Asianet Suvarna News Asianet Suvarna News

ಆಗಸ್ಟ್‌ 5ರಿಂದ 7ರವರೆಗೆ ಸಂಚಾರಿ ವಿಜಯ್‌ ನೆನಪಿನ ನಾಟಕೋತ್ಸವ

ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್‌ ಅವರ ಹೆಸರಿನಲ್ಲಿ ಸಂಚಾರಿ ಥಿಯೇಟರ್‌ ಆಗಸ್ಟ್‌ 5 ರಿಂದ 7ರವರೆಗೂ ನಾಟಕೋತ್ಸವ ಆಯೋಜಿಸಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ.

Sanchari Vijay Memorial Drama Festival from 5th to 7th August gvd
Author
Bangalore, First Published Aug 5, 2022, 1:31 PM IST

ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಸಂಚಾರಿ ವಿಜಯ್‌ ಅವರ ಹೆಸರಿನಲ್ಲಿ ಸಂಚಾರಿ ಥಿಯೇಟರ್‌ ಆಗಸ್ಟ್‌ 5 ರಿಂದ 7ರವರೆಗೂ ನಾಟಕೋತ್ಸವ ಆಯೋಜಿಸಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ. ಸಂಚಾರಿ ವಿಜಯ್‌ ಅಭಿನಯಿಸುತ್ತಿದ್ದ ಶ್ರೀದೇವಿ ಮಹಾತ್ಮೆ, ನರಿಗಳಿಗೇಕೆ ಕೋಡಿಲ್ಲ?, ಕಮಲಮಣಿ ಹಾಗೂ ಕಾಮಿಡಿ ಕಲ್ಯಾಣ ನಾಟಕಗಳನ್ನು ಪ್ರದರ್ಶನಗೊಳಿಸಲಾಗುವುದು. ಪ್ರತಿ ದಿನ ಸಂಜೆ 7 ಗಂಟೆಗೆ ನಾಟಕ ಆರಂಭವಾಗಲಿದೆ.

ಇಂದು ಸಂಜೆ (ಆ.5) ರಂಗಭೂಮಿ ನಿರ್ದೇಶಕ ಸುರೇಶ್‌ ಆನಗಳ್ಳಿ, ಕತೆಗಾರ ವಸುಧೇಂದ್ರ ಹಾಗೂ ರಂಗ ಸಂಘಟಕ ಶ್ರೀನಿವಾಸ್‌ ಜಿ ಕಪ್ಪಣ್ಣ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. 2009ರಲ್ಲಿ ಸಂಚಾರಿ ಥಿಯೇಟರ್‌ಗೆ ಪಾದಾರ್ಪಣೆ ಮಾಡಿದ ವಿಜಯ್‌ ಅವರು ಸಂಚಾರಿ ಥಿಯೇಟರ್‌ನ ಎಲ್ಲ ನಾಟಕಗಳ ಭಾಗವಾಗಿದ್ದರು. ರಂಗಭೂಮಿಯ ಕೆಲಸಗಳ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ ಅವರು ನಾಟಕಗಳಲ್ಲಿ ನಟಿಸುತ್ತಿದ್ದರು. 

ಸಂಚಾರಿ ಥಿಯೇಟರ್‌ನಲ್ಲಿ ನಟನೆ, ನಿರ್ದೇಶನ ಸೇರಿದಂತೆ ರಂಗ ಚಟುವಟಿಕೆಗಳ ಭಾಗವಾಗಿದ್ದ ಸಂಚಾರಿ ವಿಜಯ್‌, 27 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟವರು. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ ಅತ್ಯುನ್ನತ ಕೆಲಸಗಳನ್ನು ಮಾಡಿದವರು. ಇಂಥ ನಟನ ನೆನಪಿನಲ್ಲಿ ಸಂಚಾರಿ ಥಿಯೇಟರ್‌ ನಾಟಕೋತ್ಸವ ಆಯೋಜಿಸಿದೆ.

