'ಪೆದ್ದಿ' ಚಿತ್ರದ ವಿವಾದದ ಬೆನ್ನಲ್ಲೇ, ನಟಿ ರಾಗಿಣಿ ದ್ವಿವೇದಿ ಸಿನಿಮಾದಲ್ಲಿನ ಗ್ಲಾಮರ್ ಮತ್ತು ಅಶ್ಲೀಲತೆಯ ನಡುವಿನ ಗೆರೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಹೊಸ ಚಿತ್ರ 'R2' ಅನ್ನು ಘೋಷಿಸಿರುವ ಅವರು, ಮಹಿಳಾ ಪ್ರಾತಿನಿಧ್ಯ ಮತ್ತು ನಟಿಯರ ಆಯ್ಕೆಯ ಸ್ವಾತಂತ್ರ್ಯದ ಕುರಿತು ಮಾತನಾಡಿದ್ದಾರೆ.
ಬೆಂಗಳೂರು (ಜೂ.23): ಇತ್ತೀಚೆಗೆ ತೆರೆಕಂಡಿದ್ದ 'ಪೆದ್ದಿ' (Peddi) ಚಿತ್ರದ ಮೇಕರ್ಸ್, ನಟಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಅತಿಯಾಗಿ ಲೈಂಗಿಕೀಕರಣಗೊಳಿಸಿದ್ದಾರೆ ಎಂಬ ತೀವ್ರ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಆ ದೃಶ್ಯಗಳನ್ನು ಕತ್ತರಿಸಿ ಚಿತ್ರವನ್ನು ಮರು-ಬಿಡುಗಡೆ (Re-release) ಮಾಡಿದೆ ಎಂದು ವರದಿಯಾಗಿದೆ. ಈ ಘಟನೆಯ ಬೆನ್ನಲ್ಲೇ, ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಗ್ಲಾಮರ್, ನಟಿಯರ ಚಿತ್ರೀಕರಣ ಮತ್ತು ಮಹಿಳಾ ಪ್ರಾತಿನಿಧ್ಯದ ಕುರಿತಾದ ಚರ್ಚೆಗಳು ಮತ್ತೊಮ್ಮೆ ಮುಂಚೂಣಿಗೆ ಬಂದಿವೆ.
ಈ ಕುರಿತು ಮಾತನಾಡಿರುವ ನಟಿ ರಾಗಿಣಿ ದ್ವಿವೇದಿ, 'ಈ ಇಡೀ ಚರ್ಚೆಯು ಕೇವಲ ಉಡುಪುಗಳು ಅಥವಾ ತೆರೆಯ ಮೇಲಿನ ನೋಟಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಾತಿನಿಧ್ಯ ಎನ್ನುವುದು ಅಂತಿಮವಾಗಿ ಸಿನಿಮಾ ಮಾಡುವವರ ಉದ್ದೇಶ, ಸಂದರ್ಭ ಮತ್ತು ನಟ-ನಟಿಯರ ವೈಯಕ್ತಿಕ ಆಯ್ಕೆಯ ಮೇಲೆ ನಿರ್ಧಾರವಾಗುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ 2014 ರ ಸೂಪರ್ ಹಿಟ್ ಸಿನಿಮಾ 'ರಾಗಿಣಿ ಐಪಿಎಸ್'ನ ಮುಂದುವರಿದ ಭಾಗ ಹಾಗೂ ಫ್ರಾಂಚೈಸಿಯ ವಿಸ್ತರಣೆಯಾಗಿ 'R2' ಚಿತ್ರವನ್ನು ಘೋಷಿಸಿದ್ದಾರೆ.
ಬಿಕಿನಿ ಧರಿಸಿದ್ರೂ ಗೌರವಯುತವಾಗಿ ಕಾಣಬಹುದು!
ವಾಣಿಜ್ಯ ಸಿನಿಮಾಗಳು ಹಾಗೂ ಅಭಿನಯ ಪ್ರಧಾನ ಪಾತ್ರಗಳೆರಡರಲ್ಲೂ ಒಂದು ದಶಕಕ್ಕೂ ಹೆಚ್ಚು ಕಾಲ ಸಮತೋಲನ ಕಾಯ್ದುಕೊಂಡು ಬಂದಿರುವ ರಾಗಿಣಿ ಗ್ಲಾಮರ್ ಕುರಿತು ಮಾತನಾಡುತ್ತಾ, "ಗ್ಲಾಮರ್ ಮತ್ತು ಅಶ್ಲೀಲತೆಯ (Vulgarity) ನಡುವೆ ಅತ್ಯಂತ ಸಣ್ಣ ಗೆರೆಯಿದೆ. ನೀವು ತೆರೆಯ ಮೇಲೆ ಬಿಕಿನಿ ಧರಿಸಿಯೂ ಅತ್ಯಂತ ಗೌರವಯುತವಾಗಿ ಅಥವಾ ಆಕರ್ಷಕವಾಗಿ ಕಾಣಬಹುದು. ಅದೇ ಸಮಯದಲ್ಲಿ, ನೀವು ಸಂಪೂರ್ಣವಾಗಿ ಮೈತುಂಬಾ ಬಟ್ಟೆ ಧರಿಸಿಯೂ ಶೃಂಗಾರ ಭಾವವನ್ನು ಅಥವಾ ಮಾದಕತೆಯನ್ನು ಬಿಂಬಿಸಬಹುದು. ಹಾಗಾಗಿ ಇದು ಎಂದಿಗೂ ಕೇವಲ ಬಟ್ಟೆಗಳ ಬಗ್ಗೆ ಮಾತ್ರವಲ್ಲ."
