ಜೋಗಿ

ಕಳೆದ ಹದಿನೈದು ದಿನಗಳಿಂದ ಮನೆಯಲ್ಲೇ ಕುಂತಿರೋ ಮಂದಿ ಫೋನ್‌ ಮಾಡಿದಾಗೆಲ್ಲ ಕೇಳೋ ಪ್ರಶ್ನೆಯೂ ಇದೇ.

ನೀವು ಅದಕ್ಕೇನು ಮಾಡ್ತೀರಿ?

ಇಲ್ಲಿ ‘ಅದು’ ಅಂದರೆ ಮನರಂಜನೆ.

ಬಹುಶಃ ದುಡಿಯುವ ವರ್ಗಗಳ, ನಗರವಾಸಿಗಳ ಏಕೈಕ ಸುಖವೆಂದರೆ ಈ ಮನರಂಜನೆ ಎಂಬ ಮಾಯಾಜಿಂಕೆಯೇ ಇರಬೇಕು. ಒಂದಾನೊಂದು ಕಾಲದಲ್ಲಿ ಬೆಂಗಳೂರಿಗರಿಗೆ ಮನರಂಜನೆ ಎಂದರೆ ರಾಜ್‌ ಕುಮಾರ್‌ ಸಿನಿಮಾ, ಮಸಾಲೆದೋಸೆ ಮತ್ತು ಒಂದು ಮೊಳ ಮಲ್ಲಿಗೆ ಹೂವು. ಗಂಡ ತನ್ನ ಹೊಸ ಹೆಂಡತಿಗೆ ಇಷ್ಟುಕೊಡಿಸಿಬಿಟ್ಟರೆ ಅವನೇ ಮಹಾಪುರುಷ. ಹಳೆಯ ಕತೆಗಳಲ್ಲೂ ಕಾದಂಬರಿಗಳಲ್ಲೂ ಈ ಚಿತ್ರಣ ಇರುವುದು ಓದಿದವರಿಗೆ ಗೊತ್ತಿದ್ದೀತು. ಕ್ರಮೇಣ ಅದು ಬದಲಾಗಿ, ಹೊರಗೆ ಹೋಗುವ ಬದಲು ಮನೆಯಲ್ಲೇ ಕುಳಿತು ಟೀವಿ ಸೀರಿಯಲ್ಲು ನೋಡುವಲ್ಲಿಗೆ ಬಂತು. ಟೀವಿ ಸೀರಿಯಲ್ಲು ಹೊಸ ತಲೆಮಾರಿಗೆ ಬೋರು ಹೊಡೆಸುತ್ತಿದ್ದಂತೆ ಮಲ್ಟಿಪ್ಲೆಕ್ಸುಗಳು ಬಂದವು. ಮತ್ತದೇ ರಾಜ್‌ ಕುಮಾರ್‌ ಸಿನಿಮಾ, ಮಸಾಲೆ ದೋಸೆ ಮತ್ತು ಮಲ್ಲಿಗೆ ಹೂವುಗಳು ಹೊಸಕಾಲದಲ್ಲಿ ಹಿಂದಿ ಸಿನಿಮಾ, ಪಿಜ್ಝಾ ಮತ್ತು ಮಾಲ್‌ ಸುತ್ತಾಟವಾಗಿ ಬದಲಾದವು.

ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ನೋಡಬಹುದಾದ 10 ಸಿನಿಮಾಗಳು!

ಹಾಗಿದ್ದರೂ ಮನರಂಜನೆಯ ಮೂಲ ಬದಲಾಗಿರಲಿಲ್ಲ. ಕನ್ನಡ ಭಾಷೆಯ ಸಿನಿಮಾ ಸೀರಿಯಲ್ಲುಗಳನ್ನು ಪರಭಾಷೆಯ ಸಿನಿಮಾ ಸೀರಿಯಲ್ಲುಗಳು ಅಷ್ಟಾಗಿ ನುಂಗಿಹಾಕಿರಲಿಲ್ಲ. ಕೆಲವು ಮನೆಗಳವರು ಹಿಂದಿ ಸೀರಿಯಲ್ಲುಗಳಿಗೆ ಮಾರು ಹೋಗಿದ್ದರೂ ಟೀವಿಯ ಮುಂದೆ ಕೂತು ರಿಮೋಟಿಗಾಗಿ ಹೊಡೆದಾಡುವ ದೃಶ್ಯ ಬದಲಾಗಿರಲಿಲ್ಲ.

