ಕರ್ನಾಟಕದಲ್ಲಿ KGF-2 ದಾಖಲೆ ಬ್ರೇಕ್ ಮಾಡಿದ 'ಕಾಂತಾರ'; 400 ಕೋಟಿ ರೂ. ದಾಟಿದ ರಿಷಬ್ ಸಿನಿಮಾ ಕಲೆಕ್ಷನ್
ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಅನೇಕ ಕಡೆ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಕಾಂತಾರ ಅಬ್ಬರ ಮುಂದುವರೆದಿದೆ. ಕಾಂತಾರ ನೋಡಿ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರ ಜೊತೆಗೆ ಸಿನಿ ಗಣ್ಯರು ಸಹ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಮನಸೋತಿದ್ದಾರೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಅನೇಕ ಸಿನಿಮಾ ಗಣ್ಯರು ಕನ್ನಡ ಕಾಂತಾರ ನೋಡಿ ಹಾಡಿಹೊಗಳಿದ್ದಾರೆ. ಇದೀಗ ಕಾಂತಾರ ಕಡೆಯಿಂದ್ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ರಿಷಬ್ ಶೆಟ್ಟಿ ಕಾಂತಾರ ಸಿನಿಮಾ 400 ಕೋಟಿ ರೂಪಾಯಿ ಗಟಿ ದಾಟಿದೆ. ಈ ಮೂಲಕ ಕಾಂತಾರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ 2ನೇ ಸಿನಿಮಾ ಎನ್ನುವ ಹೆಗ್ಗಳಿಕೆ ಪಡೆದಿದೆ.
ಕಾಂತಾರ 15 ಕೋಟಿ ಬಜೆಟ್ ನಲ್ಲಿ ತಯಾರಾದ ಸಿನಿಮಾ. ಕಡಿಮೆ ವೆಚ್ಚದಲ್ಲಿ ಬಂದ ಕಾಂತಾರ 400 ಕೋಟಿ ಜೇಬಿಗಿಳಿಸಿರುವುದು ಸಿನಿಮಾತಂಡಕ್ಕೆ ಮತ್ತು ಸ್ಯಾಂಡಲ್ ವುಡ್‌ಗೆ ಹೆಮ್ಮೆಯ ವಿಚಾರವಾಗಿದೆ. ಕಾಂತಾರ ಕಲೆಕ್ಷನ್ ಪಕ್ಕ ಲೆಕ್ಕವನ್ನು ಸಿನಿಮಾ ವಿಶ್ಲೇಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.
ಕಾಂತಾರ ಸಿನಿಮಾ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದಹಾಗೆ ಕರ್ನಾಟಕದಲ್ಲಿ ಅತೀ ಹೆಚ್ಚು ಟೆಕೆಟ್ ಮಾರಾಟವಾದ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿದೆ. ಇತ್ತೀಚಿನ ವರದಿ ಪ್ರಕಾರ ಕಾಂತಾರ ಕರ್ನಾಟಕದಲ್ಲಿ ಬರೋಬ್ಬರಿ 1ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗಿತ್ತು. ಸದ್ಯ ಕರ್ನಾಟಕದಲ್ಲಿ ಕಾಂತಾರ ಸಿನಿಮಾ 168. 50 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ ಕಾಂತಾರ ಕರ್ನಾಟಕದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಕೆಜಿಎಫ್-2 ಗಳಿಕೆ ಬ್ರೇಕ್ ಮಾಡಿದೆ.
kantara ನೋಡಿ ಕಣ್ಣೀರು ಬಂತು; ರಿಷಬ್ ಶೆಟ್ಟಿ ನಟನೆಗೆ ಸುನಿಲ್ ಶೆಟ್ಟಿ ಫಿದಾ
ಇನ್ನು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಂಧ್ರ ತೆಲಂಗಾಣದಲ್ಲಿ 60 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ತಮಿಳುನಾಡಿನಲ್ಲಿ 12.70 ಕೋಟಿ ರೂಪಾಯಿ, ಕೇರಳದಲ್ಲಿ 19.20 ಕೋಟಿ ರೂಪಾಯಿ, ಏವರ್ ಸೀಸ್ 44.50 ಕೋಟಿ ರೂಪಾಯಿ ಹಾಗೂ ಉತ್ತರ ಭಾರತದಲ್ಲಿ 96 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಗೆದ್ದು ಬೀಗಿದೆ.
ಕಾಂತಾರ ಸಿನಿಮಾ ಒಟಿಟಿ ರಿಲೀಸ್ ಬಗ್ಗೆ ಚರ್ಚೆಯಾಗುತ್ತಿದೆ. ಸಿನಿಮಾ 400 ಕೋಟಿ ಕ್ಲಬ್ ಸೇರಲಿ ಎಂದು ಕಾಯುತ್ತಿದ್ದಾರೆ ಎನ್ನಲಾಗಿತ್ತು. ಇದೀಗ 400 ಕೋಟಿಯ ಗಟಿ ದಾಟಿ ಮುನ್ನುಗ್ಗುತ್ತಿದೆ. ಹಾಗಾಗಿ ನವೆಂಬರ್ 24ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ ಎನ್ನಲಾಗಿದೆ. ಈಗಾಗಲೇ ಅಮೆಜಾನ್ ಪ್ರೈಮ್ ಸಿನಿಮಾ ಖರೀದಿಸಿದ್ದು ನವೆಂಬರ್ 24ಕ್ಕೆ ರಿಲೀಸ್ ಮಾಡಲಿದೆ ಎನ್ನಲಾಗಿದೆ. ಈ ಬಗ್ಗೆ ಸಿನಿಮಾತಂಡನೇ ಅಧಿಕೃತ ಮಾಹಿತಿ ನೀಡಬೇಕಿದೆ.
ಅಂಕೋಲಾ ದಹಿಂಕಾಲ ಉತ್ಸವದಲ್ಲಿ ಗಮನ ಸೆಳೆದ ಕಾಂತಾರ ಸ್ತಬ್ಧ ಚಿತ್ರ; ಜನರು ಫಿದಾ
ಕಾಂತಾರ ಬಗ್ಗೆ,
ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ನಾಯಕಿಯಾಗಿ ಸಪ್ತಮಿ ಗೌಡ ಬಣ್ಣ ಹಚ್ಚಿದ್ದಾರೆ. ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರ ಹೃದಯ ಗೆದ್ದಿವೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದೆ.