ಮಣ್ಣಿನ ದೋಣಿ ಚಿತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ರೂ.1 ಲಕ್ಷ!: ತಾನೇ ದುಡಿದು ಚಿತ್ರ ಗೆಲ್ಲಿಸಿದ ಅಂಬಿ
Professionalism ವ್ಯಾಖ್ಯಾನ ಪ್ರತಿ ಕ್ಷೇತ್ರದಲ್ಲಿಯೂ ಬದಲಾಗಿದೆ. ಸಿನಿಮೋದ್ಯಮವೂ ಅದು ಹೊರತಲ್ಲ. ಆದರೆ, ರೆಬೆಲ್ ಸ್ಟಾರ್ ಅಂಬರೀಷ್ ತಮ್ಮ ಸಿನಿಮಾ ಗೆಲ್ಲಿಸಲು ಏನೇನು ತ್ಯಾಗ ಮಾಡಿದ್ರು ಅನ್ನೋದು ಹೇಳ್ತೀವಿ ಕೇಳಿ.

ಈಗ ಕಾಲ ಬದಲಾಗಿದೆ. ಚಿತ್ರರಂಗ ಬದಲಾಗಿದೆ. ಮೇಕಿಂಗ್‌ನಿಂದ ಹಿಡಿದು ಬಿಸಿನೆಸ್‌ವರೆಗೆ ಎಲ್ಲವೂ ಬದಲಾಗಿದೆ. ನಡವಳಿಕೆ, ಸಂಬಂಧ, ಮಾತು ಎಲ್ಲವೂ ಆ ಕಾಲದಲ್ಲಿ ಇದ್ದಂತೆ ಈ ಕಾಲದಲ್ಲಿ ಇಲ್ಲ. ಆದರೆ ಆ ಕಾಲದಲ್ಲಿ ನಡೆದ ಕತೆಯನ್ನು, ಘಟನೆಯನ್ನು, ವ್ಯಕ್ತಿತ್ವವನ್ನು ಪಾಠವಾಗಿ ತೆಗೆದುಕೊಳ್ಳುವುದಾದರೆ ಬೇಕಾದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಅಂಥಾ ಒಂದು ಉದಾಹರಣೆ ಅಂಬರೀಶ್ ಅವರ ಮಣ್ಣಿನ ದೋಣಿ ಸಿನಿಮಾ.
ಮಣ್ಣಿನ ದೋಣಿ ಸಿನಿಮಾ ಬಂದಿದ್ದು 1992ರಲ್ಲಿ. ಅವರು ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದು 1972ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ. ಅಲ್ಲಿಗೆ ಅಂಬರೀಶ್ ಚಿತ್ರರಂಗಕ್ಕೆ ಬಂದು 20 ವರ್ಷಗಳೇ ಸಂದಿದ್ದವು. ಆ ಕಾಲದಲ್ಲಿ ವರ್ಷದಲ್ಲಿ ಅಂಬರೀಶ್ ಅವರ 9-10 ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಚಿತ್ರಮಂದಿರಗಳಿಗೆ ಸದಾ ಸಿನಿಮಾ ಸಿಗುತ್ತಿದ್ದವು. ಈಗ ಒಂದು ವರ್ಷದಲ್ಲಿ ಒಬ್ಬ ಸ್ಟಾರ್‌ನ 10 ಸಿನಿಮಾ ಬಿಡುಗಡೆಯನ್ನು ಊಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಬಿಡಿ.
ಪರಿಸ್ಥಿತಿ ಹೀಗಿದ್ದರೂ ಅಂಬರೀಶ್ ಮಾತ್ರ ಸುಮ್ಮನೆ ಕುಳಿತುಕೊಳ್ಳುವವರಲ್ಲ. ಅವರು ಸಿನಿಮಾವನ್ನು ಹುಡುಕಿಕೊಂಡು ಹೋಗುತ್ತಿದ್ದರು ಅನ್ನುವುದಕ್ಕೆ ಸಾಕ್ಷಿ ಎಂಬಂತೆ ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಹಳೆಯದೊಂದು ಕತೆಯನ್ನು ಇತ್ತೀಚೆಗೆ ನೆನಪಿಸಿಕೊಂಡರು. ನಾನು ಚಿತ್ರರಂಗಕ್ಕೆ ಬರುವುದಕ್ಕೆ ಕಾರಣವೇ ಅಂಬರೀಶ್ ಎಂದು ಹೇಳಿದ ಸಂದೇಶ್ ನಾಗರಾಜ್ ಅವರ ಕತೆ ನಿಜಕ್ಕೂ ಸ್ಫೂರ್ತಿಯಾಗುವಂತದ್ದು.
ವಿಷ್ಣುವರ್ಧನ್ ಪತ್ನಿ ಜೊತೆ ಅಂಬರೀಷ್, ಸುಮಲತಾ ಜೊತೆ ಭಾರತಿ ಪತಿ ಫೋಟೋ ವೈರಲ್!
