Asianet Suvarna News Asianet Suvarna News

ಅದ್ಧೂರಿ ಚಿತ್ರಗಳ ಸಜ್ಜನ ನಿರ್ದೇಶಕ ರೇಣುಕಾ ಶರ್ಮಾ!

ಚಿತ್ರರಂಗಕ್ಕೆ ಬಂದಿದ್ದು ಯೌವ್ವನದಲ್ಲಿ, ನಿರ್ದೇಶಕರಾಗಿದ್ದು ನಲವತ್ತು ವರ್ಷ ದಾಟಿದ ಮೇಲೆ, ನಿರ್ದೇಶಿಸಿದ್ದು ಕಡಿಮೆ ಸಿನಿಮಾಗಳು, ಯಶಸ್ಸು ದೊಡ್ಡದು... ಇವಿಷ್ಟು ಸೇರಿದರೆ ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಅವರು
ನೆನಪಾಗುತ್ತಾರೆ. ಈ ಕೊರೋನಾ ಸಂಕಷ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಈ ಹಿರಿಯ ನಿರ್ದೇಶಕನನ್ನು ಕಳೆದುಕೊಂಡಿದೆ. ಅಗಲಿದ ರೇಣುಕಾ ಶರ್ಮಾ ಅವರ ಕುರಿತು ನಾದಬ್ರಹ್ಮ ಹಂಸಲೇಖ, ನಿರ್ಮಾಪಕ ಬಿ ಎನ್ ಗಂಗಾಧರ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಮಾತನಾಡಿದ್ದಾರೆ.


 

Producer Gangadhar actor Srinivas murthy cherishes memories about Late director Renuka Sharma vcs
Author
Bangalore, First Published May 7, 2021, 5:07 PM IST

ರೇಣುಕಾ ಶರ್ಮಾ ಅವರ ಜತೆಗೆ ನಾನು ಎರಡು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ದೈವ ಶಕ್ತಿ ಹಾಗೂ ಅಂಜದ ಗಂಡು. ಈ ಎರಡೂ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಅವರ ಜತೆಗೆ ಒಡನಾಟ ಬೆಳೆಸಿಕೊಂಡವನು ನಾನು. ರೇಣುಕಾ ಶರ್ಮಾ ಅವರ ಬಗ್ಗೆ ಮಾತನಾಡುವಾಗ ಮೊದಲು ನೆನಪಾಗುವುದು ರವಿಚಂದ್ರನ್ ನಟನೆಯ ಅಂಜದ ಗಂಡು ಚಿತ್ರದ ಸಮಯದಲ್ಲಾದ ಘಟನೆ. ಆಗ ಹಾಡುಗಳ ರೀರೇಕಾರ್ಡಿಂಗ್ ಸೇರಿದಂತೆ ಸಿನಿಮಾವೊಂದರ ತಾಂತ್ರಿಕ ಕೆಲಸಗಳು ಮದ್ರಾಸ್ ನಲ್ಲೇ ನಡೆಯುತ್ತಿದ್ದವು. ಅಂಥ ಸಮಯದಲ್ಲಿ ಅಂಜದ ಗಂಡು ಚಿತ್ರದ ಹಾಡುಗಳ ರೇಕಾರ್ಡಿಂಗ್ ಬೆಂಗಳೂರಿನಲ್ಲಿ ಮಾಡಲು ನಿರ್ಧರಿಸಿದ್ದು ನಿರ್ದೇಶಕ ರೇಣುಕಾ ಶರ್ಮಾ. ಇವರ ಮಾತಿಗೆ ಸೈ ಎಂದಿದ್ದು ನಾನು, ಸೋಮಶೇಖರ್, ನಿರ್ಮಾಪಕ ಬಿ ಎನ್ ಗಂಗಾಧರ್ ಅವರು. ಆದರೆ, ಬಹುತೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ರವಿಚಂದ್ರನ್ ಅವರಂತೂ ಮುನಿಸಿಕೊಂಡರು.

