ಭೂತದ ಸಿನಿಮಾ ಶೂಟಿಂಗ್​ ವೇಳೆ ನಡೆದ ಭಯಾನಕ ಘಟನೆಗಳ ಕುರಿತು ವಿವರಿಸಿದ ನಟಿ ಪ್ರಿಯಾಂಕಾ ಉಪೇಂದ್ರ 

ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra). ಇದೀಗ ಇನ್ನೊಂದು ವಿಭಿನ್ನ ರೀತಿಯಲ್ಲಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಮತ್ತೊಂದು ಭಯಾನಕ ಚಿತ್ರದಲ್ಲಿ ಇವರು ಕಾಣಿಸಿಕೊಳ್ಳಲಿದ್ದು, ಅದರ ಪೋಸ್ಟರ್​ ರಿಲೀಸ್​ ಆಗಿದೆ. ಈ ಪೋಸ್ಟರ್​ ಮೂಲಕ ಸ್ಯಾಂಡಲ್​ವುಡ್​ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರು ಕ್ಯಾಪ್ಚರ್​ (Capture). ಸದ್ಯ ಕ್ಯಾಪ್ಚರ್ ತಂಡ ವಿಭಿನ್ನವಾಗಿ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ದಾಖಲೆ ಮಾಡಿದೆ. ಅಭಿಮಾನಿಗಳ ಮಧ್ಯೆಯೇ ಕ್ಯಾಪ್ಚರ್ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿದ್ದು ವಿಶೇಷವಾಗಿತ್ತು. ಇಲ್ಲಿ ದಾಖಲೆಯಾಗಿರುವುದು ಏನೆಂದರೆ, ಚಿತ್ರದ ಪೋಸ್ಟರ್​ 60 ಅಡಿ ಕಟೌಟ್​ ಹಾಕಲಾಗಿದೆ. ಸ್ಯಾಂಡಲ್‌ವುಡ್‌ನಲ್ಲೇ ಮೊದಲ ಬಾರಿಗೆ ನಾಯಕಿಯೊಬ್ಬರ ಪೋಸ್ಟರ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ 60 ಅಡಿಯ ಕಟೌಟ್ ನಿಲ್ಲಿಸುವ ಮೂಲಕ ಬಿಡುಗಡೆ ಮಾಡಿರುವುದು ಇತಿಹಾಸ ಸೃಷ್ಟಿಯಾಗಿದೆ. ಜೊತೆಗೆ ಕನ್ನಡ ಸಿನಿಮಾರಂಗದಲ್ಲಿಯೇ ಇದೊಂದು ವಿನೂತನವಾದ ಪ್ರಯತ್ನವಾಗಿದೆ. ಪ್ರಿಯಾಂಕಾ ಉಪೇಂದ್ರ ಅವರ 60 ಅಡಿ ಕೌಟೌಟ್ ಪೋಸ್ಟರ್​ ಅನ್ನು ವೀರೇಶ್​​ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದ್ದು, ಸಿನಿಮಾದ ಟೈಟಲ್ ಪೋಸ್ಟರ್ ರಿವೀಲ್ ಮಾಡಲಾಯಿತು.

ಇದಕ್ಕೂ ಮುನ್ನ ಪ್ರಿಯಾಂಕಾ ಉಪೇಂದ್ರ ಅವರು, ಮಮ್ಮಿ ಸೇವ್​ ಮಿ, ಖೈಮರಾದಂಥ ಹಾರರ್​ ಚಿತ್ರಗಳನ್ನೂ ಮಾಡಿದ್ದಾರೆ. ಇದೀಗ ಈ ರೀತಿಯ ಭಯಾನಕ ಚಿತ್ರಗಳನ್ನು ಮಾಡುವಾಗ ತಮಗಾಗಿರುವ ವಿಚಿತ್ರ ಅನುಭವ ಹಾಗೂ ಶೂಟಿಂಗ್​ ಸಮಯದಲ್ಲಿ ಆದ ಘಟನೆಗಳನ್ನು ವಿವರಿಸಿದ್ದಾರೆ. ಮಗ ಆಯುಷ್​ಗೆ ಅವರು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. ಅವರ ಮಮ್ಮಿ ಸೇವ್​ ಮಿ ಚಿತ್ರದ ಅನುಭವವೂ ಸ್ವಲ್ಪ ಭಯಾನಕವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ಈ ಸಿನಿಮಾದಲ್ಲಿ ನನ್ನ ಮಗಳ ಪಾತ್ರ ಮಾಡಿದ್ದ ಹುಡುಗಿ ಬೈಕ್​ನಿಂದ ಬೀಳುವ ದೃಶ್ಯವಿತ್ತು. ಆ ಸಮಯದಲ್ಲಿ ಅವಳಿಗೆ ಪೆಟ್ಟಾಗಿರುತ್ತದೆ. ಅವಳ ಆರೈಕೆ ನಾನು ಮಾಡುವುದು ಸೀನ್​. ಆದರೆ ತುಂಬಾ ವಿಚಿತ್ರವಾದ ಘಟನೆಯೊಂದು ನಡೆಯಿತು. ಅದೇನೆಂದರೆ, ಶೂಟಿಂಗ್​ಮಾಡಿದ ಜಾಗದಲ್ಲಿ ಶೂಟಿಂಗ್​ ಮುಗಿದ ಬಳಿಕ ಆಕೆ ಸೈಕಲ್​ ಮೇಲೆ ಹೋಗಿದ್ದಳು. ಚಿತ್ರದಲ್ಲಿ ಆಕೆಗೆ ಎಲ್ಲಿ ಗಾಯವಾಗುತ್ತದೆ ಎಂದು ತೋರಿಸಲಾಗಿತ್ತೋ, ನಿಜಕ್ಕೂ ಆಕೆಗೆ ಅಲ್ಲಿಯೇ ಗಾಯವಾಗಿತ್ತು ಎಂದಿದ್ದಾರೆ. ಇಂಥ ಕೆಲವು ವಿಚಿತ್ರ ಘಟನೆಗಳು ನಡೆದಿರುವುದಾಗಿ ನಟಿ ಹೇಳಿದ್ದಾರೆ.

