ಪವನ್‌ ಕುಮಾರ್‌ ಪ್ರತಿಭಾವಂತ ನಿರ್ದೇಶಕರನ್ನೆಲ್ಲಾ ಒಟ್ಟುಗೂಡಿಸಿಕೊಂಡು ಒಂದು ಕ್ಲಬ್‌ ಕಟ್ಟಿದ್ದಾರೆ. ಅದರ ಹೆಸರು ಎಫ್‌.ಯು.ಸಿ. ಪೂರ್ತಿ ಹೆಸರು ಫಿಲ್ಮ್‌ಮೇಕರ್ಸ್‌ ಯುನೈಟೆಡ್‌ ಕ್ಲಬ್‌. ಯೋಚಿಸಿದ್ದೆಲ್ಲಾ ನಡೆದರೆ ಈ ಕ್ಲಬ್‌ ನಿಜಕ್ಕೂ ಸಿನಿಮಾ ಜಗತ್ತಿಗೆ ದೊಡ್ಡ ಕೊಡುಗೆಯಾಗಲಿದೆ ಎಂಬುದರಲ್ಲಿ ಅಚ್ಚರಿ ಇಲ್ಲ.

ಡಿಜಿಟಲ್‌ ಜಗತ್ತಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಮೊದಲು ಆ ಜಗತ್ತಲ್ಲಿ ಬದುಕುವುದನ್ನು ಕಲಿಯಬೇಕು. ಈಗ ಚಿತ್ರಮಂದಿರಗಳೆಲ್ಲಾ ಮುಚ್ಚಿ ಓಟಿಟಿ ಪ್ಲಾಟ್‌ಫಾರ್ಮುಗಳು, ವೈಯಕ್ತಿಕ ವೆಬ್‌ಸೈಟ್‌ಗಳೇ ಸಿನಿಮಾಗಳ ಭವಿಷ್ಯ ಎನ್ನುವಂತೆ ಆಗಿರುವ ಹೊತ್ತಿನಲ್ಲಿ ಅನೇಕ ಪ್ರತಿಭಾವಂತ ನಿರ್ದೇಶಕರುಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಸಿನಿಮಾ ಮೇಕರ್‌ಗಳದೇ ಒಂದು ಕ್ಲಬ್‌ ಸ್ಥಾಪಿಸಿದ್ದಾರೆ ಲೂಸಿಯಾ ಖ್ಯಾತಿಯ ಡಿಜಿಟಲ್‌ ಜಗತ್ತಿನ ಪಂಟರ್‌ ಪವನ್‌ ಕುಮಾರ್‌. ಇದರ ಉದ್ದೇಶ ನಿಜಕ್ಕೂ ಮಹತ್ತಾದದ್ದು.

ಸಾಮಾನ್ಯವಾಗಿ ನಿರ್ದೇಶಕರಿಗೆ ತಮಗೆ ಬೇಕಾದಂತೆ ಸಿನಿಮಾ ಮಾಡಲು ಸಾಧ್ಯವಾಗುವುದು ಪೂರ್ತಿ ಸ್ವಾತಂತ್ರ್ಯ ಇದ್ದಾಗ. ಆದರೆ ನಮ್ಮಲ್ಲಿ ಸಿನಿಮಾ ಶುರುವಾಯಿತು ಎಂದಾಗ ಮೊದಲು ಕೇಳುವುದು ಯಾರು ಹೀರೋ ಅನ್ನುವುದನ್ನು. ಹೀರೋ ಯಾರು ಅಂದಾಗ ಆ ಸ್ಟಾರ್‌ ವರ್ಚಸ್ಸಿಗೆ ತಕ್ಕಂತೆ ಸಿನಿಮಾ ಮಾಡುವುದು ಅನಿವಾರ್ಯ ಕರ್ಮ. ಆಗ ನಿರ್ದೇಶಕನ ಮನಸ್ಸಲ್ಲಿ ಏನಿರುತ್ತದೋ ಅದನ್ನು ತೆರೆ ಮೇಲೆ ತರುವುದು ಕಷ್ಟ. ತನ್ನ ಮನಸ್ಸಲ್ಲಿ ಇದ್ದಂತೆ ಸಿನಿಮಾ ಮಾಡಬೇಕಾದರೆ ತಮಗೆ ಬೇಕಾದ ಸ್ವಾತಂತ್ರ್ಯ ಸಿಗಬೇಕು, ಆ ಸ್ವಾತಂತ್ರ್ಯವನ್ನು ಬೇರೆ ಯಾರಲ್ಲೋ ಯಾಕೆ ಕೇಳಬೇಕು, ನಮ್ಮ ಸ್ವಾತಂತ್ರ್ಯ ನಾವೇ ಪÜಡೆದುಕೊಳ್ಳೋಣ ಎಂಬ ಉದ್ದೇಶದಿಂದಲೇ ಶುರುವಾದ ಕ್ಲಬ್‌ ಇದು. ಹೆಸರು ಎಫ್‌.ಯು.ಸಿ. ಪೂರ್ತಿ ಹೆಸರು ಫಿಲ್ಮ್‌ಮೇಕರ್ಸ್‌ ಯುನೈಟೆಡ್‌ ಕ್ಲಬ್‌.

