‘ಕೇಳದೇ ನಿಮಗೀಗ..’ ಹಾಡು ಹುಟ್ಟಿದ್ದು ಹೇಗೆ.. ಸ್ವತಃ ಇಳಯರಾಜ ಬಹಿರಂಗಪಡಿಸಿದರು ಸತ್ಯ
ಶಂಕರ್ ನಾಗ್ ಅವರ ಗೀತಾ ಚಿತ್ರದ 'ಕೇಳದೇ ನಿಮಗೀಗ' ಹಾಡು ಹುಟ್ಟಿದ ಕಥೆಯನ್ನು ಇಳಯರಾಜ ಬಿಚ್ಚಿಟ್ಟಿದ್ದಾರೆ. ಉದಯ್ ಶಂಕರ್ ಬರೆದ ಈ ಹಾಡಿನ ಹಿಂದಿನ ರೋಚಕ ಸಂಗತಿಗಳನ್ನು ಮೈಸೂರಿನ ಯುವ ದಸರಾದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು (ಅ.11): ಶಂಕರ್‌ನಾಗ್ ಅಭಿನಯದ ಸಿನಿಮಾಗಳು ಎಂದಾಗ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ1981ರಲ್ಲಿ ತೆರೆಕಂಡ ಗೀತಾ ಚಿತ್ರದ 'ಕೇಳದೇ ನಿಮಗೀಗ..' ಹಾಡು ಕೇಳಿದಾಗ ಮೈ ಜುಮ್ಮೆನಿಸುತ್ತದೆ. ಇಳಯರಾಜ ಸಂಗೀತದಲ್ಲಿ ಈ ಸಿನಿಮಾದ ಹಾಡುಗಳು ಮೂಡಿಬಂದಿದ್ದವು. ಶಂಕರ್‌ನಾಗ್ ನಿರ್ದೇಶನದ ಈ ಸಿನಿಮಾಕ್ಕೆ ಇಂದಿಗೂ ಐಎಂಡಿಬಿಯಲ್ಲಿ 10ಕ್ಕೆ 8.9 ರೇಟಿಂಗ್ ಇದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಗೀತಾ ಎನ್ನುವ ಕಾಲೇಜು ಹುಡುಗಿ, ತನ್ನ ಕಾಲೇಜಿನಲ್ಲಿ ಚಾರಿಟಿ ಪ್ರೋಗ್ರಾಮ್‌ನಲ್ಲಿ ಕಾರ್ಯಕ್ರಮ ನೀಡುವ ಸಂಜಯ್ ಎನ್ನುವ ಸಂಗೀತಗಾರನನ್ನು ಭೇಟಿ ಮಾಡುತ್ತಾಳೆ. ಇಬ್ಬರ ನಡುವಿನ ಆತ್ಮೀಯ ಬಂಧದ ಕಥೆ ಸಿನಿಮಾದಲ್ಲಿ ಸಾಗುತ್ತದೆ. ಇಡೀ ಸಿನಿಮಾದ ಪ್ರಮುಖ ಘಟ್ಟದಲ್ಲಿ 'ಕೇಳದೇ ನಿಮಗೀಗ..' ಎನ್ನುವ ಮುಖ್ಯ ಹಾಡು ಬರುತ್ತದೆ. ಡಾನ್ಸ್ ಡ್ರಾಮಾ ಆಗಿ ಮೂಡಿ ಬಂದಿದ್ದ ಈ ಹಾಡು ಹುಟ್ಟಿದ್ದು ಹೇಗೆ ಅನ್ನೋದನ್ನ ಇಳಯರಾಜ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದಾರೆ.