60 ಅಡಿ ಎತ್ತರದ ಪ್ರಿಯಾಂಕಾ- ಸ್ಯಾಂಡಲ್​ವುಡ್​​ನಲ್ಲೇ ಡಬಲ್​ ಇತಿಹಾಸ ಸೃಷ್ಟಿಸಿದ 'ಕ್ಯಾಪ್ಚರ್'​!

ಇನ್ನೊಂದು ವಿಚಿತ್ರ ಅನುಭವ ತಮಗಾಗಿದ್ದು, ಶೂಟಿಂಗ್​ ಸಮಯದಲ್ಲಿ ಭೂತದ ಮುಖವಾಡ ಮಾಡಿ ಇಟ್ಟ ವಿಷಯ ಎಂದು ಆ ಅನುಭವ ಶೇರ್​ ಮಾಡಿಕೊಂಡಿದ್ದಾರೆ. ಶೂಟಿಂಗ್​ಗಾಗಿ ಭೂತದ ಮುಖವಾಡ ಮಾಡಿ ರೂಮ್​ನಲ್ಲಿ ಇಡಲಾಗಿತ್ತು. ಅದನ್ನು ನೋಡಿದರೆ ಎಂಥವರೂ ಬೆಚ್ಚಿಬೀಳುವಂತಿತ್ತು. ಆ ಕೋಣೆಯಲ್ಲಿ ನಮ್ಮ ನಿರ್ದೇಶಕರು ಮಲಗುತ್ತಿದ್ದರು. ಅವರಿಗೇನೂ ಹೆದರಿಕೆ ಇರಲಿಲ್ಲ. ಆದರೆ ಅವರಿಗೆ ಪ್ರತಿ ರಾತ್ರಿ ಬಾಗಿಲು ಬಡಿದ ಶಬ್ದಗಳು ಕೇಳುತ್ತಿತ್ತಂತೆ. ಇದರಿಂದ ಸ್ವಲ್ಪ ಭಯವೇ ಆಗಿತ್ತು ಎಂದು ಅನುಭವ ಹೇಳಿದ್ದಾರೆ. 

ಬಾಲ್ಯದಿಂದಲೂ ತಮಗೆ ಹಾರರ್​ ಚಿತ್ರ ನೋಡುವ ಆಸೆ ಇದ್ದುದರಿಂದ ಅದರ ಬಗ್ಗೆ ಸಹಜವಾಗಿ ಕುತೂಹಲ ಹೆಚ್ಚಿತ್ತು. ಆದ್ದರಿಂದ ಈಗ ಆ ಚಿತ್ರಗಳನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ ಪ್ರಿಯಾಂಕಾ ಉಪೇಂದ್ರ. ಭೂತದ ಚಿತ್ರಗಳು ಮಾತ್ರವಲ್ಲ, ಸಹಜವಾಗಿ ಎಲ್ಲಾ ಚಿತ್ರಗಳ ಶೂಟಿಂಗ್​ ಮಾಡುವಾಗಲೂ ಪೂಜೆ ಮಾಡುವುದು ರೂಢಿ. ಪಾಸಿಟಿವ್​ ಎನರ್ಜಿಗಾಗಿ ಇದನ್ನು ಮಾಡಲಾಗುತ್ತದೆ. ಹಾರರ್​ ಚಿತ್ರ ಮಾಡುವಾಗ ಇದು ಸ್ವಲ್ಪ ಜಾಸ್ತಿಯೇ ಇರುತ್ತದೆ. ಇಷ್ಟೇ ಅಲ್ಲದೇ, ನಾನು ಹಾರರ್ ಸಿನಿಮಾದ ಶೂಟಿಂಗ್​ ಮುಗಿಸಿ ಬಂದಾಗ ಕೆಲವು ವಿಧಿ-ವಿಧಾನಗಳನ್ನು ಪಾಲಿಸುತ್ತೇನೆ. ಮನೆ ತಲುಪುತ್ತಿದ್ದಂತೆ ಸ್ನಾನ ಮಾಡಿ, ಪೂಜೆ ಮಾಡಿ ಧ್ಯಾನ ಮಾಡುತ್ತೇನೆ. ಇಂಥ ಚಿತ್ರಗಳನ್ನು ಮಾಡುವಾಗ ನನ್ನ ಕೊರಳಲ್ಲಿ ದೇವಿಯ ಸಣ್ಣ ವಿಗ್ರಹ ಇದ್ದೇ ಇರುತ್ತದೆ. ಅದು ನನ್ನನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತದೆ ಎಂದಿದ್ದಾರೆ.

ನನ್ನನ್ನು ಅಪ್ಪಿಕೊಂಡು ಕಿವಿ ನೆಕ್ಕಿದಳು: ತಮಗಾದ ಕೆಟ್ಟ ಅನುಭವ ಹೇಳಿದ ನಟ ಹಾರ್ಡಿ ಸಂಧು