ಪ್ರೇಮ ಕತೆಯಲ್ಲಿ ನಾನು ಟೀಚರ್: ಪ್ರಿಯಾಂಕ ತಿಮ್ಮೇಶ್
ನಟಿ ಪ್ರಿಯಾಂಕ ತಿಮ್ಮೇಶ್ ‘ಗಣಪ’, ‘ಪಟಾಕಿ’, ‘ಭೀಮಸೇನ ನಳಮಹಾರಾಜ’ ಚಿತ್ರಗಳ ನಂತರ ಈಗ ‘ಗಿಬ್ಸಿ’ ಎನ್ನುವ ಹೊಸ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅವರ ಜತೆ ಮಾತುಕತೆ.
ಆರ್ ಕೇಶವಮೂರ್ತಿ
ತುಂಬಾ ವಿಶೇಷ ಎನಿಸುವ ಹೆಸರಿನ ಚಿತ್ರಕ್ಕೆ ನಾಯಕಿ ಆಗಿದ್ದೀರಲ್ಲ?
ಗಿಬ್ಸಿ ಎನ್ನುವ ಹೆಸರು ಸೌಂಡು ಕೇಳಕ್ಕೆ ಚೆನ್ನಾಗಿದೆ. ಅದಕ್ಕೆ ತುಂಬಾ ಅರ್ಥ ಕೂಡ ಇದೆ. ವಿಭಿನ್ನವಾದ ಹೆಸರು, ಹೊಸ ಅರ್ಥ ಇರುವ ಚಿತ್ರಕ್ಕೆ ನಾಯಕಿ ಆಗಿರುವ ಖುಷಿ ಇದೆ.
ಗಿಬ್ಸಿ ಅಂದರೆ ಏನು?
ಅಲೆಮಾರಿ ಎಂದರ್ಥ. ಚಿತ್ರದ ನಾಯಕನ ಅಡ್ಡ ಹೆಸರು ಕೂಡ ಇದೇ. ಚಿತ್ರದ ನಾಯಕನ ಹೆಸರು ಗುಣ. ಎಲ್ಲರೂ ಅವನನ್ನ ಗಿಬ್ಸಿ ಅಂತಲೇ ಕರೆಯುತ್ತಾರೆ. ಅದೇ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕತೆ.
ಈ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?
ಮುಗ್ಧ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಬಾರಿಗೆ ಟೀಚರ್ ಆಗಿದ್ದೇನೆ.
ನೀವು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ?
ನಿರ್ದೇಶಕ ಶ್ರೀನೇಶ್ ಎಸ್ ನಾಯರ್ ಅವರ ಉತ್ಸಾಹ. ಅವರು ಮಾಡಿಕೊಂಡಿದ್ದ ಕತೆ ಮತ್ತು ಅದನ್ನು ಹೀಗೇ ತೆರೆ ಮೇಲೆ ತರಬೇಕು ಎನ್ನುವ ಪ್ರಾಮಾಣಿಕವಾದ ಯೋಚನೆಯೇ ನಾನು ಈ ಚಿತ್ರದ ಭಾಗವಾಗಬೇಕು ಎನಿಸಿತು.
'ಭೀಮಸೇನ ನಳಮಹಾರಾಜ' ನಟಿ ಪ್ರಿಯಾಂಕಾ ತಿಮ್ಮೇಶ್ ಕೈಯಲ್ಲಿ ಕನ್ನಡ ಮಾತ್ರವಲ್ಲ ತಮಿಳಿಂದ ಆಫರ್?
ಯಾವಾಗ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ, ಚಿತ್ರತಂಡದಲ್ಲಿ ಯಾರೆಲ್ಲ ಇದ್ದಾರೆ?
ಫೆಬ್ರವರಿ ತಿಂಗಳ ಕೊನೆಯ ವಾರದಿಂದ ಚಿತ್ರೀಕರಣ. ಶಿವಮೊಗ್ಗ, ಸಕಲೇಶ್ವರ ಮುಂತಾದ ಕಡೆ ನಡೆಯಲಿದೆ. ಉದಯ್ ಶಂಕರ್ ಎಸ್ ಹಾಗೂ ಗುರುಸ್ವಾಮಿ ನಿಜಗುಣ ಚಿತ್ರದ ನಿರ್ಮಾಪಕರು. ಈ ಹಿಂದೆ ‘ಗೊಂಬೆಗಳ ಲವ್’ ಚಿತ್ರದ ಮೂಲಕ ಪರಿಚಯ ಆದ ಅರುಣ್ ಕುಮಾರ್ ಚಿತ್ರದ ನಾಯಕ. ಗಾಯಕಿ ಅನನ್ಯ ಭಟ್ ತುಂಬಾ ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸತೀಶ್ ನೀನಾಸಂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.