ಆದರೆ, ಮನರಂಜನೆಯ ಮೂಲವೇ ಈ ಹದಿನೈದು ದಿನಗಳ ಲಾಕ್‌ಡೌನ್‌ ಅವಧಿಯಲ್ಲಿ ಬದಲಾಗಿರುವಂತಿದೆ. ಮನರಂಜನೆ ಅನ್ನುವ ಪದವೂ ಬದಲಾಗಿ, ಅದು ಮನೆರಂಜನೆಯಾಗಿಬಿಟ್ಟಿದೆ. ಮನೆರಂಜನೆಯೆನ್ನುವುದು ಎಲ್ಲರೂ ಒಟ್ಟಾಗಿ ಕೂತು ನೋಡುವ ಸಂಗತಿಯಾಗಿಯೂ ಉಳಿದಿಲ್ಲ. ಈಗ ಯಾವುದೇ ಮನೆಗೆ ಹೋದರೂ ಗಂಡ ಸುದ್ದಿಚಾನಲ್ಲು, ಹೆಂಡತಿ ತನ್ನ ಫೋನಿನಲ್ಲೇ ವೂಟ್‌ ಸೀರಿಯಲ್ಲು, ಮಗಳು ಟ್ಯಾಬಲ್ಲಿ ಲಿಟ್‌್ಲ ಥಿಂಗ್ಸ್‌, ಮಗ ಲ್ಯಾಪ್‌ಟಾಪಲ್ಲಿ ನಾರ್ಕೋಸ್‌- ನೋಡುವ ದೃಶ್ಯ ಕಣ್ಣಿಗೆ ಬೀಳಬಹುದು.

ಓಟಿಟಿ ಫ್ಲಾಟ್‌ಫಾರ್ಮುಗಳ ಪ್ರಭಾವ ಅದು. ಓವರ್‌ ದಿ ಟಾಪ್‌ ಎಂದೇ ಕರೆಸಿಕೊಳ್ಳುವ ಸ್ಟ್ರೀಮಿಂಗ್‌ ಮೀಡಿಯಾಗಳು ಹೇಗೆ ನಮ್ಮ ನೋಡುವ ಕ್ರಮವನ್ನೇ ಬದಲಾಯಿಸಿವೆ ಅನ್ನುವುದು ಇತ್ತಿತ್ತಲಾಗಿ ಎಲ್ಲರಿಗೂ ಅರಿವಾಗುತ್ತಿದೆ. ಒಂದು ಅಕೌಂಟು, ಐದು ಸ್ಕ್ರೀನ್‌. ಐದೂ ಪರದೆಗಳಲ್ಲಿ ಬೇರೆ ಬೇರೆ ಸೀನ್‌!

ಈ ಲಾಕ್‌ಡೌನ್‌ ಬಂದದ್ದೇ ಬಂದದ್ದು, ಓಟಿಟಿ ಫ್ಲಾಟ್‌ ಫಾರ್ಮುಗಳ ಅದೃಷ್ಟಖುಲಾಯಿಸಿದಂತಿದೆ. ಕಳೆದ ಹದಿನೈದು ದಿನಗಳಲ್ಲಿ ಓಟಿಟಿ ಫ್ಲಾಟ್‌ ಫಾರ್ಮುಗಳಿಗೆ ಚಂದಾದಾರರಾದವರ ಸಂಖ್ಯೆ ವ್ಯಾಪಕವಾಗಿ ಏರಿದೆ ಅನ್ನುವುದನ್ನು ಇಂಟರ್‌ನೆಟ್‌ ಪ್ರೊವೈಡರ್‌ ಸಂಸ್ಥೆಗಳು ಹೇಳುತ್ತವೆ. ಅವುಗಳು ಗ್ರಾಹಕರಿಗೆ ಕಳುಹಿಸಿರುವ ಸಂದೇಶ ಇಂತಿದೆ:

ದಿಯಾ - ಲವ್ ಮಾಕ್ಟೇಲ್ ಚಿತ್ರ ಮಂದಿರದಾಚೆ ಫುಲ್ ಕ್ಲಿಕ್, ನೆಟ್ಟಿಗರು ಫುಲ್ ಖುಷ್!

