ಜನರಿಗೆ ಸಂಕಷ್ಟ ಎದುರಾದ ಸಂದರ್ಭದಲ್ಲಿ ಪ್ರಕಾಶ್ ರೈ ಯಾವತ್ತೂ ತಮ್ಮಷ್ಟಕ್ಕೆ ತಾವು ಫಾರ್ಮ್‌ಹೌಸಿಗೆ ಹೋಗಿ ಸುಮ್ಮನೆ ಕುಳಿತವರಲ್ಲ. ತಮ್ಮ ಕೈಲಾದಷ್ಟು ಸಹಾಯವನ್ನು ಮೊದಲೂ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ತಮಿಳುನಾಡಿನ ಭೂಮಿಕಾ ಟ್ರಸ್‌ಟ್ ಸಹಯೋಗದಲ್ಲಿ 500ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿದ್ದಾರೆ.
ಬೆಂಗಳೂರಿನ ಸ್ಮೈಲ್ ಟ್ರಸ್‌ಟ್ ಜೊತೆ ಸೇರಿ ಯಾರಿಗೆ ಅವಶ್ಯಕತೆ ಇದೆಯೋ ಅವರಿಗೆ ಆಕ್ಸಿಜನ್, ವೆಂಟಿಲೇಟರ್ ಬೆಡ್ ಒದಗಿಸುವ ಗುರುತರ ಕಾರ್ಯ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡುತ್ತಿರುವ ಕೊರೋನಾ ಸೈನಿಕರಿಗೆ ಬೆನ್ನೆಲುಬಾಗಿ ನಿಂತು ಉತ್ಸಾಹ ತುಂಬುತ್ತಿದ್ದಾರೆ.
ತೇಜಸ್ವಿ ಸೂರ್ಯ ಮಹತ್ತರ ಕಾರ್ಯ, ಈ ಸಂಖ್ಯೆಗೆ ಕರೆ ಮಾಡಿ ಫ್ರೀ ಆಕ್ಸಿಜನ್ ಪಡೆಯಿರಿ
‘ಎಷ್ಟು ಕೆಲಸ ಮಾಡಿದರೂ ಫೋಟೋ ತೆಗೆಸಿಕೊಳ್ಳುವುದು ನನ್ನ ಜಾಯಮಾನ ಅಲ್ಲ ಎನ್ನುತ್ತಾರೆ ಪ್ರಕಾಶ್ ರೈ. ತಿರುನಲ್ವೇಲಿಯಲ್ಲಿ 600 ಬೆಡ್ ಇರುವ ಹೊಸ ಆಸ್ಪತ್ರೆ ಸಿದ್ಧವಾಗಿದ್ದರ ಹಿಂದೆ ಪ್ರಕಾಶ್ ರೈ ಕೆಲಸ ಇದೆ. ಲಿಸಿಪ್ರಿಯಾ ಎಂಬ ಹುಡುಗಿ 100 ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸುವ ಕೆಲಸ ಮಾಡಿದಾಗ ಪ್ರಕಾಶ್ ರೈ ಕೂಡ ಸಹಾಯ ಮಾಡಿದ್ದಾರೆ. ಎಲ್ಲೆಲ್ಲಿ ಜನ ಜನರ ಬಳಿ ಹೋಗಿ ಕೆಲಸ ಮಾಡುತ್ತಿದ್ದಾರೋ ಅಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಕಾಶ್ ರೈ ಇರುತ್ತಾರೆ.

ದೇಶ ಸಂಕಷ್ಟದಲ್ಲಿದೆ. ಜನ ಎಲ್ಲಾ ಕಡೆ ಆಯಾಸ ಪಡುತ್ತಿದ್ದಾರೆ. ಎಲ್ಲಾ ಕಡೆ ನಾನು ಹೋಗಿ ನೆರವಾಗಲು ಆಗುವುದಿಲ್ಲ. ಆದರೆ ಎಲ್ಲೆಲ್ಲಿ ಸಾಮಾನ್ಯ ಜನರು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ, ಅವರ ಜತೆ ನಾನಿದ್ದೇನೆ. ಪ್ರಕಾಶ್ ರಾಜ್ ಫೌಂಡೇಷನ್ ಮೂಲಕ ಕೆಲಸ ಮಾಡುತ್ತಿದ್ದೇನೆ, ಸಮಾನ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈಗ ಆಗಬೇಕಿದೆ. ನಾವೆಲ್ಲರೂ ರೆಂಬೆಗಳ ಥರ ದುಡಿಯಬೇಕಿದೆ. ಸದ್ಯ ನಾನು ಸ್ವಂತ ಮತ್ತು ಒಂದಷ್ಟು ಗೆಳೆಯರ ದುಡ್ಡಿನಲ್ಲಿ ಈ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಪ್ರಕಾಶ್ ರೈ.
