ಪ್ರಿಯಾಂಕಾ ಉಪೇಂದ್ರ ‘ಉಗ್ರ ಅವತಾರ’ ಚಿತ್ರದ ಪ್ರಮುಖ ಫೋಟೋವೊಂದನ್ನು ಶೇರ್‌ ಮಾಡಿದ್ದಾರೆ. ಇದರಲ್ಲಿ ದುರ್ಗಾ ಪಾತ್ರಧಾರಿ ಪ್ರಿಯಾಂಕಾ ಉಪೇಂದ್ರ ಉಗ್ರ ಅವತಾರ್‌ನಲ್ಲಿ ವಿಜೃಂಭಿಸುತ್ತಿದ್ದರೆ, ಹಿನ್ನೆಲೆಯಲ್ಲಿ ದುರ್ಗಾದೇವಿಯ ಬೃಹತ್‌ ವಿಗ್ರಹವಿದೆ. ವೈರಲ್‌ ಆಗುತ್ತಿರೋ ಈ ಲುಕ್‌ ಕುರಿತಾಗಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಿಷ್ಟು.

ಸ್ತ್ರೀ ಶಕ್ತಿಯ ವಿಜೃಂಭಣೆ

‘ಉಗ್ರ ಅವತಾರ’ ಚಿತ್ರದಲ್ಲಿ ನನ್ನದು ದುರ್ಗಾ ಎಂಬ ಪಾತ್ರ. ಈ ಸೀಕ್ವೆನ್ಸ್‌ನಲ್ಲಿ ನನ್ನ ಮುಖದ ಮೇಲೆ ಕುಂಕುಮ, ಅರಿಶಿನ ಚೆಲ್ಲಿದೆ. ಇದೊಂದು ಫೈಟ್‌ ಸನ್ನಿವೇಶ. ತಮಟೆಯ ಹಿನ್ನೆಲೆ ಇರುತ್ತೆ. ಮುಖ್ಯ ವಿಲನ್‌ ಅಜಯ್‌ ಮತ್ತು ಟೀಮ್‌ ಜೊತೆಗೆ ನನ್ನ ಫೈಟ್‌. ಹಿನ್ನೆಲೆಯಲ್ಲಿರುವ ದೇವಿ ದುರ್ಗೆ, ನನ್ನ ಪಾತ್ರವೂ ದುರ್ಗಾ. ಇಲ್ಲಿ ನಾವಿಬ್ಬರೂ ಸ್ತ್ರೀ ಶಕ್ತಿಯಾಗಿ ವಿಜೃಂಭಿಸುತ್ತೇವೆ. ದುಷ್ಟಶಕ್ತಿಗಳ ವಿರುದ್ಧ ಹೋರಾಡಿ ಶಿಷ್ಟರನ್ನು ಪೊರೆಯುತ್ತೇವೆ. ಈ ಸೀಕ್ವೆನ್ಸ್‌ ಸಿನಿಮಾದ ಮುಖ್ಯಕಥೆಗೆ ಕನೆಕ್ಟ್ ಆಗುತ್ತೆ. ನೆಲಮಂಗಲದ ಹತ್ರ ಸೆಟ್‌ ಹಾಕಿ ಈ ಸನ್ನಿವೇಶ ಚಿತ್ರೀಕರಿಸಲಾಗಿತ್ತು. ಸಿನಿಮಾದಲ್ಲಿ ಒಟ್ಟು ಐದು ಫೈಟ್‌ ಸೀನ್‌ಗಳಿವೆ. ಇದು ನಾಲ್ಕನೇ ಫೈಟ್‌. ಕ್ಲೈಮ್ಯಾಕ್ಸ್‌ ಫೈಟ್‌ ಸೀನ್‌ ಇನ್ನಷ್ಟೇ ಶೂಟ್‌ ಆಗಬೇಕಿದೆ.

ಸಖತ್‌ ಚಾಲೆಂಜಿಂಗ್‌

ನನ್ನ ವ್ಯಕ್ತಿತ್ವಕ್ಕೂ ಈ ಪಾತ್ರಕ್ಕೂ ಅಜಗಜಾಂತರ. ಇದು ಬಹಳ ರಫ್‌ ಆ್ಯಂಡ್‌ ಟಫ್‌ ಪಾತ್ರ. ಈಕೆ ಶಾರ್ಟ್‌ ಟೆಂಪರ್‌್ಡ. ಮಾತಿಗೂ ಮೊದಲೇ ಅವಳ ಕೈಯಲ್ಲಿರುವ ಲಾಠಿ ಮಾತಾಡುತ್ತೆ. ಅದರಲ್ಲೂ ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಕಂಡರೆ ಆಕೆ ಕನಲಿ ಕೆಂಡವಾಗುತ್ತಾಳೆ.

ಈ ಪಾತ್ರಕ್ಕಾಗಿ ಸಾಕಷ್ಟುಸಿದ್ಧತೆ ಮಾಡಿದ್ದೆ. ಫೈಟ್‌ ಮಾಸ್ಟರ್‌ ಕಲಿಸಿದ ಪಟ್ಟುಗಳನ್ನು ಶ್ರದ್ಧೆಯಿಂದ ಕಲಿಯುತ್ತಿದ್ದೆ. ಫೈಟ್‌ ಸೀನ್‌ಗಳನ್ನು ಹೆಚ್ಚು ಗ್ರಾಫಿಕ್ಸ್‌ ಇಲ್ಲದೇ ರಿಯಾಲಿಟಿಗೆ ಹತ್ತಿರವಿರುವಂತೆ ಚಿತ್ರೀಕರಿಸಲಾಗಿದೆ. ಇದು ಕಮರ್ಷಿಯಲ್‌ ಸಿನಿಮಾ. ಆದರೂ ಬದುಕಿಗೆ ಕನೆಕ್ಟ್ ಆಗುವಂತೆ ರಿಯಲಿಸ್ಟಿಕ್‌ ಆಗಿ ಮಾಡಿದ್ದಾರೆ.

ಈ ಚಿತ್ರದ ಟ್ರೇಲರ್‌ಅನ್ನು ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ಬಂಗಾಳಿ ಹೀಗೆ ಆರು ಭಾಷೆಗಳಲ್ಲಿ ಹೊರತರುವ ಯೋಚನೆ ತಂಡದ್ದು.

ಉಗ್ರಾವತಾರದಲ್ಲಿ ಪ್ರಿಯಾಂಕ ಉಪೇಂದ್ರ..! 

ಚೈತ್ರ ನವರಾತ್ರಿಗಾಗಿ ಈ ಫೋಟೋ ಶೇರ್‌ ಮಾಡಿದೆ!

ನಮ್ಮ ಉತ್ತರ ಭಾರತದ ಕಡೆ ವಸಂತ ಮಾಸದ ಆರಂಭದ ಈ ಒಂಭತ್ತು ದಿನಗಳನ್ನು ಚೈತ್ರ ನವರಾತ್ರಿ ಅಂತ ಆಚರಣೆ ಮಾಡುತ್ತೇವೆ. ದೇವಿಯನ್ನು ಶ್ರದ್ಧೆಯಿಂದ ಆರಾಧಿಸುವ ಸಮಯವಿದು. ಈ ಕಾರಣಕ್ಕೆ ದೇವಿಯ ಹಿನ್ನೆಲೆ ಇರುವ ಈ ಫೋಟೋವನ್ನು ಶೇರ್‌ ಮಾಡಿದ್ದೇನೆ. ಜೊತೆಗೆ ಯುಗಾದಿ ಹಬ್ಬದ ಸೆಲೆಬ್ರೇಶನ್ನೂ ಇದೆ.