ಕಳೆದ ಹದಿನೈದು ದಿನಗಳಿಂದ ಇಂಟರ್‌ನೆಟ್‌ ಬಳಕೆ ಹೆಚ್ಚಾಗಿದೆ. ಎಲ್ಲರೂ ತಮ್ಮ ಮಿತಿಯಷ್ಟನ್ನೂ ಇಡೀ ದಿನ ಬಳಸುತ್ತಿರುವುದರಿಂದ ವೇಗ ಕುಂಠಿತಗೊಂಡಿದೆ. ಇದನ್ನು ಇಷ್ಟರಲ್ಲೇ ಸರಿ ಮಾಡುತ್ತೇವೆ. ಗ್ರಾಹಕರು ಸಹಕರಿಸಬೇಕು.

ಹೀಗೆ ಇದ್ದಕ್ಕಿದ್ದಂತೆ ಇಂಟರ್‌ನೆಟ್‌ ಬಳಕೆ ಏರುವುದಕ್ಕೆ ಕಾರಣ ಓಟಿಟಿ ಫ್ಲಾಟ್‌ ಫಾರ್ಮುಗಳ ಲೈವ್‌ ಸ್ಟ್ರೀಮಿಂಗು. ಯಾವತ್ತೂ ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಮ್ಯಾಕ್ಸ್‌, ವೂಟ್‌, ಹಾಟ್‌ಸ್ಟಾರ್‌ಗಳು ಬೇಕಾಗಿಲ್ಲ ಅಂದುಕೊಂಡಿದ್ದವರೆಲ್ಲ ಈ ದಿನಗಳಲ್ಲಿ ಓಟಿಟಿ ಮೊರೆ ಹೋಗಿದ್ದಾರೆ. ಅದಕ್ಕೆ ಮತ್ತೊಂದು ಸಾಕ್ಷಿಯೆಂದರೆ ಥೇಟರಿನಲ್ಲಿ ಅಷ್ಟೇನೂ ಲಾಭ ಮಾಡದ ಕನ್ನಡ ಸಿನಿಮಾಗಳು ಸೋಷಲ್‌ ಮೀಡಿಯಾಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದದ್ದು.

ಅದಕ್ಕಿಂತ ಮುಖ್ಯವೆಂದರೆ ಮೂರು ವರ್ಷಗಳ ಹಿಂದೆ ಬಂದಿದ್ದ, ಯಾರೂ ನೋಡದೇ ಇದ್ದ, ಅಂಥ ಹತ್ತಾರು ಸಿನಿಮಾಗಳ ನಡುವೆ ಹುದುಗಿ ಹೋಗಿದ್ದ ಕಂಟೇಜಿಯನ್‌ ಸಿನಿಮಾವನ್ನೂ ಜನ ಮುಗಿಬಿದ್ದು ನೋಡಿದ್ದು. ಬಹುಶಃ ಇದೇ ಅವಧಿಯಲ್ಲೇ ಓಟಿಟಿ ಕೂಡ ಹೌಸ್‌ಫುಲ್‌ ಪ್ರದರ್ಶನ ಕಂಡಿತೆಂದು ಹೇಳಬಹುದು. ಯಾಕೆಂದರೆ ಮನೆ ತುಂಬಿತ್ತು. ತುಂಬಿದ ಮನೆಯ ಮಂದಿ ಸಿನಿಮಾ ನೋಡಿದರು. ಥೇಟರ್‌ ತುಂಬಿದರೆ ಮಾತ್ರವಲ್ಲ, ಮನೆ ತುಂಬಿದರೂ ಹೌಸ್‌ಫುಲ್ಲೇ ಅಲ್ಲವೇ.

