ಶಿವರಾಜ್‌ಕುಮಾರ್‌ ಪುತ್ರಿ ನಿವೇದಿತಾ ನಿರ್ಮಾಣದ 'ಫೈರ್‌ ಫ್ಲೈ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಏಪ್ರಿಲ್ ೨೪ ರಂದು ಡಾ. ರಾಜ್ ಜನ್ಮದಿನದಂದು ಚಿತ್ರ ತೆರೆಗೆ ಬರಲಿದೆ. ವಂಶಿ ನಿರ್ದೇಶನ ಮತ್ತು ನಟನೆಯ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಪಿಜ್ಜಾ ಬಾಯ್ ಆಗಿ ನಟಿಸಿದ್ದಾರೆ. ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿವೇದಿತಾ ಚಿತ್ರಮಂದಿರದಲ್ಲಿಯೇ ಚಿತ್ರ ವೀಕ್ಷಿಸಲು ಕೋರಿದ್ದಾರೆ.

ಅಂದು ʼಅಂಡಮಾನ್‌ʼ ಸಿನಿಮಾದಲ್ಲಿ ತಂದೆ ಶಿವರಾಜ್‌ಕುಮಾರ್‌ ಜೊತೆಗೆ ಮುದ್ದು ಮುದ್ದಾಗಿ ನಟಿಸಿದ್ದ ಬಾಲನಟಿ ನಿವೇದಿತಾ ಇಂದು ಸಿನಿಮಾ ನಿರ್ಮಾಪಕಿ ಆಗಿದ್ದಾರೆ. ಹೌದು, ಈಗ ಅವರೇ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿವೇದಿತಾ ಶಿವರಾಜ್‌ಕುಮಾರ್‌ ನಿರ್ಮಾಣದ ʼಫೈರ್‌ ಫ್ಲೈʼ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದೆ. ಈಗಾಗಲೇ ಈ ಟ್ರೇಲರ್‌ ಒಂದು ಮಿಲಿಯನ್‌ ವೀಕ್ಷಣೆ ಕಂಡಿದೆ. ಹಾಗಾದರೆ ಶಿವಣ್ಣನ ಮಗಳ ಸಿನಿಮಾ ಹೇಗಿದೆ? 

ಈ ಸಿನಿಮಾ ಟ್ರೇಲರ್ ಹೇಗಿದೆ? 
ಡಾ ರಾಜ್‌ಕುಮಾರ್‌ ಜನ್ಮದಿನ ಅಂದ್ರೆ ಏಪ್ರಿಲ್ 24ಕ್ಕೆ‌ ಈ ಸಿನಿಮಾ ರಿಲೀಸ್‌ ಆಗಲಿದೆ. ಈ ಮೂಲಕ ತಾತನ ಜನ್ಮದಿನದಂದು ಕನ್ನಡ ಚಿತ್ರರಂಗಕ್ಕೆ ನಿವೇದಿತಾ ಉಡುಗೊರೆ ನೀಡುತ್ತಿದ್ದಾರೆ. ಈ ಸಿನಿಮಾ ಟ್ರೇಲರ್‌ ನೋಡಿದ ಸಾಕಷ್ಟು ಜನರು “ಸಿನಿಮಾ ತುಂಬ ಇಂಟರೆಸ್ಟಿಂಗ್‌ ಆಗಿದೆ, ಸಖತ್‌ ಆಗಿದೆ, ಒಳ್ಳೆಯ ಸಿನಿಮಾ ಆಗತ್ತೆ, ನಮ್ಮೆಲ್ಲರ ಕಥೆಯನ್ನೇ ಹೇಳೋ ಥರ ಇದೆ” ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಚಿತ್ಕಳಾ ಬಿರಾದಾರ್‌, ಮೂಗು ಸುರೇಶ್, ಶೀತಲ್ ಶೆಟ್ಟಿ‌ ಮುಂತಾದವರು ನಟಿಸುತ್ತಿದ್ದಾರೆ.

ನಿವೇದಿತಾ ಶಿವರಾಜ್‌ಕುಮಾರ್‌ ಸಿನಿಮಾಗೆ ನಾಯಕಿ ಫಿಕ್ಸ್; ವಂಶಿಗೆ ಜೋಡಿಯಾದ ರಚನಾ ಇಂದರ್!

ನಿವೇದಿತಾ ಶಿವರಾಜ್‌ಕುಮಾರ್‌ ಏನಂದ್ರು? 
ನಿರ್ಮಾಪಕಿ ನಿವೇದಿತಾ ಶಿವರಾಜ್‌ಕುಮಾರ್‌, “ಇದು ನನ್ನ ಮೊದಲ ಸಿನಿಮಾ. ತಾತನ ಹುಟ್ಟುಹಬ್ಬದ ದಿನ ಬರುತ್ತಿರುವುದು ಬಹಳ ಖುಷಿ ಇದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರು ಬರುತ್ತಿಲ್ಲ ಅಂತ ಎಲ್ಲರೂ ಕೇಳುತ್ತಾರೆ. ನಾವು ಒಳ್ಳೆಯ ಸಿನಿಮಾ ಕೊಟ್ಟರೆ ಎಲ್ಲರೂ ಖಂಡಿತ ಬರುತ್ತಾರೆ. ಏಪ್ರಿಲ್ 24 ಸಿನಿಮಾ ರಿಲೀಸ್‌ ಆಗುತ್ತಿದೆ. ಎಲ್ಲರೂ ಥಿಯೇಟರ್‌ನಲ್ಲಿಯೇ ಫೈರ್‌ ಫ್ಲೈ ಸಿನಿಮಾ ನೋಡಿ” ಎಂದರು.