ಪ್ರಕಾಶ್ ರೈ ಅವರ ಚೆನ್ನೈಯಲ್ಲಿರುವ ಮನೆ ಸುತ್ತಮುತ್ತ ಇರುವ ದಿನಗೂಲಿ ಮಂದಿಗೆ ಊಟ ಒದಗಿಸಲು, ಹೈದರಾಬಾದ್ ಮನೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಆಸ್ಪತ್ರೆಗೆ ಓಡಾಡಲು ನೆರವು, ಅಗತ್ಯ ಔಷಧಿಗಳನ್ನು ಒದಗಿಸುತ್ತಿದ್ದಾರೆ.
ದೇಶದಲ್ಲಿ ಆಕ್ಸಿಜನ್ ಸಾಗಾಣೆಗೆ ಟೋಲ್ ಉಚಿತ; NHAI ಮಹತ್ವದ ನಿರ್ಧಾರ!
‘ಜನರ ಕಷ್ಟವನ್ನು ನೋಡುತ್ತಾ ಕೂರುವುದಕ್ಕೆ ಜನ ನನ್ನನ್ನು ಬೆಳೆಸಿಲ್ಲ. ವ್ಯಕ್ತಿಗಳ ಎತ್ತರ ನಿರ್ಧಾರ ಆಗುವುದು ಅವರು ಎಷ್ಟು ಎತ್ತರದಲ್ಲಿ ಇದ್ದಾರೆ ಅನ್ನುವುದರಿಂದ ಅಲ್ಲ, ಕೆಳಗಿರುವ ಎಷ್ಟು ಜನರನ್ನು ಕೈ ಹಿಡಿದು ಮೇಲೆ ಎತ್ತಿದ್ದಾರೆ ಅನ್ನುವುದರಿಂದ. ಇರುವುದನ್ನು ಹಂಚಿಕೊಳ್ಳಬೇಕು. ಪಕ್ಕದಲ್ಲಿರುವವರನ್ನು ನೋಡಬೇಕು. ಹಿರಿಯರು ನನ್ನನ್ನು ಬಂಗಾರ ಎನ್ನುತ್ತಾರೆ. ಬಂಗಾರ ಇರುವುದು ಕಷ್ಟದ ಸಂದರ್ಭದಲ್ಲಿ ಆಗಿ ಬರುವುದಕ್ಕೆ. ಈ ಹಂತದಲ್ಲಿ ದೂಷಿಸುತ್ತಾ ಕುಳಿತರೆ ಪ್ರಯೋಜನವಿಲ್ಲ. ಜೊತೆಯಾಗಿ ಸಾಗಬೇಕು. ಯಾರಿಗೆ ನೋವಾದರೂ ಅದು ನೋವೇ ತಾನೇ’ ಎನ್ನುತ್ತಾರೆ ಪ್ರಕಾಶ್ ರೈ.
‘ಹಿರಿಯರು, ಕಿರಿಯರು ಕಷ್ಟ ಪಡುತ್ತಿದ್ದಾರೆ. ಕನಸು ಕಾಣುವಂತಹ ಸಮಯದಲ್ಲಿ ದುಃಸ್ವಪ್ನದಲ್ಲಿ ಬದುಕುತ್ತಿದ್ದೇವೆ. ಈಗ ಆಮ್ಲಜನಕಕ್ಕಾಗಿ ಒದ್ದಾಡುತ್ತಿದ್ದೇವೆ. ಮುಂದೆ ನೀರಿಗೂ ವಿದ್ಯಾಭ್ಯಾಸಕ್ಕೂ ಹಾಗೇ ಆಗುವ ಸಂದರ್ಭ ಬರಬಹುದು. ನಮಗೆ ದಾರ್ಶನಿಕತೆ ಇರುವ ನಾಯಕರು ಬೇಕು. ಈಗ ಎಲ್ಲರೂ ಜೊತೆಗೂಡಿ ಮಾನವೀಯತೆ ಕೊಂಡಾಡುವ ಸಂದರ್ಭ ಎದುರಾಗಿದೆ. ನಿಮ್ಮ ಅಕ್ಕಪಕ್ಕದಲ್ಲಿರುವವರಿಗೆ, ಕುಟುಂಬದವರಿಗೆ, ಗೆಳೆಯರಿಗೆ ನಿಮ್ಮ ಕೈಲಾದಷ್ಟು ನೆರವಾಗಿ, ಅವರ ಆರೋಗ್ಯವನ್ನೂ ಕಾಳಜಿ ವಹಿಸಿ. ಇರುವುದನ್ನು ಹಂಚಿಕೊಳ್ಳೋಣ. ಮತ್ತೆ ಒಳ್ಳೆಯ ಕಾಲ ಬರಲಿ’ ಎನ್ನುತ್ತಾರೆ ಪ್ರಕಾಶ್ ರೈ.