ಇದರಿಂದ ಏನಾಗಬಹುದು?

ಹಿಂದೆ ಸಿನಿಮಾಗಳು ಬಿಡುಗಡೆಯಾದ ಆರು ತಿಂಗಳಿಗೆ ಉದಯ ಟೀವಿಯಲ್ಲಿ ಬರುತ್ತಿದ್ದವು. ಆಗ ಜನ ಥೇಟರಿಗೆ ಬರುವುದು ಕಮ್ಮಿಯಾಗಿತ್ತು. ಉದಯ ಟೀವೀಲಿ ಬರತ್ತೆ ಬಿಡ್ರೋ ಅಂತ ಮಾತಾಡುತ್ತಾ, ಟೀವಿಯಲ್ಲಿ ನೋಡಲು ಕಾಯುತ್ತಿದ್ದರು. ಈಗ ಟೀವಿ ಬದಲಿಗೆ ಓಟಿಟಿ ಬಂದಿದೆ. ಬಿಡುಗಡೆಯಾದ ತಿಂಗಳಿಗೆಲ್ಲ ಓಟಿಟಿಗೆ ಬಂದು ಬಿಡುತ್ತದೆ. ಅಲ್ಲಿಯೇ ಸಿನಿಮಾ ನೋಡುವ ಅಭ್ಯಾಸ ಆಗಿಬಿಟ್ಟರಂತೂ ಥೇಟರುಗಳ ಕತೆ ಮುಗಿದಂತೆಯೇ.

ಮೊದಲು ಸೀರಿಯಲ್‌ ನೋಡೋದಕ್ಕೆ ಇಂತಿಷ್ಟೇ ಹೊತ್ತಿಗೆ ಮನೆಗೆ ಬರಬೇಕು ಅಂತ ಇತ್ತು, ಮರುಪ್ರಸಾರ ಇರುತ್ತಿರಲಿಲ್ಲ. ಈಗ ಹಾಗೇನಿಲ್ಲ, ಮನೇಲಿಲ್ಲದೇ ಹೋದ್ರೆ ಪಕ್ಕದ ಮನೇಲಿರ್ತಾಳೆ ಅಂತ ಗಂಡ ಅಂದುಕೊಳ್ಳುತ್ತಿದ್ದ ಹಾಗೆ, ಮನೇಲಿಲ್ಲದೇ ಹೋದರೆ ಬಾರರ್ಲಿರ್ತಾರೆ ಅಂತ ಹೆಂಡತಿ ತಿಳಕೊಳ್ಳುತ್ತಿದ್ದ ಹಾಗೆ, ಇಲ್ಲಿ ನೋಡದೇ ಇದ್ದರೆ ಅಲ್ಲಿ ಸಿಗತ್ತೆ ಅಂತ ಪ್ರೇಕ್ಷಕರು ಅಂದುಕೊಳ್ಳಬಹುದು. ಪ್ರತಿಯೊಂದು ಚಾನಲ್ಲಿಗೂ ತಮ್ಮದೇ ಆದ ಸ್ಟ್ರೀಮಿಂಗ್‌ ಫ್ಲಾಟ್‌ಫಾರ್ಮುಗಳಿವೆ.

ಇದು ವೆಚ್ಚ, ಅನುಕೂಲ, ಏಕಾಂತ, ಸುಖ, ಆಯ್ಕೆ- ಎಲ್ಲದರಲ್ಲೂ ಮುಂದಿದ್ದು ಬಹುಶಃ ಮುಂದಿನ ದಿಕ್ಕನ್ನು ನಿರ್ಧರಿಸುತ್ತದೆಯೋ ಏನೋ? ಆ ಮಹತ್ವದ ಗಳಿಗೆಗೆ ಲಾಕ್‌ಡೌನ್‌ ಕಾರಣವಾದದ್ದಂತೂ ಸುಳ್ಳಲ್ಲ,