'ಉದಯಶಂಕರ್ ಕುಳಿತಿದ್ದರು. ನಾನು ಕುಳಿತಿದ್ದೆ. ಈ ವೇಳೆ ಬಂದ ಶಂಕರ್‌ನಾಗ್, ಸರ್ ನೀವು ನ್ಯೂಯಾರ್ಕ್‌ನಲ್ಲಿ ಬ್ರಾಡ್‌ವೇ ಶೋ ನೋಡಿದ್ದೀರಲ್ಲ. ಆ ರೀತಿಯ ಡಾನ್ಸ್ ಡ್ರಾಮಾ ರೀತಿ ಇರುತ್ತದೆ ಎಂದಿದ್ದರು. ವೇದಿಕೆಯಲ್ಲಿ ಏನು ನಡೆಯುತ್ತಿದೆಯೋ ಅದೇ ಸಾಂಗ್ ಆಗಿ ಬರಬೇಕು. ಎರಡು ಹಳ್ಳಿ, ಇಲ್ಲಿಂದ ಹುಡುಗ-ಅಲ್ಲಿಂದ ಹುಡುಗ. ಇಬ್ಬರೂ ಲವ್ ಮಾಡ್ತಾರೆ. ಅದಕ್ಕೆ ಸಾಂಗ್ ಬೇಕು. ಇಡೀ ಸಾಂಗ್ ನಿರೂಪಣೆಯ ರೀತಿ ಬರಬೇಕು ಎಂದಿದ್ದರು.
ಆಗ ಅಲ್ಲಿಯೇ ಕುಳಿತಿದ್ದ ಉದಯ್ ಶಂಕರ್, 'ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು..' ಎಂದು ಬರೆಯಲು ಆರಂಭಿಸಿದರು. ಆಗ ಮೇನ್ ಟ್ಯೂನ್ ಕೊಟ್ಟೆ. ಉದಯಶಂಕರ್ ಅವರು ನೇರವಾಗಿ ಸ್ಟೋರಿ ಹೇಳೋದಕ್ಕೆ ಲಿರಿಕ್ಸ್ ಬರೆದುಬಿಟ್ಟರು. ಕೇಳದೇ ನಿಮಗೀಗ ಎನ್ನುವ ಸಾಲು ಮೊದಲು ಇದ್ದಿರಲೇ ಇಲ್ಲ.. ಆ ಟ್ಯೂನ್‌ಗೆ ಸಂಪಿಗೆ ಒಂದೂರೂ.. ಮಲ್ಲಿಗೆ ಒಂದೂರೂ ಎನ್ನುವ ಸಾಲು ಮೊದಲಿಗೆ ಇತ್ತು.
ಹೀಗೆ ಹೇಳಿದರೆ ಆ ಡಾನ್ಸ್ ಡ್ರಾಮಾಗೆ ಇಂಟ್ರಸ್ಟ್ ಬರಲ್ಲ ಎನ್ನುವುದನ್ನು ಇಲ್ಲಿ ಅರ್ಥ ಮಾಡಿಕೊಂಡೆವು. ಅದಕ್ಕಾಗಿ ನರೇಷನ್ ವಾಯ್ಸ್ ಬರಬೇಕು ಎಂದು ತೀರ್ಮಾನ ಮಾಡಿದೆವು. ಪ್ರೇಕ್ಷಕರ ಜೊತೆ ಮಾತನಾಡುತ್ತಿರುವ ರೀತಿಯಲ್ಲಿ, ನಿಮಗ್ಯಾರಿಗೂ ಕೇಳುತ್ತಿಲ್ಲವೇ.. ಅಲ್ಲಿ ಯಾರೋ ಹುಡುಗಿ ಹಾಡುತ್ತಿದ್ದಾಳೆ, ಆಕೆಯ ವಿರಹ ಗೀತೆ ಕೇಳ್ತಾ ಇಲ್ವಾ.. ಎನ್ನುವ ನರೇಷನ್ ಇದ್ದರೆ ಒಳ್ಳೆಯದು ಎಂದುಕೊಂಡೆವು. ಆ ನರೇಷನ್ ಬಳಿಕ ಇವರಿಬ್ಬರ ಲವ್ ಸ್ಟೋರಿ ವಿಚಾರ ಬಂದರೆ ಒಳ್ಳೆಯದಿರುತ್ತೆ ಎಂದುಕೊಳ್ಳಲಾಯಿತು. ಇದಕ್ಕೆ ಉದಯ್ ಶಂಕರ್ ಅವರು, 'ಕೇಳದೆ ನಿಮಗೀಗ..ದೂರದಲ್ಲಿ ಯಾರೋ ಹಾಡು ಹೇಳಿದಂತೆ.. ಒಂದು ಹೆಣ್ಣಿನ.. ನೊಂದ ವಿರಹಗೀತೆ...' ಎನ್ನುವ ನರೇಷನ್ ಲೈನ್‌ಅನ್ನು ಸೇರಿಸಿದರು. ಹೀಗೆ ಈ ಹಾಡು ಹುಟ್ಟುಕೊಂಡಿತು ಎಂದು ಇಳಯರಾಜ ಹೇಳಿದ್ದಾರೆ.
