ಬೆಂಗಳೂರು(ಡಿ.31): ರವಿ ಶ್ರೀವತ್ಸ ನಿರ್ದೇಶನದಲ್ಲಿ ಸೆಟ್ಟೇರಿದ್ದ ಮುತ್ತಪ್ಪ ರೈ ಜೀವನಾಧಾರಿತ ‘ಎಂಆರ್‌’ ಚಿತ್ರವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಈ ಕುರಿತು ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಹಾಗೂ ನಿರ್ಮಾಪಕ ಶೋಭಾ ರಾಜಣ್ಣ ಅವರನ್ನೊಳಗೊಂಡ ಚಿತ್ರತಂಡ ‘ಎಂಆರ್‌ ಚಿತ್ರವನ್ನು ನಾವು ಈಗ ಮಾಡುತ್ತಿಲ್ಲ, ಮುತ್ತಪ್ಪ ರೈ ಅವರ ಜೀವನದ ಕತೆಯನ್ನು ಸಿನಿಮಾ ಮಾಡಬೇಕೆಂಬ ನಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುತ್ತಿದ್ದೇವೆ’ ಎಂದು ಹೇಳಿಕೊಂಡಿದೆ. ಚಿತ್ರಕ್ಕೆ ಎಂಆರ್‌ ಪ್ರೊಡಕ್ಷನ್‌ನ ಪದ್ಮನಾಭ ಹಾಗೂ ರೈ ಕುಟುಂಬ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ವಿವಾದ ಏನು?:

ಶೋಭಾ ಪುತ್ರ ದೀಕ್ಷಿತ್‌ ನಾಯಕನಾಗಿ ಕಾಣಿಸಿಕೊಳ್ಳಬೇಕಿದ್ದ ‘ಎಂಆರ್‌’ ಹೆಸರಿನ ಚಿತ್ರ ಇದೇ ತಿಂಗಳು ಬಿಡದಿಯಲ್ಲಿ ಅದ್ಧೂರಿಯಾಗಿ ಸೆಟ್ಟೇರಿತ್ತು. ಈ ಚಿತ್ರಕ್ಕೆ ನಾಯಕಿ ಆಯ್ಕೆ ಕೂಡ ಆಗಿತ್ತು. ಎಂದುಕೊಂಡಂತೆ ಎಲ್ಲವೂ ಆಗಿದ್ದರೆ ಜನವರಿ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿತ್ತು.

ಆದರೆ ಎಂಆರ್‌ ಪ್ರೊಡಕ್ಷನ್‌ನ ನಿರ್ಮಾಪಕ ಪದ್ಮನಾಭ ಅವರು, ‘ಮುತ್ತಪ್ಪ ರೈ ಜೀವನವನ್ನು ಆಧರಿಸಿ ಯಾರೂ ಸಿನಿಮಾ ಮಾಡಬಾರದು, ನಾನು ಅವರ ಕತೆಯನ್ನು ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ. ಮುಂದೆ ನಾನೇ ಮಾಡುತ್ತೇನೆ. ಮುತ್ತಪ್ಪ ರೈ ಅವರ ಜೀವನಾಧಾರಿತ ಚಿತ್ರ ಯಾರು ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಅವರ ಮಕ್ಕಳಾದ ರಿಕ್ಕಿ ರೈ ಮತ್ತು ರಾಕಿ ರೈ ಅವರಿಗೆ. ಈಗ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ರೈ ಅವರ ಕುಟುಂಬವನ್ನು ಸಂಪರ್ಕ ಮಾಡದೇ ರವಿ ಅವರು ಸಿನಿಮಾ ಮಾಡಲು ಹೊರಟಿರುವುದು ಸರಿಯಲ್ಲ, ಕೂಡಲೇ ಅವರು ಸಿನಿಮಾ ನಿಲ್ಲಿಸಬೇಕು’ ಎಂದಿದ್ದರು. ಜಯ ಕರ್ನಾಟಕ ಸಂಘಟನೆ, ರೈ ಅವರ ಕುಟುಂಬದ ವಕೀಲರ ಜತೆ ಅವರು ಮಾಧ್ಯಮಗಳ ಮುಂದೆ ಹೇಳಿದ್ದರು.

ಆರಂಭದಲ್ಲಿಯೇ ವಿವಾದದಲ್ಲಿ ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್!

ಈ ಹಿನ್ನೆಲೆಯಲ್ಲಿ ರವಿ ಶ್ರೀವತ್ಸ, ಶೋಭಾ ರಾಜಣ್ಣ ಮತ್ತು ಚಿತ್ರತಂಡ, ಚಿತ್ರವನ್ನು ಕೈ ಬಿಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಪದ್ಮನಾಭ ಅವರು ಹೇಳಿದಂತೆ ಸಿನಿಮಾ ಮಾಡಿ ಬಿಡುಗಡೆ ಮಾಡಿದ ಮರು ದಿನವೇ ಮಹೂರ್ತ ನೆರವೇರಿಸಿ ನಾವು ಅಂದುಕೊಂಡಂತೆ ‘ಎಂಆರ್‌’ ಚಿತ್ರವನ್ನು ರೂಪಿಸುತ್ತೇವೆ ಎಂದು ತಿಳಿಸಿದರು.

ಜೊತೆಗೆ ಇದೇ ತಂಡದ ಜೊತೆಗೆ ‘ಡಿಆರ್‌’ ಎನ್ನುವ ಹೊಸ ಚಿತ್ರವನ್ನು ಘೋಷಿಸಿ, ಪೋಸ್ಟರ್‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಮೊದಲಾದವರು ಇದ್ದರು.