ಜಡೇಶ್‌ ಕುಮಾರ್‌ ಹಂಪಿ ನಿರ್ದೇಶಿಸಿ, ಪ್ರಜ್ವಲ್‌ ದೇವರಾಜ್‌ ನಾಯಕನಾಗಿ, ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿರುವ ‘ಜಂಟಲ್‌ಮನ್‌’ ಸಿನಿಮಾ ಇಂದು ( ಫೆ.7ರಂದು) ತೆರೆ ಮೇಲೆ ಮೂಡುತ್ತಿದೆ. ಒಂದು ವಿಶೇಷವಾದ ಕತೆಯ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿರುವ ಪ್ರಜ್ವಲ್‌, ತಮ್ಮ ಸಿನಿಮಾ ಬಗ್ಗೆ ಹೇಳಿದ ಮಾತುಗಳು ಆಸಕ್ತಿಕರ ಇಲ್ಲಿವೆ. ಓವರ್‌ ಟು ಪ್ರಜ್ವಲ್‌ ದೇವರಾಜ್‌.

ಚಿತ್ರ ಮಂದಿರಕ್ಕಾಗಿ ‘ಜಂಟಲ್‌ಮನ್‌’ ಪ್ರಜ್ವಲ್‌ ದೇವರಾಜ್‌ ಧರಣಿ!

1. ನನ್ನ ನಟನೆಯ ಚಿತ್ರಕ್ಕೆ ‘ಜಂಟಲ್‌ಮನ್‌’ ಎನ್ನುವ ಟೈಟಲ್‌ ಸಿಕ್ಕಿದ್ದೇ ವಿಶೇಷ. ಇಲ್ಲಿವರೆಗೂ ಮಾಡಿದ ಸಿನಿಮಾಗಳದ್ದು ಒಂದು ಹಂತವಾದರೆ, ಈ ಚಿತ್ರದ್ದೇ ಮತ್ತೊಂದು ಹಂತ.

2. ಈ ಚಿತ್ರದ ಕತೆ ಹಾಗೂ ಅದನ್ನು ನಿರೂಪಣೆ ಮಾಡಿರುವ ರೀತಿಗೆ ನಾನು ಇದೊಂದು ಹೊಸ ಬಗೆಯ ಸಿನಿಮಾ ಎನ್ನುತ್ತಿದ್ದೇನೆ. ನನ್ನ ಕೆರಿಯರ್‌ನಲ್ಲಿ ಇಂಥ ಕತೆ ಬಂದಿಲ್ಲ.

3. ಎರಡು ವಿರುದ್ಧ ದಿಕ್ಕಿನ ಅಂಶಗಳನ್ನು ಸೇರಿಸಿ ಈ ಕತೆ ಮಾಡಿದ್ದಾರೆ ನಿರ್ದೇಶಕರು. ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ಗೆ ತುತ್ತಾದ ವ್ಯಕ್ತಿಯೊಬ್ಬನ ಕತೆ ಮತ್ತು ವ್ಯಥೆ. ಅತಿಯಾಗಿ ನಿದ್ದೆ ಮಾಡುವವನನ್ನು ಕುಂಭಕರ್ಣ ಅಂತೀವಿ. ಅಂಥ ಸಮಸ್ಯೆಗೆ ಗುರಿಯಾಗಿರುವವನ ಜೀವನದಲ್ಲಿ ಎದುರಾಗುವ ಕಷ್ಟ- ಸುಖ, ದುಃಖಗಳೇ ಚಿತ್ರದ ಅಂಶಗಳು.

4. ಸ್ಲೀಪಿಂಗ್‌ ಬ್ಯೂಟಿ ಸಿಂಡ್ರೋಮ್‌ ಜತೆಗೆ ಇಲ್ಲೊಂದು ಮಾಫಿಯಾ ಇದೆ. ಮಾನವ ಕಳ್ಳಸಾಗಾಣೆಯ ಹೊಸದಾರಿಯೊಂದನ್ನು ಹೇಗೆ ಕಂಡುಕೊಂಡಿದ್ದಾರೆ. ಅದಕ್ಕೂ ಮತ್ತು ನಿದ್ದೆ ಕಾಯಿಲೆಗೂ ಇರುವ ನಂಟು ಏನೆಂಬುದನ್ನು ನಿರ್ದೇಶಕ ಜಡೇಶ್‌ ಕುಮಾರ್‌ ಹೇಳಿರುವ ರೀತಿಯೇ ಚೆನ್ನಾಗಿದೆ. ಒಂದು ಮೆಡಿಕಲ್‌ ಸಮಸ್ಯೆ, ಮತ್ತೊಂದು ನಾವು ನೋಡದೆ ಇರುವ ಮಾಫಿಯಾದ ಮುಖವಾಡ ಇದೇ ಚಿತ್ರದ ಹೈಲೈಟ್‌.

5. ಈ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಅವರು ಇಷ್ಟುದಿನ ಸಿನಿಮಾ ನಿರ್ದೇಶನ ಮಾಡಿಕೊಂಡಿದ್ದವರು. ಅವರು ನಿರ್ದೇಶಕರಾಗಿದ್ದರೂ ಮತ್ತೊಬ್ಬ ನಿರ್ದೇಶಕನ ಚಿತ್ರಕ್ಕೆ ಬಂಡವಾಳ ಹೂಡುತ್ತಾರೆ ಎಂದರೆ ಅದಕ್ಕೆ ಕಾರಣ ಒಂದು ಗಟ್ಟಿಕತೆ. ನಾನು ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು ಕೂಡ ಈ ಚಿತ್ರದ ಕತೆಗಾಗಿ.

