ಮ್ಯಾನ್‌ಹೋಲ್‌ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಯ್ತು: ಸಂಚಾರಿ ವಿಜಯ್ ಸ್ನೇಹಿತನ ಸ್ಪಷ್ಟನೆ!

 ರಸ್ತೆ ಅಪಘಾತದಿಂದ ಮೃತಪಟ್ಟ ಕನ್ನಡದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಕೊನೆಯ ಕ್ಷಣದ ಬಗ್ಗೆ ಸ್ನೇಹಿತ ಬ್ರಿಜೇಶ್ ಮಾತನಾಡಿದ್ದಾರೆ. 
 

Sanchari Vijay friend Brijesh clarifies about accident vcs

ಜೂನ್ 14ರಂದು ರಸ್ತೆ ಅಪಘಾತದಿಂದ ಮೃತಪಟ್ಟ ನಟ ಸಂಚಾರಿ ವಿಜಯ್‌ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿ, 7 ಜನರ ಜೀವನಕ್ಕೆ ಬೆಳಕಾಗಿದ್ದಾರೆ. ತಡ ರಾತ್ರಿ ವಿಜಯ್ ಎಲ್ಲಿ ಹೋಗಿದ್ದರು? ಅಪಘಾತ ಹೇಗಾಯ್ತು ಎಂಬ ಬಗ್ಗೆ ವಿಜಯ್‌ ಅವರ ಮನೆಯಲ್ಲಿಯೇ ವಾಸವಾಗಿರುವ ಸ್ನೇಹಿತ ಬ್ರಿಜೇಶ್ ಕನ್ನಡದ ಯುಟ್ಯೂಬ್‌ ಚಾನಲ್‌ಗೆ ಮಾಹಿತಿ ನೀಡಿದ್ದಾರೆ. 

ಘಟನೆ ಬಗ್ಗೆ ಬ್ರಿಜೇಶ್ ಮಾತು:
'ಸ್ನೇಹಿತ ನವೀನ್ ಮನೆಯಲ್ಲಿ ಸಂಚಾರಿ ವಿಜಯ್, ಇನ್ನೊಬ್ಬ ಸ್ನೇಹಿತ ಹಾಗೂ ನಾನು ಮಾತನಾಡಿಕೊಂಡು ಇದ್ವಿ. ಅಷ್ಟರಲ್ಲಿ ನವೀನ್ ಪತ್ನಿ ಊಟ ತಯಾರಿಸಿದ್ದರು. ಈ ವೇಳೆ ಮೆಡಿಕಲ್‌ ಶಾಪಿಗೆ ಹೋಗಬೇಕು ಎಂದು ನವೀನ್ ನೆನಪಿಸಿದರು.  ನವೀನ್ ಬಳಿ ಒಂದು ಸೂಪರ್ ಬೈಕ್ ಇದೆ. ನಾವೆಲ್ಲರೂ ಅದನ್ನು ನೋಡಿದ್ದೀವಿ. ಆದರೆ ವಿಜಯ್ ನೋಡಿರಲಿಲ್ಲ. ನೋಡಿಕೊಂಡು ಬರೋಣ ಅಂತ ಇಬ್ಬರೂ ಹೋದರು. ನಾನು ಹೋಗಲಿಲ್ಲ. ಇಬ್ಬರೂ ಒಟ್ಟಿಗೆ ಬೇಸ್‌ಮೆಂಟ್‌ಗೆ ಹೋದರು,' ಎಂದು ಶನಿವಾರ ತಡರಾತ್ರಿ ನಡೆದ ಘಟನೆ ಬಗ್ಗೆ ಬ್ರಿಜೇಶ್ ವಿವರಿಸಿದ್ದಾರೆ.

Sanchari Vijay friend Brijesh clarifies about accident vcs

'ಬೇಸ್‌ಮೆಂಟ್‌ನಲ್ಲಿ ಬೈಕ್‌ ನೋಡುತ್ತಿರುವಾಗ ನವೀನ್ ಮೆಡಿಕಲ್‌ ಶಾಪಿಗೆ ಹೋಗಿ ಬರುತ್ತೀವಿ. ನೀವು ಮನೆಗೆ ಹೋಗಿರಿ ಅಂತ ವಿಜಯ್‌ಗೆ ಹೇಳಿದ್ದರು. ಆದರೆ ನಾನು ಬರ್ತಿನಿ ಅಂತ ವಿಜಯ್ ಚಪ್ಪಲಿಯನ್ನೂ ಹಾಕದೇ ಬೈಕ್ ಏರಿದರು. ಅದಕ್ಕೆ ಹೆಲ್ಮೆಟ್ ಕೂಡ ಹಾಕಿರಲಿಲ್ಲ. ಮನೆಯಿಂದ ಕೇವಲ 5 ನಿಮಿಷ ದೂರುದಲ್ಲಿ ಆ್ಯಕ್ಸಿಡೆಂಟ್ ಆಗಿದ್ದು. ಮತ್ತೊಬ್ಬ ಸ್ನೇಹಿತ ಕರೆ ಮಾಡಿ ಹೇಳಿದ, ನಾನು ನಂಬಲೇ ಇಲ್ಲ. ನಾನು ಬರಲಿಲ್ಲ ಅಂತ ಇಬ್ಬರೂ ಸುಳ್ಳು ಹೇಳುತ್ತಿದ್ದಾರೆ ಎಂದುಕೊಂಡೆ. ಆಮೇಲೆ ಅಲ್ಲಿ ಹೋಗಿ ನೋಡಿದರೆ ಇಬ್ಬರೂ ಬಿದ್ದಿದ್ದರು. ವಿಜಯ್‌ ತೆಲೆಗೆ ಪೆಟ್ಟು ಬಿದ್ದು, ರಕ್ತ ಸ್ರಾವ ಅಗುತ್ತಿತ್ತು. ನವೀನ್ ಒದ್ದಾಡುತ್ತಿದ್ದ. ಕೂಡಲೇ ಕಾರು ತೆಗೆದುಕೊಂಡು ವಿಜಯ್‌ನ ಹಿಂಬದಿ ಮಲಗಿಸಿ, ನವೀನ್‌ನ ಮುಂದೆ ಕೂರಿಸಿ ಅಪೋಲೋಗೆ ಕೆರೆದು ಕೊಂಡು ಹೋದೆವು,' ಎಂದಿದ್ದಾರೆ.

