ಬೆಂಗಳೂರು (ಏ. 17): ಕನ್ನಡ ಚಿತ್ರರಂಗದ ಮಟ್ಟಿಗೆ ಅವಕಾಶ ವಿಚಾರದಲ್ಲಿ ಶಿವರಾಜ್‌ಕುಮಾರ್‌ ಸೆಂಚುರಿ ಸ್ಟಾರ್‌ ಎಂದೇ ಹೇಳಬೇಕು. ಅವರನ್ನು ಮೀರಿಸುವ ಮತ್ತೊಬ್ಬರು ಸದ್ಯಕ್ಕೆ ಕಾಣುತ್ತಿಲ್ಲ. ಶಿವಣ್ಣ ಅವರ ಹುಟ್ಟುಹಬ್ಬ, ಯಾವುದುದಾದರು ಹಬ್ಬದ ದಿನದ ಸಿನಿಮಾ ಪುರವಣಿಗಳ ಜಾಹೀರಾತು ಪುಟಗಳನ್ನು ತೆಗೆದರೆ ಕನಿಷ್ಠ 10 ಚಿತ್ರಗಳಾದರೂ ಶಿವಣ್ಣ ಹೆಸರಿನಲ್ಲಿ ಪ್ರಕಟಣೆಯಾಗಿರುತ್ತವೆ.

ಅವಕಾಶ ರೇಸಿನಲ್ಲಿ ಶಿವಣ್ಣ ಜತೆಗೆ ಸಾಕಷ್ಟುಹೀರೋಗಳು ಸ್ಪರ್ಧಿಗಳಿದಿದ್ದಾರೆ. ಈ ಸಾಲಿನಲ್ಲಿ ಚಿರಂಜೀವಿ ಸರ್ಜಾ ಮೊದಲಿಗರು. ಆ ನಂತರ ಪ್ರಜ್ವಲ್‌ ದೇವರಾಜ್‌, ವಿನೋದ್‌ ಪ್ರಭಾಕರ್‌, ಗಣೇಶ್‌, ಅಜಯ್‌ ರಾವ್‌ ಕಾಣಿಸಿಕೊಳ್ಳುತ್ತಾರೆ. ಹಾಗಾದರೆ ಇವರ ಕೈಯಲ್ಲಿ ಎಷ್ಟುಸಿನಿಮಾಗಳಿವೆ?

7 ಸುತ್ತಿನ ಕೋಟೆಯಲ್ಲಿ ಚಿರು ಸರ್ಜಾ

ಶಿವಣ್ಣ ಹೊರತಾಗಿ ಸದ್ಯ ಅತಿ ಹೆಚ್ಚು ಸಿನಿಮಾಗಳು ಇರುವುದು ಚಿರಂಜೀವಿ ಸರ್ಜಾ ಅವರ ಕೈಯಲ್ಲಿ. ಚಿತ್ರೀಕರಣದ ಮೈದಾನದಲ್ಲಿರುವ ಹಾಗೂ ಅಧಿಕೃತವಾಗಿ ಪ್ರಕಟಣೆ ಆಗಿರುವ, ಇನ್ನೂ ಹೆಸರು ಇಡದೆ ಚಿತ್ರೀಕರಣ ಮಾಡುತ್ತಿರುವ ಎಲ್ಲ ಚಿತ್ರಗಳು ಸೇರಿದರೆ ಚಿರಂಜೀವಿ ಸರ್ಜಾ ಕೈಯಲ್ಲಿ ಒಟ್ಟು ಏಳು ಸಿನಿಮಾಗಳಿವೆ. ಸೋಲು- ಗೆಲುವು ಇವರ ವಿಚಾರದಲ್ಲಿ ಏನೂ ಆಟ ಆಡಲ್ಲ. ಯಾಕೆಂದರೆ ಒಂದು ಸಿನಿಮಾ ಹಿಟ್‌ ಆದರೆ ಮಾತ್ರ ಮತ್ತೊಂದು ಸಿನಿಮಾ ಸಿಗುತ್ತದೆಂಬ ನೀತಿಯನ್ನು ಅತ್ಯಂತ ಸುಲಭವಾಗಿ ಮುರಿದಿರುವ ಸ್ಟಾರ್‌ ಇವರು.

