ಆರ್ ಕೇಶವಮೂರ್ತಿ

ಮೂರು ಭಾಷೆಯಲ್ಲಿ ಮಾಡುತ್ತಿರುವ ಚಿತ್ರ ಯಾವುದು?

ಚಿತ್ರದ ಹೆಸರು ‘ಮೋಹನದಾಸ’. ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮೂಡಿಬರಲಿರುವ ಸಿನಿಮಾ. ಇದೊಂದು ಇಂಟರ್‌ನ್ಯಾಷನಲ್‌ ಫ್ಲೇವರ್‌ ಇರುವ ಸಿನಿಮಾ. ದೊಡ್ಡ ಮಟ್ಟದಲ್ಲಿ ಶುರುವಾಗುತ್ತಿದೆ. ಈ ಚಿತ್ರವನ್ನು ‘ಮೂಕಜ್ಜಿಯ ಕನಸು’ ಚಿತ್ರ ನಿರ್ಮಿಸಿದ್ದ ನವ್ಯ ಚಿತ್ರ ಕ್ರಿಯೇಷನ್‌ ತಂಡ ನಿರ್ಮಾಣ ಮಾಡುತ್ತಿದೆ. ಅವರ ಜೊತೆಗೆ ಮುಂಬೈ ಮತ್ತು ಜರ್ಮನಿಯ ಇಬ್ಬರು ಸಹ ನಿರ್ಮಾಣದ ಹೊಣೆ ಹೊರಲಿದ್ದಾರೆ. ಮಾತುಕತೆ ನಡೆಯುತ್ತಿದೆ.

ಈ ‘ಮೋಹನದಾಸ’ನ ಕತೆ ಏನು? ಯಾವಾಗ ಚಿತ್ರೀಕರಣ ಆರಂಭ?

ಎಲ್ಲರಿಗೂ ಗೊತ್ತಿರುವ ಹಾಗೆ ಮಹಾತ್ಮ ಗಾಂಧಿ ಅವರ ಹೆಸರು ಮೋಹನದಾಸ. ನಾನು ಕೂಡ ಅವರ ಕತೆಯನ್ನೇ ಈಗ ಹೇಳುವುದಕ್ಕೆ ಹೊರಟಿದ್ದೇನೆ. ಏಪ್ರಿಲ್‌ ತಿಂಗಳಲ್ಲಿ ಶೂಟಿಂಗ್‌ ಶುರುವಾಗಲಿದೆ. ಒಟ್ಟು 40 ದಿನಗಳ ಕಾಲ 5 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ಮಾಡುತ್ತಿದ್ದೇನೆ. ಪೋರ್‌ಬಂದರ್‌ ಹಾಗೂ ರಾಜ್‌ಕೋಟ್‌ನಲ್ಲಿ ಚಿತ್ರೀಕರಣ ನಡೆಸಲಿದ್ದೇವೆ.

ಮಹಾತ್ಮ ಗಾಂಧಿ ಎಲ್ಲರಿಗೂ ಗೊತ್ತು. ಹಾಗೆ ಅವರ ಕುರಿತು ಈಗಾಗಲೇ ಚಿತ್ರ ಬಂದಿದ್ದರೂ ಮತ್ತೆ ಅವರ ಸಿನಿಮಾ ಯಾಕೆ?

ಹೌದು, ಮಹಾತ್ಮ ಗಾಂಧಿ ಎಲ್ಲರಿಗೂ ಗೊತ್ತು. ಹೇಗೆ ಮತ್ತು ಯಾವ ರೀತಿ ಗೊತ್ತು? ನೋಟುಗಳ ಮೇಲೆ ಭಾವ ಚಿತ್ರವಾಗಿ, ರಸ್ತೆಗಳಿಗೆ ಹೆಸರಾಗಿ, ಅಕ್ಟೋಬರ್‌ 2 ರಂದು ರಜೆ ಕೊಡಿಸುವ ಅಜ್ಜನಾಗಿ. ಇಷ್ಟೇ ಗಾಂಧಿ ಗೊತ್ತಿರುವುದು. ಆದರೆ, ನಾನು ಹೇಳಕ್ಕೆ ಹೊರಟಿರುವುದು ಈ ಗಾಂಧಿಯನ್ನಲ್ಲ. ಪುಟ್ಟಪಾಪು, ಬಾಪು ಆಗಿ ಇಡೀ ಜಗತ್ತಿಗೆ ಮಹಾತ್ಮನಾದ ಕತೆ. ಅಂದರೆ ನಾವು ಯಾರೂ ಕಂಡಿರದ ಮತ್ತು ಯಾವ ಸಿನಿಮಾ ಕೂಡ ತೋರಿಸಿರದ ಬಾಪು ಬಾಲ್ಯದ ಕತೆ ಇಲ್ಲಿ ಬರಲಿದೆ.

