ರ‌್ಯಾಪಿಡ್ ರಶ್ಮಿ ಇದೀಗ ರ‌್ಯಾಪ್ ಸಾಂಗ್ ಜೊತೆಗೆ ಬರುತ್ತಿದ್ದಾರೆ! ‘ಇಂಡಿಪೆಂಡೆಂಟೋ’ ಹೆಸರಿನ ಈ ರ‌್ಯಾಪ್‌ನ ಟೀಸರ್ ಹಾಗೂ ಮೋಶನ್ ಪಿಕ್ಚರ್ ಮಹಿಳಾ ದಿನ ವಿಶೇಷವಾಗಿ ಇಂದು ಬಿಡುಗಡೆಯಾಗುತ್ತದೆ. ಚಂದನ್ ಶೆಟ್ಟಿ ಅವರ ಜೊತೆಗೆ ಕೆಲಸ ಮಾಡಿರೋ ಸಚಿನ್ ಬಗಲಿ ಇದಕ್ಕೆ ಸಂಗೀತ ನೀಡಿದ್ದಾರೆ. ಸಾಹಿತ್ಯ ರಶ್ಮಿ ಹಾಗೂ ಭರತ್ ಅವರದು. ಮಾರ್ಚ್ ತಿಂಗಳ ಕೊನೆಯಲ್ಲಿ ಯೂಟ್ಯೂಬ್‌ನಲ್ಲಿ ಕೇಳಲಿಕ್ಕೆ, ನೋಡಲಿಕ್ಕೆ ಸಿಗುತ್ತೆ. ಹಳೆಯ ತಗಡು ನಂಬಿಕೆಗಳನ್ನೆಲ್ಲ ಒತ್ತಟ್ಟಿಗಿಟ್ಟು ಹೆಣ್ಣು ಹೇಗೆ ಸ್ಟ್ರಾಂಗ್ ಆಗ್ಬೇಕು ಅನ್ನೋದು ಈ ಹಾಡಿನ ಹೈಲೈಟ್.

‘ಹುಡ್ಗೀರ ಲೈಫ್‌ಗೆ ಪಂಪ್ ಹೊಡಿಯೋಕೆ ಈ ಒಂದ್ ಹಾಡು/ ಗಂಡು ದೇವ್ರ ಕೇಳ್ತಾ ಇದ್ರೆ ಓ ಮೈ ಗಾಡೂ’ ಎಂಬಂಥಾ ಮಜವಾದ ಸಾಲುಗಳು ಇದರಲ್ಲಿವೆ. ರ‌್ಯಾಪಿಡ್ ರಶ್ಮಿಗೆ ಸೊಗಸಾಗಿ ಹಾಡೋದಕ್ಕೂ ಬರುತ್ತೆ ಅನ್ನೋದು ಬಿಗ್ ಬಾಸ್‌ನಲ್ಲೇ ರಿವೀಲ್ ಆಗಿತ್ತು. ಅವರ ಹಾಡುಗಳನ್ನ ಕೇಳಿ ಖುಷಿಪಟ್ಟ ವೀಕ್ಷಕರು ರಶ್ಮಿಗೆ ನೀವ್ಯಾಕೆ ಸಿಂಗರ್ ಆಗ್ಬಾರ್ದು ಅಂತ ಕೇಳ್ತಾನೇ ಇದ್ರಂತೆ. ರಶ್ಮಿಗೂ ಹೀಗೊಂದು ಪ್ರಯತ್ನ ಮಾಡಬಾರದೇಕೆ ಅನಿಸಿದೆ. ಮಾಮೂಲಿ ಹಾಡು ಹಾಡೋದಕ್ಕಿಂತ ತನ್ನ ಕಂಠಕ್ಕೆ ಸರಿಹೊಂದುವ ರ‌್ಯಾಪ್ ಸಾಂಗ್ ಹಾಡಿದ್ರೆ ಬೆಸ್ಟ್ ಅಂದುಕೊಂಡು ಆ ಡೈರೆಕ್ಷನ್‌ನಲ್ಲೇ ಒಂದಿಷ್ಟು ಯೋಚನೆ ಮಾಡಿದ್ದಾರೆ. ಆಗ ಹೊಳೆದದ್ದು ಇಂಡಿಪೆಂಡೆಂಟೋ!