ಅಂಬರೀಶ್ ಅವರು ಹೊಸತೊಂದು ಸಿನಿಮಾ ಮಾಡಬೇಕಿತ್ತು. ಆಗ ಅವರು ಸಂದೇಶ್ ನಾಗರಾಜ್ ಅವರನ್ನು ಸಂಪರ್ಕಿಸಿ ಸಿನಿಮಾ ಮಾಡುವಂತೆ ಕೇಳಿಕೊಂಡರು. ಗೆಳೆತನದ ಕಾರಣಕ್ಕೆ ಸಂದೇಶ್ ನಾಗರಾಜ್ ಕೂಡ ಒಪ್ಪಿಕೊಳ್ಳುತ್ತಾರೆ. ಹಾಗೆ ಶುರುವಾದ ಸಿನಿಮಾ ಮಣ್ಣಿನ ದೋಣಿ. ಕಾದಂಬರಿಕಾರ ಟಿಕೆ ರಾಮರಾವ್ ಬರೆದ ಮಣ್ಣಿನ ದೋಣಿ ಕಾದಂಬರಿಯನ್ನೇ (Novel) ಸಿನಿಮಾ ಮಾಡಿದರು. ಅದನ್ನು ನಿರ್ದೇಶಿಸಿದ್ದು ಎಂಎಸ್ ರಾಜಶೇಖರ್. ಇಂಟರೆಸ್ಟಿಂಗ್ ಎಂದರೆ ಅದಕ್ಕೆ ಅಂಬರೀಶ್ ತೆಗೆದುಕೊಂಡ ಸಂಭಾವನೆ ರೂ.1 ಲಕ್ಷ. ಅಷ್ಟೇ ಅಲ್ಲ, ಸಂದೇಶ್ ನಾಗರಾಜ್ ಅವರಿಗೆ ನಿರ್ಮಾಣದ ವಿಚಾರ ಗೊತ್ತಿರಲಿಲ್ಲ. ಕೆಲಸ ಗೊತ್ತಿರಲಿಲ್ಲ. ಆದರೆ ಅದಕ್ಕಾಗಿ ಅವರು ತಲೆ ಕೆಡಿಸಿಕೊಳ್ಳುವಂತಹ ಪ್ರಮೇಯವೇ ಬರಲಿಲ್ಲ. ಯಾಕೆಂದರೆ ಆ ಎಲ್ಲಾ ಕೆಲಸಗಳನ್ನು ಅಂಬರೀಶ್ ನೋಡಿಕೊಳ್ಳುತ್ತೇನೆ ಎಂದರು. ಅವರೇ ಓಡಾಡಿದರು. ಸಿನಿಮಾ ಮುಗಿಸಿದರು. ಚಿತ್ರಮಂದಿರಕ್ಕೆ ತಂದರು.
ಜನ ಕೈಬಿಡಲಿಲ್ಲ ಮಣ್ಣಿನ ದೋಣಿ ಚಿತ್ರವನ್ನು ಸೂಪರ್‌ಹಿಟ್ (Super Hit) ಮಾಡಿದರು. ಅದರಿಂದಾಗಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ಮಾಪಕ ಸಂದೇಶ್ ನಾಗರಾಜ್ ಸಿಕ್ಕಿದರು. ಅಲ್ಲಿಂದ ಮುಂದೆ ಅದೇ ಜೋಡಿ ನಾಲ್ಕೈದು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿತು. ಈ ಕತೆಯಿಂದ ತಿಳಿದುಕೊಳ್ಳಬಹುದಾದದ್ದು ತುಂಬಾ ಇದೆ. ಒಬ್ಬ ಸ್ಟಾರ್ ಯಾವತ್ತೂ ಸುಮ್ಮನೆ ಕುಳಿತುಕೊಳ್ಳಬಾರದು. ಸಿನಿಮಾ ಮಾಡುತ್ತಲೇ ಇರಬೇಕು. ತಾನೇ ನಿಂತು ಕೆಲಸ ಮಾಡಿಸಿ ಗೆದ್ದುಕೊಂಡು, ಬರಬೇಕು. ಹಾಗೆ ಮಾಡಿದರೇನೇ ಬಹುಕಾಲ ಚಿತ್ರರಂಗದಲ್ಲಿ (Cine Industry) ಉಳಿಯಲು ಸಾಧ್ಯ. ಅಂಬರೀಶ್ ಅಷ್ಟು ವರ್ಷ ಚಿತ್ರರಂಗವನ್ನು ಆಳಿದ್ದು ಮತ್ತು ಲಕ್ಷಾಂತರ ಸಿನಿಮಾ ಪ್ರೇಕ್ಷಕರ ಅಭಿಮಾನ ಗಳಿಸಿದ್ದು ಕೂಡ ಹಾಗೆಯೇ. ಅಂಬರೀಶ್ ಸುಮ್ಮನೆ ಅಂಬರೀಶ್ ಆಗಿಲ್ಲ. ಅದನ್ನು ಈಗಿನ ನಟರೆಲ್ಲರೂ ತಿಳಿದುಕೊಂಡು, ಅದೇ ರೀತಿ ಪ್ರಯತ್ನ ಮಾಡಿದರೆ ಚಿತ್ರಮಂದಿರಗಳು ಯಶಸ್ವೀ ಸಿನಿಮಾ ಕಾಯುತ್ತಾ ಕೂರುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ!
ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಕೊರಳಲ್ಲಿ ಜೋಮಾಲೆ; ಏನಿದರ ವಿಶೇಷತೆ?