ಯಾಕೆ ಬಾಲ್ಯದ ಕತೆಯನ್ನೇ ಹೇಳಬೇಕು ಅನಿಸಿತು?

ಮಕ್ಕಳ ದೃಷ್ಟಿಯಲ್ಲಿ ಈ ಸಿನಿಮಾ ಮಾಡುತ್ತಿರುವೆ. ನಾನು ಮೊದಲೇ ಹೇಳಿದಂತೆ ಮಹಾತ್ಮ ಗಾಂಧಿ ಅವರ ಬಾಲ್ಯದ ಕತೆಯನ್ನು ಯಾರೂ ಹೇಳಿಲ್ಲ. ಅವರ ಕುರಿತ ಬಂದ ಸಿನಿಮಾ, ಕತೆ, ಲೇಖನಗಳು, ಮಾಹಿತಿಗಳು ಮಹಾತ್ಮ ಆದ ಮೇಲಿನ ಚರಿತ್ರೆಗಳೇ ಆಗಿವೆ. ಆದರೆ, ಈಗಿನ ಮಕ್ಕಳಿಗೆ ಬಾಪು ಅವರ ಬಾಲ್ಯ ಹೇಗಿತ್ತು ಎಂಬುದು ಗೊತ್ತಿಲ್ಲ. ಆ ಗೊತ್ತಿಲ್ಲದ ಕತೆಯನ್ನು ಹೇಳುವ ಮೂಲಕ ಮಕ್ಕಳಿಗೆ ನಿಜವಾದ ಮಹಾತ್ಮನನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿರುವೆ.

ಈ ಚಿತ್ರದ ಮೂಲಕ ಏನನ್ನ ಹೇಳಕ್ಕೆ ಹೊರಟಿದ್ದೀರಿ?

6 ವರ್ಷದಿಂದ 12 ವರ್ಷದ ವರೆಗಿನ ಮೋಹನದಾಸನ ಕತೆಗಳು ಇಲ್ಲಿ ಬರುತ್ತವೆ. ಎಲ್ಲ ಮಕ್ಕಳ ಬಾಲ್ಯವೂ ಒಂದೇ. ಅದು ಮಹಾತ್ಮನ ಬಾಲ್ಯವೂ ಕೂಡ ಈಗಿನ ಮಕ್ಕಳಂತೆಯೇ ಇತ್ತು. ಆದರೆ, ಮೋಹನದಾಸ ಮಾಡಿದ ತಪ್ಪುಗಳು, ತುಂಟಾಟಗಳನ್ನು ಹೇಳುತ್ತಲೇ ಆ ತಪ್ಪುಗಳ ಅರಿವು ಆತನಿಗಾಗಿ ತಂದೆಗ ಪತ್ರ ಬರೆಯುವ ಮೂಲಕ ಭವಿಷ್ಯವನ್ನು ರೂಪಿಸಿಕೊಂಡು ಮುಂದೆ ಮಹಾತ್ಮ ಆಗುತ್ತಾರೆ. ಹೀಗೆ ಮಹಾತ್ಮ ಆಗಲಿಕ್ಕೆ ಬಾಪು ತೆಗೆದುಕೊಂಡ ಆ ನಿರ್ಧಾರ ಇದೆಯಲ್ಲ, ಅದು ಈಗಿನ ಮಕ್ಕಳಿಗೂ ಅಗತ್ಯ. ಅದನ್ನೇ ನಾನು ಸಿನಿಮಾದಲ್ಲಿ ಹೇಳುತ್ತಿದ್ದೇನೆ. ಸತ್ಯಹರಿಶ್ಚಂದ್ರನನ್ನು ನೋಡಿ ಸತ್ಯವನ್ನೇ ನುಡಿಯಬೇಕು, ಶ್ರವಣ ಕುಮಾರನ ಮೂಲಕ ತಂದೆ ತಾಯಿಗಳನ್ನು ಪ್ರೀತಿಸುವುದು ಹೇಗೆ ಎಂದು ಜನ ಮಾತನಾಡಿಕೊಳ್ಳುತ್ತ ಅವರನ್ನು ಅನುಸರಿಸಿದರೋ ಹಾಗೆ ಈಗಿನ ಮಕ್ಕಳು ಕೂಡ ಮೋಹನದಾಸನ ಬಾಲ್ಯದ ಪಾಠಗಳನ್ನು ನೋಡಿ ತಾವು ಹಾಗೆ ಬದಲಾಗಬೇಕು ಅನಿಸಬೇಕೆಂಬುದು ಈ ‘ಮೋಹನದಾಸ’ ಚಿತ್ರದ ಉದ್ದೇಶ.

