ಬಹುಭಾಷಾ ನಟ ಸುಮನ್‌ ಪೊಲೀಸ್‌ ಅಧಿಕಾರಿಯಾಗಿ ನಿಂತಿದ್ದರು. ಅವರ ಎದುರು ಸೆಲ್ಯೂಟ್‌ ಹೊಡೆಯುತ್ತ ಎಂಟ್ರಿ ಆಗಿದ್ದು ನಟಿ ಪ್ರಿಯಾಂಕ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದ ಮಹಿಳಾ ಪೊಲೀಸ್‌ ಅಧಿಕಾರಿಯನ್ನು ಸುಮನ್‌ ಸ್ವಾಗತಿಸಿದರು. ಖಾಕಿ ಖದರ್‌ ತೋರುವ ಒಂದೆರಡು ಖಡಕ್‌ ಡೈಲಾಗ್‌ಗಳು, ಐ ಯ್ಯಾಮ್‌ ಇನ್ಸ್‌ಪೆಕ್ಟರ್‌ ದುರ್ಗಿ ಎನ್ನುವ ಪ್ರಿಯಾಂಕ....

ಇದು ನಡೆದಿದ್ದು ‘ಉಗ್ರಾವತಾರ’ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ, ರುಪ್ಪೀಸ್‌ ರೆಸಾರ್ಟ್‌ನಲ್ಲಿ. ಇಡೀ ಸೆಟ್‌ ತುಂಬಾ ಖಾಕಿ ಕಲರವ. ಇದರ ಮಧ್ಯೆ ಅಧಿಕಾರ ವಹಿಸಿಕೊಳ್ಳುವ ದೃಶ್ಯಗಳನ್ನು ನಿರ್ದೇಶಕ ಗುರುಮೂರ್ತಿ ಚಿತ್ರೀಕರಣ ಮಾಡಿಕೊಂಡರು.

ಈಗಾಗಲೇ ಬೆಂಗಳೂರು, ನೆಲಮಂಗಲದ ಸುತ್ತಮುತ್ತ ಶೇ. 70ರಷ್ಟುಚಿತ್ರೀಕರಣ ಮುಗಿಸಿರುವ ನಿರ್ದೇಶಕರು, ಖಾಕಿ ಮೂಲಕ ಕಮರ್ಷಿಯಲ್‌ ಸಂದೇಶ ಹೇಳುವ ಕತೆಯನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದಾರಂತೆ. ಅದರಲ್ಲೂ ಮಹಿಳೆಯರನ್ನು ಗೌರವಿಸುವ ಬಗ್ಗೆ ಈ ಸಿನಿಮಾ ಮಾತನಾಡುತ್ತದೆಯಂತೆ. ಇಲ್ಲಿ ಕನ್ನಡದ ಮೂಲಕ ಬಹುಭಾಷಾ ನಟ ಸುಮನ್‌ ಪೊಲೀಸ್‌ ಆಯುಕ್ತರಾಗಿ ನಟಿಸಿದರೆ, ಖಳನಾಗಿ ಸತ್ಯಪ್ರಕಾಶ್‌, ನಟರಾಜ್‌, ರೂಪರಾಯಪ್ಪ, ಶಂಕರಪ್ಪ, ಕಾಕ್ರೋಚ್‌ ಸುಧಿ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸಂಗೀತ ರಾಧಕೃಷ್ಣ ಬಸ್ರೂರು ಅವರದ್ದು.

ನಾನು ಮೊದಲಬಾರಿ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಪಾತ್ರದ ಹೆಸರು ದುರ್ಗಿ. ಪಕ್ಕಾ ಮಾಸ್‌ ಸಿನಿಮಾ. ಇದೇ ಕಾರಣಕ್ಕೆ ನಾನು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಪ್ರಸಕ್ತ ಸಾಮಾಜಿಕ ವಿಷಯಗಳು, ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಅಪರಾಧದ ಜತೆಗೆ ಗಂಭೀರ ಸಂಗತಿಗಳ ಸುತ್ತ ಈ ಚಿತ್ರದ ಕತೆ ಸಾಗುತ್ತದೆ. ಸಾಹಸ ಸನ್ನಿವೇಶಗಳಿಗೆ ಡ್ಯೂಪ್‌ ಬಳಸದೆ ನಾನೇ ಫೈಟ್‌ ಮಾಡುತ್ತಿದ್ದೇನೆ. ‘ಉಗ್ರಾವತಾರ’ ಸಿನಿಮಾ ಸೇರಿ ಈ ವರ್ಷ ನನ್ನ ನಟನೆಯ ಮೂರು ಚಿತ್ರಗಳು ಬಿಡುಗಡೆಯಾಗಲಿವೆ’ ಎಂದರು.

ಸತೀಶ್‌ ಈ ಚಿತ್ರದ ನಿರ್ಮಾಪಕರು. ನಂದಕುಮಾರ್‌ ಕ್ಯಾಮೆರಾ ಚಿತ್ರಕ್ಕಿದೆ. ಸುಮನ್‌ ಎಂದಿನಂತೆ ಹೆಚ್ಚು ಮಾತನಾಡಲಿಲ್ಲ.