್ಲಿ ತಾಸೆಯ ಸದ್ದಿಗೆ ಭರ್ಜರಿ ಹುಲಿವೇಷಕ್ಕೆ ಸ್ಟೆಪ್‌ ಹಾಕಿದರು.

ಉಡುಪಿ(ಸೆ.08): ‘ಉಳಿದವರು ಕಂಡಂತೆ’ ಸಿನೆಮಾದ ಮೂಲಕ ಉಡುಪಿಯ ಜನಪದ ಹುಲಿವೇಷ ಕುಣಿತ, ಅದರ ತಾಸೆ ಸದ್ದನ್ನು ನಾಡಿನಾದ್ಯಂತ ಪರಿಚಯಿಸಿದ ರಕ್ಷಿತ್‌ ಶೆಟ್ಟಿ, ಗುರುವಾರ ಉಡುಪಿ ರಸ್ತೆಯಲ್ಲಿ ಸಕತ್‌ ಹುಲಿವೇಷ ಸ್ಟೆಫ್ಸ್‌ ಹಾಕಿ ತಮ್ಮ ಇನ್ನೊಂದು ಸಿನೆಮಾದ ಪ್ರಮೋಷನ್‌ ನಡೆಸಿದರು.

ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಪ್ರಮೋಷನ್‌ಗಾಗಿ ರಾಜ್ಯ ಪ್ರವಾಸ ನಡೆಸುತ್ತಿರುವ ರಕ್ಷಿತ್‌ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್‌, ನಗರದ ಅಲಂಕಾರ್‌ ಚಿತ್ರಮಂದಿರದ ಮುಂಭಾಗದಲ್ಲಿ ತಾಸೆಯ ಸದ್ದಿಗೆ ಭರ್ಜರಿ ಹುಲಿವೇಷಕ್ಕೆ ಸ್ಟೆಪ್‌ ಹಾಕಿದರು.

‘ಸಪ್ತ ಸಾಗರದಾಚೆ ಎಲ್ಲೋ’ ಗೆಲುವಿನ ಯಾತ್ರೆ:‘ಕರ್ನಾಟಕ ಕ್ರಶ್’ ಆದ ನಟಿ ರುಕ್ಮಿಣಿ ವಸಂತ್!

ಎಲ್ಲೇ ಚಿತ್ರೀಕರಣದಲ್ಲಿ ಬ್ಯುಸಿ ಇದ್ದರೂ ಪ್ರತಿವರ್ಷ ಹುಟ್ಟೂರು ಉಡುಪಿಯ ಕೃಷ್ಣ ಜನ್ಮಾಷ್ಟಮಿಗೆ ಆಗಮಿಸುವ ರಕ್ಷಿತ್‌ ಶೆಟ್ಟಿ, ಬುಧವಾರವೇ ಸಪ್ತಸಾಗರದಾಚೆ ಎಲ್ಲೋ ಟೀಮ್‌ನೊಂದಿಗೆ ಉಡುಪಿಗೆ ಆಗಮಿಸಿದ್ದರು. ಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಚಿತ್ರದ ಪ್ರಚಾರವನ್ನೂ ನಡೆಸಿದರು.

ರಕ್ಷಿತ್‌ ಬರುತ್ತಿರುವ ಸುದ್ದಿ ಕೇಳಿ ಚಿತ್ರಮಂದಿರದ ಬಳಿ ಅವರ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ರಕ್ಷಿತ್‌ಗೆ ಹೂವಿನ ಮಾಲೆ ಹಾಕಿ ಸಂಭ್ರಮಿಸಿದರು. ಒಬ್ಬ ಅಭಿಮಾನಿಯಂತು ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಟೈಟಲ್‌ ಚಿತ್ರ ಬಿಡಿಸಿ ತಂದು ರಕ್ಷಿತ್‌ ಶೆಟ್ಟಿಗೆ ಕೊಟ್ಟು ಸಂಭ್ರಮಿಸಿದ. ಕೆಲಕಾಲ ಅಭಿಮಾನಿಗಳೊಂದಿಗೆ ಬೆರೆತ ರಕ್ಷಿತ್‌ ಶೆಟ್ಟಿ, ಅವರ ನಡುವೆ ರುಕ್ಮಿಣ್‌ ವಸಂತ್‌, ನಿರ್ದೇಶಕ ಹೇಮಂತ್‌ ಜೊತೆ ಹುಲಿವೇಷ ಕುಣಿದು ಖುಶಿಪಡಿಸಿದರು.