ಚಂದ್ರಮುಖಿ ಪ್ರಾಣಸಖಿ ಸಿನಿಮಾಗೆ ಬರೆದ ಈ ಹಾಡು ಕೊನೆಗೆ ಕೋಟಿಗೊಬ್ಬ ಚಿತ್ರದಲ್ಲಿ ಸೂಪರ್‌ಹಿಟ್ ಆಯ್ತು!
5 ನಿಮಿಷ 11 ಸೆಕೆಂಡ್ ಇದ್ದ ಈ ಹಾಡನ್ನು ಚಿ.ಉದಯ್‌ಶಂಕರ್ ಬರೆದಿದ್ದರೆ, ಅಷ್ಟೇ ಅದ್ಭುತವಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಕನ್ನಡದ ಆಲ್‌ಟೈಮ್ ಫೇವರಿಟ್ ಸಾಂಗ್ ಆಗಿರುವ ಈ ಗೀತೆಗೆ ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ವೀವ್ಸ್‌ಗಳು ಬಂದಿದ್ದವು. ಇಳಯರಾಜ ಮ್ಯೂಸಿಕ್ ನೀಡಿರುವ ಕನ್ನಡದ ಅದ್ಭುತ ಗೀತೆಗಳಲ್ಲಿ ಇದೂ ಒಂದಾಗಿದೆ.
ಇಳೆಯರಾಜಗೋಸ್ಕರ ದುಃಖದ ಹಾಡನ್ನೂ ಖುಷಿಯಾಗಿಯೇ ಹಾಡಿದ್ದ ಎಸ್‌ಪಿಬಿ
ಇಡೀ ಹಾಡಿನ ಸಂಪೂರ್ಣ ಲಿರಿಕ್ಸ್..
ಲಾಲಲಲಲಾಲ ಲಾಲಲಾಲಲಾಲ ಲಾಲಲಾಲಲಾಲ ಲಾಲಲಾಲಲ ಹೇ ಲಲಲಲಲಾಲ
ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಒಂದು ಹೆಣ್ಣಿನ ಓ ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಸಂಪಿಗೆ ಒಂದೂರು ಮಲ್ಲಿಗೆ ಒಂದೂರು ನಡುವಲ್ಲಿ ನದಿಯೊಂದು ಹಗ್ಗದ ಉಯ್ಯಾಲೆ ತೂಗುವ ಹಾಗೊಂದು ಸೇತುವೆಯು ಅಲ್ಲೊಂದು ಈ ಊರ ಚೆಲುವೆ ಆ ಊರ ಚೆಲುವ ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ ಹೂವಾಗಿ ಮನಸು ನೂರಾರು ಕನಸು ಬೆರಗಾದರು ಒಲವಿಂದಲಿ ಒಂದಾದರು ಆಗ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಷ ಒಬ್ಬರನ್ನೊಬ್ಬರು ಕೊಲ್ಲೋಷ್ಟು ಆಕ್ರೋಶ ಹೀಗಿದ್ರು ಆ ಪ್ರೇಮಿಗಳು ಹೆದರಲಿಲ್ಲ ದಿನಾ ರಾತ್ರಿ ಊರೆಲ್ಲಾ ಮಲಗಿದ್ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು
ಚೆಲುವಿಯ ಮಾವಯ್ಯ ಒಲವಿನ ಕತೆ ಕೇಳಿ ಹುಲಿಯಂತೆ ಎಗರಾಡಿ ಸೇತುವೆ ಬಳಿ ಬಂದಾಗ ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ ಹಲ್ಲನ್ನು ಮಸೆದ ಸೇತುವೆಯ ಕಡಿದ ಆ ಜೋಡಿಯ ಕತೆ ಅಂದಿಗೆ ಕೊನೆಯಾಯಿತು ಹೀಗೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