ಭಾನುವಾರ ರಾತ್ರಿಯಿಡಿ ಚಿತ್ರದ ಫ್ರೀ ರಿಲೀಸ್ ಇವೆಂಟ್| ಉತ್ತರ ಕರ್ನಾಟಕ ಜನತೆಗೆ ಮತ್ತೇರುವಂತೆ ಮಾಡಿದ ರಾಬರ್ಟ್| ದರ್ಶನ್, ಪ್ರಭಾಕರ ಪುತ್ರ ವಿನೋದ ಪ್ರಭಾಕರ, ಸುಧೀರ್ ಪುತ್ರ ತರುಣ್ ಸುಧೀರ್ ಕಂಡು ಸಂಭ್ರಮಿಸಿದ ಜನತೆ|
ಹುಬ್ಬಳ್ಳಿ(ಮಾ.01): ಸಾವಿರಾರು ಮೊಬೈಲ್‌ಗಳ ಟಾರ್ಚ್ ಮಿಣುಕು, ಅಭಿಮಾನದ ವೆಲ್‌ಕಮ್ ಡಿ ಬಾಸ್ ಕೂಗು... ರಾಬರ್ಟ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಯೋಜನೆ ಆಗಿದ್ದ ಹುಬ್ಬಳ್ಳಿಯ ದೇಸಾಯಿ ಸರ್ಕಲ್ ರೈಲ್ವೆ ಮೈದಾನದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಕಾದಿದ್ದ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಂಡೊಡನೆ ಪುಳಕಿತರಾಗಿ ಸ್ವಾಗತಿಸಿದ್ದು ಹೀಗೆ..
ಭಾನುವಾರ ರಾತ್ರಿಯಿಡಿ ಚಿತ್ರತಂಡ ಹುಬ್ಬಳ್ಳಿಯಲ್ಲಿ ನೆರೆದು ಉತ್ತರ ಕರ್ನಾಟಕ ಜನತೆಗೆ ರಾಬರ್ಟ್ ಮತ್ತೇರುವಂತೆ ಮಾಡಿತು. ಅದರಲ್ಲೂ ಲೆಜೆಂಡ್ ನಟರಾದ ತೂಗುದೀಪ ಶ್ರೀನಿವಾಸ ಪುತ್ರ ದರ್ಶನ್, ಪ್ರಭಾಕರ ಪುತ್ರ ವಿನೋದ ಪ್ರಭಾಕರ, ಸುಧೀರ್ ಪುತ್ರ ತರುಣ್ ಸುಧೀರ್ ಕಂಡು ಸಂಭ್ರಮಿಸಿದ್ದಾರೆ.
ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ದರ್ಶನ್, ಉತ್ತರ ಕರ್ನಾಟಕದ ಸೊಗಡಿನಲ್ಲಿ ಚಿತ್ರಗಳನ್ನು ಮಾಡಿದಾಗ ಈ ಭಾಗದ ಜನತೆ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಮಾ. 11ರಂದು ಬಿಡುಗಡೆಯಾಗುತ್ತಿರುವ ರಾಬರ್ಟ್ ಸಿನಿಮಾವನ್ನೂ ಸಿನಿಮಾ ಮಂದಿರಕ್ಕೆ ಬಂದು ನೋಡಿ ಹರಸಿ ಎಂದರು.
ಧಾರವಾಡ; ಕೊನೆಗೂ ದರ್ಶನ ನೀಡದ ದರ್ಶನ್.. ಕಾದಿದ್ದೆ ಬಂತು
ನಟರಾದ ದೇವರಾಜ್, ರವಿಶಂಕರ್, ವಿನೋದ್ ಪ್ರಭಾಕರ್ ಮಾತನಾಡಿ, ರೊಟ್ಟಿ ಮುರಿಯುವ ಹೊತ್ತಿನಲ್ಲಿ ನಮ್ಮ ಮೇಲಿನ ಅಭಿಮಾನಕ್ಕಾಗಿ ಆಗಮಿಸಿದ್ದಕ್ಕಾಗಿ ಶರಣಾರ್ಥಿ. ಚಿತ್ರಮಂದಿರಕ್ಕೆ ಬಂದು ರಾಬರ್ಟ್ ನೋಡಿ ಹರಸಿ ಎಂದು ಕೇಳಿಕೊಂಡರು.
ನೃತ್ಯದ ಮೂಲಕ ರಂಜಿಸಿದ ನಾಯಕ ನಟಿ ಆಶಾ ಭಟ್, ಮೊದಲ ಸಿನಿಮಾದಲ್ಲಿ ದರ್ಶನ್ ಜತೆಗೆ ಅಭಿನಯಿಸುವ ಅವಕಾಶ ಸಿಗುವ ಕನಸೂ ಇರಲಿಲ್ಲ. ಚಿತ್ರದಲ್ಲಿ ದರ್ಶನ ಸರ್, ನಿರ್ದೇಶಕ ತರುಣ್ ಅವರಿಂದ ಸಾಕಷ್ಟುಕಲಿತಿದ್ದೇನೆ. ನನಗೆ ಉತ್ತಮ ಪಾತ್ರವನ್ನು ನೀಡಿದ್ದಾರೆ ಎಂದು ಚಿತ್ರೀಕರಣದ ನೆನಪು ಬಿಚ್ಚಿಟ್ಟರು.
200 ಕಿಮೀ ದೂರದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರೂ ರಾಬರ್ಟ್‌ಗಾಗಿ ಹುಬ್ಬಳ್ಳಿಗೆ ಬಂದಿದ್ದ ನಟ ಶರಣ್, ಇದೊಂದು ಅದ್ಭುತ ತಂಡ. ಈ ತಂಡ ಸೇರಿದಾಗಲೇ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಸ್ಯಾಂಡಲ್ ವುಡ್‌ಗೆ ಪಕ್ಕಾ ಆಗಿದೆ ಎಂದರು.
ನಟ ಅಭಿಷೇಕ್ ಅಂಬರೀಶ್, ಹಾಸ್ಯನಟ ಚಿಕ್ಕಣ್ಣ, ಶಿವರಾಜ ಕೆ.ಆರ್. ಪೇಟೆ ಅಭಿಮಾನಿಗಳನ್ನು ರಂಜಿಸಿದರು.
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಚಲನಚಿತ್ರದ ಯಶಸ್ಸಿಗೆ ಉತ್ತರ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ದರ್ಶನ ಅವರ ರಾಬರ್ಟ್ ಚಲನಚಿತ್ರ ಬಾಕ್ಸ್ ಆಫೀಸ್ ದಾಖಲೆ ಬರೆಯಲಿ ಎಂದು ಶುಭ ಕೋರಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್, ರಾಬರ್ಟ್ ಓಟ ನಿಲ್ಲಿಸುವುದು, ದರ್ಶನ್ ಮೇಲೆ ಹೋಗುವುದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದರು.