"ನಾನು ವೃತ್ತಿಜೀವನ ಆರಂಭಿಸಿದಾಗ ಗ್ಲಾಮರ್ ನಟಿ ಅಥವಾ ಅಭಿನಯ ಪ್ರಧಾನ ನಟಿ ಎಂದು ಸ್ಪಷ್ಟವಾದ ವಿಂಗಡಣೆ ಇರುತ್ತಿತ್ತು. ನಾನು ಕೂಡ ತೆರೆಯ ಮೇಲೆ ಅತ್ಯಂತ ಚಿಕ್ಕದಾದ ಮತ್ತು ಗ್ಲಾಮರಸ್ ಉಡುಪುಗಳನ್ನು ಧರಿಸಿದ್ದೇನೆ. ಆದರೆ ನನಗೆ ಎಲ್ಲಿ ಗೆರೆ ಎಳೆಯಬೇಕು ಎಂಬುದು ಯಾವಾಗಲೂ ತಿಳಿದಿತ್ತು. ಆ ನಿರ್ಧಾರವನ್ನು ಪ್ರತಿಯೊಬ್ಬ ನಟ-ನಟಿಯರು ತಾವೇ ತೆಗೆದುಕೊಳ್ಳಬೇಕು. ಯಾವುದನ್ನಾದರೂ ಬಲವಂತವಾಗಿ ಅಥವಾ ಅನಗತ್ಯವಾಗಿ ತೋರಿಸಿದಾಗ ಮಾತ್ರ ಸಮಸ್ಯೆ ಆರಂಭವಾಗುತ್ತದೆ" ಎಂದಿದ್ದಾರೆ ರಾಗಿಣಿ.
ಪ್ರಶ್ನಿಸುತ್ತಿದ್ದಾರೆ ಇಂದಿನ ಪ್ರೇಕ್ಷಕರು
"ಹಿಂದೆ ಕೆಲವು ವಿಷಯಗಳನ್ನು ಜನರು ಯಾವುದೇ ಪ್ರಶ್ನೆಯಿಲ್ಲದೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಇಂದು ಜನರು ಯಾವುದನ್ನಾದರೂ ತೋರಿಸುವಾಗ 'ಇದನ್ನು ಯಾಕೆ ತೋರಿಸಲಾಗುತ್ತಿದೆ? ಕಥೆಗೆ ಇದರ ಅಗತ್ಯವಿದೆಯೇ?' ಎಂದು ಪ್ರಶ್ನಿಸುತ್ತಾರೆ. ಒಂದು ಪಾತ್ರದ ನಿರ್ದಿಷ್ಟ ಮುಖವನ್ನು ತೋರಿಸಲು ಬಲವಾದ ಕಾರಣವಿರಬೇಕು. ಅದು ಕಥೆಗೆ ಅಗತ್ಯವಾಗಿದ್ದರೆ ಪ್ರೇಕ್ಷಕರು ಖಂಡಿತ ಒಪ್ಪಿಕೊಳ್ಳುತ್ತಾರೆ. ಕೇವಲ ಜನರ ಗಮನ ಸೆಳೆಯಲು ಮಾತ್ರ ಅದನ್ನು ಬಳಸಿಕೊಂಡರೆ, ಜನರು ಖಂಡಿತವಾಗಿಯೂ ಪ್ರಶ್ನಿಸುತ್ತಾರೆ" ಎಂದು ರಾಗಿಣಿ ಇಂದಿನ ಪ್ರೇಕ್ಷಕರ ಮನಸ್ಥಿತಿಯನ್ನು ವಿವರಿಸಿದ್ದಾರೆ.
'ಇಲ್ಲ' ಎನ್ನುವುದು ಅತ್ಯಂತ ಶಕ್ತಿಶಾಲಿ ಪದ; ಓಟಿಟಿ (OTT) ತಂದ ಬದಲಾವಣೆ
ದೊಡ್ಡ ಮಟ್ಟದ ಕಮರ್ಷಿಯಲ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ನಟಿಯರು ಎದುರಿಸುವ ಒತ್ತಡಗಳ ಬಗ್ಗೆ ಮಾತನಾಡಿದ ರಾಗಿಣಿ, ಇಂದಿನ ಕಲಾವಿದರಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಹಕ್ಕಿದೆ ಎಂದಿದ್ದಾರೆ. "'ಇಲ್ಲ' (No) ಎನ್ನುವುದು ಅತ್ಯಂತ ಶಕ್ತಿಶಾಲಿ ಪದ" ಎಂದು ಅವರು ಪ್ರತಿಪಾದಿಸಿದ್ದಾರೆ.