Producer Gangadhar actor Srinivas murthy cherishes memories about Late director Renuka Sharma vcs

ನಾನು ರೇಣುಕಾ ಶರ್ಮಾ ಅವರ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ, ಅಂಜದ ಗಂಡು, ಶಬರಿಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅವರು ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆ ಏಳೆಂಟು. ಆದರೆ, ಎಲ್ಲ ಚಿತ್ರಗಳೂ 25 ವಾರ ಯಶಸ್ವಿಯಾಗಿ ಪ್ರದರ್ಶನಗೊಂಡಿರುವುದು ಅವರ ನಿರ್ದೇಶನದ ಹೆಚ್ಚುಗಾರಿಕೆ. ಒಬ್ಬ ನಿರ್ದೇಶಕನಿಗೆ ಏನೆಲ್ಲ ತಿಳುವಳಿಕೆ ಇರಬೇಕೋ ಅಷ್ಟೂ ರೇಣುಕಾ ಶರ್ಮಾ ಅವರಲ್ಲಿತ್ತು. ಅದಕ್ಕೆ ಕಾರಣ ನಿರ್ದೇಶಕನಾಗುವ ಮುನ್ನ ಅವರು ಚಿತ್ರರಂಗದಿಂದ ಪಡೆದುಕೊಂಡಿದ್ದ ಅನುಭವ. ತಮ್ಮ ಸಿನಿಮಾ ಅನುಭವವನ್ನು ಪಣಕ್ಕಿಟ್ಟು ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಕಂಡವರು. ಚಿ ಉದಯ್ ಶಂಕರ್ ಅವರು ಬರೆದಿದ್ದನ್ನು ಶಕ್ತಿ ಮೀರಿ ತೆರೆ ಮೇಲೆ ತರುವ ಮೂಲಕ ಕವಿರತ್ನ ಕಾಳಿದಾಸ ಚಿತ್ರಕ್ಕೆ ಹೊಸ ಮೆರಗು ಕೊಡುವಲ್ಲಿ ರೇಣುಕಾ ಶರ್ಮಾ ಅವರ ಪಾತ್ರ ದೊಡ್ಡದು. ಪೌರಾಣಿಕ, ಇತಿಹಾಸ, ಜಾನಪದ ಹೀಗೆ ಎಲ್ಲದರ ಬಗ್ಗೆಯೂ ತಿಳುವಳಿಕೆ ಇದ್ದವರು ರೇಣುಕಾ ಶರ್ಮಾ. ಈ ಕಾರಣಕ್ಕೆ ಅವರ ನಿರ್ದೇಶನದ ಸಿನಿಮಾಗಳು 25 ವಾರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದವು. ನಾನು ಮಾಡಿದ ಭೋಜರಾಜ ಪಾತ್ರ ನೋಡುಗರಿಗೆ ಮೆಚ್ಚುಗೆ ಆಗಿದೆ ಎಂದರೆ ಅದಕ್ಕೆ ಕಾರಣ ನಿರ್ದೇಶಕರಾಗಿ ರೇಣುಕಾ ಶರ್ಮಾ ಅವರು ಪ್ರೀತಿಯಿಂದ ರೂಪಿಸಿದ ಪಾತ್ರ ಅದು. ಆದರೆ, ಯಾಕೋ ಚಿತ್ರರಂಗ ಮಾತ್ರ ಒಬ್ಬ ಧೀಮಂತ ನಿರ್ದೇಶಕನನ್ನು ದೂರ ಮಾಡಿತು. ಅವರಿಗೂ ಈ ಚಿತ್ರರಂಗದ ಮನಸ್ಥಿತಿ ಜೀರ್ಣಿಸಿಕೊಳ್ಳಲು ಆಗುತ್ತಿರಲಿಲ್ಲ ಅನಿಸುತ್ತದೆ. ಒಬ್ಬ ಕಲಾವಿದನಾಗಿ ರೇಣುಕಾ ಶರ್ಮಾ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಿದ್ದೇನೆಂಬ ಖುಷಿ, ಈಗ ಅವರು ಅಗಲಿದ್ದಾರೆಂಬ ದುಃಖ, ಇಂಥ ನಿರ್ದೇಶಕನಿಗೆ ಸಕಾಲದಲ್ಲಿ ದಕ್ಕಬೇಕಾದ ಗೌರವ ದಕ್ಕಲಿಲ್ಲ ಎನ್ನುವ ಬೇಸರ ಇದೆ, - ಶ್ರೀನಿವಾಸ ಮೂರ್ತಿ, ಹಿರಿಯ ನಟ

