ಕನ್ನಡದ ಹಲವು ಮಂದಿ ನಟಿಯರು ಈಗಾಗಲೇ ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಕೆಲವರು ಸಣ್ಣ ಪುಟ್ಟಪಾತ್ರಗಳ ಮೂಲಕ ಗುರುತಿಸಿಕೊಂಡರೆ, ಇನ್ನೂ ಕೆಲವರು ಆರಕ್ಕೇರದೆ ಮೂರಕ್ಕಿಳಿದೆ ಒದ್ದಾಡುತ್ತಿದ್ದಾರೆ. ಇವರ ನಡುವೆ ಒಂದೇ ಒಂದು ಚಿತ್ರಕ್ಕೆ ಪರಭಾಷೆಗಳಲ್ಲಿ ಸ್ಟಾರ್‌ ಆದ ಕನ್ನಡ ನಟಿಯರೂ ಇದ್ದಾರೆ.

1. ಚಲೋ ಸಿನಿಮಾದಿಂದ ಮಿಂಚಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರಿಗೆ ಟಾಲಿವುಡ್‌ನಲ್ಲಿ ರಾತ್ರೋರಾತ್ರಿ ಸ್ಟಾರ್‌ ಪಟ್ಟಕೊಟ್ಟು ಬೇಡಿಕೆಯ ನಟಿಯಾಗಿಸಿದ್ದು ‘ಚಲೋ’ ಸಿನಿಮಾ. ಈ ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲೇ ತೆಲುಗಿನಲ್ಲಿ ಭರವಸೆಯ ನಟಿಯಾಗಿ ಕಾಲೂರಿದರೆ, ನಂತರ ಬಂದ ‘ಗೀತಗೋವಿಂದಂ’ ಸಿನಿಮಾ ಸ್ಟಾರ್‌ ನಟಿ, ಬೇಡಿಕೆಯ ಕಲಾವಿದೆಯನ್ನಾಗಿಸಿತು.

ರಶ್ಮಿಕಾ ಮಂದಣ್ಣ ತಬ್ಬಿಕೊಂಡಿರುವ ಈ ಹುಡುಗ ಯಾರೆಂದು ಹುಡುಕಾಡಿದ ಅಭಿಮಾನಿಗಳು? 

2. ಇಸ್ಮಾರ್ಟ್‌ ಶಂಕರ್‌ ಚಿತ್ರದಿಂದ ಗೆದ್ದ ನಭಾ ನಟೇಶ್‌

ನಭಾ ನಟೇಶ್‌ ಕನ್ನಡದಲ್ಲಿ ಎರಡ್ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಆದರೆ, ಯಾವಾಗ ಪುರಿ ಜಗನ್ನಾಥ್‌ ನಿರ್ದೇಶನದ, ತೆಲುಗಿನ ‘ಇಸ್ಮಾರ್ಟ್‌ ಶಂಕರ್‌’ ಚಿತ್ರಕ್ಕೆ ನಾಯಕಿಯಾದರೋ ಯಶಸ್ಸು ಕೈ ಹಿಡಿಯಿತು. ಈಗ ಟಾಲಿವುಡ್‌ನಲ್ಲಿ ನಭಾ ನಟೇಶ್‌ ಇಸ್ಮಾರ್ಟ್‌ ನಟಿ ಎಂದೇ ಫೇಮಸ್‌.

3. ಉಪ್ಪೆನದಲ್ಲಿ ಯಶಸ್ಸು ಕಂಡ ಕೃತಿ ಶೆಟ್ಟಿ

ಹೆಸರು ಕೃತಿ ಶೆಟ್ಟಿ. ಮೂಲ ಮಂಗಳೂರು. ವರ್ಷಗಳ ಹಿಂದೆ ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದಲ್ಲಿ, ಸುನೀಲ್‌ ರಾವ್‌ ನಟನೆಯಲ್ಲಿ ‘ಸರಿಗಮ’ ಎನ್ನುವ ಸಿನಿಮಾ ಸೆಟ್ಟೇರಿತ್ತು. ಈ ಚಿತ್ರಕ್ಕೆ ಮುಹೂರ್ತ ಆಗಿದ್ದು ಅಷ್ಟೇ ಸುದ್ದಿ ಆಯಿತು. ಈ ನಡುವೆ ತಮಿಳಿನಲ್ಲಿ ಐದು ಚಿತ್ರಗಳಲ್ಲಿ ನಟಿಸಿ, ಯಶಸ್ಸು ಕಾಣುತ್ತಲೇ ಟಾಲಿವುಡ್‌ ಕಡೆ ಮುಖ ಮಾಡಿದರು. ‘ಉಪ್ಪೆನ’ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಸಂಬಂಧಿಕ ವೈಷ್ಣವ್‌ ತೇಜ್‌ ಹೀರೋ. ವಿಜಯ್‌ ಸೇತುಪತಿ ವಿಲನ್‌. ವಿಜಯ್‌ ಸೇತುಪತಿ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಕೃತಿ ಶೆಟ್ಟಿಈಗ ಬಹು ಬೇಡಿಕೆಯ ನಟಿ.