ಶಿವರಾಜ್‌ಕುಮಾರ್‌ ಏನಂದ್ರು?
ಶಿವರಾಜ್‌ಕುಮಾರ್‌ ಅವರು, “ಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಈ ಸಿನಿಮಾ ಕಥೆ ಕೇಳಿದಾಗ ವಿಭಿನ್ನವಾಗಿತ್ತು. ಈ ಕಥೆ ಕೇಳಿದ ತಕ್ಷಣ ಹೃದಯಕ್ಕೆ ಮುಟ್ಟಿತು. ಸಾಕಷ್ಟು ವಿಷಯಗಳು ಈ ಸಿನಿಮಾದಲ್ಲಿವೆ. ಫೈಟ್‌, ಡ್ಯುಯೆಟ್‌ ಬಿಟ್ಟು, ಒಳ್ಳೆಯ ಸಿನಿಮಾ ಕಥೆ ಕೂಡ ಹೊಂದಿದೆ. ವಂಶಿ ಒಳ್ಳೆ ಕಥೆ ಮಾಡಿದ್ದಾರೆ. ಸಿನಿಮಾ ತಂಡ ಚೆನ್ನಾಗಿದೆ. ಚರಣ್ ರಾಜ್‌ ಸಂಗೀತ ಬಗ್ಗೆ ಮಾತನಾಡುವ ಆಗಿಲ್ಲ. ನಮ್ಮ ಕನ್ನಡದಲ್ಲಿಯೂ ಹೊಸ ತಂಡ ಬರಬೇಕು. ಹೊಸ ಅಲೆ ಬರಬೇಕು ಎನ್ನೋದು ನನ್ನ ಆಸೆ. ಹೊಸಬರೇ ನಮ್ಮ ಭಾಷೆ, ಸಂಸ್ಕೃತಿಯನ್ನು ಕರೆದುಕೊಂಡು ಹೋಗಬೇಕು. ಸಿನಿಮಾ ಹೇಗೆ ಹೋಗುತ್ತದೆ, ಬಿಡುತ್ತದೆ ಅದು ಎರಡನೇಯದ್ದು. ಆದರೆ ನಮ್ಮ ಪ್ರಯತ್ನ ಇರಬೇಕು. ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ಹೊಸ ಹುಡುಗರು ನಮ್ಮನ್ನು ಇನ್ನಷ್ಟು ಯಂಗ್‌ ಆಗಿ ತೋರಿಸಿದ್ದಾರೆ” ಎಂದು ಹೇಳಿದ್ದರು. 

ಅದ್ದೂರಿ ಪ್ರೈವೇಟ್‌ ಜೆಟ್‌ನಲ್ಲಿ 45 ತಂಡ ದೇಶ ಸಂಚಾರ: ಫೋಟೋ ವೈರಲ್‌!

ಗೀತಾ ಶಿವರಾಜ್‌ಕುಮಾರ್‌ ಏನಂದ್ರು? 
ಗೀತಾ ಶಿವರಾಜ್‌ಕುಮಾರ್‌ ಅವರು “ಹೊಸದಾದ ತಂಡ ಹೊಸ ಪ್ರಯತ್ನ ಮಾಡಿದೆ. ಇದಕ್ಕೆ ಎಲ್ಲರ ಪ್ರೋತ್ಸಾಹ ಬೇಕು. ವಂಶಿ ಹೇಳಿದ ಕಥೆ, ನನ್ನ ಮಗಳಿಗೂ, ಅವರ ತಂದೆಗೂ ಇಷ್ಟವಾಯ್ತು. ಅದೀಗ ಇಲ್ಲಿವರೆಗೂ ಬಂದು ನಿಂತಿದೆ” ಎಂದಿದ್ದಾರೆ. 

ಈ ಸಿನಿಮಾದ ತಾಂತ್ರಿಕ ವರ್ಗದಲ್ಲಿ ಯಾರಿದ್ದಾರೆ? 
ʼಫೈರ್‌ ಫ್ಲೈʼ ಸಿನಿಮಾಕ್ಕೆ ವಂಶಿ ನಿರ್ದೇಶನ ಮಾಡುವುದಲ್ಲದೆ, ನಟಿಸಿದ್ದಾರೆ. ಇದು ಕೂಡ ವಂಶಿ ಅವರ ಮೊದಲ ಪ್ರಯತ್ನ. ಅಭಿಲಾಷ್ ಕಳತ್ತಿ ಕ್ಯಾಮರಾ ಕೆಲಸ, ಚರಣ್ ರಾಜ್ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಅವರು ʼಕಿಂಗ್ಸ್ ಪಿಜ್ಜಾ ಬಾಯ್ʼ ಆಗಿ ಕಾಣಿಸಿಕೊಂಡಿದ್ದಾರೆ.