ಪುನೀತ್ ರಾಜ್‌ಕುಮಾರ್ ಪ್ರತ್ಯಕ್ಷ - ಹಿರಿ ಹಿರಿ ಹಿಗ್ಗಿ ನಗುವಿನೊಡೆಯನಿಗೆ ಜೈಕಾರ ಹಾಕಿದ ಫ್ಯಾನ್ಸ್, ಫೋಟೋ ನೋಡಿ
ತುಮಕೂರಿನ ಅಂಗಡಿಯೊಂದರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿದ ಅನುಭವ ಹಂಚಿಕೊಂಡ ಅಭಿಮಾನಿ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾವುಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು: ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡದ ಮನೆಯ ಮಗನಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲ ಅಂದ್ರೆ ನಂಬಲು ಇಂದಿಗೂ ಅವರ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪವರ್ ಸ್ಟಾರ್ ಅಭಿಮಾನಿಗಳು ಪ್ರಪಂಚದ ಎಲ್ಲಾ ಮೂಲೆಗಳಲಿದ್ದು, ಅವರ ಫೋಟೋವನ್ನು ತಮ್ಮ ಜೊತೆಯಲ್ಲಿಯೇ ಇರಿಸಿಕೊಂಡಿರುತ್ತಾರೆ. ಕರ್ನಾಟಕದ ಹಲವು ಗ್ರಾಮಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ಕಾಣಬಹುದು. ಇತ್ತೀಚೆಗೆ ಹಾವೇರಿ ಜಿಲ್ಲೆಯ ಯಲಗಚ್ಚಿ ಗ್ರಾಮದಲ್ಲಿ ಅಪ್ಪುಗಾಗಿ ಅಭಿಮಾನಿಯೊಬ್ಬರು ದೇವಸ್ಥಾನವನ್ನೇ ಕಟ್ಟಿದ್ದಾರೆ. ನಗರದ ಪ್ರಮುಖ ರಸ್ತೆಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ್ನೀಡುವ ಮೂಲಕ ಸಹ ಗೌರವಿಸಲಾಗುತ್ತಿದೆ.
ನಟ ಸಾರ್ವಭೌಮ ರಾಜ್‌ಕುಮಾರ್ ಮತ್ತು ಪುನೀತ್ ಕೆಎಂಎಫ್ (ನಂದಿನಿ) ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು. ಆದ್ರೆ ಈ ಕೆಲಸಕ್ಕೆ ಯಾವುದೇ ಸಂಭಾವನೆಯನ್ನು ಸಹ ಪಡೆದುಕೊಂಡಿಲ್ಲ. ಹಾಗಾಗಿ ಇಂದಿಗೂ ನಂದಿನಿ ಮಿಲ್ಕ್ ಪಾರ್ಲರ್‌ಗಳಲ್ಲಿ ಪುನೀತ್ ರಾಜ್‌ಕುಮಾರ್ ಅವರ ಫೋಟೋಗಳನ್ನು ಕಾಣಬಹುದು. ಗ್ರಾಮಗಳ ಸಣ್ಣ ಪೆಟ್ಟಿಗೆ ಅಂಗಡಿಗಳಲ್ಲಿ ಪುನೀತ್ ಜಾಹೀರಾತಿನ ಫೋಟೋಗಳು ಇಂದಿಗೂ ಕಾಣಬಹುದು. ಇದೀಗ ಇಂತಹವುದೇ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಫೋಟೋ ನೋಡಿದ್ರೆ ಒಂದು ಕ್ಷಣ ನಿಜವಾಗಿಯೂ ಅಪ್ಪು ಅವರನ್ನೇ ನೋಡಿದಂತೆ ಕಣ್ಣಿಗೆ ಆನಂದವಾಗುತ್ತದೆ. ಅಂಗಡಿಯಲ್ಲಿ ಪುನೀತ್ ಇದ್ದಾರೆ ಅನ್ನೋ ಅನುಭವ ಎಲ್ಲರಿಗೂ ಖಂಡಿತ ಆಗುತ್ತದೆ. ಈ ಫೋಟೋವನ್ನು ಗುಬ್ಬಚ್ಚಿ ಸತೀಶ್ (Gubbachchi Sathish) ಎಂಬವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ 11 ಸಾವಿರಕ್ಕೂ ಅಧಿಕ ಲೈಕ್ಸ್, 800ಕ್ಕೂ ಅಧಿಕ ಕಮೆಂಟ್‌ಗಳು ಬಂದಿವೆ. 200ಕ್ಕೂ ಹೆಚ್ಚು ಬಾರಿ ಪುನೀತ್ ರಾಜ್‌ಕುಮಾರ್ ಫೋಟೋ ಶೇರ್ ಆಗಿದೆ.