ನಾವು ಇದನ್ನೇ ಒಂದು ಸವಾಲಾಗಿ ಸ್ವೀಕರಿಸಿ ಅಂಜದ ಗಂಡು ಚಿತ್ರದ ಹಾಡುಗಳ ರೀರೇಕಾರ್ಡಿಂಗ್ ಅನ್ನು ಆಗ ಶಂಕರ್ ನಾಗ್ ಅವರ ಸಂಕೇತ್ ಸ್ಟುಡಿಯೋದಲ್ಲಿ ಮಾಡಿಸಿದ್ವಿ. ಇದೊಂದು ಐತಿಹಾಸಿಕ ಹೆಜ್ಜೆ ಅಂತಲೇ ಹೇಳಬೇಕು. ಯಾಕೆಂದರೆ ನಾವು ಅಂಜದ ಗಂಡು ಚಿತ್ರಕ್ಕೆ ರೀರೇಕಾರ್ಡಿಂಗ್ ಬೆಂಗಳೂರಿನಲ್ಲೇ ಮಾಡಿಸಿದ ಮೇಲೆ ಅದರ ಕ್ವಾಲಿಟಿ ನೋಡಿ ಮದ್ರಾಸ್ ನಿಂದ ಬೆಂಗಳೂರಿಗೆ ಮರಳಿದವರು ಸಂಖ್ಯೆ ಹೆಚ್ಚಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಮದ್ರಾಸ್ ನಲ್ಲೇ ನೆಲೆಸಿದ್ದ ಡಾ ರಾಜ್ ಕುಮಾರ್ ಅವರ ಕುಟುಂಬ ಬೆಂಗಳೂರಿನ ಸದಾಶಿವನಗರಕ್ಕೆ ಬಂದು ನೆಲೆಸಲು ಈ ಒಂದು ಘಟನೆ ಕೂಡ ಒಂದು ಕಾರಣವಾಯಿತು. ಇಲ್ಲಿಗೆ ಬಂದ ಮೇಲೆ ಅವರು ಚಾಮುಂಡೇಶ್ವರಿ ಸ್ಟುಡಿಯೋವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು.

Producer Gangadhar actor Srinivas murthy cherishes memories about Late director Renuka Sharma vcs

