ಮಕ್ಕಳ ಉಸಿರುಗಡ್ತಾ ಇದೆ, ಮಾತನಾಡ್ತಾ ಇಲ್ಲ, 10 ವರ್ಷದಲ್ಲಿ ಏನಾಗತ್ತೆ? ಪ್ರಕಾಶ್ ರಾಜ್ ನೋವಿನ ನುಡಿ...
ಇಂದಿನ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆ, ಪಾಲಕರು ಅವರಿಗಾಗಿ ಏನು ಮಾಡುತ್ತಿದ್ದಾರೆ, ಎಲ್ಲಿ ಎಡವುತ್ತಿದ್ದಾರೆ ಎನ್ನುವ ಬಗ್ಗೆ ನಟ ಪ್ರಕಾಶ್ ರಾಜ್ ಸೂಕ್ಷ್ಮವಾಗಿ ವಿವರಿಸಿದ್ದು ಹೀಗೆ...

ಕಾಲ ಬದಲಾಗಿದೆ ಎನ್ನುವ ಮಾತು ಪದೇ ಪದೇ ಕೇಳುತ್ತಲೇ ಇರುತ್ತೇವೆ. ಕಾಲ ಬದಲಾಗಿದೆಯೋ, ಜನರು ಬದಲಾಗಿದ್ದಾರೋ ಎನ್ನುವುದು ಬೇರೆಯ ವಿಷಯ. ಆದರೆ, ಮಕ್ಕಳ ವಿಷಯಕ್ಕೆ ಬರುವುದಾದರೆ ಮಾತ್ರ, ಕಾಲ ಬದಲಾಗಿರೋದಂತೂ ದಿಟ. ತಂತ್ರಜ್ಞಾನದ ಈ ಯುಗದಲ್ಲಿ ಮಕ್ಕಳೂ ಅದರ ಕೈವಶ ಆಗಿ ವರ್ಷಗಳೇ ಕಳೆದು ಹೋಗಿವೆ. ನಾಲ್ಕು ಜನರಿರುವ ಮನೆಯಲ್ಲಿ 8-10 ಸ್ಮಾರ್ಟ್ಫೋನ್ಗಳು ಮಾಮೂಲಾಗಿವೆ. ಅಪ್ಪ-ಅಮ್ಮ ಒಂದು ಕಡೆ ಫೋನ್ ಹಿಡಿದು ಕುಳಿತರೆ, ಅವರಿಗೆ ಮಕ್ಕಳ ಅರಿವೂ ಇರುವುದಿಲ್ಲ, ಮಕ್ಕಳಿಗೂ ಫೋನ್ ಇದ್ದರೆ ಅಪ್ಪ- ಅಮ್ಮನೂ ಬೇಡ. ಅದೇ ಇನ್ನೊಂದೆಡೆ, ಅವರಿಗಿಂತ ತಮ್ಮ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಕಲಿಯಬೇಕು ಎನ್ನುವುದೊಂದೇ ಹಲವು ಅಪ್ಪ-ಅಮ್ಮಂದಿರಿಗೆ ಇರುವ ಆಸೆ. ಫೀಸ್ ಹೆಚ್ಚು ಇದ್ದಷ್ಟೂ ಅದು ಪ್ರತಿಷ್ಠಿತ ಶಾಲೆ ಎನ್ನುವ ಹುಚ್ಚು ಕಲ್ಪನೆ. ಆ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಹೆಚ್ಚಾದರೆ, ಮಕ್ಕಳನ್ನು ಶಿಕ್ಷಕರ ಸುಪರ್ದಿಗೆ ಒಪ್ಪಿಸಿ, ತಾವು ಆರಾಮಾಗಿ ಇರಬಹುದು ಎನ್ನುವ ಕಲ್ಪನೆಯೂ ಇದಕ್ಕೆ ಸೇರಿರುತ್ತದೆ.