ಇದನ್ನೂ ಓದಿ: ನೋಡಲು ಥೇಟ್ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್ ಟು ಸೇಮ್... ಅವನ ಮಾತು ಕೇಳಿ...
ಫೇಸ್‌ಬುಕ್ ಪೋಸ್ಟ್
ಸ್ನೇಹಿತರೇ, ಇವತ್ತು ಸಂಜೆ ಒಂದು ಕ್ಷಣ ರೋಮಾಂಚನವಾಯಿತು. ತುಮಕೂರಿನ ಎಸ್.ಎಸ್. ಪುರಂನ ಕೆಂಪಣ್ಣ ಅಂಗಡಿ ಸರ್ಕಲ್ಲಿನಲ್ಲಿ ಇರುವ ನಂದಿನಿ ಬೂತಿನ ಮುಂದೆ ಇದ್ದ ನನ್ನ ಗಾಡಿ ತೆಗೆಯಲು ಹೋದಾಗ ಒಂದು ಕ್ಷಣ ಅಂಗಡಿಯ ಒಳಗೆ ಕಂಡವರನ್ನು ನೋಡಿ ರೋಮಾಂಚನವಾಯಿತು. ಅಪ್ಪು ಅವರು ಒಳಗೆ ಇದ್ದಾರೆ ಎಂದುಕೊಂಡು ಬಹಳ ಖುಷಿಯಾಯ್ತು. ನನ್ನ ಕಣ್ಣನ್ನು ನನಗೆ ನಂಬಲು ಆಗಲೇ ಇಲ್ಲ. ಮಿಸ್ ಯು ಬ್ರದರ್, ನೀವು ನಮ್ಮೊಂದಿಗೆ ಜೀವಂತವಾಗಿರುವುದು ಹೀಗೆಯೇ ಎಂದು ಗುಬ್ಬಚ್ಚಿ ಸತೀಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನೋಡಿದ ಅಭಿಮಾನಿಗಳು, ನಾ ಕಂಡ ಹಾಗೆ ಪ್ರ ಪ್ರಥಮ ಬಾರಿಗೆ ಜಗತ್ತಿನ ಎಲ್ಲಾ ಮೂಲೆಯಲ್ಲೂ ಕಾಣುತ್ತಿರೋ ಫೋಟೋ ಅಂದ್ರೆ ಅದು ಅಪ್ಪು ಅವರದ್ದು, ಈ ಪೋಸ್ಟ್ ಕಂಡು ಕ್ಷಣ ನಾನೂ ಸಹ ಹಾಗೆ ಶಾಕ್ ಆದೆ, ಇದು ನಿಜವಾಗಿದ್ದಿದ್ದರೆ ಎಷ್ಟು ಚೆನ್ನಾಗಿರುವುದು ಅಲ್ವಾ, ದೇವರಿಗೆ ಸಾವಿಲ್ಲ ದೇಹಕ್ಕೆ ಮಾತ್ರ ಸಾವು. ಈಗಲೂ ನೆನಸಿಕೊಂಡರೆ ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗೆ ಹಾಗುತ್ತೆ ನಿಜ ಅಪ್ಪು ಅಜರಾಮರ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 90 ನಿಮಿಷ ನಿಂತ ಹೃದಯ ಎಚ್ಚರಿಸಿದ ವೈದ್ಯರು, ನಮ್ಮ ಪುನೀತ್‌ಗೆ ಸಿಗಬಾರದಿತ್ತಾ ಎಂದನಿಸೋದು ಸಹಜ!