Asianet Suvarna News Asianet Suvarna News

Controversial Statements: ಗನ್‌ಮ್ಯಾನ್‌ ಭದ್ರತೆ ಮರಳಿಸಿ: ಸರ್ಕಾರಕ್ಕೆ ನಟ ಚೇತನ್‌ ಮನವಿ

*  ನನಗೆ ನಿರಂತರ ಬೆದರಿಕೆ ಇದೆ, ಹೀಗಾಗಿ ಭದ್ರತೆ ಒದಗಿಸೋದು ಸರ್ಕಾರದ ಕರ್ತವ್ಯ
*  ಪೊಲೀಸರು ಒದಗಿಸದಿದ್ದರೆ ನಾವೇ ಭದ್ರತೆ ಒದಗಿಸುವುದಾಗಿ ಅಭಿಮಾನಿಗಳ ಭರವಸೆ
*  ಗಡಿಪಾರು-ಅತಿರೇಕದ ಮಾತುಗಳು
 

Sandalwood Actor Chetan Request to Government of Karnataka For Give Gunman Security grg
Author
First Published Mar 16, 2022, 9:20 AM IST | Last Updated Mar 16, 2022, 9:20 AM IST

ಬೆಂಗಳೂರು(ಮಾ.16):  ತಮ್ಮಿಂದ ಹಿಂಪಡೆದಿರುವ ಗನ್‌ಮ್ಯಾನ್‌(Gunman) ಭದ್ರತೆಯನ್ನು ಮತ್ತೆ ಕಲ್ಪಿಸುವಂತೆ ಕೋರಿ ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ(Araga Jnanendra) ಅವರಿಗೆ ನಟ ಚೇತನ್‌(Chetan) ಮಂಗಳವಾರ ಮನವಿ ಮಾಡಿದ್ದಾರೆ. 

ನಗರದಲ್ಲಿ ಸಚಿವರನ್ನು ಭೇಟಿಯಾಗಿ ಭದ್ರತೆ ಸಂಬಂಧ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್‌(Gauri Lankesh) ಹತ್ಯೆ(Murder) ಬಳಿಕ ನನಗೆ ನಾಲ್ಕೂವರೆ ವರ್ಷಗಳಿಂದ ಗನ್‌ ಮ್ಯಾನ್‌ ಭದ್ರತೆ ನೀಡಲಾಗಿತ್ತು. ಆದರೆ ಇತ್ತೀಚಿಗೆ ನಾನು ಜೈಲಿಗೆ ಹೋದ ಬಳಿಕ ಭದ್ರತೆ ಹಿಂಪಡೆದಿದ್ದಾರೆ ಎಂದರು. ಈ ವಿಚಾರವಾಗಿ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ನನಗೆ ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಇಬ್ಬರು ಗನ್‌ ಮ್ಯಾನ್‌ಗಳನ್ನು ಭದ್ರತೆ(Security) ಕೊಡುವ ಬಗ್ಗೆ ಗುಪ್ತದಳದ ವರದಿ ಇದೆ. ಹೀಗಿದ್ದರೂ ಇದ್ದ ಗನ್‌ಮ್ಯಾನ್‌ ಭದ್ರತೆಯನ್ನು ಹಿಂಪಡೆದಿರುವುದು ಸಮಂಜಸವಲ್ಲ. ಈ ಸಂಗತಿಯನ್ನು ಸಚಿವರಿಗೆ ಮನದಟ್ಟು ಮಾಡಿದ್ದೇನೆ. ಬೆದರಿಕೆಗಳ ಬಗ್ಗೆ ಸಾಕ್ಷಿ ಸಮೇತ ವಿವರಿಸಿದ್ದೇನೆ. ನನ್ನ ಮನವಿಗೆ ಸಚಿವರು ಸ್ಪಂದಿಸಿದ್ದಾರೆ ಎಂದರು.

Hijab Row: ನಟ ಚೇತನ್‌ಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯವಿಲ್ಲ!