ಲಾಕ್‌ಡೌನ್‌ನಿಂದ ಕಂಗಾಲಾದ ಯುವ ಉದ್ಯಮಿಗಳಿಗೆ ಲೂಸಿಯಾ ನಿರ್ದೇಶಕರ ನೆರವು!

ಇಲ್ಲಿರುವ ಪ್ರತಿಯೊಬ್ಬರೂ ಫಾಮ್‌ರ್‍ ತುಂಬಿಸಿ ಬಂದವರೇ!

ಸದ್ಯಕ್ಕೆ ಇಲ್ಲಿ 28 ಮಂದಿ ನಿರ್ದೇಶಕರಿದ್ದಾರೆ. ಅದರಲ್ಲಿ ಯೋಗರಾಜ್‌ ಭಟ್‌, ಆದಶ್‌ರ್‍ ಈಶ್ವರಪ್ಪ, ಬಿಎಸ್‌ ಲಿಂಗದೇವರು, ಪಿ. ಶೇಷಾದ್ರಿ, ಈರೇ ಗೌಡ ಮತ್ತಿತರರು ಇದ್ದಾರೆ. ಮಲಯಾಳಂನ ಖ್ಯಾತ ನಿರ್ದೇಶಕ ಲಿಜೋ ಜೋಸ್‌ ಪೆಲ್ಲಿಸ್ಸೇರಿ, ತಮಿಳಿನ ವಸಂತ ಬಾಲನ್‌, ತೆಲುಗಿನ ನಂದಿನಿ ರೆಡ್ಡಿ ಮತ್ತು ತರುಣ್‌ ಭಾಸ್ಕರ್‌ ಕೂಡ ಸೇರಿಕೊಂಡಿದ್ದಾರೆ. ಇಂಟರೆಸ್ಟಿಂಗ್‌ ಅಂದ್ರೆ ಇವರೆಲ್ಲರೂ ಕೂಡ ಸ್ವಂತ ಆಸಕ್ತಿಯಿಂದ ಇಲ್ಲಿ ಸೇರಿಕೊಂಡವರು. ಎಲ್ಲರೂ ಎಫ್‌.ಯು.ಸಿ ವೆಬ್‌ಸೈಟ್‌ನಲ್ಲಿ ಫಾಮ್‌ರ್‍ ತುಂಬಿ ಸದಸ್ಯರಾದವರು. ಇನ್ನೂಆಸಕ್ತಿಕರ ವಿಚಾರವೆಂದರೆ ಯಾರಾದರೂ ಇಲ್ಲಿ ಫಾಮ್‌ರ್‍ ತುಂಬಿಸಿ ಕಳುಹಿಸಿದಾಗ ಈಗಾಗಲೇ ಸದಸ್ಯರಾಗಿರುವ ಮಂದಿ ಅವರು ಬೇಕೋ ಬೇಡವೋ ಎಂದು ವೋಟ್‌ ಮಾಡುತ್ತಾರೆ. ಶೇ.70 ಮತ ಬಂದರೆ ಮಾತ್ರ ಸೇರಿಕೊಳ್ಳಲು ಬಯಸುವವರಿಗೆ ಬಾಗಿಲು ತೆರೆಯುತ್ತದೆ.

‘ನಿರ್ದೇಶಕರಿಗೆಂದೇ ಒಂದು ಕ್ಲಬ್‌ ಮಾಡಬೇಕು ಅನ್ನಿಸಿದಾಗ ನಾನು ನನಗೆ ಗೊತ್ತಿರುವ ನಿರ್ದೇಶಕರಿಗೆ ಈ ಕುರಿತು ತಿಳಿಸಿದೆ. ಸಕಾರಾತ್ಮಕ ಅಭಿಪ್ರಾಯಗಳು ಬಂದ ಕಾರಣ ಒಂದು ವಾಟ್ಸಪ್‌ ಗ್ರೂಪ್‌ ಮಾಡಿ ಕ್ಲಬ್‌ ಕುರಿತಂತೆ ಚರ್ಚೆ ನಡೆಸಿ ಎಫ್‌.ಯು.ಸಿ ಸ್ಥಾಪಿಸುವ ನಿರ್ಧಾರ ಮಾಡಿದೆ. ಈ ಕ್ಲಬ್‌ ಡೆಮಾಕ್ರಾಟಿಕ್‌ ಆಗಿರಬೇಕು, ಇಲ್ಲಿ ಅಧ್ಯಕ್ಷ-ಕಾರ್ಯದರ್ಶಿಗಳು ಇರಬಾರದು ಅನ್ನುವುದು ನಮ್ಮ ನಿಲುವು’ ಎನ್ನುತ್ತಾರೆ ಪವನ್‌.

ಇಲ್ಲಿನ ಸದಸ್ಯತ್ವ ಬೇಕಿದ್ದರೆ ನೀವು ಒಂದು ಸಿನಿಮಾ ಮಾಡಿರಬೇಕು. ಸಿನಿಮಾ ಪ್ಯಾಷನ್‌ ನಿಮ್ಮಲ್ಲಿದೆ ಅಂತ ಇಲ್ಲಿರುವ ಸದಸ್ಯರಿಗೆ ತಿಳಿದಿರಬೇಕು. ಇವೆರಡಿದ್ದರೆ ಈ ಕ್ಲಬ್‌ನ ಸದಸ್ಯರು ನೀವಾಗಬಹುದು.

ಏನೇನಿದೆ ಈ ಕ್ಲಬ್‌ನಲ್ಲಿ?

ಸಿನಿಮಾಗಳು, ಸಿನಿಮಾ ಬಗೆಗಿನ ಶಿಕ್ಷಣ ಇತ್ಯಾದಿ ಸೇರಿದಂತೆ ಸಿನಿಮಾ ಕುರಿತ, ಆಸಕ್ತಿ ಹುಟ್ಟಿಸುವ ಪ್ರತಿಯೊಂದು ವಿಷಯವೂ ಕೂಡ ಈ ಕ್ಲಬ್‌ನಲ್ಲಿ ಇರಬೇಕು ಅನ್ನುವುದು ಪವನ್‌ ಮತ್ತು ಎಲ್ಲಾ ನಿರ್ದೇಶಕರ ಆಶಯ. ಸದ್ಯ ಇಲ್ಲಿ ಸಿನಿಮಾ ಆಸಕ್ತಿ ಇರುವವರಿಗೆಂದೇ ಇಲ್ಲಿರುವ ನಿರ್ದೇಶಕರು ತಮ್ಮ ಸಿನಿಮಾ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರವರೇ ಆಸಕ್ತಿಯಿಂದ ಅವರಿಗೆ ಗೊತ್ತಿರುವ ಸಿನಿಮಾ ಕುರಿತ ವಿಚಾರಗಳನ್ನು ಬರೆದಿದ್ದಾರೆ. ಇನ್ನೂ ಮುಂದೆಯೂ ಅಂಥಾ ವಿಚಾರಗಳು, ಹೊಳಹುಗಳು ಇಲ್ಲಿ ಬರುತ್ತವೆ.

ಮುಂದೆ ಇದೇ ಪ್ಲಾಟ್‌ಫಾರ್ಮಿನಲ್ಲಿ ಸಿನಿಮಾಗಳು ಅಥವಾ ವೆಬ್‌ ಸರಣಿಗಳು ಪ್ರಸಾರವಾಗಬಹುದು. ಅಂಥದ್ದೊಂದು ಆಲೋಚನೆ ಕ್ಲಬ್‌ ಸದಸ್ಯರಿಗೆ ಇದೆ. ಅದನ್ನು ಯಾರು ನಿರ್ಮಾಣ ಮಾಡುತ್ತಾರೆ, ಪ್ರಸಾರ ಮಾಡುವ ವಿಧಾನ ಹೇಗೆ ಎಂಬುದೆಲ್ಲಾ ಮುಂದೆ ನಿರ್ಧಾರವಾಗುತ್ತದೆ. ಈ ಕ್ಲಬ್‌ಗೆ ಈಗ ಒಂದು ತಿಂಗಳ ಪ್ರಾಯ. ಮುಂದೆ ಹೋಗ್ತಾ ಹೋಗ್ತಾ ಇದೊಂದು ದೊಡ್ಡ ನೆಟ್‌ವರ್ಕ್ ಆದರೆ ನಿಜಕ್ಕೂ ಸಿನಿಮಾ ಜಗತ್ತಿಗೆ ದೊಡ್ಡ ಕೊಡುಗೆಯಾಗಲಿದೆ ಎಂಬುದರಲ್ಲಿ ಅಚ್ಚರಿ ಇಲ್ಲ.

ಈ ಕ್ಲಬ್‌ನ ಫೇಸ್‌ಬುಕ್‌, ಇನ್‌ಸ್ಟಾ, ಟ್ವೀಟರ್‌ ಎಲ್ಲಾ ಅಕೌಂಟ್‌ಗಳೂ ಇವೆ. ನೀವು ಯಾವುದಕ್ಕೆ ಬೇಕಾದರೂ ಸೇರಿಕೊಳ್ಳಬಹುದು. ಅದಕ್ಕೂ ಮೊದಲು ಕ್ಲಬ್‌ನ ವೆಬ್‌ಸೈಟ್‌ ಒಮ್ಮೆ ನೋಡಿಬನ್ನಿ- ಡಿಡಿಡಿ.ಠಿhಛ್ಛ್ಠ್ಚಿ.ಜ್ಞಿ

ಈ ಕ್ಲಬ್‌ನಲ್ಲಿ ನೀವು ಗಮನಿಸಬಹುದಾದದ್ದು

1. ಸಿನಿಮಾ ಕುರಿತ ಆಸಕ್ತಿಕರ ವಿಚಾರಗಳು

2. ಸಿನಿಮಾ ನಿರ್ದೇಶಕರ ಅನುಭವ ಕಥನಗಳು

3. ಮುಂದೆ ಸಿನಿಮಾ, ವೆಬ್‌ ಸರಣಿಗಳ ಪ್ರಸಾರ ಸಾಧ್ಯತೆ