ಅವೈಜ್ಞಾನಿಕ ಟಾರಿನಿಂದ ಮೈಸೂರು ರಸ್ತೇಲಿ ಗಾಡಿ ಸ್ಕಿಡ್; ನಟಿ ಸುನೇತ್ರಾ ಪಂಡಿತ್ ಪೋಸ್ಟ್ ವೈರಲ್! 

'ಅಪೋಲೋದಲ್ಲಿ ಕಂಡಿ‍ಷನ್ ಗಂಭಿರವಾಗಿದೆ. ಬೆಡ್ ಇಲ್ಲ. ಆಪರೇಷನ್ ಥಿಯೇಟರ್‌ ಸಹ ಬ್ಯುಸಿಯಾಗಿದೆ ಅಂದ್ರು. ಸ್ನೇಹಿತರ ಮೂಲಕ ಸುದೀಪ್‌ ಅವರನ್ನು ಸಂಪರ್ಕಿಸಿದೆವು. ಅದಾದ ಬಳಿಕ ಡಾ.ಅರುಣ್ ನಾಯಕ್ ಬಂದು ಚಿಕಿತ್ಸೆ ವ್ಯವಸ್ಥೆ ಮಾಡಿದರು. ರಾತ್ರಿ 11.50ರೊಳಗೆ ಆಸ್ಪತ್ರೆ ತಲುಪಿದೆವು. ಮೂರು ಗಂಟೆಯಲ್ಲಿ ಆಪರೇಷನ್ ಮುಗಿಯಿತು. ಒಂದು ಹಂತದ ಸರ್ಜರಿ ಮುಗಿದಿದೆ. ಪರಿಸ್ಥಿತಿ ಗಂಭೀರವಾಗಿದೆ. ಪ್ರಜ್ಞೆ ಬಂದಿಲ್ಲ. ಏಳು ದಿನ ಕಾದು ನೋಡೋಣ ಅಂದ್ರು. ನಾಳೆ ಸಂಜೆಯೊಳಗೆ ಸ್ವಲ್ಪನಾದರೂ ಪ್ರತಿಕ್ರಿಯಿಸಬೇಕು ಅಂದರು. ನವೀನ್ ಬಳಿ ಆ್ಯಕ್ಸಿಡೆಂಟ್ ಬಗ್ಗೆ ಕೇಳಿದೆ. ಮನೆಯಿಂದ ಮೆಡಿಕಲ್‌ಗೆ ಹೋಗಿ ವಾಪಸ್ ಬರಬೇಕಾದರೆ ಆಕ್ಸಿಡೆಂಟ್ ಆಗಿದೆ. ಪರ್ಸ್‌ ಮರೆತಿದ್ವಿ ಅಂತ ವಾಪಸ್ ಬಂದ್ವಿ, ರಸ್ತೆಯಲ್ಲಿ ಮ್ಯಾನ್‌ಹೋಲ್‌ ಇತ್ತು. ಅದನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಯ್ತು ಅಂತ ಹೇಳಿದರು. ಮನೆಯಿಂದ ಕೇವಲ 50 ಮೀ. ಅಂತರದಲ್ಲಿಯೇ ಈ ಅಪಘಾತ ಆಗಿದೆ. ಅತಿಯಾದ ವೇಗವೂ ಇರಲಿಲ್ಲ,' ಎಂದು ಬ್ರಿಜೇಶ್ ಹೇಳಿದ್ದಾರೆ.

ಒಟ್ಟಿನಲ್ಲಿ ಕರುನಾಡಿಗೆ ಈ ಅಪಘಾತ ದೊಡ್ಡ ನಷ್ಟವನ್ನು ತಂದಿದೆ. ವಿಧಿಯಾಟವೇನೋ ಎಂಬುವಂತೆ ಈ ಘಟನೆ ನಡೆದು, ವಿಜಯ್ ಪ್ರಾಣವನ್ನು ತೆಗೆದುಕೊಂಡಿದೆ.

Latest Videos
Follow Us:
Download App:
  • android
  • ios