ವಿಶ್ವಾದ್ಯಂತ ಜನಮನ ಗೆದ್ದ ಕರಾವಳಿ ಕತೆಯ ಸಿನಿಮಾ ತವರು ಭಾಷೆಯಲ್ಲಿ ತೆರೆಗೆ

ರಿಷಬ್‌ ಶೆಟ್ಟಿನಿರ್ದೇಶನದ ‘ಕಾಂತಾರ’ ಕನ್ನಡ ಚಿತ್ರ ದೇಶ, ವಿದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಸೂರೆಗೊಳ್ಳುತ್ತಿರುವುದು ಮುಂದುವರಿಯುತ್ತಿದ್ದಂತೆ ಇತ್ತ ಕರಾವಳಿಯ ತುಳು ಭಾಷೆಗೂ ಡಬ್ಬಿಂಗ್‌ ಆಗಿ ‘ಕಾಂತಾರ’ ಹೆಸರಿನಲ್ಲೇ ಡಿ.2ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.

ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್‌ ಆಗಿ ಕೋಟ್ಯಂತ ಮೊತ್ತ ಬಾಚುತ್ತಿರುವ, ಹಿಂದಿನ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕುತ್ತಿರುವ ಕಾಂತಾರ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ.

ಮಂಗಳೂರಿನ ಪಿವಿಆರ್‌, ಸಿನಿ ಪೊಲೀಸ್‌, ಬಿಗ್‌ ಸಿನಿಮಾಸ್‌, ಸಿನಿ ಗ್ಯಾಲಕ್ಸಿ ಸುರತ್ಕಲ್‌, ಭಾರತ್‌ ಸಿನಿಮಾಸ್‌ ಪಡುಬಿದ್ರಿ, ಉಡುಪಿಯ ಮಲ್ಟಿಪ್ಲೆಕ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಕಾಂತಾರ ತುಳುವಿನಲ್ಲಿ ಅಬ್ಬರಿಸುವ ಸಾಧ್ಯತೆ ಇದೆ. ಕಳೆದ ಮೂರು ವರ್ಷಗಳಿಂದ ತುಳು ಸಿನಿಮಾ ಪ್ರದರ್ಶನದಿಂದ ದೂರ ಇದ್ದ ಸುಚಿತ್ರಾ ಪ್ರಭಾತ್‌ ಟಾಕೀಸ್‌ನಲ್ಲೂ ಈ ಬಾರಿ ಕಾಂತಾರ ಪ್ರವೇಶ ಮಾಡುತ್ತಿದೆ. ಅಲ್ಲಿ ಬೆಳಗ್ಗೆ ಮತ್ತು ಸಂಜೆ ದಿನದಲ್ಲಿ ಎರಡು ಶೋ ನಿಗದಿಯಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನದಲ್ಲಿ ಮೂರ್ನಾಲ್ಕು ಶೋ ನಿಗದಿಯಾಗಿದ್ದು, ಮೊದಲ ದಿನ ಮುಂಗಡ ಬುಕ್ಕಿಂಗ್‌ ಅಷ್ಟಾಗಿ ಕಂಡುಬಂದಿಲ್ಲ.

ಬುಕ್‌ ಮೈ ಶೋದಲ್ಲಿ ಕಾಂತಾರ ತುಳು ಪೋಸ್ಟರ್‌ ಸದ್ದುಮಾಡುತ್ತಿದ್ದು, ಈಗಾಗಲೇ 1,700 ಮಂದಿ ಲೈಕ್‌ ಮಾಡಿದ್ದಾರೆ.

ಕಾಪಿಕಾಡ್‌ ತಂದೆ, ಮಗನ ಕಂಠದಾನ:

