ಲೂಸ್‌ ಮಾದ ಯೋಗೀಶ್‌ ಅಭಿನಯದ ‘ಲಂಕೆ’ ಚಿತ್ರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆ.20ರಂದು ತೆರೆಗೆ ಬರಲಿದೆ. ‘ಲಂಕೆ’ ಚಿತ್ರದ ಹಾಡಿನ ಬಿಡುಗಡೆ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ಯೋಗೀಶ್‌ ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಥಿಯೇಟರ್‌ಗಳಲ್ಲಿ ಶೇ.50 ಪ್ರದರ್ಶನಕ್ಕೆ ಅವಕಾಶವಿದ್ದರೂ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಲಂಕೆ ಚಿತ್ರ ಬಿಡುಗಡೆಯಾಗುವ ದಿನವೇ, ದುನಿಯಾ ವಿಜಿ ಅವರ ‘ಸಲಗ’ ಸಿನಿಮಾವೂ ಬಿಡುಗಡೆಯಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಯೋಗೀಶ್‌, ‘ಹೌಸ್‌ಫುಲ್‌ ಪ್ರದರ್ಶನಕ್ಕೆ ಅನುಮತಿ ಸಿಕ್ಕ ಬಳಿಕವಷ್ಟೇ ಸಲಗ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಆ.20ರ ವೇಳೆಗೆ ಹೌಸ್‌ಫುಲ್‌ ಪ್ರದರ್ಶನಕ್ಕೆ ಅನುಮತಿ ಸಿಕ್ಕರೆ ನಮ್ಮ ಸಿನಿಮಾ ಬಿಡುಗಡೆ ದಿನಾಂಕ ಕೊಂಚ ಬದಲಾವಣೆಯಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು. ಈ ಸಂದರ್ಭ ಲಂಕೆ ಚಿತ್ರದಲ್ಲಿ ನಟಿಸಿರುವ ದಿ. ಸಂಚಾರಿ ವಿಜಯ್‌ ಅವರನ್ನು ನೆನಪಿಸಿಕೊಂಡರು.

ಲೂಸ್‌ ಮಾದ ಯೋಗಿ ಪುತ್ರಿ ವಿಡಿಯೋ ವೈರಲ್; ಟ್ವಿಂಕಲ್ ಹಾಡು ಕೇಳಿದ್ದೀರಾ?

ನಿರ್ದೇಶಕ ರಾಮಪ್ರಸಾದ್‌ ಎಂ ಡಿ ಮಾತನಾಡಿ, ‘ಈಗ ಬಿಡುಗಡೆಯಾಗಿರುವ ಹಾಡು ಖುಷಿಯ ಜೊತೆಗೆ ನೋವನ್ನೂ ಧ್ವನಿಸುತ್ತದೆ. ಸೂಫಿ ಹಾಗೂ ಕಥಕ್‌ ಶೈಲಿಯಲ್ಲಿ ಮೂಡಿಬಂದಿದ್ದು, ಹಿಂದೂ ಮುಸ್ಲಿಂ ಸೌಹಾರ್ದತೆಯ ಹಾಡಾಗಿಯೂ ಹೊರಹೊಮ್ಮಿದೆ’ ಎಂದರು. ನಾಯಕಿ ಕೃಷಿ ತಪಂಡ, ‘ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಫೀಲ್‌ ನನ್ನದು. ಹಾಡುಗಳ ಜೊತೆಗೆ ಸಿನಿಮಾವನ್ನೂ ಗೆಲ್ಲಿಸಿ’ ಎಂದರು.

ಗೀತ ರಚನಕಾರ ಗೌಸ್‌ ಪೀರ್‌, ಸಂಗೀತ ನಿರ್ದೇಶಕ ಕಾರ್ತಿಕ್‌, ನಿರ್ಮಾಪಕರಾದ ಪಟೇಲ್‌ ಶ್ರೀನಿವಾಸ್‌, ಸುರೇಖಾ ರಾಮ್‌ ಪ್ರಸಾದ್‌ ಉಪಸ್ಥಿತರಿದ್ದರು.

YouTube video player