ಜೂ.3ರಂದು ಸಂದೀಪ್ ಉನ್ನಿಕೃಷ್ಣನ್ ಕತೆ ಆಧರಿಸಿದ ಮೇಜರ್ ಬಿಡುಗಡೆ
- ಜೂ.3ರಂದು ಸಂದೀಪ್ ಉನ್ನಿಕೃಷ್ಣನ್ ಕತೆ ಆಧರಿಸಿದ ಮೇಜರ್ ಬಿಡುಗಡೆ
- ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ವೀಕ್ಷಿಸಿದ ಸಂದೀಪ್ ಪೋಷಕರು
ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿದ್ದ ಮೇಜರ್ ಸಂತೋಷ್ ಉನ್ನಿಕೃಷ್ಣನ್ ಜೀವನ ಕತೆ ಆಧರಿಸಿದ ‘ಮೇಜರ್’ ಸಿನಿಮಾ ಜೂ 3ರಂದು ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಬಿಡುಗಡೆ ಆಗುತ್ತಿದೆ. ಅದಿವಿ ಶೇಷ್ ನಟನೆಯ ಈ ಸಿನಿಮಾದ ಪ್ರೀಮಿಯರ್ ಶೋ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಸಂದೀಪ್ ಅವರ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮಿ ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಸಿನಿಮಾ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅದಿವಿ ಶೇಷ್, ‘ಸಂದೀಪ್ ನನ್ನ ಹೀರೋ. ಅವರ ಕತೆ ಹೇಳಬೇಕು ಅನ್ನುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಸಂದೀಪ್ ತಂದೆಯವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಒಪ್ಪಿರಲೇ ಇಲ್ಲ. ಏಳನೇ ಬಾರಿ ಕಾಲ್ ಮಾಡಿದಾಗ ಮನೆಗೆ ಹೋಗಲು ಅನುಮತಿ ಕೊಟ್ಟರು. ಭೇಟಿಯಾದ ಮೇಲೂ ಅವರಿಗೆ ಮನಸ್ಸಿರಲಿಲ್ಲ. ಕೊನೆಗೆ ಅಮ್ಮ ನನ್ನನ್ನು ನೋಡಿ ಸಂದೀಪ್ ಥರಾನೇ ಕಾಣಿಸ್ತಾನೆ ಎಂದು ಹೇಳಿದ ನಂತರ ಈ ಸಿನಿಮಾಗೆ ಒಪ್ಪಿಗೆ ಸಿಕ್ಕಿತು. ಈ ಸಿನಿಮಾ ಸಂದೀಪ್ ತಂದೆ, ತಾಯಿಗಳ ಆಶೀರ್ವಾದ’ ಎಂದರು.
26/11 ಮುಂಬೈ ದಾಳಿ: ಹುತಾತ್ಮರ ಕುಟುಂಬಕ್ಕೆ ಎಂಪಿ ರಾಜೀವ್ ಚಂದ್ರಶೇಖರ್ ನೆರವು!
ಈ ಸಿನಿಮಾದ ಪ್ರೀಮಿಯರ್ ಶೋಗಳ ಬಗ್ಗೆ ಮಾತನಾಡುತ್ತಾ, ‘ಮುಂಬೈಯಲ್ಲಿ ಎನ್‌ಎಸ್‌ಜಿ ತರಬೇತಿ ಕೇಂದ್ರವಿದೆ. ಅಲ್ಲಿನ ಪ್ರವೇಶ ದ್ವಾರಕ್ಕೆ ಉನ್ನಿಕೃಷ್ಣನ್ ಎಂದು ಹೆಸರಿಟ್ಟಿದ್ದಾರೆ. ಒಳಗೆ ಹೋದರೆ ಸಂದೀಪ್ ಅವರ ಪ್ರತಿಮೆ ಇದೆ. ಅಲ್ಲಿರುವ ಎಲ್ಲಾ ಎನ್‌ಎಸ್‌ಜಿ ಕಮಾಂಡೋಗಳಿಗೆ ಈ ಸಿನಿಮಾ ತೋರಿಸಿದೆವು. ಸಿನಿಮಾ ಮುಗಿದಾಗ ಯಾರೊಬ್ಬರೂ ಮಾತನಾಡಲಿಲ್ಲ. ಎಲ್ಲಿ ತಪ್ಪಾಯಿತೋ, ಅವರಿಗೆ ಸಿನಿಮಾ ಇಷ್ಟವಾಗಲಿಲ್ಲವೋ ಎಂದು ನನಗೆ ಹೆದರಿಕೆಯಾಗತೊಡಗಿತು. ಕೊನೆಗೊಬ್ಬರು ನನ್ನ ಕರೆದುಕೊಂಡು ಮುಖ್ಯಸ್ಥರ ಕಚೇರಿಗೆ ಕರೆದೊಯ್ದರು. ಅಲ್ಲಿ ಅವರು ನನಗೆ ಈ ಸಿನಿಮಾ ನೋಡಿ ಮೆಚ್ಚಿ ಒಂದು ಮೆಡಲ್ ಕೊಟ್ಟರು. ಆ ಮೆಡಲ್ ನನಗೆ ಆಸ್ಕರ್‌ಗಿಂತ ದೊಡ್ಡದು’ ಎಂದರು.