'ಕವಿರತ್ನ ಕಾಳಿದಾಸ', 'ಅಂಜದ ಗಂಡು' ನಿರ್ದೇಶಕ ರೇಣುಕಾ ಶರ್ಮಾ ಕೊರೋನಾಗೆ ಬಲಿ 

ಇನ್ನೂ ಮುನಿಸಿಕೊಂಡಿದ್ದ ರವಿಚಂದ್ರನ್ ಅವರಿಗೆ ಖುಷಿ ಕೊಟ್ಟಿದ್ದು ರೀರೇಕಾರ್ಡಿಂಗ್ ಸ್ಪಾಟ್ ನಲ್ಲೇ ಹಾಡಿನಲ್ಲಿ ನಾನು ಮಾಡಿದ ಬದಲಾವಣೆ. ಈ ಹಾಡನ್ನು ಮೈಸೂರಿನಲ್ಲಿ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರು ರವಿಚಂದ್ರನ್ ಮುಂದೆ ಪ್ಲೇ ಮಾಡಿದರು. ಹಾಡಿನ ಮೊದಲ ಸಾಲು ಕೇಳಿಯೇ ಸುತ್ತ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದರು. ಆಗ ರವಿಚಂದ್ರನ್ ಅವರ ಮುನಿಸು ದೂರ ಮಾಡಿ ಎಲ್ಲರ ಮುಖದಲ್ಲೂ ಸಂಭ್ರಮ ಮೂಡಿಸಿದ ಆ ಹಾಡು ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎನ್ನುವುದು. ಹೀಗೆ ಒಂದು ಹಾಡು, ಬೆಂಗಳೂರಿನಲ್ಲೇ ಅಂಜದ ಗಂಡು ಚಿತ್ರಕ್ಕೆ ರೀರೇಕಾರ್ಡಿಂಗ್ ಮಾಡಿಸಬೇಕು ನಿರ್ಧಾರ, ಅದರಿಂದ ಆದ ಹೊಸ ಬದಲಾವಣೆಯನ್ನು ನೆನಪಿಸಿಕೊಂಡು ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಅವರು ನೆನಪಾಗುತ್ತಾರೆ. ಒಬ್ಬ ಒಳ್ಳೆಯ ನಿರ್ದೇಶಕನನ್ನು ನಾವು ಕಳೆದುಕೊಂಡಿದ್ದೇವೆ.- ಹಂಸಲೇಖ, ಸಂಗೀತ ನಿರ್ದೇಶಕ