ಪ್ರಜ್ವಲ್ ದೇವರಾಜ್‌ -ವಿಜಯ್ ರಾಘವೇಂದ್ರ ನಡುವೆ ಶುರುವಾಯ್ತು ಬಿಗ್ ಫೈಟ್!

6. ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸಿ, ಆರು ಗಂಟೆ ಮಾತ್ರ ಎಚ್ಚರದಲ್ಲಿರುವ ಸ್ಪೆಷಲ್‌ ಪಾತ್ರದಲ್ಲೇ ಸಾಕಷ್ಟುಏರಿಳಿತಗಳು ಇವೆ. ಇಂಥ ಪಾತ್ರವನ್ನು ನಿಭಾಯಿಸಿದ್ದೇ ನನಗೆ ಎದುರಾದ ದೊಡ್ಡ ಸವಾಲು.

7. ಎಲ್ಲಕ್ಕಿಂತ ಮುಖ್ಯವಾಗಿ ಬೀದಿ ಬದಿಯಲ್ಲಿ ಮಲಗಿದ್ದು, ಮೈಸೂರಿನ ಕಸದ ರಾಶಿಗಳ ನಡುವೆ, ಗಬ್ಬು ವಾಸನೆ ಬರುತ್ತಿರುವ ದೊಡ್ಡ ಮೋರಿಯಲ್ಲಿ ಮಲಗಿದ್ದು ಇವೆಲ್ಲವೂ ಒಬ್ಬ ನಟನಿಗೆ ಶೂಟಿಂಗ್‌ ಹಂತದಲ್ಲಿ ಕಂಡ ಹೊಸ ಕೋನಗಳು. ಚಿತ್ರಕ್ಕೆ ಪೂರವಾದ ಇಂಥ ಜಾಗಗಳಲ್ಲಿ ನಟನೊಬ್ಬ ಹೇಗೆ ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬುದನ್ನು ಈ ಚಿತ್ರದಲ್ಲಿ ಕಲಿತೆ.

8. ಚಿತ್ರದಲ್ಲಿ ಫ್ರೆಶ್‌ ಎನಿಸುವ ಪ್ರೇಮ ಕತೆ ಇದೆ. ಮುದ್ದಾದ ಮಗು ಇದೆ. ಆ ಮಗುವಿನ ಜತೆ ನಾನು ನಡೆದುಕೊಳ್ಳುವ ರೀತಿ, ನನ್ನ ಪಾತ್ರದ ಜತೆಗೆ ಆ ಮಗು ಹೇಗೆ ಸಾಗುತ್ತದೆಂಬ ಎಮೋಷನ್‌ ಹಾಗೂ ಫ್ಯಾಮಿಲಿ ಕತೆ ಇಲ್ಲಿ.

9. ತಾರಾಗಣ ವಿಚಾರಕ್ಕೆ ಬರುವುದಾರೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಅದ್ಭುತವಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಬೇಬಿ ಆರಾಧ್ಯ, ಪ್ರಶಾಂತ್‌ ಸಿದ್ಧಿ, ಅರ್ಜುನ್‌ ಮುಂತಾದವರು ಇದ್ದಾರರೆ. ವಿಶೇಷ ಅಂದರೆ ತುಂಬಾ ದಿನಗಳ ನಂತರ ಕನ್ನಡ ಚಿತ್ರದಲ್ಲಿ ಕಲ್ಯಾಣ್‌ ಕುಮಾರ್‌ ಪುತ್ರ ಭರತ್‌ ಕಲ್ಯಾಣ್‌ ನಟಿಸಿದ್ದಾರೆ. ತಾಂತ್ರಿಕವಾಗಿ ಸುಧಾಕರ್‌ ಶೆಟ್ಟಿಕ್ಯಾಮೆರಾ, ಅಜನೀಶ್‌ ಬಿ ಲೋಕನಾಥ್‌ ಸಂಗೀತ ಚಿತ್ರಕ್ಕೆ ಹೊಸತನ ನೀಡಿದೆ.

'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

10. ಚಿತ್ರದ ಟೀಸರ್‌, ಟ್ರೇಲರ್‌, ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಜತೆಗೆ ಈ ಚಿತ್ರಕ್ಕೆ ಆರಂಭದಿಂದಲೂ ನಟ ದರ್ಶನ್‌ ಅವರು ಬೆನ್ನೆಲುಬಾಗಿ ನಿಂತಿದ್ದು, ನಮ್ಮ ಚಿತ್ರಕ್ಕೆ ಬಹು ದೊಡ್ಡ ಶಕ್ತಿ. ನಟನಾಗಿ ಹೊಸ ರೀತಿಯ ಕತೆಯಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೇಕ್ಷಕರು ಕೂಡ ಸಿನಿಮಾ ಸ್ವೀಕರಿಸುತ್ತಾರೆಂಬ ಭರವಸೆ ಇದೆ.