ಅವರ ಪ್ರಕಾರ, ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಸೋಶಿಯಲ್ ಮೀಡಿಯಾ ಮತ್ತು ಸ್ವತಂತ್ರ ಚಿತ್ರರಂಗದ (Independent Cinema) ಬೆಳವಣಿಗೆಯಿಂದಾಗಿ ಇಂದಿನ ಪೀಳಿಗೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಿವೆ. "ಒಂದು ಕಾಲದಲ್ಲಿ ಅವಕಾಶಗಳು ಸೀಮಿತವಾಗಿದ್ದವು. ಆದರೆ ಇಂದು ವಿಭಿನ್ನ ರೀತಿಯ ಕಂಟೆಂಟ್‌ಗಳು ಲಭ್ಯವಿವೆ. ನಿಮಗೆ ಯಾವುದೇ ದೃಶ್ಯ ಅಥವಾ ವಿಷಯದಲ್ಲಿ ಕಂಫರ್ಟಬಲ್ ಅನಿಸದಿದ್ದರೆ, ಅದನ್ನು ಮಾಡದಿರಲು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಒಂದು ಬಾರಿ ಒಪ್ಪಿಕೊಂಡ ಮೇಲೆ ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಸಂಪೂರ್ಣವಾಗಿ ಅರಿತು ಮಾಡಬೇಕು. ಇಂತಹ ಚರ್ಚೆಗಳು ಪ್ರಾಜೆಕ್ಟ್ ಆರಂಭವಾಗುವ ಮುನ್ನವೇ ನಡೆಯಬೇಕು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿರ್ಮಾಪಕಿಯಾಗಿ ರಾಗಿಣಿ ಹೊಸ ಇನಿಂಗ್ಸ್; 'R2' ಹೊಸ ಯುಗ:
ಮಹಿಳಾ ಪ್ರಾತಿನಿಧ್ಯದ ಈ ಚರ್ಚೆಗಳು ರಾಗಿಣಿ ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳ ಮೇಲೂ ಪ್ರಭಾವ ಬೀರುತ್ತಿವೆ. ಸದ್ಯ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ 'ವೃಷಭ' (Vrushabha) ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಗಿಣಿ, ತಮ್ಮ ಐತಿಹಾಸಿಕ ಹಿನ್ನೆಲೆಯ 'ಮದನಿಕಾ' (Madanika) ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಅನೌನ್ಸ್ ಆಗಿರುವ 'R2' ಚಿತ್ರದ ಮೂಲಕ ಅವರು ಕೆ. ಮಂಜು ಅವರೊಂದಿಗೆ ಜಂಟಿಯಾಗಿ ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
"R2 ಚಿತ್ರವು 'ರಾಗಿಣಿ ಐಪಿಎಸ್' ಸಿನಿಮಾದ ಮುಂದುವರಿದ ಭಾಗ ಹಾಗೂ ಒಂದು ಹೊಸ ಫ್ರಾಂಚೈಸಿ ಯುಗದ ಆರಂಭವಾಗಲಿದೆ. ಆ ಸಿನಿಮಾ ನನ್ನ ಜೀವನವನ್ನೇ ಬದಲಾಯಿಸಿತ್ತು, ಅದರ ಪರಂಪರೆಯನ್ನು ಮುಂದೆ ಕೊಂಡೊಯ್ಯುವುದು ಹೆಮ್ಮೆ ತಂದಿದೆ. ಇಂದು ನಟನೆಯಷ್ಟೇ ಅಲ್ಲದೆ, ಇಡೀ ಸೃಜನಾತ್ಮಕ ಪ್ರಯಾಣದ ಭಾಗವಾಗುವುದು ಮುಖ್ಯವಾಗಿದೆ. ಭಾರತದ ಬೇರೆ ಬೇರೆ ಚಿತ್ರರಂಗಗಳಲ್ಲಿ ಹೀರೊಗಳ ಹಲವು ಯಶಸ್ವಿ ಫ್ರಾಂಚೈಸಿಗಳನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ (Female-led) ಫ್ರಾಂಚೈಸಿಗಳ ಉದಾಹರಣೆಗಳು ತೀರಾ ವಿರಳ. ನಮ್ಮ ಚಿತ್ರರಂಗಕ್ಕೆ ಇಂತಹ ಮತ್ತಷ್ಟು ಸಿನಿಮಾಗಳ ಅಗತ್ಯವಿದೆ" ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.