ತುಳು ಭಾಷಿಗರ ಕುತೂಹಲ ಕೆರಳಿಸಿರುವ ಕಾಂತಾರ ತುಳು ಸಿನಿಮಾ ವಿಭಿನ್ನವಾಗಿ ಕರಾವಳಿಯ ಆಡುಭಾಷೆಯಲ್ಲಿ ಮೂಡಿಬರುವಂತೆ ಚಿತ್ರತಂಡ ಪ್ರಯತ್ನ ನಡೆಸಿದೆ. ಶಿವನ ಪಾತ್ರ(ರಿಷಬ್‌ ಶೆಟ್ಟಿ)ಕ್ಕೆ ಅರ್ಜುನ್‌ ಕಾಪಿಕಾಡ್‌, ಲೀಲಾ(ಸಪ್ತಮಿ ಗೌಡ)ಪಾತ್ರಕ್ಕೆ ಪ್ರಾರ್ಥನಾ ಸುದರ್ಶನ್‌, ಅರಣ್ಯಾಧಿಕಾರಿ(ಕಿಶೋರ್‌) ಪಾತ್ರಕ್ಕೆ ಶಶಿರಾಜ್‌ ಕಾವೂರು, ಧನಿ(ಅಚ್ಚುತ ಕುಮಾರ್‌) ಪಾತ್ರಕ್ಕೆ ದೇವದಾಸ್‌ ಕಾಪಿಕಾಡ್‌ ಡಬ್ಬಿಂಗ್‌ನಲ್ಲಿ ಸ್ವರ ದಾನ ಮಾಡಿದ್ದಾರೆ. ಹಾಡುಗಳನ್ನು ಬಹುತೇಕ ಕನ್ನಡದಲ್ಲೇ ಉಳಿಸಿಕೊಳ್ಳಲಾಗಿದೆ. ಕಾಂತಾರದಲ್ಲಿ ಶಿವನ ಸ್ನೇಹಿತ ಬುಲ್ಲಾನ ಪಾತ್ರ ಮಾಡಿದ ಮಂಗಳೂರಿನ ಸನಿಲ್‌ ಗುರು ತುಳು ಅವತರಣಿಕೆಯ ನಿರ್ವಹಣೆ ಮಾಡಿದ್ದಾರೆ.

Dislocated Shoulder: 'ಕಾಂತಾರ'ದ ಹೀರೋ ರಿಷಬ್ ಶೆಟ್ಟಿ ಅನುಭವಿಸಿದ ಭುಜದ ಸಮಸ್ಯೆಯೇನು ?

ಇಳಕಲ್‌ ಸೀರೆಯ ಮೇಲೆ ಕಾಂತಾರ:

ಸಾಮಾನ್ಯವಾಗಿ ಇಳಕಲ್‌ ಸೀರೆಗಳೆಂದರೆ ಸಾಕು ಹೆಂಗಳೆಯರು ವಿವಿಧ ಬಣ್ಣ, ಆಕಾರದ ಡಿಸೈನ್ ಗಳನ್ನ ನೋಡಿ ಬೆರಗಾಗುತ್ತಾರೆ. ಆದರೆ ಈ ಇಳಕಲ್‌ ಸೀರೆ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಾಗಿದೆ. ಯಾಕಂದ್ರೆ ಯುವ ನೇಕಾರನಾದ ಮೇಘರಾಜ್ ಈ ಇಳಕಲ್‌ ಸೀರೆಯನ್ನ ನೇಯುವ. ವೇಳೆ ಸೆರಗಿನ ವಿಭಾಗದಲ್ಲಿ ಕಷ್ಟಪಟ್ಟು ಕೆಂಪು ಬಣ್ಣದಲ್ಲಿ ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ 'ವಿನ್ ಆಟ್ ಆಸ್ಕರ್ ಕಾಂತಾರ' ಎಂಬ ಬರವಣಿಗೆ ಇರುವಂತೆ ಕುಶಲತೆಯಿಂದ ಈ ಸೀರೆಯನ್ನ ನೇಯ್ದಿದ್ದಾರೆ. ಇದಕ್ಕಾಗಿ ವಿಶೇಷ ಸಮಯವನ್ನ ಪಡೆದು ಸಂಯಮದಿಂದ ಈ ಕರಕುಶಲತೆ ಮೆರೆದಿದ್ದು, ಏನಾದರೂ ಆಗಲಿ ಒಟ್ಟು ನಮ್ಮ ಕನ್ನಡದ ಹೆಮ್ಮೆಯ ಕಾಂತಾರ ಸಿನಿಮಾ ಆಸ್ಕರ್ ಅವಾರ್ಡ್ ಪಡೆಯುವಂತಾಗಬೇಕೆಂದು ಹಾರೈಸಿ ಈ ಇಳಕಲ್‌ ಸೀರೆ ನೇಯ್ದಿರುವುದಾಗಿ ಯುವ ನೇಕಾರ ಮೇಘರಾಜ್ ಗುದ್ದಟ್ಟಿ ಅಭಿಪ್ರಾಯಪಟ್ಟಿದ್ದಾರೆ.