‘ಸಿಂಗ’, ‘ರಣಂ’, ಚೈತನ್ಯ ನಿರ್ದೇಶನದ ಚಿತ್ರ, ಶಿವತೇಜಸ್‌ ನಿರ್ದೇಶನದ ಸಿನಿಮಾಗಳು ಇನ್ನೇನು ಚಿತ್ರೀಕರಣ ಮುಗಿಸಿವೆ. ಟಿ ಎಸ್‌ ನಾಗಾಭರಣ ನಿರ್ದೇಶನದ ‘ಜುಗಾರಿ ಕ್ರಾಸ್‌’ ಹಾಗೂ ತರುಣ್‌ ಶಿವಪ್ಪ ನಿರ್ಮಾಣದ ‘ಖಾಕಿ’ ಚಿತ್ರಗಳು ಮುಹೂರ್ತ ಮಾಡಿಕೊಂಡಿವೆ. ಸಂಹಾರ ಚಿತ್ರ ನಿರ್ಮಾಪಕ ಮನು ಗೌಡ ನಿರ್ಮಾಣದ ಸಿನಿಮಾ ಅಧಕೃತವಾಗಿ ಘೋಷಣೆ ಆಗಿದೆ. ಅಲ್ಲಿಗೆ ಚಿರು ಕೈಯಲ್ಲಿ 7 ಚಿತ್ರಗಳಿವೆ. ಹೀಗಾಗಿ ಅವರು ಈಗ ಏಳು ಸುತ್ತಿನ ಕೋಟೆಯಲ್ಲಿ ಭದ್ರವಾಗಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಕೈಯಲ್ಲಿ ಆರು ಚಿತ್ರ

ಅವಕಾಶಗಳ ರೇಸಿನಲ್ಲಿ ತಾನೇನು ಕಡಿಮೆ ಅಲ್ಲ ಎನ್ನುತ್ತಿದ್ದಾರೆ ಪ್ರಜ್ವಲ್‌ ದೇವರಾಜ್‌. ಒಟ್ಟಿಗೆ ಮೂರು ಚಿತ್ರಗಳು ಚಿತ್ರೀಕರಣದಲ್ಲಿವೆ. ಶ್ರೀ ನರಸಿಂಹ ನಿರ್ದೇಶನದ ‘ಇನ್ಸ್‌ಪೇಕ್ಟರ್‌ ವಿಕ್ರಂ’ ಚಿತ್ರಕ್ಕೆ ಶೂಟಿಂಗ್‌ ಕೊನೆಯ ಹಂತದಲ್ಲಿದೆ. ಜಡೇಶ್‌ ಕುಮಾರ್‌ ಹಂಪಿ ನಿರ್ದೇಶನದ ‘ಜಂಟಲ್‌ಮ್ಯಾನ್‌’ ಚಿತ್ರಕ್ಕೆ ಶೇ.60 ಭಾಗ ಚಿತ್ರೀಕರಣ ಮಾಡಿ ಸದ್ಯ ಬ್ರೇಕ್‌ ಕೊಡಲಾಗಿದೆ. ಇದರ ಜತೆಗೆ ಲಕ್ಕಿ ಶಂಕರ್‌ ನಿರ್ದೇಶನದ ‘ಅರ್ಜುನ್‌ ಗೌಡ’ ಸಿನಿಮಾ ಸೆನ್ಸಾರ್‌ ಅಂಗಳದಲ್ಲಿದೆ. ಈ ಚಿತ್ರಗಳು ಶೂಟಿಂಗ್‌ ಮುಗಿಸಿಕೊಂಡು ತೆರೆ ಕಾಣುವ ಮೊದಲೇ ಕೋಡ್ಲು ರಾಮಕೃಷ್ಣ ನಿರ್ದೇಶನದ ಮತ್ತೆ ಉದ್ಭವ, ಪಿ ಸಿ ಶೇಖರ್‌ ನಿರ್ದೇಶನದ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ.

ನಾಲ್ಕನೇ ನಕ್ಷತ್ರ ಗಣೇಶ್‌

ಈ ಹಿಂದೆ ಗಣೇಶ್‌ ಒಂದು ಸಿನಿಮಾ ಒಪ್ಪಿಕೊಂಡು ಅದರ ಚಿತ್ರೀಕರಣ ಮುಗಿಸಿ ತೆರೆಗೆ ಬರುವ ತನಕ ಮತ್ತೊಂದು ಚಿತ್ರವನ್ನು ಒಪ್ಪುತ್ತಿರಲಿಲ್ಲ. ಯಾಕೋ ಇತ್ತೀಚೆಗೆ ಅವರು ಒಂದರ ಹಿಂದೆ ಒಂದರಂತೆ ಸಿನಿಮಾಗಳನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಎರಡು ಚಿತ್ರಗಳಿಗೆ ಶೂಟಿಂಗ್‌ ನಡೆಯುತ್ತಿದ್ದರೆ, ಮತ್ತೊಂದು ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ನಾಗಣ್ಣ ನಿರ್ದೇಶನದ ‘ಗಿಮಿಕ್‌’, ವಿಜಯ್‌ ಕುಮಾರ್‌ ನಿರ್ದೇಶನದ ‘ಗೀತಾ’ ಹಾಗೂ ಪ್ರೀತಮ್‌ ಗುಬ್ಬಿ ನಿರ್ದೇಶನದ ‘99’ ಚಿತ್ರಗಳು ಗೋಲ್ಡನ್‌ ಸ್ಟಾರ್‌ ಮುಂದಿವೆ. ಈ ಪೈಕಿ ‘99’ ಮುಂದಿನ ವಾರ (ಏ.26) ತೆರೆಗೆ ಬರುತ್ತಿದೆ.