ಬಾಪುವಿನ ಬಾಲ್ಯದ ಕತೆಗಳನ್ನು ಸಿನಿಮಾ ಮಾಡಕ್ಕೆ ಸ್ಫೂರ್ತಿಯಾಗಿದ್ದು ಯಾರು?

ಇದು ನನ್ನ ಬಹು ವರ್ಷಗಳ ಕನಸು. ಈಗಾಗಲೇ ಚಿತ್ರಕಥೆ ಸಿದ್ದ ಮಾಡಿಕೊಂಡಿದ್ದೇನೆ. ಬೊಳುವಾರು ಮಹಮದ್‌ ಕುಂಞಿ 2010ರಲ್ಲೇ ‘ಪಾಪು ಗಾಂಧಿ ಬಾಪು ಆದ ಕತೆ’ ಅಂತ ಒಂದು ಪುಸ್ತಕ ಬರೆದಿದ್ದರು. ಆ ಪುಸ್ತಕ ಓದಿದಾಗಿನಿಂದಲೂ ಬಾಪುವಿನ ಬಾಲ್ಯದ ಜೀವನ ಹೇಳಬೇಕು ಅನಿಸಿತು. ಆ ಕನಸು ಈಗ ಕೈಗೂಡುತ್ತಿದೆ. ಮಹಾತ್ಮನ 150ನೇ ಜನ್ಮದಿನದ ಸಂಭ್ರಮದಲ್ಲಿರುವಾಗ ಅವರ ಬಾಲ್ಯದ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ.

ಮೋಹನದಾಸ ಚಿತ್ರದ ಕಲಾವಿದರು ಯಾರು?

ಮೂರು ಭಾಷೆಗೆ ಸಲ್ಲುವವರು ಇರುತ್ತಾರೆ. ಸದ್ಯಕ್ಕೆ ತಂತ್ರಜ್ಞರ ತಂಡ ಹಾಗೂ ಕಲಾವಿದರ ಆಯ್ಕೆ ಇನ್ನೊಂದು ತಿಂಗಳಲ್ಲಿ ನಡೆಯಲಿದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಮಾಡಬೇಕು ಅಂದುಕೊಂಡೆ. ಆದರೆ, ಮಹಾತ್ಮ ಗಾಂಧಿ ಇಡೀ ಜಗತ್ತಿನ ವ್ಯಕ್ತಿತ್ವ. ಹೀಗಾಗಿ ಅವರ ಬಾಲ್ಯವೂ ಇಡೀ ಜಗತ್ತಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲೂ ಈ ಚಿತ್ರವನ್ನು ಮಾಡುತ್ತಿದ್ದೇವೆ. ಆದರೆ, ಈ ಚಿತ್ರದ ಕತೆ ಅಥವಾ ಪಾತ್ರಗಳ ಪರಿಚಯ ಮಾಡಿಕೊಡುವುದಕ್ಕೆ ಬೆನ್‌ ಕಿಂಗ್‌ಸ್ಲೇ ಅವರನ್ನೇ ಕರೆದುಕೊಂಡು ಬರುವ ಸಾಧ್ಯತೆಗಳಿವೆ.