ಇವೆಲ್ಲವುಗಳ ಪರಿಣಾಮದಿಂದ ಇಂದು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಯಾವ ಹಂತಕ್ಕೆ ಹೋಗುತ್ತಿದ್ದಾರೆ ಎನ್ನುವುದು ನಮ್ಮ ಕಣ್ಣಮುಂದೆಯೇ ಸಾಕಷ್ಟು ಉದಾಹರಣೆಗಳಿವೆ. ಅಪ್ಪ-ಅಮ್ಮಂದಿರಿಗೂ ಮಕ್ಕಳಿಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಅದೆಷ್ಟೋ ಮನೆಗಳಿವೆ. ಇದೇ ಕಾರಣಕ್ಕೆ ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ತಿಳಿವಳಿಕೆ ಹೇಳಿಕೊಡುವವರು ಯಾರೂ ಇಲ್ಲದಾಗಿದೆ, ಜೊತೆಗೆ ಚಿಕ್ಕ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರ ಕಾಣದೇ ಆತ್ಮಹತ್ಯೆಗೂ ಹೋಗುತ್ತಿದ್ದಾರೆ. ಇವೆಲ್ಲವುದಕ್ಕೂ ಕಾರಣ ಏನು? ಮಕ್ಕಳು ಯಾಕೆ ಹೀಗೆ ಆಗುತ್ತಿದ್ದಾರೆ? ಅಪ್ಪ-ಅಮ್ಮ ಮಾಡುತ್ತಿರುವ ತಪ್ಪೇನು ಎಂಬ ಬಗ್ಗೆ ಸುಂದರವಾಗಿ ವಿಶ್ಲೇಷಿಸಿದ್ದಾರೆ ನಟ ಪ್ರಕಾಶ್ ರಾಜ್.
ಇದು ಧರ್ಮ ರಕ್ಷಣೆ ವಿಷ್ಯ... ತನಿಖೆ ನಡೀತಿದೆ... ಮಧ್ಯೆ ನೀವು... ಪ್ರಕಾಶ್ ರಾಜ್ಗೆ ನಟ ವಿಷ್ಣು ಮಂಚು ಕ್ಲಾಸ್!
ಅವರ ಮಾತಿನಲ್ಲಿಯೇ ಹೇಳುವುದಾದರೆ: "ನಾಳೆಯ ಭವಿಷ್ಯಕ್ಕಾಗಿ ಮಕ್ಕಳನ್ನು ರೂಪಿಸುವುದು ಅಲ್ಲ, ಇವತ್ತು ಅಂತ ಒಂದಿದೆ. ಒಂದು ಪ್ರಪಂಚ ಇದೆ. ಅದು ಹಸಿವಿನ ಪ್ರಪಂಚ, ಒಂದು ಕುತೂಹಲದ ಪ್ರಪಂಚ, ತನ್ನನ್ನು ತಾನು ರೂಪಿಸಿಕೊಳ್ಳುವ ಪ್ರಪಂಚ. ಮಕ್ಕಳಿಗೆ ನಾವು ಕಲಿಸಬೇಕಾಗಿಲ್ಲ. ಗ್ರಹಿಕೆಯನ್ನು ಸೂಕ್ಷ್ಮಗೊಳಿಸಬೇಕು ಅಷ್ಟೇ. ಆ ಕೆಲಸ ಇಂದು ನಡೆಯುತ್ತಾ ಇಲ್ಲ. ಎಲ್ಲಿಯತನಕ ಈ ಕೆಲಸ ನಡೆಯುವುದಿಲ್ಲವೋ, ನಮ್ಮ ಭಯಗಳನ್ನು, ನಮ್ಮ ಒತ್ತಡಗಳನ್ನು ಭವಿಷ್ಯದ ಕಲ್ಪನೆ ಇರುವ ನಮ್ಮ ಮೂರ್ಖತೆಯನ್ನೇ ಆ ಮಕ್ಕಳಲ್ಲಿ ಬೆಳೆಸ್ತಾ ಇರುತ್ತೇವೆಯೇ ಹೊರತು, ಭವಿಷ್ಯದಲ್ಲಿ ಅವರು ರೆಲೆವೆಂಟ್ ಆಗಿರ್ತಾರಾ? ಒಂದು ಶಿಕ್ಷಣ ವ್ಯವಸ್ಥೆ, ಒಂದು ಪಠ್ಯ ಕ್ರಮವನ್ನು ಏನೇ ಕಟ್ಟಬೇಕಾದರೂ, ಅದು ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಾ ಇದೆಯಾ ನಮಗೆ? ಹತ್ತು ವರ್ಷಗಳ ನಂತರ ಪ್ರಪಂಚ ಹೇಗೆ ಇರುತ್ತದೆ, ಹತ್ತು ವರ್ಷಗಳ ನಂತರ ಯಾವ್ಯಾವ ಅವಶ್ಯಕತೆಗಳು ಇರುತ್ತವೆ, ಹತ್ತು ವರ್ಷಗಳ ನಂತರ ಆ ಮಕ್ಕಳು ಪ್ರಸ್ತುತ ಆಗುವುದಕ್ಕೆ ನಾವು ಅವರನ್ನು ಬೆಳೆಸುತ್ತಾ ಇದ್ದೀವಾ? ಯಾರು ಬೆಳೆಸ್ತಾ ಇದ್ದಾರೆ' ಎನ್ನುವ ಪ್ರಶ್ನೆಯನ್ನು ಪ್ರಕಾಶ್ ರಾಜ್ ಮುಂದಿಟ್ಟಿದ್ದಾರೆ.
'ಮಕ್ಕಳನ್ನು ಶಾಲೆಗೆ ಕಳಿಸ್ತೀವಿ, ಪಾಠಕ್ಕೆ ಕಳಿಸ್ತೀವಿ, ರಾತ್ರಿ ಮಲಗಿಕೊಳ್ತೇವೆ. ಬೆಳಿಗ್ಗೆ ಒಂದು ಗಂಟೆ, ಮಧ್ಯಾಹ್ನ ಒಂದು ಗಂಟೆ, ಸಾಯಂಕಾಲ ಒಂದೆರಡು ಗಂಟೆ ಸಿಗಬಹುದು ಅಷ್ಟೇ. ಆದರೆ ಅವರಿಗೆ ಟೈಮ್ಕೊಡುತ್ತಾ ಇಲ್ಲ. ಯಾರು ಯಾರೋ ಬೆಳೆಸ್ತಾ ಇದ್ದಾರೆ ನಮ್ಮ ಮಕ್ಕಳನ್ನು. ಬೆಳಿಗ್ಗೆ ಶಾಲೆ, ಮಧ್ಯಾಹ್ನದ ನಂತ್ರ ಟ್ಯೂಷನ್, ಮಕ್ಕಳಿಗೆ ಉಸಿರುಗಟ್ಟುವ ವಾತಾವರಣ ಆಗ್ತಾ ಇದೆ. ಒಂದು ಶಾಲೆಗೋ ಅಥವಾ ಸಿಸ್ಟಮ್ಗೆ ಹಾಕಿ ಬಿಟ್ರೆ ಮುಗಿತು, ಆ ಶಾಲೆಯ ಜವಾಬ್ದಾರಿ ಅಂದುಕೊಳ್ತಾರೆ. ಮಕ್ಕಳ ಜೊತೆ ನಾವು ಮಾತಾಡ್ತಾ ಇಲ್ಲ, ಅವರನ್ನು ಕೇಳಿಸಿಕೊಳ್ತಾ ಇಲ್ಲ. ಹೀಗಾದರೆ ಹೇಗೆ' ಎನ್ನುವ ಪ್ರಶ್ನೆ ಹಾಕಿರುವ ಪ್ರಕಾಶ್ ರಾಜ್ ಅವರು ಪ್ರತಿಯೊಬ್ಬ ಪಾಲಕರು ಯೋಚಿಸುವಂಥ ಮಾತುಗಳನ್ನಾಡಿದ್ದಾರೆ.