ವಿನೋದ್‌ ಪ್ರಭಾಕರ್‌ಗೆ ವಿಶ್ರಾಂತಿ ಇಲ್ಲ!

ಗಾಂಧಿನಗರ ಯಾಕೋ ನಮ್ಮ ವಿನೋದ್‌ ಪ್ರಭಾಕರ್‌ ಅವರಿಗೆ ವಿಶ್ರಾಂತಿಯನ್ನೇ ಕೊಡುವ ಸೂಚನೆಗಳು ಕಾಣುತ್ತಿಲ್ಲ. ಯಾಕೆಂದರೆ ಅವರ ನಟನೆಯ ‘ಟೈಸನ್‌’, ‘ಕ್ರ್ಯಾಕ್‌’, ‘ರಗಡ್‌’ ಹೀಗೆ ಒಂದರ ಹಿಂದೆ ಒಂದರಂತೆ ಬಂದು ಹೋಗುತ್ತಿದ್ದರೂ ಮತ್ತಷ್ಟುಸಿನಿಮಾಗಳು ಅವರನ್ನು ಹುಡುಕಿ ಬರುತ್ತಿವೆ. ಸಿಕ್ಸ್‌ ಪ್ಯಾಕ್‌, 8 ಪ್ಯಾಕ್‌ನಲ್ಲೇ ಹೆಚ್ಚು ಸುದ್ದಿಯಾಗುತ್ತಿರುವ ವಿನೋದ್‌ ಪ್ರಭಾಕರ್‌ ಮುಂದೆ ‘ವರದ’ , ‘ಶ್ಯಾಡೋ’ ಹಾಗೂ ‘ಫೈಟರ್‌’ ಚಿತ್ರಗಳಿವೆ. ಈ ಪೈಕಿ ನೂತನ್‌ ಉಮೇಶ್‌ ನಿರ್ದೇಶನದ ‘ಫೈಟರ್‌’ ಸಿನಿಮಾ ತೆರೆಗೆ ಬರಬೇಕಿದೆ.

ಅಜಯ್‌ ರಾವ್‌ ಕೂಡ ಹಿಂದೆ ಬಿದ್ದಿಲ್ಲ

ತಮ್ಮ 25ನೇ ಸಿನಿಮಾ ನಂತರ ನಟ ಅಜಯ್‌ ರಾವ್‌ ಕೂಡ ಯೂ ಟರ್ನ್‌ ತೆಗೆದುಕೊಂಡಿದ್ದಾರೆಯೇ? ಹೀಗೊಂದು ಅನುಮಾನ ಮೂಡುವುದಕ್ಕೆ ಕಾರಣ ಮೊನ್ನೆ ಮೊನ್ನೆಯಷ್ಟೆಅವರ ಹುಟ್ಟು ಹಬ್ಬಕ್ಕೆ ಒಂದು ಸಿನಿಮಾ ಪ್ರಕಟಣೆ ಆಯಿತು. ಶಂಕರ್‌ ಈ ಚಿತ್ರದ ನಿರ್ದೇಶಕ. ಇದರ ಫಸ್ಟ್‌ ಲುಕ್‌ ಲುಕ್‌ ಕೂಡ ಬಂದು ಹೋಗಿದೆ. ಇದು ಶೂಟಿಂಗ್‌ಗೆ ಹೋಗುವ ಮುನ್ನವೇ ಚಮಕ್‌ ಚಿತ್ರದ ನಿರ್ಮಾಪಕ ಟಿ ಆರ್‌ ಚಂದ್ರಶೇಖರ್‌ ನಿರ್ಮಾಣದ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಅಲ್ಲಿಗೆ ಸ್ಯಾಂಡಲ್‌ವುಡ್‌ ಕೃಷ್ಣ ಕೂಡ ಅವಕಾಶಗಳ ರೇಸಿನಲ್ಲಿ ಓಡಲು ಶುರು ಮಾಡಿದ್ದಾರೆ.