ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮಾರ್ಚನ್‌ನಲ್ಲಿ ಅಂಬರೀಷ್ ಸ್ಮಾರಕ ಉದ್ಘಾಟನೆ ಮಾಡುವುದಾಗಿಯೂ ಬಹಿರಂಗ ಪಡಿಸಿದ್ದಾರೆ.

ಬೆಂಗಳೂರಿನ ರಿಂಗ್ ರಸ್ತೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಿಡಲಾಯಿತು. ಪುನೀತ್ ರಸ್ತೆ ಉದ್ಭಾಟನೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ರೆಬಲ್ ಸ್ಟಾರ್ ಅಂಬರೀಷ್ ಸ್ಮಾರಕ ಉದ್ಭಾಟನೆ ಬಗ್ಗೆಯೂ ಬಹಿರಂಗ ಪಡಿಸಿದರು. ಖ್ಯಾತ ನಟ ‘ರೆಬಲ್​ ಸ್ಟಾರ್​’ ಅಂಬರೀಷ್​ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ‘ಪುನೀತ್​ ರಾಜ್​ಕುಮಾರ್​​ ಹಾಗೆಯೇ ನನ್ನ ಆತ್ಮೀಯ ಸ್ನೇಹಿತ ಅಂಬರೀಷ್​ ಕೂಡ ಬಂಗಾರದ ಹೃದಯ ಹೊಂದಿದ್ದ ವ್ಯಕ್ತಿ. ಅವರು ಮನಸ್ಸು ಮಾಡಿದ್ದರೆ ಎಷ್ಟೋ ಹಣ ಗಳಿಸಬಹುದಿತ್ತು. ಆದರೆ ಅವರು ಅಪಾರ ಜನರ ಪ್ರೀತಿ-ಸ್ನೇಹ ಗಳಿಸಿದ್ದರು. ಅವರ ಸ್ಮಾರಕ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು. ಮಾರ್ಚ್​ ಮೊದಲ ವಾರ ಅಂಬರೀಷ್ ಸ್ಮಾರಕ ಉದ್ಘಾಟನೆ ಮಾಡೋಣ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

‘ಒಂದು ಕಾಲದಲ್ಲಿ ನಾನು ಮತ್ತು ಅಂಬರೀಷ್​ ಪ್ರತಿ ದಿನ ಒಟ್ಟಿಗೆ ಇರುತ್ತಿದ್ದೆವು. ಹಳ್ಳಿ, ದೇಶ, ವಿದೇಶದಲ್ಲಿ ಅವರಿಗೆ ಸ್ನೇಹಿತರು ಇದ್ದಾರೆ. ಅಂಥ ಸ್ನೇಹಿತರಲ್ಲಿ ನಾನೂ ಒಬ್ಬ. ಸುಮಾರು ಒಂದೂವರೆ ವರ್ಷದ ಹಿಂದೆ ಅಂಬರೀಷ್​ ಸ್ಮಾರಕದ ನಿರ್ಮಾಣಕ್ಕೆ ಹಣ ನೀಡಿ ಕೆಲಸ ಆರಂಭಿಸಿದ್ದೆವು. ಆ ಸ್ಮಾರಕದ ಕಾರ್ಯ ಈಗ ಪೂರ್ಣಗೊಂಡಿದೆ’ ಎಂದು ಬೊಮ್ಮಾಯಿ ಹೇಳಿದರು.

ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು

‘ಬೆಂಗಳೂರಿನ ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರನ್ನು ಇಡಬೇಕು ಎಂದು ಅವರ ಅನೇಕ ಸ್ನೇಹಿತರು ಆಸೆಪಟ್ಟಿದ್ದಾರೆ. ಆ ರಸ್ತೆಗೆ ಅವರ ಹೆಸರು ಸೂಕ್ತ. ಅವರ ವ್ಯಕ್ತಿತ್ವದ ಬಗ್ಗೆ ತಿಳಿದಿರುವ ಎಲ್ಲರೂ ಹೌದು ಎನ್ನುತ್ತಾರೆ. ಜೊತೆಗೆ ನಮ್ಮ ಚಿತ್ರೋದ್ಯಮದ ವಾಣಿಜ್ಯ ಮಂಡಳಿ ಕೂಡ ಅಲ್ಲೇ ಇದೆ. ಗಾಂಧಿನಗರವೂ ಹತ್ತಿರ ಇದೆ. ಹಾಗಾಗಿ ಆ ರಸ್ತೆಗೆ ರೇಸ್​ ಕೋರ್ಸ್​ ರಸ್ತೆ ಎನ್ನುವುದಕ್ಕಿಂತ ರೆಬೆಲ್​ ಸ್ಟಾರ್​ ರಸ್ತೆ ಎಂದರೆ ಬಹಳ ಚೆನ್ನಾಗಿ ಇರುತ್ತದೆ’ ಬಸವರಾಜ ಬೊಮ್ಮಾಯಿ ಹೇಳಿದರು. 

ಪುನೀತ್ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಹಾಡು ಹಾಡಿದ ಸಿಎಂ ಬೊಮ್ಮಾಯಿ!

ಸರಿಯಾದ ಜಾಗಕ್ಕೆ ಹೆಸರಿಟ್ಟಿದ್ದೀಯಾ ಅಂತಾನೆ ಅಂಬರೀಷ್

‘ರೇಸ್​ ಕೋರ್ಸ್​ ರಸ್ತೆಗೆ ಅಂಬರೀಷ್​ ಹೆಸರು ಇಡಬೇಕು ಎಂದು ನಾನು ತೀರ್ಮಾನಿಸಿದ್ದೇನೆ. ಇದರಿಂದ ಅಂಬರೀಷ್​ಗೆ ಬಹಳ ಖುಷಿ ಆಗುತ್ತದೆ. ಸರಿಯಾದ ರಸ್ತೆಗೆ ನನ್ನ ಹೆಸರನ್ನು ಇಟ್ಟಿದ್ದೀಯಾ ಅಂತ ಅವನು ಹೇಳುತ್ತಾನೆ’ ಎಂದು ಬೊಮ್ಮಾಯಿ ಹೇಳಿದರು. 

ಪುನೀತ್ ರಾಜ್‌ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದ ಸಿಎಂ

ಅಪ್ಪು ಸ್ಮಾರಕದ ಬಗ್ಗೆ ಸಿಎಂ ಹೇಳಿದ್ದೇನು?

'ಅಪ್ಪುಹೆಸರಲ್ಲಿ ಸ್ಮಾರಕ ಮಾಡಬೇಕು ಅನ್ನೋ ಎಲ್ಲರ ಆಸೆ. ಅವರ ಸಮಾಧಿ ಬಳಿಯೇ ಸ್ಮಾರಕ ಮಾಡುತ್ತೇವೆ. ಸಮಾಧಿ ಸ್ಥಳದಲ್ಲಿ ಅವರ ಮತ್ತು ಡಾ. ರಾಜ್​ಕುಮಾರ್​ ಜೀವನ ಚರಿತ್ರೆ ಹೇಳುವಂತಹ ಅದ್ಭುತವಾದ ಸ್ಮಾರಕವನ್ನು ನಮ್ಮ ಸರ್ಕಾರದ ವತಿಯಿಂದ ನಿರ್ಮಾಣ ಮಾಡುತ್ತೇವೆ. ಅಪ್ಪು ಅವರಿಗೆ ಕರ್ನಾಟಕ ರತ್ನ ಕೊಡುವ ಭಾಗ್ಯ ನನ್ನದಾಗಿತ್ತು. ಅಪ್ಪು ಸ್ಮಾರಕ ಮಾಡೋದು ನಾವೆ' ಎಂದು ಬೊಮ್ಮಾಯಿ ಹೇಳಿದರು.