ನನ್ನ ಬ್ಯಾನರ್ ಗೆ ಎರಡು ಚಿತ್ರಗಳನ್ನು ನಿರ್ದೇಶನ ಮಾಡಿದವರು ರೇಣುಕಾ ಶರ್ಮಾ ಅವರು. ಅಂಜದ ಗಂಡು ಹಾಗೂ ದೈವ ಶಕ್ತಿ. ಈ ಎರಡೂ ಸಿನಿಮಾಗಳ ನಂತರ ಸುಂದರ ಲೋಕ ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರ ಶುರುವಾದ ಹಿನ್ನೆಲೆಯೇ ದೊಡ್ಡ ಕತೆ. ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಲು ಒಪ್ಪಿದ್ದು ಶಂಕರ್ ನಾಗ್. ಆಗ ತುಂಬಾ ಬ್ಯುಸಿಯಾಗಿದ್ದ ನಟಿ ಶಶಿಕಲಾ ಅವರು ಚಿತ್ರದ ನಾಯಕಿ ಆದರು. ರವಿಚಂದ್ರನ್, ಆನಂತ್ ನಾಗ್, ದೇವರಾಜ್, ಶಶಿಕುಮಾರ್, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ ಹೀಗೆ ದೊಡ್ಡ ತಾರಾಬಳಗವನ್ನೇ ಸೇರಿಸಿದ್ದೆ. ಒಂದೇ ದಿನ ಕಲಾವಿದರ ಸಂಭಾವನೆ ಹಾಗೂ ಶೂಟಿಂಗ್ ವೆಚ್ಚ ಸೇರಿದರೆ ಆಗಿನ ಕಾಲದಲ್ಲಿ ಮೂರು ದಿನಕ್ಕೆ 65 ಲಕ್ಷ ಕೊಟ್ಟಿದ್ದೆ. ಚಿತ್ರೀಕರಣ ಶುರುವಾಗುವ ಹೊತ್ತಿಗೆ 1 ಕೋಟಿ ವೆಚ್ಚ ಆಗಿತ್ತು. ಅದಕ್ಕೆ ಕಾರಣ ರೇಣುಕಾ ಶರ್ಮಾ ಅವರು ಮಾಡಿಕೊಂಡಿದ್ದ ಚಿತ್ರಕಥೆ, ಶಂಕರ್ ನಾಗ್ ಅವರನ್ನು ವಿಲನ್ ಪಾತ್ರಕ್ಕೆ ಒಪ್ಪಿಸಿದ್ದು ಹಾಗೂ ರವಿಚಂದ್ರನ್ ಅವರು ಕತೆ ಬರೆಯುವ ಜತೆಗೆ ಹೀರೋ ಆಗಿ ನಟಿಸಲು ಒಪ್ಪಿದ್ದು. ಹೀಗೆ ಆಗಲೇ ದೊಡ್ಡ ಬಜೆಟ್ ನ ಬಹುತಾರಾಗಣದ ಸಿನಿಮಾ ನಿರ್ಮಿಸಲು ಪ್ರೇರಣೆಯಾಗಿದ್ದು ರೇಣುಕಾ ಶರ್ಮಾ ಅವರು. ಆದರೆ, ಕಾರಣಾಂತರಗಳಿಂದ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ರವಿಚಂದ್ರನ್ ಅವರ ಕೈಗೆ ಹೋಯಿತು. ಆದರೆ, ಸಾವಿರ ಅಡಿಯ ನೂರು ರೋಲ್ ರೀಲ್ ಶೂಟ್ ಆಗುವ ಹೊತ್ತಿಗೆ ವಿಲನ್ ಪಾತ್ರಧಾರಿ ಶಂಕರ್ ನಾಗ್ ದುರಂತರದಲ್ಲಿ ತೀರಿಕೊಂಡರು. ಅವರನ್ನು ರೀಪ್ಲೆಸ್ ಮಾಡಲು ಹಾಗೂ ಶೂಟ್ ಮಾಡಿದ್ದನ್ನೇ ಸಿನಿಮಾ ರೂಪದಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಾಗ ಸುಂದರ ಲೋಕ ಸಿನಿಮಾ ಡ್ರಾಪ್ ಆಯಿತು. ಒಟ್ಟಾರೆ ರೇಣುಕಾ ಶರ್ಮಾ ಅವರಿಂದ ಆರಂಭವಾದ ಸುಂದರ ಲೋಕ ಎನ್ನುವ ಒಂದು ದೊಡ್ಡ ಸಿನಿಮಾ ಕಾರಣಾಂತರಗಳಿಂದ ನಿಂತು ಹೋಯಿತು. ಅಂದುಕೊಂಡಂತೆ ಆ ಸಿನಿಮಾ ಬಂದಿದ್ದರೆ ರೇಣುಕಾ ಶರ್ಮಾ ಅವರು ಮತ್ತೊಂದು ದೊಡ್ಡ ಯಶಸ್ಸಿನ ಸಿನಿಮಾ ನಿರ್ದೇಶಕರಾಗುತ್ತಿದ್ದರು. ನನ್ನ ಬ್ಯಾನರ್ ನಲ್ಲಿ ಇನ್ನೊಂದು ಅದ್ಭುತ ಸಿನಿಮಾ ಸೇರ್ಪಡೆಯಾಗುತ್ತಿತ್ತು. ರೇಣುಕಾ ಶರ್ಮಾ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ 1988ರಲ್ಲಿ ಆದ ಈ ಸುಂದರ ಲೋಕದ ಸಿನಿಮಾ ಹಿಂದಿನ ಕತೆ ನೆನಪಾಗುತ್ತಿದೆ. ಒಬ್ಬ ಸಜ್ಜನ ನಿರ್ದೇಶಕನ ಸಿನಿಮಾಗಳಿಗೆ ನಿರ್ಮಾಪಕನಾದ ತೃಪ್ತಿ ಇದೆ. - ಬಿ ಎನ್ ಗಂಗಾಧರ್, ನಿರ್ಮಾಪಕ

Follow Us:
Download App:
  • android
  • ios