ನನಗೆ ಅಭದ್ರತೆ ಇದೆ. ಹಾಗಾಗಿ ನನಗೆ ಗನ್‌ ಮ್ಯಾನ್‌ ಸೌಲಭ್ಯ ಅಗತ್ಯವಾಗಿ ಕಲ್ಪಿಸಬೇಕಿರುವುದು ಸರ್ಕಾರದ(Government of Karnataka) ಕರ್ತವ್ಯ ಕೂಡಾ ಆಗಿದೆ. ಈ ಸಂಬಂಧ ಎರಡು ದಿನಗಳ ಹಿಂದೆ ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ವಿನಂತಿಸಿದೆ. ಆದರೆ ಭದ್ರತೆ ಸಂಬಂಧ ಗುಪ್ತದಳದ ಅಧಿಕಾರಿಗಳನ್ನು ಕಾಣುವಂತೆ ಆಯುಕ್ತರು ಹೇಳಿದ್ದರು. ಹಾಗಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಬೆದರಿಕೆ ಸಂದೇಶಗಳ ಸಂಬಂಧ ಯಾವುದೇ ನಿರ್ದಿಷ್ಟ ಸಂಘಟನೆ ಅಥವಾ ವ್ಯಕ್ತಿ ಬಗ್ಗೆ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸ್‌ ರಕ್ಷಣೆ(Police Protection) ಸಿಗದೆ ಹೋದರೂ ನಿಮಗೆ ನಾವು ಭದ್ರತೆ ನೀಡುವಂತೆ ಎಂದು ರಾಜ್ಯ ವಿವಿಧೆಡೆಯಿಂದ ಜನರು ಬಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ(Karnataka) ಇವತ್ತು ಸಮಾಜ ಪರಿವರ್ತನೆ ಬಗ್ಗೆ ಮಾತನಾಡದೆ ಕೋಮುವಾದದ ಕುರಿತು ಮಾತನಾಡುವ ರಾಜಕಾರಣಿಗಳಿಗೆ ರಕ್ಷಣೆ ಕೊಡಲಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಡಿಪಾರು-ಅತಿರೇಕದ ಮಾತುಗಳು

ಇತ್ತೀಚಿಗೆ ನನ್ನ ಗಡಿಪಾರು(Exile) ವಿಚಾರವಾಗಿ ಆಧಾರ ರಹಿತವಾದ ಅತಿರೇಕ ಮಾತುಗಳು ಕೇಳು ಬರುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಸಾಕ್ಷ್ಯಗಳು ಸಿಗುತ್ತಿಲ್ಲ. ಹಾಗಾಗಿ ಗಡಿಪಾರು ಸಂಗತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಚೇತನ್‌ ಹೇಳಿದರು.

Anti Conversion Bill: ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ನಟ ಚೇತನ್‌

ನಟ ಚೇತನ್‌ ಗಡಿಪಾರು ಸಾಧ್ಯತೆ?

ಬೆಂಗಳೂರು: ಸದಾ ಒಂದಿಲ್ಲೊಂದು ವಿವಾದಗಳಿಗೆ ತುತ್ತಾಗುವ ಕನ್ನಡ ಚಲನಚಿತ್ರ(Sandalwood) ನಟ ಹಾಗೂ ಅಮೆರಿಕ ಪ್ರಜೆ ಚೇತನ್‌ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಈಗ ಸಾಗರೋತ್ತರ ಭಾರತೀಯ ನಾಗರಿಕ ಪತ್ರ (OCA) ನಿಯಮಗಳನ್ನು ಉಲ್ಲಂಘನೆ ಮಾಡಿದ ಸಂಬಂಧ ನಟನ ವಿರುದ್ಧ ರಾಜ್ಯ ಸರ್ಕಾರಕ್ಕೆ ಬೆಂಗಳೂರು ಪೊಲೀಸರು(Police) ವರದಿ ಸಲ್ಲಿಸಿದ್ದರು.

ವಿದೇಶಿ ಪ್ರಜೆಗಳು ಭಾರತದಲ್ಲಿನ(India) ಹೋರಾಟದಲ್ಲಿ ಪಾಲ್ಗೊಳ್ಳುವಂತಿಲ್ಲ. ಆದರೆ ಚೇತನ್‌ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಸರ್ಕಾರವು(Government of Karnataka) ಈ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆಗೆ ರವಾನಿಸಲಿದೆ. ಅಂತಿಮವಾಗಿ ರಾಜ್ಯ ಸರ್ಕಾರದ ವರದಿ ಆಧರಿಸಿ ಚೇತನ್‌ ಅವರನ್ನು ಗಡೀಪಾರಿಗೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದರು.

ಇತ್ತೀಚಿಗೆ ಹಿಜಾಬ್‌ ವಿವಾದ (Hijab Row) ವಿಚಾರದಲ್ಲಿ ಹೈಕೋರ್ಟ್‌(High Court) ನ್ಯಾಯಮೂರ್ತಿಯೊಬ್ಬರನ್ನು ನಿಂದಿಸಿ ಟ್ವೀಟ್‌ ಮಾಡಿದ ಆರೋಪದ ಮೇರೆಗೆ ಚೇತನ್‌ ಬಂಧನವಾಗಿತ್ತು. ಇದಕ್ಕೂ ಮುನ್ನ ಪೇಜಾವರ ಶ್ರೀಗಳ ಬಗ್ಗೆ ಸಹ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ಚೇತನ್‌ ವಿರುದ್ಧ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು, ಈಗ ಸಾಗರೋತ್ತರ ಭಾರತೀಯ ನಾಗರಿಕ ಪತ್ರದ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಚೇತನ್‌ ಪಾಲ್ಗೊಂಡಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದರು. 

Latest Videos
Follow Us:
Download App:
  • android
  • ios