ಸಂಚಾರಿ ವಿಜಯ್ ಹುಟ್ಟುಹಬ್ಬ; 'ರಾಷ್ಟ್ರ ಪ್ರಶಸ್ತಿ' ವಿಜೇತ ನಟನನ್ನು ನೆನೆದ ಆಪ್ತರು

ಸಂಚಾರಿ ವಿಜಯ್‌ ಹಿನ್ನಲೆ: ‘ನಾನು ಅವನಲ್ಲ ಅವಳು’ ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಪ್ರತಿಭೆ ಸಂಚಾರಿ ವಿಜಯ್‌. ರಂಗಾಯಣದ ಮಂಗಳಾ ಅವರು ಕಟ್ಟಿಬೆಳೆಸಿದ ‘ಸಂಚಾರಿ ಥಿಯೇಟರ್‌’ ಮೂಲಕ ರಂಗಭೂಮಿ ಪ್ರವೇಶಿಸಿದ ವಿಜಯ್‌ ಆರಂಭದಲ್ಲಿ ಚಿಕ್ಕ ಪುಟ್ಟ ಪಾತ್ರಗಳ ಮೂಲಕವೇ ಚಿತ್ರರಂಗದ ಗಮನ ಸೆಳೆದವರು. ಪ್ರಕಾಶ್‌ ರಾಜ್‌ ಅಭಿನಯದ ‘ಒಗ್ಗರಣೆ’ ಚಿತ್ರದಲ್ಲಿನ ಅವರ ತೃತೀಯ ಲಿಂಗಿ ಪಾತ್ರದಲ್ಲಿನ ನಟನೆ, ಅವರನ್ನು ಬಿ ಎಸ್‌ ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರದ ಕೇಂದ್ರಪಾತ್ರದಲ್ಲಿ ಅಭಿನಯಿಸುವಂತೆ ಮಾಡಿತು. 

ಅರವಿಂದ ಕುಪ್ಳೀಕರ್‌ ನಿರ್ದೇಶನದ ‘ಪುಕ್ಸಟ್ಟೆಲೈಫು’ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಅವರ ನಟನೆ ಕಂಡು ಅನೇಕರು ಕೊಂಡಾಡಿದರು, ಆದರೆ ಆ ಹೊತ್ತಿಗಾಗಲೇ ವಿಜಯ್‌ ಇಹದ ಜರ್ನಿ ಮುಗಿಸಿ ಆಗಿತ್ತು. ಅನೇಕ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿ ಪ್ರತಿಭಾವಂತ ಎಂದು ಗುರುತಿಸಿಕೊಂಡ ವಿಜಯ್‌ ಅವರನ್ನು ಬಲಿ ತೆಗೆದುಕೊಂಡದ್ದು ಬೈಕ್‌ ಅಪಘಾತ. ಕೋವಿಡ್‌ ಸಮಯ ಅನೇಕ ಮಂದಿಗೆ ಸಹಾಯ ಹಸ್ತ ಚಾಚಿದ್ದ ಈ ನಟ ಸಮಾಜ ಸೇವೆಯ ಮೂಲಕವೂ ಗುರುತಿಸಿಕೊಂಡವರು. ತಮ್ಮ ದೇಹದಾನ ಮಾಡುವ ಮೂಲಕ ಮಾದರಿಯಾದವರು.

ಕಾಡಲ್ಲೊಂದು ಮಾಫಿಯಾ, ಕಾಪಾಡದ ಮಾಯಾವಿ

ಸಂಚಾರಿ ವಿಜಯ್‌ ಪುತ್ಥಳಿ ಅನಾವರಣ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್‌ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ. ಸಂಚಾರಿ ವಿಜಯ್‌ ಅವರ ಹುಟ್ಟೂರಾದ ಪಂಚನಹಳ್ಳಿಯ ಅವರ ತೋಟದಲ್ಲಿ ಪುತ್ಥಳಿಯನ್ನು ಕುಟುಂಬದ ಸದಸ್ಯರು ಅನಾವರಣ ಮಾಡಿದ್ದಾರೆ. ಕಲ್ಲಿನಿಂದ ಕೆತ್ತಲಾಗಿರುವ ವಿ ಅಕ್ಷರದ ಮೇಲೆ ಸಂಚಾರಿ ವಿಜಯ್‌ ಅವರ ಪುತ್ಥಳಿಯನ್ನು ರೂಪಿಸಲಾಗಿದೆ. ಪುಣ್ಯ ತಿಥಿಯ ಜತೆಗೆ ಹೀಗೆ ಪುತ್ಥಳಿಯನ್ನೂ ಸಹ ನಿರ್ಮಿಸುವ ಮೂಲಕ ಮರೆಯಲಾಗದ ನಟನನ್ನು ಅಜರಾಮರವಾಗಿಸಿದ್ದಾರೆ. ಸಂಚಾರಿ ವಿಜಯ್‌ ಅವರ ಈ ವಿಶೇಷ ಪುತ್ಥಳಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಳ್ಳುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ.

Follow Us:
Download App:
  • android
  • ios