‘1980 ನನ್ನ ನಿರ್ದೇಶನದ ಮೊದಲ ಚಿತ್ರ. ಹಾಗಂತ ನನಗೆ ಚಿತ್ರರಂಗ ಹೊಸತಲ್ಲ’ ಅಂತ ಫಜಲ್‌ ಥರ ಹೇಳಿದರು ರಾಜ್‌ ಕಿರಣ್‌.

ಅದು ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ‘1980’ ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರದ ಟೀಸರ್‌ ಲಾಂಚ್‌ ಕಾರ್ಯಕ್ರಮ. ರಾಜ್‌ಕಿರಣ್‌ ಈ ಸಿನಿಮಾದ ನಿರ್ದೇಶಕರು.

ಸಾಮಾನ್ಯವಾಗಿ ನಿರ್ದೇಶಕನ ಹ್ಯಾಟ್‌ ತೊಡೋದಕ್ಕೆ ಮೊದಲು ಅಸಿಸ್ಟೆಂಟ್‌ ಡೈರೆಕ್ಟರ್‌, ಸಿನಿಮಟೋಗ್ರಾಫರ್‌ ಇತ್ಯಾದಿ ಕೆಲಸ ಮಾಡಿ ಅನುಭವ ಪಡೆಯೋದು ಸಾಮಾನ್ಯ. ಆದರೆ ರಾಜ್‌ ಕಿರಣ್‌ ಮಿಸ್‌ಕಾಲ್‌ ಸಿನಿಮಾದಲ್ಲಿ ಹೀರೋ ಆಗಿದ್ದವರು. ಇದು ಎರಡು ವರ್ಷದ ಕೆಳಗೆ ರಿಲೀಸ್‌ ಆಗಿತ್ತು. ಹೀರೋ ಆಗಿ ಚಿತ್ರರಂಗದಲ್ಲಿ ನೆಲೆಯೂರೋದು ಕಷ್ಟಅಂತನಿಸಿತೋ ಏನೋ ಇದೀಗ 1980 ಅನ್ನೋ ಥ್ರಿಲ್ಲರ್‌ ಜಾನರ್‌ ಸಿನಿಮಾದೊಂದಿಗೆ ಮತ್ತೆ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

‘ಸಿನಿಮಾದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ತೆರೆಯ ಮೇಲೇ ನೋಡಿ. ಆಗ ಥ್ರಿಲ್ಲಿಂಗ್‌ ಅನುಭವವಾದರೆ ನಮ್ಮ ಶ್ರಮ ಸಾರ್ಥಕ’ ಅಂದರು ರಾಜ್‌ಕಿರಣ್‌.

ಈ ವೇಳೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ಇದು ಲಾಕ್‌ಡೌನ್‌ ನಂತರ ಸಿಕ್ಕ ಅದ್ಭುತ ಕಥೆ. ಇದರಲ್ಲಿ ನಾನು ಕಾದಂಬರಿಕಾರ್ತಿಯಾಗಿ ಅಭಿನಯಿಸಿದ್ದೇನೆ. 1980ರ ಸುಮಾರಿಗೆ ನಡೆಯುವ ಕತೆಯಾದ ಕಾರಣ ಆ ಕಾಲದ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ನನ್ನ ಪಾತ್ರ ಮಮ್ಮಿ ಸಿನಿಮಾದ ಪಾತ್ರದ ಥರ ಕಂಡರೂ ಅದಕ್ಕಿಂತ ಭಿನ್ನ. ಯಾವತ್ತೂ ಹೊಸ ಹೊಸ ಪಾತ್ರ, ಕಥೆಗಳನ್ನೇ ಒಪ್ಪಿಕೊಳ್ಳೋದು ನನ್ನ ಜಾಯಮಾನ’ ಎಂದು ಹೇಳಿದರು.

ಮತ್ತೊಬ್ಬ ಮುಖ್ಯ ಪಾತ್ರಧಾರಿ ಶರಣ್ಯ ಶೆಟ್ಟಿಮಾತನಾಡುತ್ತಾ, ‘ಸೀರಿಯಲ್‌ನಲ್ಲಿ ವಿಲನ್‌ ಪಾತ್ರ ಮಾಡಿದ್ದೆ. ಇದರಲ್ಲಿ ತರಲೆ, ನಿಂತಲ್ಲಿ ನಿಲ್ಲದ ತುಂಟ ಹುಡುಗಿ ಪಾತ್ರ. ಇದು ನನ್ನ ಮೊದಲ ಸಿನಿಮಾ. ಸಹಜವಾಗಿ ಆತಂಕ ಇದೆ’ ಎಂದರು.

ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಟೀಸರ್‌ ಬಿಡುಗಡೆ ಆಗಿದೆ. ಆರ್‌ಕೆ ಪ್ರೊಡಕ್ಷನ್‌ ಹಾಗೂ ಪೂಜಶ್ರೀ ಪ್ರೊಡಕ್ಷನ್‌ ಚಿತ್ರಕ್ಕೆ ಬಂಡವಾಳ ಹೂಡಿವೆ. ರಮೇಶ್‌ ಪಂಡಿತ್‌, ಅರವಿಂದ್‌ ರಾವ್‌, ಶ್ರೀಧರ್‌ ಪಾತ್ರವರ್ಗದಲ್ಲಿದ್ದಾರೆ. ಜೀವ ಅಂಟೋನಿ ಛಾಯಾಗ್ರಹಣ, ಚಿಂತನ್‌ ವಿಕಾಸ್‌ ಸಂಗೀತವಿದೆ.