ಲಾಕ್‌ಡೌನ್‌ ಮುಗಿದು, ಚಿತ್ರಪ್ರದರ್ಶನ ಆರಂಭವಾದ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಚಿತ್ರರಂಗವನ್ನು ಕಾಡುತ್ತಿದೆ. ಸರ್ಕಾರ ಸೋಷಲ್‌ ಡಿಸ್ಟೆನ್ಸಿಂಗ್‌ಅನ್ನು ಮುಂದುವರಿಸಲು ನಿರ್ಧರಿಸಿದರೆ ಏನು ಮಾಡಬೇಕು ಎಂಬ ಪ್ರಶ್ನೆಗೆ ಪಿವಿಆರ್‌ ಉತ್ತರ ಹುಡುಕಿಕೊಂಡಿದೆ.

ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಎಲ್ಲವೂ ಸುರಕ್ಷಿತ ಅನ್ನಿಸುವ ತನಕ ಪಿವಿಆರ್‌ 1,3,5,7 ಹೀಗೆ ಒಂದು ಸೀಟು ಬಿಟ್ಟು ಕುಳಿತುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಿದೆ. 1ನೇ ನಂಬರ್‌ ಸೀಟನ್ನು ಒಬ್ಬ ಪ್ರೇಕ್ಷಕನಿಗೆ ನೀಡಿದರೆ 2ನೇ ನಂಬರ್‌ ಸೀಟನ್ನು ಖಾಲಿ ಬಿಡಲಾಗುತ್ತದೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು ಪಿವಿಆರ್‌ ನಿರ್ಧರಿಸಿದೆ.

ಪಿವಿಆರ್‌ ಮೂಲಗಳ ಪ್ರಕಾರ, ಇದು ಮತ್ತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಉಪಾಯವೂ ಆಗಿದೆ. ಪ್ರೇಕ್ಷಕರನ್ನು ಸೆಳೆಯಲು ಅದು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಆದರೆ, ಎಲ್ಲಾ ಪಿವಿಆರ್‌ ಚಿತ್ರಮಂದಿರಗಳೂ ಏರ್‌ ಕಂಡಿಷನ್‌್ಡ ಆಗಿದ್ದು, ಕೋವಿಡ್‌ ಆತಂಕದಲ್ಲಿ ಏಸಿ ಬಳಸುವಂತಿಲ್ಲ. ಇದನ್ನು ಪಿವಿಆರ್‌ ಹೇಗೆ ನಿಭಾಯಿಸುತ್ತದೆ ಅನ್ನುವುದನ್ನು ಪಿವಿಆರ್‌ ಹೇಳಿಲ್ಲ. ಹಾಗೆಯೇ ಈ ಹೊಸ ವಿಧಾನದಲ್ಲಿ ಅರ್ಧಕ್ಕರ್ಧ ಸೀಟುಗಳು ಖಾಲಿ ಇರುವುದರಿಂದ ಈಗಿನ ಗಳಿಕೆಯ ಅರ್ಧದಷ್ಟನ್ನು ಮಾತ್ರ ಒಂದು ಪ್ರದರ್ಶನ ಗಳಿಸುತ್ತದೆ. ಇದರಿಂದ ನಿರ್ಮಾಪಕರಿಗೂ ಪಿವಿಆರ್‌ಗೂ ನಷ್ಟವಾಗುತ್ತದೆ. ಅದನ್ನು ಸರಿದೂಗಿಸುವ ಕುರಿತೂ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

PVR ನಲ್ಲೂ ಕನ್ನಡ ಸಿನಿಮಾಗೆ ಒಳ್ಳೆಯ ಅವಕಾಶ ಕೊಡಿ: ಪುನೀತ್ ರಾಜ್‌ಕುಮಾರ್

ಜನರಿಗೆ ಮನರಂಜನೆ ಬೇಕು. ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಬಿಡುಗಡೆಯಾಗುವ ಕೋಟಿಗೊಬ್ಬ 3, ಯುವರತ್ನ, ಪೊಗರು ಚಿತ್ರಗಳಿಗೆ ಪ್ರೇಕ್ಷಕರು ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಈ ಮೂರು ಚಿತ್ರಗಳೂ ತುಂಬಿ ತುಳುಕುತ್ತವೆ. ಹಿಂದೆ ರಾಜ್‌ಕುಮಾರ್‌ ಅಪಹರಣ ಸಂದರ್ಭದಲ್ಲಿ 108 ದಿನ ಚಿತ್ರಮಂದಿರ ಮುಚ್ಚಿದ್ದರು. ಕೊನೆಯ ದಿನ ‘ಗಲಾಟೆ ಅಳಿಯಂದಿರು’ ತೆರೆಕಂಡು ಅದ್ಭುತ ಯಶಸ್ಸು ಗಳಿಸಿತು.-ಸೂರಪ್ಪ ಬಾಬು, ಹಿರಿಯ ನಿರ್ಮಾಪಕ

ಕಳೆದ ಎರಡು ದಶಕಗಳಿಂದ ಸಿನಿಮಾ ಪ್ರೇಮಿಗಳಿಗೆ ಸಿನಿಮಾ ತೋರಿಸುತ್ತಲೇ ಇರುವ ಮಲ್ಟಿಪ್ಲೆಕ್ಸುಗಳನ್ನು ಇದೇ ಮೊದಲ ಬಾರಿಗೆ ಪೂರ್ತಿಯಾಗಿ ಮುಚ್ಚಲಾಗಿದೆ.