ತೆಲುಗಿನ ಸ್ಟಾರ್ ಮಹೇಶ್ ಬಾಬು ನಿರ್ಮಾಣದ ಈ ಸಿನಿಮಾವನ್ನು ಶಶಿ ಕಿರಣ್ ಟಿಕ್ಕ ನಿರ್ದೇಶಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಸಾಯಿ ಮಂಜ್ರೇಕರ್, ನಿರ್ಮಾಪಕರಲ್ಲೊಬ್ಬರಾದ ಶರತ್ ಚಂದ್ರ ಇದ್ದರು.
ಭಾರತದ ಸಂ'ದೀಪ'
2008, ನವೆಂಬರ್ 26. ಮುಂಬೈನ ತಾಜ್ ಹೊಟೇಲ್ ಮೇಲೆ ದಾಳಿ ಮಾಡಿದ್ದ ಪಾಕ್ ಬೆಂಬಲಿತ ಲಷ್ಕರ್-ಎ-ತೋಯ್ವಾ ಸಂಘಟನೆಯ ಉಗ್ರರು, ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು ಭದ್ರತಾ ಪಡೆಗಳತ್ತ ಮನಬಂದಂತೆ ಗುಂಡು ಹಾರಿಸುತ್ತಿದ್ದರು.
#26/11 ದಾಳಿ: ಪುತ್ರ ಸಂದೀಪ್ ನೆನಪಿಸಿಕೊಂಡ ಉನ್ನಿಕೃಷ್ಣನ್
ಈ ವೇಳೆ ಆಗಮಿಸಿದ ನ್ಯಾಶನಲ್ ಸೆಕ್ಯೂರಿಟಿ ಗಾರ್ಡ್ಸ್(ಎನ್‌ಎಸ್‌ಜಿ) ಕಮಾಂಡೋಗಳು, ತಾಜ್ ಹೋಟೆಲ್‌ನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದವರು ಮೇಜರ್ ಸಂದೀಪ್ ಉನ್ನಿಕೃಷ್ಣನ್.
ಹೋಟೆಲ್ ಒಳಗೆ ನುಗ್ಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಉಗ್ರರ ಕಪಿಮುಷ್ಠಿಯಲ್ಲಿದ್ದ ಕೆಲವು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೋಟೆಲ್‌ನಿಂದ ಹೊರ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಅಲ್ಲದೇ ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸುವಲ್ಲಿಯೂ ಸಂದೀಪ್ ಯಶಶ್ವಿಯಾಗಿದ್ದರು. ಆದರೆ ಉಗ್ರರನ್ನು ಬೇಟೆಯಾಡುತ್ತಾ ಮುನ್ನುಗ್ಗುತ್ತಿದ್ದ ಸಂದೀಪ್ ಉನ್ನಿಕೃಷ್ಣನ್, ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಲು ಮುಂದಾದಾಗ ಉಗ್ರರ ಗುಂಡುಗಳು ಅವರ ಎದೆ ಸೀಳಿತ್ತು.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಈ ವೇಳೆ ತಮ್ಮ ರಕ್ಷಣೆಗೆ ಮುಂದಾದ ಸಹೋದ್ಯೋಗಿಗಳಿಗೆ ಯಾರೂ ಒಳಗೆ ಬರಬೇಡಿ, ನಾನು ಇವರನ್ನು(ಉಗ್ರರನ್ನು) ನೋಡಿಕೊಳ್ಳುತ್ತೇನೆ ಎಂದು ಕೂಗಿ ಹೇಳಿದ್ದರು.
ಅಂತೆಯೇ ಕೊನೆಯ ಉಸಿರು ಹೊರ ಚೆಲ್ಲುವವರೆಗೂ ಸಂದೀಪ್ ಉಗ್ರರೊಂದಿಗೆ ಸೆಣೆಸಾಡಿ ದೇಶಕ್ಕಾಗಿ ಪ್ರಾಣ ತಮ್ಮ ಪ್ರಾಣ ಅರ್ಪಿಸಿದರು. ಸಂದೀಪ್ ಉನ್ನಿಕೃಷ್ಣನ್ ತ್ಯಾಗ, ಬಲಿದಾನವನ್ನು ದೇಶ ಎಂದೆಂದಿಗೂ ಮರೆಯುವುದಿಲ್ಲ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಉನ್ನಿಕೃಷ್ಣನ್ ಈ ದೇಶದ ಯುವ ಜನತೆಯ ಆದರ್ಶವಾಗಿ ಎಂದೆಂದಿಗೂ ರಾರಾಜಿಸುತ್ತಿರುತ್ತಾರೆ.
ಮುಂಬೈ ದಾಳಿಯ ಸಂದರ್ಭದಲ್ಲಿ ತಮ್ಮ ಅದ್ಭುತ ಶೌರ್ಯ ಪ್ರದರ್ಶನದ ಮೂಲಕ ಜನರ ಪ್ರಾಣ ರಕ್ಷಿಸಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಭಾರತ ಸರ್ಕಾರ ಶಾಂತಿ ಕಾಲದ ಅತ್ಯುನ್ನತ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.